ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್ ಅವರು ಅಧಿಕಾರ ವಹಿಸಿಕೊಳ್ಳುವುದು ಸಂಪೂರ್ಣ ನಿಶ್ಚಿತವಾಗಿದೆ. ಇದೀಗ ಅವರ ಪದಗ್ರಹಣ ಕಾರ್ಯಕ್ರಮಕ್ಕೆ ದಿನಾಂಕ ಹಾಗೂ ಮುಹೂರ್ತ ನಿಗದಿಯಾಗಿದ್ದು, ಜೂನ್ 5 ರಂದು ಶಕ್ತಿ ಪ್ರದರ್ಶನದೊಂದಿಗೆ ಡಿಕೆಶಿ ಪಟ್ಟಾಭಿಷೇಕ ನೆರವೇರಲಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಈ ಹಿಂದೆ ಮೇ ಕೊನೆಯ ವಾರದ ಸೋಮವಾರ ಅಥವಾ ಬುಧವಾರದಂದೇ ಪ್ರಮಾಣ ವಚನ ನಡೆಯಲಿದೆ ಎಂಬ ದಟ್ಟ ವದಂತಿಗಳಿದ್ದವು. ಆದರೆ, ತಮ್ಮ ಪರಮಾಪ್ತ ಜ್ಯೋತಿಷಿಯೊಬ್ಬರ ಸಲಹೆಯ ಮೇರೆಗೆ ಮುಂದಿನ ಜೂನ್ 5ರ ಶುಕ್ರವಾರದಂದು ಪ್ರಮಾಣ ವಚನ ಸ್ವೀಕರಿಸಲು ತೀರ್ಮಾನಿಸಿದ್ದಾರೆ. ಜೂನ್ 5ರ ಶುಕ್ರವಾರ ಮಧ್ಯಾಹ್ನ 12:30ಕ್ಕೆ ಅವರು ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಸಾರಥ್ಯ ವಹಿಸಿಕೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.
ಸಾರ್ವಜನಿಕರ ಸಮ್ಮುಖದಲ್ಲಿ ಬೃಹತ್ ಮಟ್ಟದಲ್ಲಿ ಪ್ರಮಾಣ ವಚನ ಸ್ವೀಕರಿಸಲು ಡಿಕೆಶಿ ನಿರ್ಧರಿಸಿದ್ದಾರೆ. ಅದಕ್ಕಾಗಿಯೇ ವಿಧಾನಸೌಧದ ಭವ್ಯವಾದ ಮುಂಭಾಗದ ಮೆಟ್ಟಿಲುಗಳ ಮೇಲೆ ಐತಿಹಾಸಿಕ ಕಾರ್ಯಕ್ರಮ ಆಯೋಜಿಸಲು ಸಿದ್ಧತೆಗಳು ಆರಂಭವಾಗಿವೆ. ಡಿ.ಕೆ. ಶಿವಕುಮಾರ್ ರವರು ಪ್ರಮಾಣ ವಚನ ಸ್ವೀಕರಿಸುವ ಜೊತೆಯಲ್ಲೇ ಅವರ ನೂತನ ಸಂಪುಟದ ಸಚಿವರೂ ಕೂಡ ಅಧಿಕಾರ ಸ್ವೀಕರಿಸಲಿದ್ದಾರೆ. ಒಂದು ಮೂಲಗಳ ಪ್ರಕಾರ ಆರಂಭದಲ್ಲಿ ಕೇವಲ ಏಳೆಂಟು ಮಂದಿ ಹಿರಿಯ ಮತ್ತು ಅನುಭವಿ ಶಾಸಕರು ಮಾತ್ರ ಅವರ ಜೊತೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂಬ ಮಾಹಿತಿ ಇದೆ.
