ರಾಜಸ್ಥಾನದ ಜೈಪುರದಲ್ಲಿ ಬೆಂಗಳೂರು ಮೂಲದ ಪೊಲೀಸ್ ಸಿಬ್ಬಂದಿಯೇ ಭ್ರಷ್ಟಾಚಾರ ನಿಗ್ರಹ ದಳದ ಬಲೆಗೆ ಬಿದ್ದಿರುವ ಘಟನೆಯೊಂದು ಬೆಳಕಿಗೆ ಬಂದಿದೆ. ದೂರುದಾರರೊಬ್ಬರಿಂದ 40 ಸಾವಿರ ರೂ. ಲಂಚ ಪಡೆಯುತ್ತಿದ್ದಾಗ ಬೆಂಗಳೂರಿನ ಎಚ್ಎಎಲ್ ಪೊಲೀಸ್ ಠಾಣೆಯ ಮೂವರು ಪೊಲೀಸರು ಎಸಿಬಿ ಬಲೆಗೆ ಸಿಕ್ಕಿಬಿದ್ದಿದ್ದಾರೆ. ಬಂಧಿತರನ್ನು ಬೆಂಗಳೂರಿನ ಎಚ್ಎಎಲ್ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಅನಿತಾ ಹಾಗೂ ಮುಖ್ಯ ಪೇದೆಗಳಾದ ಯತೀಶ್ ಕುಮಾರ್ ಮತ್ತು ಉಳುವಪ್ಪ ಎಂದು ಗುರುತಿಸಲಾಗಿದೆ. ಕರ್ತವ್ಯದ ನಿಮಿತ್ತ ಜೈಪುರಕ್ಕೆ ತೆರಳಿದ್ದ ಈ ಮೂವರು ಪೊಲೀಸ್ ಅಧಿಕಾರಿಗಳು ಅಲ್ಲಿಯೇ ಲಂಚ ಪಡೆದು ಕಾನೂನಿನ ಕೈಗೆ ಸಿಲುಕಿದ್ದಾರೆ.

ಬೆಂಗಳೂರಿನ ಎಚ್ಎಎಲ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ವರದಕ್ಷಿಣೆ ಕಿರುಕುಳ ಪ್ರಕರಣವೊಂದರ ತನಿಖೆಗಾಗಿ ಈ ಮೂವರ ಪೊಲೀಸ್ ತಂಡ ಜೈಪುರಕ್ಕೆ ತೆರಳಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಅಲ್ಲಿನ ಸ್ಥಳೀಯ ದೂರುದಾರರನ್ನು ಭೇಟಿಯಾಗಿದ್ದ ಪೊಲೀಸರು, ತನಿಖೆಯಲ್ಲಿ ರಿಯಾಯಿತಿ ನೀಡುವುದಾಗಿ ಮತ್ತು ಪ್ರಕರಣದಿಂದ ಸುಲಭವಾಗಿ ಪಾರು ಮಾಡುವುದಾಗಿ ಭರವಸೆ ನೀಡಿದ್ದರು.

ಪ್ರಕರಣವನ್ನು ಇತ್ಯರ್ಥಪಡಿಸಲು ಮತ್ತು ಆರೋಪಿಗಳಿಗೆ ಪರಿಹಾರ ಒದಗಿಸುವ ನೆಪದಲ್ಲಿ ಪಿಎಸ್ಐ ಅನಿತಾ ನೇತೃತ್ವದ ತಂಡವು ದೂರುದಾರರಿಂದ ಬರೋಬ್ಬರಿ 2 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿತ್ತು. ಆದರೆ ಲಂಚ ನೀಡಲು ಇಷ್ಟವಿಲ್ಲದ ದೂರುದಾರರು ಈ ಕುರಿತು ತಕ್ಷಣವೇ ಜೈಪುರದ ಭ್ರಷ್ಟಾಚಾರ ನಿಗ್ರಹ ದಳದ (ACB) ಅಧಿಕಾರಿಗಳಿಗೆ ದೂರು ನೀಡಿದ್ದರು. ಯೋಜನೆಯಂತೆ ಮೊದಲ ಕಂತಾಗಿ 40 ಸಾವಿರ ರೂ. ಹಣವನ್ನು ಪಡೆಯುತ್ತಿದ್ದಾಗ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಜೈಪುರದ ಪ್ರಸಿದ್ಧ ಹೋಟೆಲ್’ನಲ್ಲಿ ಈ ಮೂವರು ಪೊಲೀಸರು ತಂಗಿದ್ದರು. ಲಂಚದ ಹಣದೊಂದಿಗೆ ದೂರುದಾರರು ಹೋಟೆಲ್ಗೆ ಆಗಮಿಸುತ್ತಿದ್ದಂತೆ, ಜೈಪುರ ಎಸಿಬಿ ತಂಡವು ಹೋಟೆಲ್ ಸುತ್ತಲೂ ನಿಗಾ ಇಟ್ಟಿತ್ತು. ದೂರುದಾರರಿಂದ ಮೂವರು ಪೊಲೀಸರು ಹಣವನ್ನು ಸ್ವೀಕರಿಸುತ್ತಿದ್ದ ಕ್ಷಣದಲ್ಲೇ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು, ಹಣದ ಸಮೇತ ಮೂವರನ್ನೂ ವಶಕ್ಕೆ ಪಡೆದಿದ್ದಾರೆ.
