ಪೊಲೀಸರ ಒಂದು ಸಣ್ಣ ಎಡವಟ್ಟು, ಜೈಲು ಪಾಲಾಗಿ, ಶಿಕ್ಷೆ ಅನುಭವಿಸಿದ ಅಮಾಯಕ

ರಾಷ್ಟ್ರೀಯ

ಜೈಲಲ್ಲೇ ಕೂತು ಕಾನೂನು ಪುಸ್ತಕ ಓದಿ, ಹೈಕೋರ್ಟಲ್ಲಿ ತನ್ನ ಪರ ತಾನೇ ವಾದ ಮಾಡಿ ಗೆದ್ದ ಶೆಟ್ಟಿ

ಪೊಲೀಸರ ಒಂದು ಸಣ್ಣ ಎಡವಟ್ಟಿನ ಬೇಜವಾಬ್ದಾರಿ, ನಿರ್ಲಕ್ಷತನದಿಂದ ಒಬ್ಬ ಅಮಾಯಕನ ಬದುಕನ್ನೇ ಹೇಗೆ ನರಕ ಮಾಡಬಹುದು ಅನ್ನೋದಕ್ಕೆ ಈ ಘಟನೆ ಒಂದು ಜೀವಂತ ಉದಾಹರಣೆ. ಹೆಸರಿನ ಸಾಮ್ಯತೆ ಇದೆ ಅನ್ನೋ ಒಂದೇ ಒಂದು ಕಾರಣಕ್ಕೆ ಪೊಲೀಸರು ಮಾಡಿದ ಮಹಾ ಎಡವಟ್ಟಿನಿಂದಾಗಿ, ಒಬ್ಬ ವ್ಯಕ್ತಿ ತನ್ನ ಯೌವನದ ಪ್ರಮುಖ ಏಳು ವರ್ಷಗಳನ್ನು ಜೈಲಿನ ಕತ್ತಲ ಕೋಣೆಯಲ್ಲಿ ಕಳೆಯಬೇಕಾಗಿ ಬಂತು. ಜೈಲಿನಿಂದ ಹೊರಬಂದಾಗ ಆತನಿಗೆ ಕಾಯಲು ಸಂಸಾರವೇ ಇರಲಿಲ್ಲ. ಇದು ಕಾಲ್ಪನಿಕಸಿನಿಮಾ ಕಥೆಯಲ್ಲ, ಮುಂಬಯಿನಲ್ಲಿ ನಡೆದ ಸತ್ಯ ಘಟನೆ.

ಗೋಪಾಲ್ ರಾಮದಾಸ್ ಶೆಟ್ಟೆ. ಮೂಲತಃ ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಲಂಜಾ ತಾಲೂಕಿನ ವರಾವಡೆ ಎಂಬ ಹಳ್ಳಿಯವರು. ಇವರು ಕೆಲಸ ಹುಡುಕಿಕೊಂಡು ಮುಂಬೈಗೆ ಬಂದು, ಅಲ್ಲಿನ ಘಾಟ್‌ಕೋಪರ್ ಪರಿಸರದಲ್ಲಿ ವಾಸವಿದ್ದರು. 2009 ರಲ್ಲಿ, ಮುಂಬೈನ ಘಾಟ್‌ಕೋಪರ್ ರೈಲ್ವೆ ಸ್ಟೇಷನ್ ಬಳಿ ಒಂದು ಹುಡುಗಿ ಮೇಲೆ “ಗೋಪಿ” ಅನ್ನೋ ಕ್ರಿಮಿನಲ್ ಅತ್ಯಾಚಾರ ಮಾಡಿದ್ದ. ಈ ಕೇಸ್ ತನಿಖೆ ಕೈಗೆತ್ತಿಕೊಂಡ ರೈಲ್ವೆ ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದರು. ಆಗ ಅವರಿಗೆ ಸಿಕ್ಕಿದ್ದೇ ಗೋಪಾಲ್ ರಾಮದಾಸ್ ಶೆಟ್ಟೆ. ಪೊಲೀಸರಿಗೆ ಬೇಕಾಗಿದ್ದ ಅಸಲಿ ಅಪರಾಧಿಯ ಹೆಸರು “ಗೋಪಿ”, ಆದರೆ ಇವರ ಹೆಸರು “ಗೋಪಾಲ್” ಅಂತ ಇತ್ತು. ಈ ಹೆಸರಿನ ಸಾಮ್ಯತೆ ಒಂದನ್ನೇ ಇಟ್ಟುಕೊಂಡು, ಬೇರೆ ಯಾವುದೇ ಸರಿಯಾದ ತನಿಖೆ ನಡೆಸದೆ ಗೋಪಾಲ್ ಶೆಟ್ಟೆಯನ್ನೇ ಅಲ್ಲಿನ ಪೊಲೀಸರು ಬಂಧಿಸಿದರು.

ನಾನು ಆ ಗೋಪಿ ಅಲ್ಲ, ನನ್ನ ಹೆಸರು ಗೋಪಾಲ್ ರಾಮದಾಸ್ ಶೆಟ್ಟೆ, ನಾನು ಇಲ್ಲಿ ಕೆಲಸ ಮಾಡಿಕೊಂಡಿರುವ ಮುಗ್ದ ಅಂತ ಪೊಲೀಸರ ಕಾಲಿಗೆ ಬಿದ್ದು ಎಷ್ಟೇ ಬೇಡಿಕೊಂಡರೂ, ಯಾವೊಬ್ಬ ಪೊಲೀಸ್ ಅಧಿಕಾರಿಯೂ ಇವರ ಮಾತನ್ನು ಕೇಳಲಿಲ್ಲ. ದುರದೃಷ್ಟ ಎಂದರೆ, ಕೆಳ ಹಂತದ ಕೋರ್ಟ್ ಕೂಡ ಪೊಲೀಸರ ವಾದವನ್ನೇ ನಂಬಿ ಗೋಪಾಲ್ ಶೆಟ್ಟೆಗೆ ಏಳು ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿಬಿಟ್ಟಿತು.

ಗೋಪಾಲ್ ಶೆಟ್ಟೆ ಜೈಲಿಗೆ ಹೋಗುತ್ತಿದ್ದಂತೆ ಅವರ ಇಡೀ ಕುಟುಂಬ ಬೀದಿಗೆ ಬಿತ್ತು. ಅತ್ಯಾಚಾರದ ಆರೋಪದ ಮೇಲೆ ಜೈಲು ಪಾಲಾಗಿದ್ದಾರೆ ಎಂಬ ಸಮಾಜದ ನಿಂದನೆ ಮತ್ತು ಆಘಾತವನ್ನು ತಡೆಯಲಾರದೆ ಗೋಪಾಲ್ ಅವರ ತಂದೆ ತೀರಿಕೊಂಡರು. ಗಂಡ ಜೈಲಿಗೆ ಹೋದ ಮೇಲೆ ಜೀವನ ನಡೆಸಲು ದಾರಿಯಿಲ್ಲದೆ, ಸಮಾಜದ ನಿಂದನೆಗೆ ಹೆದರಿ ಹೆಂಡತಿ ಮನೆ ಬಿಟ್ಟು ಹೋದರು. ಇನ್ನು ಇವರ ಇಬ್ಬರು ಪುಟ್ಟ ಹೆಣ್ಣುಮಕ್ಕಳು ನೋಡಿಕೊಳ್ಳುವವರಿಲ್ಲದೆ ಅನಾಥಾಶ್ರಮ ಸೇರಬೇಕಾಯಿತು. ಕಣ್ಣು ಮುಚ್ಚಿ ಕಣ್ಣು ಬಿಡುವುದರೊಳಗೆ ಒಂದು ಸುಂದರವಾದ ಕುಟುಂಬ ಸಂಪೂರ್ಣವಾಗಿ ಸರ್ವನಾಶವಾಗಿ ಹೋಗಿತ್ತು.

ಗೋಪಾಲ್ ಶೆಟ್ಟೆ ಸುಮ್ಮನೆ ಕೂರಲಿಲ್ಲ. ತನಗೆ ನ್ಯಾಯ ಕೊಡಿಸಲು ಯಾರೂ ಇಲ್ಲದಿದ್ದಾಗ, ತಾನೇ ತನಗೆ ವಕೀಲನಾಗಲು ನಿರ್ಧರಿಸಿದರು. ಜೈಲಿನಲ್ಲೇ ಇದ್ದುಕೊಂಡು ಕಾನೂನಿನ ಪುಸ್ತಕಗಳನ್ನು ಓದಿದರು. ಮಾಹಿತಿ ಹಕ್ಕು ಕಾಯ್ದೆ ಮೂಲಕ ಪೊಲೀಸರ ಬಳಿ ಇದ್ದ ಎಲ್ಲಾ ದಾಖಲೆಗಳನ್ನು ತರಿಸಿಕೊಂಡರು. ಅಸಲಿ ಅಪರಾಧಿ ಗೋಪಿಯ ಹಿನ್ನೆಲೆ ಏನು? ಪೊಲೀಸರು ತನ್ನನ್ನು ಹೇಗೆ ತಪ್ಪು ಗುರುತಿಸುವಿಕೆಯಿಂದ ಲಾಕ್ ಮಾಡಿದ್ದಾರೆ? ಅನ್ನೋ ಇಂಚಿಂಚು ಸಾಕ್ಷಿಗಳನ್ನು ತಾವೇ ಕಲೆಹಾಕಿದರು. ಕೊನೆಗೆ ಬಾಂಬೆ ಹೈಕೋರ್ಟ್‌ನಲ್ಲಿ ತನ್ನ ಕೇಸ್ ಅನ್ನು ತಾನೇ ವಾದ ಮಾಡಿದರು. ಇವರ ವಾದ ಮತ್ತು ಸಾಕ್ಷಿಗಳನ್ನು ನೋಡಿ ಬೆಚ್ಚಿಬಿದ್ದ ಬಾಂಬೆ ಹೈಕೋರ್ಟ್, 2015 ರಲ್ಲಿ ಇವರನ್ನು “ಸಂಪೂರ್ಣ ನಿರ್ದೋಷಿ” ಎಂದು ಖುಲಾಸೆಗೊಳಿಸಿ ಜೈಲಿನಿಂದ ಬಿಡುಗಡೆ ಮಾಡಲು ಆದೇಶಿಸಿತು.

ಜೈಲಿನಿಂದ ಹೊರಬಂದಿರುವ ಗೋಪಾಲ್ ಶೆಟ್ಟೆ, ತನಗೆ ಅನ್ಯಾಯ ಮಾಡಿದ, ಸುಳ್ಳು ಕೇಸ್ ದಾಖಲಿಸಿದ ಪೊಲೀಸ್ ಅಧಿಕಾರಿಗಳು ಮತ್ತು ಸರ್ಕಾರದಿಂದ ಬರೋಬ್ಬರಿ 200 ಕೋಟಿ ರೂಪಾಯಿ ನಷ್ಟ ಪರಿಹಾರ ಕೋರಿ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದಾರೆ. ಬಡವರು ಅಥವಾ ಸಾಮಾನ್ಯರು ಸಿಕ್ಕಾಗ ಪೊಲೀಸರು ಹೇಗೆ ಬೇಕಾದರೂ ಕೇಸ್ ದಾಖಲಿಸಿ ಕೈತೊಳೆದುಕೊಳ್ಳಬಹುದು ಎಂಬ ಪ್ರವೃತ್ತಿಗೆ ಇಂತಹ ಕೇಸ್‌ಗಳು ದೊಡ್ಡ ಬ್ರೇಕ್ ಹಾಕುತ್ತವೆ. ತಪ್ಪು ಮಾಡಿದ ಅಧಿಕಾರಿಗಳಿಗೆ ಶಿಕ್ಷೆಯಾಗಲೇಬೇಕು.