ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯ 62 ನೇ ತೋಕೂರು ಗ್ರಾಮದ ಜೋಕಟ್ಟೆ ಅರಿಕೆರೆ ಎಂಬಲ್ಲಿ ಮಂಗಳೂರು ವಿಶೇಷ ಆರ್ಥಿಕ ವಲಯಕ್ಕೆ (MSEZ) ಸೇರಿದ ನೀರು ಹರಿಯುವ ತೋಡಿನಲ್ಲಿ ದಿನಾಂಕ: 10-06-2026 ರಂದು ಬೆಳಗ್ಗೆ 8:00ರ ಸಮಯಕ್ಕೆ, ಸರಿ-ಸುಮಾರು 40 ವರ್ಷದ ಆಸುಪಾಸಿನ ಅಪರಿಚಿತ ಗಂಡಸಿನ ಮೃತದೇಹವು ಕುತ್ತಿಗೆ ಕೊಯ್ದು ಕೊಲೆ ಮಾಡಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಈ ಬಗ್ಗೆ ಕಿಶೋರ್ ಎಂಬವರು ನೀಡಿದ ದೂರಿನಂತೆ ಪಣಂಬೂರು ಪೊಲೀಸ್ ಠಾಣೆಯಲ್ಲಿ ಅ.ಕ್ರ.ಸಂ: 82/2026 ರಂತೆ ಪ್ರಕರಣ ದಾಖಲಿಸಿ ಪೊಲೀಸರು ತನಿಖೆ ನಡೆಸುತ್ತಿದ್ದರು.
ಪ್ರಕರಣದ ಆರೋಪಿಗಳ ಪತ್ತೆ ಕಾರ್ಯ ನಡೆಸುತ್ತಿರುವಾಗ, ಪೊಲೀಸರಿಗೆ ದೊರೆತ ಖಚಿತ ಮಾಹಿತಿ ಮೇರೆಗೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿ ಪ್ರಶಾಂತ್ ಕುಮಾರ್ ಪ್ರಾಯ 36 ವರ್ಷ, ಶಿವಾಜಿ ನಗರ, ದರ್ಬಾಂಗಾ ಬಿಹಾರ ರಾಜ್ಯ, ಹಾಲಿ ವಾಸ, ಜೋಕಟ್ಟೆ ವಿಜಯ ವಿಠಲ ಭಜನಾ ಮಂದಿರದ ಬಳಿ, ತೋಕೂರು ಗ್ರಾಮ, ಮಂಗಳೂರು ಎಂಬಾತನನ್ನು ದಿನಾಂಕ: 13.06.2026 ರಂದು ಗೋವಾದ ಮಡಗಾಂವ್ ರೈಲ್ವೆ ನಿಲ್ದಾಣದಲ್ಲಿ ಬಂಧಿಸಿ, ಆತನನ್ನು ಪಣಂಬೂರು ಠಾಣೆಗೆ ಕರೆತಂದು ಹೆಚ್ಚಿನ ವಿಚಾರಣೆಗೆ ಗುರುಪಡಿಸಿದಾಗ, ಪ್ರಕರಣದಲ್ಲಿ ಭಾಗಿಯಾದ ಇನ್ನೊಬ್ಬ ಆರೋಪಿ ಪಿಂಕೂ ಮಹ್ತೋ, ಜಟ್ ಕೌಲಿ, ವೈಶಾಲಿ ಜಿಲ್ಲೆ, ಬಿಹಾರ. ಹಾಲಿ ವಾಸ: ವಿಜಯ ವಿಠಲ ಭಜನಾ ಮಂದಿರದ ಬಳಿ, ಜೋಕಟ್ಟೆ, ಮಂಗಳೂರು ಎಂಬಾತನನ್ನು ಪತ್ತೆಹಚ್ಚಿ ಪೊಲೀಸರು ಬಂಧಿಸಿರುತ್ತಾರೆ. ಆರೋಪಿಗಳು ಬಿಹಾರ ರಾಜ್ಯದವರಾಗಿದ್ದು, ಜೋಕಟ್ಟೆಯ ಬಾಡಿಗೆ ಮನೆಯಲ್ಲಿ ತಮ್ಮ ಸಂಸಾರದೊಂದಿಗೆ ವಾಸವಾಗಿರುತ್ತಾರೆ.
ಆರೋಪಿಗಳ ಪೈಕಿ ಪ್ರಶಾಂತ್ ಕುಮಾರ್ MRPLನಲ್ಲಿ ವೆಲ್ಡಿಂಗ್ ಕೆಲಸ ಮಾಡುತ್ತಿದ್ದು, ಆರೋಪಿ ಪಿಂಕೂ ಮೆಹ್ತೋ ಬಾರ್ ಬೈಂಡಿಂಗ್ ಕೆಲಸಗಾರನಾಗಿದ್ದ. ಪ್ರಕರಣದಲ್ಲಿ ಮೃತಪಟ್ಟ ಅಪರಿಚಿತನ ಗುರುತು ಪತ್ತೆ ಹಚ್ಚಲಾಗಿದ್ದು, ಈತನು ಬಿಹಾರ ಮೂಲದ ಚಂದನ್ ಚೌಹಾನ್ (39 ವರ್ಷ) ಪೂರ್ನಿಯ, ಬಿಹಾರ್ ರಾಜ್ಯ ಎಂಬುದಾಗಿ ತನಿಖೆಯಿಂದ ತಿಳಿದು ಬಂದಿರುತ್ತದೆ.
ಆರೋಪಿ ಪ್ರಶಾಂತ್ ಕುಮಾರ್‌ನ ಪತ್ನಿಯು ಕಳೆದ ಎಪ್ರಿಲ್ ತಿಂಗಳಿನಲ್ಲಿ ಇನ್ನೋರ್ವ ಯುವಕನ ಜೊತೆಯಲ್ಲಿ ಮನೆ ಬಿಟ್ಟು ಪರಾರಿಯಾಗಿದ್ದು, ಆಕೆ ಮನೆ ಬಿಟ್ಟು ಹೋಗಲು ಪ್ರಕರಣದಲ್ಲಿ ಕೊಲೆಯಾದ ಚಂದನ್ ಚೌಹಾನ್ ಸಹಾಯ ಮಾಡಿರುವುದಲ್ಲದೆ, ಆಕೆಯು ಸಣ್ಣ ಹುಡುಗನ ಜೊತೆಯಲ್ಲಿ ಮನೆ ಬಿಟ್ಟು ಪರಾರಿಯಾಗಿರುತ್ತಾಳೆ ಎಂದು ಈತ ಅಪಪ್ರಚಾರ ಮಾಡಿರುವುದರಿಂದ ಸಿಟ್ಟಿಗೆದ್ದು, ತನ್ನ ಸ್ನೇಹಿತ ಪಿಂಕೂ ಮಹ್ತೋ ಜೊತೆ ಸೇರಿಕೊಂಡು ದಿನಾಂಕ 09.06.2026 ರಂದು ಸಂಜೆ 6:00 ಗಂಟೆ ವೇಳೆ ಚಂದನ್ ನ ತಲೆಗೆ ಹಾಗೂ ಮುಖಕ್ಕೆ ಬಲವಾದ ದೊಣ್ಣೆಯಿಂದ ಹೊಡೆದು, ಕುತ್ತಿಗೆಗೆ ಚಾಕುವಿನಿಂದ ಕೊಯ್ದು ಕೊಲೆ ಮಾಡಿ ಮೃತದೇಹವನ್ನು ಜೋಕಟ್ಟೆ ಬಾಡಿಗೆ ಮನೆಯ ಪಕ್ಕದಲ್ಲಿರುವ ತೋಡಿನಲ್ಲಿ ಬಿಸಾಡಿರುವುದಾಗಿ ಆರೋಪಿಗಳು ಒಪ್ಪಿಕೊಂಡಿರುತ್ತಾರೆ.
ಈ ಕೊಲೆ ಪ್ರಕರಣವನ್ನು ಅತೀ ಶೀಘ್ರದಲ್ಲಿ ಬೇಧಿಸಿದ ಪಣಂಬೂರು ಪೊಲೀಸರ ಕಾರ್ಯ ಮೆಚ್ಚುವಂತದ್ದು. ಮಂಗಳೂರು ಉತ್ತರ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀಕಾಂತ.ಕೆ.ರವರ ಮಾರ್ಗದರ್ಶನದಲ್ಲಿ ಪಣಂಬೂರು ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಸಲೀಂ ಅಬ್ಬಾಸ್, ಉಪ- ನಿರೀಕ್ಷಕರಾದ ಶ್ರೀಕಲಾ ಕೆ.ಟಿ, ಜ್ಞಾನಶೇಖರ ಹಾಗೂ ಸಿಬ್ಬಂದಿಗಳಾದ ಇಮ್ತಿಯಾಝ್, ಸುರೇಂದ್ರ, ಚೆರಿಯನ್, ದೀಪಕ್, ಫಕ್ಕಿರೇಶ್, ರಾಕೇಶ್, ಮಂಜುನಾಥ್ ಮುಂತಾದವರು ಪತ್ತೆ ಕಾರ್ಯದಲ್ಲಿ ಭಾಗವಹಿಸಿ, ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ.
