ಬಂಟ್ವಾಳ ಪೊಲೀಸರ ಯಶಸ್ವಿ ಕಾರ್ಯಾಚರಣೆ; ಬೃಹತ್ ಪ್ರಮಾಣದ MDMA ವಶ, ಮಾಲು ಸಹಿತ ಆರೋಪಿಗಳ ಬಂಧನ

ಕರಾವಳಿ

ಬಂಟ್ವಾಳ ಪೊಲೀಸರು ಮಾದಕ ವಸ್ತುಗಳ ವಿರೋಧಿ ಅಭಿಯಾನದ ಭಾಗವಾಗಿ ಕಾರ್ಯಾಚರಣೆ ನಡೆಸಿ ಯಶಸ್ವಿಯಾಗಿರುತ್ತಾರೆ. ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ವಿಶೇಷ ಪೊಲೀಸ್ ತಂಡವು, ಅಕ್ರಮವಾಗಿ ಅಮಲು ಪದಾರ್ಥಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರು ಯುವಕರನ್ನು ಬಂಧಿಸಿದ್ದಾರೆ. ಬಂಧಿತರಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಮಾರಕ MDMA ಮಾದಕ ವಸ್ತು ವಶಪಡಿಸಿಕೊಳ್ಳಲಾಗಿದೆ.

ಆರೋಪಿಗಳು ಹೊರರಾಜ್ಯದಿಂದ ನಿಷೇಧಿತ ಡ್ರಗ್ಸ್ ತಂದು ಸ್ಥಳೀಯ ಕಾಲೇಜು ವಿದ್ಯಾರ್ಥಿಗಳಿಗೆ ಮತ್ತು ಯುವಜನತೆಗೆ ಪೂರೈಸುವ ಜಾಲದಲ್ಲಿ ತೊಡಗಿದ್ದರು ಎನ್ನಲಾಗಿದೆ. ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಈ ಜಾಲದ ಹಿಂದೆ ಇರುವ ದೊಡ್ಡ ಜಾಲದ ಪತ್ತೆಗಾಗಿ ಬಲೆ ಬೀಸಿದ್ದಾರೆ.

ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ಉಪ-ನಿರೀಕ್ಷಕರಾದ ಮಂಜುನಾಥ ಟಿ. ರವರಿಗೆ ನಿಷೇದಿತ ಮಾದಕ ವಸ್ತುವಾದ ಎಂ.ಡಿ.ಎಂ.ಎ ಸಾಗಾಟದ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ, ಪೊಲೀಸ್ ಸಿಬ್ಬಂದಿಗಳೊಂದಿಗೆ ಬಂಟ್ವಾಳ ಮಂಚಿ ಗ್ರಾಮದ ಪಂಜಾಲ ಕ್ರಾಸ್‌ ಎಂಬಲ್ಲಿಗೆ ತೆರಳಿ, ಸದರಿ ಮಾರ್ಗವಾಗಿ ಬರುತ್ತಿದ್ದ KA-20-Z-9585 ಬೊಲೆರೋ ವಾಹನವನ್ನು ತಪಾಸಣೆ ನಡೆಸಿದಾಗ ಸದ್ರಿ ವಾಹನದಲ್ಲಿ ಬಂಟ್ವಾಳ ಬೊಳಂತೂರು ನಿವಾಸಿಗಳಾದ ಮೊಹಮ್ಮದ್‌ ನಿಜಾಮುದ್ದೀನ್‌ ಹಾಗೂ ಆತನ ಸಹೋದರ ಮೊಹಮದ್‌ ಶಾಹೀಂ ಮಾದಕವಸ್ತು ಸಾಗಾಟದ ಬಗ್ಗೆ ಮಾಹಿತಿ ನೀಡಿದ್ದು, ಆರೋಪಿಗಳು ಬೆಂಗಳೂರಿನಲ್ಲಿ ಅಪರಿಚಿತ ನೈಜೀರಿಯಾದ ವ್ಯಕ್ತಿಯೊಬ್ಬರಿಂದ ಎಂಡಿಎಂಎ ಖರೀದಿಸಿ, ಮಾರಾಟ ಮಾಡಲು ಸಾಗಿಸುತ್ತಿರುವುದು ತಿಳಿದುಬಂದಿರುತ್ತದೆ.

ವಾಹನವನ್ನು ತಪಾಸಣೆ ನಡೆಸಿದಾಗ ವಾಹನದಲ್ಲಿ 42,30,000 ರೂ. ಮೌಲ್ಯದ 423 ಗ್ರಾಂ ಎಂ.ಡಿ.ಎಂ.ಎ ಪತ್ತೆಯಾಗಿರುತ್ತದೆ. ಅರೋಪಿಗಳ ಬಳಿಯಿದ್ದ ಮೂರು ಮೊಬೈಲ್ ಫೋನ್ ಹಾಗೂ ಕೃತ್ಯಕ್ಕೆ ಬಳಸಿದ ಬೊಲೇರೊ ವಾಹನವನ್ನು ಸ್ವಾಧೀನಪಡಿಸಲಾಗಿದ್ದು, ಸ್ವಾಧೀನಪಡಿಸಲಾದ ಸೊತ್ತುಗಳ ಒಟ್ಟು ಮೌಲ್ಯ 46,25,000 ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅ.ಕ್ರ: 68/2026, ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.