’25 ವರ್ಷಗಳಿಂದ ಸಿಪಿಐಎಂ ನಲ್ಲಿದ್ದ ಜಯ ಪರಾರಿ ಎಂಬವರು ಗುರುಪುರ ಬ್ಲಾಕ್ ಕಾಂಗ್ರೆಸ್ ಸಭೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು” ಎಂಬ ಮಾಧ್ಯಮ ಪ್ರಕಟನೆಗೆ ಸಿಪಿಐಎಂ ಗುರುಪುರ ವಲಯ ಸಮಿತಿ ಅಚ್ಚರಿ ವ್ಯಕ್ತಪಡಿಸಿದೆ. ಇದು ಕಾಂಗ್ರೆಸ್ ಮುಖಂಡ ಇನಾಯತ್ ಅಲಿಯವರ ಮಕ್ಕಳಾಟಿಕೆ ರಾಜಕಾರಣಕ್ಕೆ ನಿದರ್ಶನ ಎಂದು ವ್ಯಂಗ್ಯವಾಡಿದೆ.
ಜಯ ಪರಾರಿ ಎಂಬ ಹೆಸರಿನ ಯಾವುದೇ ವ್ಯಕ್ತಿ ಸಿಪಿಐಎಂ ಪಕ್ಷದ ಸದಸ್ಯರಾಗಿರಲಿಲ್ಲ, ಕಳೆದ ಎರಡೂವರೆ ದಶಕದ ಪಕ್ಷದ ಸದಸ್ಯರ ಪಟ್ಟಿಯಲ್ಲೂ ಅಂತಹ ಹೆಸರಿಲ್ಲ. ಸಿಪಿಐಎಂ ಪಕ್ಷದ ಸದಸ್ಯತ್ವ ಪಡೆಯಲು ಅದರದ್ದೇ ಆದ ನೀತಿ, ನಿಯಮ, ಮಾನದಂಡಗಳಿವೆ. ಪಕ್ಷದ ಸದಸ್ಯರಾಗಲು ಹಲವು ಹಂತಗಳನ್ನು ದಾಟಿ ಬರಬೇಕು, ಪಕ್ಷದ ಪ್ರತಿಯೊಬ್ಬ ಸದಸ್ಯನ ವಿವರಗಳಿಗೂ ದಾಖಲೆ ಇರುತ್ತದೆ.
ಪಕ್ಷದ ಯಾವುದೇ ಶಾಖೆಯಲ್ಲಿ ಸದಸ್ಯರಲ್ಲದ, ಚಟುವಟಿಕೆಗಳಲ್ಲಿಯೂ ಕಾಣಸಿಗದ ವ್ಯಕ್ತಿಗೆ ಸಿಪಿಐಎಂ ಸದಸ್ಯತ್ವವನ್ನು ಆರೋಪಿಸಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಎಂದು ಹೇಳಿಕೆ ಹೊರಡಿಸುವುದು ತೀರಾ ಬಾಲಿಶ ರಾಜಕಾರಣ.
ಗುರುಪುರ ಬ್ಲಾಕ್ ಕಾಂಗ್ರೆಸ್ ಸಮಿತಿ ಹಾಗು ಅದರ ನಾಯಕರ ಇಂತಹ ಕೆಳಮಟ್ಟದ ರಾಜಕಾರಣವನ್ನು ಸಿಪಿಐಎಂ ಗುರುಪುರ ವಲಯ ಸಮಿತಿ ಖಂಡಿಸುತ್ತದೆ. ಇನಾಯತ್ ಅಲಿಯವರಿಗೆ ದುಡಿಯುವ ಜನರ ರಾಜಕಾರಣದ ಅರಿವಿಲ್ಲ, ಅವರು ಇನ್ನಾದರು ಮಕ್ಕಳಾಟದ ರಾಜಕಾರಣವನ್ನು ಕೈ ಬಿಟ್ಟು ಗಂಭೀರ ನಡವಳಿಕೆ ರೂಢಿಸಿಕೊಳ್ಳಲಿ ಎಂದು ಸಿಪಿಐಎಂ ಗುರುಪುರ ವಲಯ ಸಮಿತಿ ಕಾರ್ಯದರ್ಶಿ ಸದಾಶಿವ ದಾಸ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

