ಮಂಗಳೂರು: ತಲೆ ಮರೆಸಿಕೊಂಡಿರುವ ಕುಖ್ಯಾತ ಆರೋಪಿಗಳ ಬಂಧನಕ್ಕೆ ರೆಡ್ ಕಾರ್ನರ್ ನೋಟಿಸ್ ಜಾರಿ

ಕರಾವಳಿ

ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ವಿದೇಶಗಳಲ್ಲಿ ತಲೆಮರೆಸಿಕೊಂಡಿರುವ ಇಬ್ಬರು ಪ್ರಮುಖ ಆರೋಪಿಗಳ ಪತ್ತೆಗೆ ಮಂಗಳೂರು ಪೊಲೀಸರು ಇಂಟರ್ ಪೋಲ್ ಮೂಲಕ ರೆಡ್ ಕಾರ್ನರ್ ನೋಟಿಸ್ ಜಾರಿಗೊಳಿಸಿದ್ದಾರೆ. ಕುಶಾಲನಗರ ನಿವಾಸಿ ಸುಲೈಮಾನ್ ಅಲಿಯಾಸ್ ಶಮೀರ್ ಮತ್ತು ಸಂಶುದ್ದೀನ್ ರೆಡ್ ಕಾರ್ನರ್ ನೋಟಿಸ್ ಜಾರಿ, ತಲೆಮರೆಸಿಕೊಂಡಿರುವ ಆರೋಪಿಗಳು.

ಕುಶಾಲನಗರದ ಸುಲೈಮಾನ್ 2017ರಲ್ಲಿ ಮಂಗಳೂರಿನ ಉರ್ವ ಠಾಣಾ ಎಎಸ್ ಐ ಆಗಿದ್ದ ಐತಪ್ಪ ಅವರ ಮೇಲೆ ರಾಡ್ ನಿಂದ ಹಲ್ಲೆ ನಡೆಸಿ ಕೊಲೆ ಮಾಡಲು ಯತ್ನಿಸಿದ್ದ ಆರೋಪಿಗಳಲ್ಲಿ ಓರ್ವ. ಕೊಣಾಜೆ ಠಾಣಾ ವ್ಯಾಪ್ತಿಯ ದೇರಳಕಟ್ಟೆಯಲ್ಲಿ 2013 ನಡೆದ ವೈದ್ಯಕೀಯ ವಿದ್ಯಾರ್ಥಿನಿಯ ಗ್ಯಾಂಗ್ ರೇಪ್ ಪ್ರಕರಣದಲ್ಲಿಯೂ ಆರೋಪಿಯಾಗಿದ್ದು, ಇವನ ವಿರುದ್ಧ 14 ಪ್ರಕರಣಗಳಿವೆ. ಈತ ವಿದೇಶದಲ್ಲಿ ತಲೆ ಮರೆಸಿಕೊಂಡಿದ್ದಾನೆ ಎಂದು ಅಂದಾಜಿಸಲಾಗಿದೆ.

ಸಂಶುದ್ದೀನ್ ಅಲಿಯಾಸ್ ಅಲ್ತಾಫ್ ಅಲಿಯಾಸ್ ಅಲ್ತಾಫ್ ಹಾಗೂ ಈತನ ಸಹಚರರು 2008ರಲ್ಲಿ ಪಾವಂಜೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರವೀಣ್ ಎಂಬವರನ್ನು ಕಿಡ್ನಾಪ್ ಮಾಡಿ ಅವರ ಕಾರು ಮತ್ತು ಬೆಲೆ ಬಾಳುವ ಸೊತ್ತುಗಳನ್ನು ದೋಚಿ, ಕೋರೆಯೊಂದಕ್ಕೆ ಕರೆದುಕೊಂಡು ಹೋಗಿ ಕೊಲೆ ಮಾಡಿದ್ದರು. ಈ ಪ್ರಕರಣದಲ್ಲಿ ಎಲ್ಲಾ ಆರೋಪಿಗಳು ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದರು. ಆದರೆ ಸಂಶುದ್ದೀನ್ ನಕಲಿ ದಾಖಲೆಗಳ ಮೂಲಕ ಹೆಸರನ್ನು ಶೇಕ್ ಮೊಹಮ್ಮದ್ ಸಿದ್ದಿಕ್ ಎಂದು ಬದಲಾಯಿಸಿ, ಪಾಸ್ ಪೋರ್ಟ್ ಪಡೆದು ವಿದೇಶಕ್ಕೆ ಪರಾರಿಯಾಗಿದ್ದಾನೆ. ಈತನೂ ವಿದೇಶದಲ್ಲಿ ತಲೆಮರೆಸಿ ಕೊಂಡಿರುವಸಾಧ್ಯತೆಯಿದೆ ಎಂದು ಅಂದಾಜಿಸಲಾಗಿದೆ. ಭಾರತದ ಸೆಂಟ್ರಲ್ ಏಜೆನ್ಸಿಯಾಗಿರುವ ಸಿಬಿಐ ಸಹಕಾರದೊಂದಿಗೆ ಇಂಟರ್ ಪೋಲ್ ಮೂಲಕ ರೆಡ್ ಕಾರ್ನರ್ ನೋಟಿಸ್ ಜಾರಿಗೊಳಿಸಲಾಗಿದೆ.