“ಖುದಾ ಕೀ ಕಸಂ, ನಾನು ನಿಮಗೆ ದ್ರೋಹ ಬಗೆದಿಲ್ಲ’ ಜಮೀರ್ ಅಹ್ಮದ್ ಕನ್ವಿನ್ಸು
✍️. ಆರ್.ಟಿ.ವಿಠ್ಠಲಮೂರ್ತಿ
ಜುಲೈ ಹತ್ತರ ಹೊತ್ತಿಗೆ ರಾಜ್ಯ ಸಚಿವ ಸಂಪುಟ ವಿಸ್ರರಣೆಯಾಗಲಿದೆ. ಆ ಮೂಲಕ ಟೇಕಾಫ್ ಆಗಿರುವ ಡಿಕೆ-26 ಫ್ಲೈಟು ಫುಲ್ಲಾಗಲಿದೆ. ಅಂದ ಹಾಗೆ ಜುಲೈ ಮಧ್ಯ ಭಾಗದಲ್ಲಿ ವಿಧಾನಮಂಡಲ ಅಧಿವೇಶನ ನಡೆಸುವ ಲೆಕ್ಕಾಚಾರ ಸಿಎಂ ಡಿ.ಕೆ.ಶಿವಕುಮಾರ್ ಅವರಲ್ಲಿದ್ದು, ಈ ವಾರ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಅಧಿವೇಶನದ ಡೇಟು ಫಿಕ್ಸಾಗಲಿದೆ. ಹೀಗೆ ಅಧಿವೇಶನದ ಡೇಟು ಫಿಕ್ಸಾದ ನಂತರ ಲಿಮಿಟೆಡ್ ಸಂಪುಟದೊಂದಿಗೆ ಅಧಿವೇಶನ ಎದುರಿಸುವುದು ಹೇಗೆ.?ಹೀಗಾಗಿ ಅದು ಶುರುವಾಗುವ ಮುನ್ನ ಎರಡನೇ ಕಂತಿನ ಸಂಪುಟ ವಿಸ್ತರಣೆ ಪ್ರಕ್ರಿಯೆಯನ್ನು ಪೂರ್ಣಗೊಳಿಸುವುದು ಡಿ.ಕೆ. ಶಿವಕುಮಾರ್ ಅವರ ಯೋಚನೆ.
ದಿಲ್ಲಿ ಮೂಲಗಳ ಪ್ರಕಾರ, ‘ಸಚಿವ ಸಂಪುಟಕ್ಕೆ ಯಾರ್ಯಾರು ಸೇರ್ಪಡೆಯಾಗಬೇಕು ಎಂಬ ವಿಷಯದಲ್ಲಿ ಸಿಎಂ ಡಿ.ಕೆ. ಶಿವಕುಮಾರ್ ಮತ್ತು ಕಾಂಗ್ರೆಸ್ ಹೈಕಮಾಂಡ್ ಒಂದು ನಿರ್ಧಾರಕ್ಕೆ ಬಂದಾಗಿದೆ. ಆದರೆ ಕೆಲವು ಸ್ಥಾನಗಳ ವಿಷಯದಲ್ಲಿ ಸ್ಪಷ್ಟತೆ ಬರದೆ ಇರುವುದರಿಂದ ಒಂದು ಮಟ್ಟದ ಹಗ್ಗ ಜಗ್ಗಾಟ ನಡೆದೇ ಇದೆ.’ ಇದೇ ಮೂಲಗಳ ಪ್ರಕಾರ, ‘ಸಂಪುಟ ವಿಸ್ತರಣೆಯ ಸಂದರ್ಭದಲ್ಲಿ ಅನುಸರಿಸುವ ಮಾನದಂಡದ ಬಗ್ಗೆ ಡಿ.ಕೆ. ಶಿವಕುಮಾರ್ ಅವರು ಬಹುತೇಕ ಆಕಾಂಕ್ಷಿಗಳಿಗೆ ಸ್ಪಷ್ಟವಾಗಿ ಹೇಳಿದ್ದಾರೆ. ಅವರು ವಿವರಿಸಿದ ಮಾನದಂಡ ಹೈಕಮಾಂಡ್ ವಿಧಿಸಿದ ಮಾನದಂಡವಾದುದರಿಂದ ಇದನ್ನು ಶಿಸ್ತಿನಿಂದ ಪಾಲಿಸಲು ಸಜ್ಜಾಗುವವರು ಸಂಪುಟಕ್ಕೆ ಸೇರುತ್ತಾರೆ.
ಅಂದ ಹಾಗೆ ಈಗ ಡಿಕೆ ಫ್ಲೈಟು ಹತ್ತಲು ರೆಡಿ ಅಗುತ್ತಿರುವವರ ಪೈಕಿ ಕೆಲವರ ಮಧ್ಯೆ ಫೈಟು ಇದೆಯಾದರೂ ಫ್ರಂಟ್ ಲೈನಿನಲ್ಲಿರುವ ಹಲವರು ಕಣ್ಣಿಗೆ ಕಾಣುತ್ತಿದ್ದಾರೆ. ಈ ಪೈಕಿ ಹಾಸನ ಜಿಲ್ಲೆಯ ಶಿವಲಿಂಗೇಗೌಡ, ಮಂಡ್ಯ ಜಿಲ್ಲೆಯ ನರೇಂದ್ರಸ್ವಾಮಿ,ಚಿತ್ರದುರ್ಗ ಜಿಲ್ಲೆಯ ರಘು ಮೂರ್ತಿ, ಚಾಮರಾಜನಗರ ಜಿಲ್ಲೆಯ ಪುಟ್ಟರಂಗಶೆಟ್ಟಿ, ಶಿವಮೊಗ್ಗ ಜಿಲ್ಲೆಯ ಬಿ.ಕೆ. ಸಂಗಮೇಶ್ ಎದ್ದು ಕಾಣುತ್ತಿದ್ದಾರೆ. ಇದೇ ರೀತಿ ಹಾವೇರಿ ಜಿಲ್ಲೆಯಿಂದ ರುದ್ರಪ್ಪ ಲಮಾಣಿ, ಕೊಪ್ಪಳ ಜಿಲ್ಲೆಯ ಬಸವರಾಜ ರಾಯರೆಡ್ಡಿ ಮತ್ತು ರಾಘವೇಂದ್ರ ಹಿಟ್ನಾಳ್, ರಾಯಚೂರು ಜಿಲ್ಲೆಯ ಎನ್.ಎಸ್. ಭೋಸರಾಜು, ಕೋಲಾರ ಜಿಲ್ಲೆಯ ರೂಪಕಲಾ ಶಶಿಧರ್, ಬಿಜಾಪುರ ಜಿಲ್ಲೆಯಿಂದ ಯಶವಂತರಾವ್, ಬಳ್ಳಾರಿ ಜಿಲ್ಲೆಯಿಂದ ಕಂಪ್ಲಿ ಗಣೇಶ್, ದಾವಣಗೆರೆ ಜಿಲ್ಲೆಯಿಂದ ಎಸ್.ಎಸ್. ಮಲ್ಲಿಕಾರ್ಜುನ್, ಬೆಳಗಾವಿ ಜಿಲ್ಲೆಯಿಂದ ಲಕ್ಷ್ಮಣ ಸವದಿ ಅವರು ಡಿಕೆ ಫ್ಲೈಟಿನ ಮೆಟ್ಟಿಲುಗಳ ಬಳಿ ನಿಂತಿದ್ದಾರೆ.
ಈ ಮಧ್ಯೆ ಸ್ಪೀಕರ್ ಹುದ್ದೆಗೆ ಕೇಳಿ ಬರುತ್ತಿದ್ದ ಹೆಚ್.ಕೆ. ಪಾಟೀಲರ ಹೆಸರು ಈಗ ಮಂತ್ರಿಗಿರಿಯ ಸಾಲಿನಲ್ಲಿದೆ. ಮೂಲಗಳ ಪ್ರಕಾರ: ‘ನೀವು ವಿಧಾನಸಭೆಯ ಸ್ಪೀಕರ್ ಆಗಿ ಅಂತ ವರಿಷ್ಟರು ಹೆಚ್.ಕೆ. ಪಾಟೀಲ್ ಅವರಿಗೆ ಹೇಳಿದ್ದರಾದರೂ, ‘ಕೊಟ್ರೆ ನನಗೆ ಮಂತ್ರಿಗಿರಿ ಕೊಡಿ. ಇಲ್ಲದಿದ್ದರೆ ಏನೂ ಬೇಡಿ’ ಅಂತ ಹೆಚ್.ಕೆ. ಪಾಟೀಲ್ ಹೇಳಿದ್ದರಂತೆ. ಎಷ್ಟೇ ಆದರೂ ಹಿರಿಯ ನಾಯಕ. ಅವರು ಸಂಪುಟದಲ್ಲಿದ್ದರೆ ಸರ್ಕಾರದ ತೂಕ ಹೆಚ್ಚುತ್ತದೆ ಎಂಬ ಮಾತು ಹಲವು ಮೂಲಗಳಿಂದ ಅನುರಣಿಸಿದ್ದರಿಂದ ಈಗ ಸಿಎಂ ಡಿ.ಕೆ.ಶಿವಕುಮಾರ್ ಮತ್ತು ಪಕ್ಷದ ವರಿಷ್ಟರು ಹೆಚ್ಕೆ ಕ್ಯಾಬಿನೆಟ್ಟಿಗೆ ಬರ್ಲಿ ಎಂಬ ತೀರ್ಮಾನಕ್ಕೆ ಬಂದಿದ್ದಾರೆ.
ಇದೇ ರೀತಿ ಧಾರವಾಡ ಜಿಲ್ಲೆಯ ಯಂಗ್ ಅಂಡ್ ಎನರ್ಜಿಟಿಕ್ ಲೀಡರು ಸಂತೋಷ್ ಲಾಡ್ ಅವರು ಕಾಂಗ್ರೆಸ್ ಸಿದ್ಧಾಂತಗಳನ್ನು ಪವರ್ ಫುಲ್ಲಾಗಿ ಡಿಸ್ ಪ್ಲೇ ಮಾಡಬಲ್ಲವರು. ಅವರು ಮಂತ್ರಿ ಮಂಡಲದಲ್ಲಿದ್ದರೆ ಸರ್ಕಾರಕ್ಕೂ ಒಳ್ಳೆಯದು. ಸಂಘಟನೆಗೂ ಒಳ್ಳೆಯದು ಎಂಬ ಅಭಿಪ್ರಾಯ ಗಟ್ಟಿಯಾಗಿರುವುದರಿಂದ ಸಂತೋಷ್ ಲಾಡ್ ಅವರು ಡಿಕೆ ಫ್ಲೈಟಿನ ಮೆಟ್ಟಿಲು ಹತ್ತಬಹುದು.
ಇನ್ನು ಸಿದ್ದರಾಮಯ್ಯ ಅವರ ಅಸಮಾಧಾನಕ್ಕೆ ಗುರಿಯಾಗಿ ಮೊದಲ ಕಂತಿನ ಸಂಪುಟದಿಂದ ದೂರವಿದ್ದ ಜಮೀರ್ ಅಹ್ಮದ್ ಖಾನ್ ಈಗ ಡಿ.ಕೆ.ಫ್ಲೈಟಿನ ಮೊದಲ ಮೆಟ್ಟಿಲು ಹತ್ತಿ ನಿಂತಿದ್ದು ಕೊನೆ ಘಳಿಗೆಯಲ್ಲಿ ರಪ ರಪ ಅಂತ ಹತ್ತಿ ಫ್ಲೈಟಿನೊಳಗೆ ಸೀಟು ಹಿಡಿಯುವ ಸಾಧ್ಯತೆ ಜಾಸ್ತಿ.
ಇದಕ್ಕೆ ಕೆ.ಸಿ.ವೇಣುಗೋಪಾಲ್ ಮೊದಲ ಕಾರಣವಾದರೆ, ಎರಡನೆಯ ಕಾರಣ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ. ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿದ ಹೊಸತರಲ್ಲಿ ಜಮೀರ್ ಅಹ್ಮದ್ ಬಗ್ಗೆ ಅವರಿಗೆ ಎಷ್ಟು ಸಿಟ್ಟಿತ್ತೋ? ಅದೀಗ ಕರಗಿ ಹೋಗಿದೆ. ಕಾರಣ.? “ಖುದಾ ಕೀ ಕಸಂ, ನಾನು ನಿಮಗೆ ದ್ರೋಹ ಬಗೆದಿಲ್ಲ’ ಅಂತ ಜಮೀರ್ ಅಹ್ಮದ್ ಕನ್ವಿನ್ಸು ಮಾಡಿರುವುದು.
ಅಂದ ಹಾಗೆ ಎರಡನೇ ಕಂತಿನ ಸಂಪುಟ ವಿಸ್ತರಣೆಯ ಸಂದರ್ಭದಲ್ಲಿ ಸಿದ್ದು-ಡಿಕೆ ಮಧ್ಯೆ ಫೈಟು ನಡೆಯಬಹುದು. ಮತ್ತು ಇದರ ತಯಾರಿಗಾಗಿಯೇ ಸಿದ್ದರಾಮಯ್ಯ ವಿಶ್ರಾಂತಿಯ ಹೆಸರಿನಲ್ಲಿ ಕೇರಳದ ರೆಸಾರ್ಟ್ ಗೆ ಹೋಗಿದ್ದರು ಎಂಬ ಗುಸು ಗುಸು ಕೇಳಿ ಬಂದಿತ್ತಾದರೂ ಅದು ಆ ಲೆವೆಲ್ಲಿನಲ್ಲೇ ಬಿದ್ದು ಹೋಗಿದೆ.
ಯಾಕೆಂದರೆ ಸಂಪುಟ ವಿಸ್ತರಣೆಯ ಸರ್ಕಸ್ಸಿಗೆ ಅನುಸರಿಸುವ ಮಾನದಂಡದ ಬಗ್ಗೆ ಸ್ಪಷ್ಟ ಅರಿವಿರುವುದರಿಂದ ಸಿದ್ಧರಾಮಯ್ಯ ಅವರು: ‘ಇಂತವ್ರು ಮಂತ್ರಿಯಾಗ್ಲೇಬೇಕ್’ ಅಂತ ಪಟ್ಟು ಹಿಡಿದಿಲ್ಲ. ಮತ್ತು ಯಾರು ಮಂತ್ರಿ ಮಂಡಲಕ್ಕೆ ಸೇರಬೇಕು ಅಂತ ಅವರು ಬಯಸಿದ್ದರೋ.? ಅ ಪೈಕಿ ಹಲವರು ಕ್ಯಾಬಿನೆಟ್ಟಿನಲ್ಲಿ ಸೆಟ್ಲಾಗುವುದು ಖಚಿತವಾದ್ದರಿಂದ ಅವರು ಕಿರಿಕಿರಿ ಮಾಡಿಕೊಳ್ಳುವ ಸ್ಥಿತಿಯೂ ಇಲ್ಲ.
ಅಲ್ಲಿಗೆ ಡಿಕೆ-26 ಫ್ಲೈಟು ಜುಲ್ಲೆ ಹತ್ತರ ಹೊತ್ತಿಗೆ ನಿರ್ವಿರ್ಘವಾಗಿ ಫುಲ್ಲಾಗಲಿದೆ.

ಬಿಜೆಪಿಯಲ್ಲಿ ಸಡನ್ ಆಪರೇಷನ್.?
ಇನ್ನು ರಾಜ್ಯ ಬಿಜೆಪಿಯಲ್ಲಿ ಸಡನ್ ಆಪರೇಷನ್ನಿನ ಮಾತುಗಳು ಕೇಳಿ ಬರುತ್ತಿವೆ. ಇತ್ತೀಚೆಗೆ ನಡೆದ ವಿದಾನ ಪರಿಷತ್ ಚುನಾವಣೆಯಲ್ಲಿ ಪಕ್ಷದ ಹಲ ಶಾಸಕರು ಅಡ್ಡ ಮತದಾನ ಮಾಡಿದರಲ್ಲ? ಇದಾದ ನಂತರ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮತ್ತು ವಿಧಾನಸಭೆಯ ಪ್ರತಿಪಕ್ಷ ನಾಯಕ ಅರ್. ಅಶೋಕ್ ಅವರ ಪಟ್ಟ ಅಲುಗಾಡುತ್ತಿದೆ. ಅಂದ ಹಾಗೆ ಇಂತಹ ಮಾತು ಕೇಳಿ ಬರಲು ಅಡ್ಡ ಮತದಾನದ ಎಪಿಸೋಡು ಮಾತ್ರ ಕಾರಣವಲ್ಲ. ಬದಲಿಗೆ ಸನ್ನಿವೇಶದ ಒತ್ತಡವೂ ಕಾರಣ.
ಅಂದ ಹಾಗೆ ಈಡಿಗ ಸಮುದಾಯದ ನಾಯಕ ಬಿ.ಕೆ. ಹರಿಪ್ರಸಾದ್ ಅವರು ಕೆಪಿಸಿಸಿ ಅಧ್ಯಕ್ಷರಾದರಲ್ಲ? ಇದಾದ ನಂತರ ಆ ಸಮುದಾಯಕ್ಕೆ ಪ್ರಾತಿನಿಧ್ಯ ನೀಡುವ ಲೆಕ್ಕಾಚಾರ ಬಿಜೆಪಿ ವರಿಷ್ಟರಲ್ಲಿದೆ. ಮತ್ತು ಇದೇ ಕಾರಣಕ್ಕಾಗಿ ವಿಧಾನಸಭೆಯ ಪ್ರತಿಪಕ್ಷ ನಾಯಕನ ಸ್ಥಾನಕ್ಕೆ ಮಾಜಿ ಸಚಿವ, ಕಾರ್ಕಳದ ವಿ.ಸುನೀಲ್ ಕುಮಾರ್ ಅವರನ್ನು ತರುವ ಥಿಂಕಿಂಗು ಗಟ್ಟಿಯಾಗಿದೆ.

ಇನ್ನು ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಜಾಗಕ್ಕೆ ಯಾರನ್ನು ತರಬಹುದು ಎಂದು ಯೋಚಿಸುತ್ತಿರುವ ಬಿಜೆಪಿ ವರಿಷ್ಟರ ಕಣ್ಣ ಮುಂದೆ ನಾಲ್ಕು ಹೆಸರುಗಳು ಸುಳಿದಾಡುತ್ತಿವೆ. ಈ ಪೈಕಿ ಕೇಂದ್ರ ಸಚಿವರಾದ ವಿ. ಸೋಮಣ್ಣ ಒಬ್ಬರಾದರೆ ಎರಡನೇ ಹೆಸರು ಪ್ರಲ್ಹಾದ ಜೋಷಿ ಅವರದು. ಇನ್ನು ಮೂರನೇ ಹೆಸರು ಮುರುಗೇಶ್ ನಿರಾಣಿ ಅವರದಾದರೆ, ನಾಲ್ಕನೇ ಹೆಸರು ಶೋಭಾ ಕರಂದ್ಲಾಜೆ ಅವರದು.
ಬಿಜೆಪಿ ಮೂಲಗಳ ಪ್ರಕಾರ, ಕರ್ನಾಟಕದಲ್ಲಿ ಪಕ್ಷ ಮತ್ತು ಅರೆಸ್ಸೆಸ್ ಮಧ್ಯೆ ಸಮನ್ವಯ ಸಾಧಿಸಲು ನೀವು ರಾಜ್ಯ ರಾಜಕಾರಣಕ್ಕೆ ಹೋಗಲು ರೆಡಿಯಾಗಿ ಅಂತ ಅಮಿತ್ ಶಾ ಅವರು ಪ್ರಲ್ಹಾದ ಜೋಷಿ ಅವರಿಗೆ ಹೇಳಿದರಂತೆ. ಆದರೆ ‘ಈ ಸನ್ನಿವೇಶದಲ್ಲಿ ತಾವು ಪಕ್ಷದ ಅಧ್ಯಕ್ಷರಾದರೆ ಯಾರು ತಮ್ಮ ವಿರುದ್ಧ ಕತ್ತಿ ಝಳಪಿಸುತ್ತಾರೆ.? ಹೇಗೆ ಡ್ಯಾಮೇಜ್ ಮಾಡುತ್ತಾರೆ.?’ ಅಂತ ಪ್ರಲ್ಹಾದ ಜೋಷಿ ನೇರವಾಗಿ ಅಮಿತ್ ಶಾ ಅವರಿಗೆ ವಿವರಿಸಿದ್ದಾರೆ.
ಇನ್ನು ವಿ.ಸೋಮಣ್ಣ ಅವರು ಪಕ್ಷದ ರಾಜ್ಯಾಧ್ಯಕ್ಷರಾಗಲಿ ಅಂತ ಖುದ್ದು ಪ್ರಧಾನಿಯವರ ಮನಸ್ಸಿನಲ್ಲಿ ಇದೆಯಾದರೂ, ತಮಗೆ ಕೇಂದ್ರ ಮಂತ್ರಿ ಪಟ್ಟದ ಜತೆ ಅಧ್ಯಕ್ಷ ಸ್ಥಾನದ ಜವಾಬ್ದಾರಿ ಕೊಟ್ಟರೆ ಒಳ್ಳೆಯದು. ಕೆಲಸ ಮಾಡಲು ಅನುಕೂಲ’ ಅಂತ ವಿ.ಸೋಮಣ್ಣ ವರಿಷ್ಟರಿಗೆ ವಿವರಿಸಿದ್ದಾರೆ.
ಈ ಮಧ್ಯೆ ಮಾಜಿ ಸಚಿವ ಮುರುಗೇಶ್ ನಿರಾಣಿ ಅವರ ಹೆಸರೂ ರಾಜ್ಯಾಧ್ಯಕ್ಷ ಸ್ಥಾನದ ರೇಸಿನಲ್ಲಿದೆ. ಅಂದ ಹಾಗೆ ಮುರುಗೇಶ್ ನಿರಾಣಿ ಪಂಚಮಸಾಲಿ ಸಮುದಾಯಕ್ಕೆ ಸೇರಿದವರಾದ್ದರಿಂದ ಅವರಿಗೆ ಪಟ್ಟ ಕಟ್ಟಿದರೆ ಪಕ್ಷದ ಹಲವು ಬಣಗಳನ್ನು ತೂಗಿಸಬಹುದು ಎಂಬುದು ಈ ಲೆಕ್ಕಾಚಾರದ ಭಾಗ.
ಉಳಿದಂತೆ ಫೀಲ್ಡಿಗೆ ಬಂದಿರುವ ಮತ್ತೊಂದು ಹೆಸರು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರದು. ವಿಜಯೇಂದ್ರ ಅವರನ್ನು ಕೆಳಗಿಳಿಸಿದ ಮೇಲೆ ಅಗುವ ಅಲ್ಲೋಲ-ಕಲ್ಲೋಲವನ್ನು ಬ್ಯಾಲೆನ್ಸ್ ಮಾಡಲು ಶೋಭಾ ಕರಂದ್ಲಾಜೆ ಅವರಿಗೆ ಸಾಧ್ಯವಿದೆ. ಇದೇ ರೀತಿ ಬಿಜೆಪಿ ಮಹಿಳಾ ಮೀಸಲಾತಿಯ ಬಗ್ಗೆ ಮಾತನಾಡುತ್ತಿರುವುದರಿಂದ ಈ ನೇಮಕಾತಿಯನ್ನು ಸಮರ್ಥಿದಿಕೊಳ್ಳಲು ಸಾಧ್ಯವಾಗುತ್ತದೆ ಎಂಬುದು ದಿಲ್ಲಿ ನಾಯಕರಲ್ಲಿರುವ ಲೆಕ್ಕಾಚಾರ.

ಆದರೆ ಈ ಎಲ್ಲದರ ಮಧ್ಯೆ ಗಟ್ಟಿಯಾಗುತ್ತಿರುವ ಮತ್ತೊಂದು ವಾದ ಎಂದರೆ: ‘ಸಧ್ಯದಲ್ಲೇ ಕೇಂದ್ರ ಸಂಪುಟ ವಿಸ್ತರಿಸಲು ಪ್ರಧಾನಿ ನರೇಂದ್ರಮೋದಿ ಸಜ್ಜಾಗಿದ್ದು, ಈ ಸಂದರ್ಭದಲ್ಲಿ ಶಿವಮೊಗ್ಗದ ಸಂಸದ, ಮಾಜಿ ಸಿಎಂ ಯಡಿಯೂರಪ್ಪ ಅವರ ಪುತ್ರ ಬಿ.ವೈ. ರಾಘವೇಂದ್ರ ಅವರು ಸಂಪುಟಕ್ಕೆ ಸೇರ್ಪಡೆಯಾಗಬಹುದು. ಹಾಗೇನಾದರೂ ಅದರೆ ವಿ.ಸೋಮಣ್ಣ ರಾಜ್ಯಾಧ್ಯಕ್ಷರಾಗುವ ಸಾಧ್ಯತೆ ಜಾಸ್ತಿ’ಎಂಬುದು.
ಅರ್ಥಾತ್, ಯಡಿಯೂರಪ್ಪ ಅವರ ಒಬ್ಬ ಪುತ್ರ ಕೆಳಗಿಳಿದರೂ ಮತ್ತೊಬ್ಬ ಪುತ್ರ ಮೇಲಕ್ಕೇರುವುದರಿಂದ ಯಡಿಯೂರಪ್ಪ ಅವರನ್ನು ಸಮಾಧಾನಿಸಬಹುದು ಎಂಬುದು ಇದರ ಹಿಂದಿರುವ ತರ್ಕ. ಮೂಲಗಳ ಪ್ರಕಾರ, ಇದು ಸಾಧ್ಯವಾಗುವುದೇ ಆದರೆ ಇಡೀ ಪ್ರಕ್ರಿಯೆ ಒಂದೆರಡು ವಾರಗಳಲ್ಲಿ ಮುಗಿದು ಹೋಗಲಿದೆ.
ಹಾಗಾಗುತ್ತದಾ ಎಂಬುದನ್ನು ಕಾದು ನೋಡಬೇಕು.
ಡಿಕೆ ಲಿಂಗಾಯತ ಲೀಡರ್ ಆಗ್ತಾರಾ.?
ಈ ಮಧ್ಯೆ ರಾಜ್ಯ ಬಿಜೆಪಿಯ ಕೆಲ ನಾಯಕರು ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ವಿಜಯೇಂದ್ರ ಅವರ ಬದಲಾವಣೆಯ ಸುದ್ದಿ ಸುನಾಮಿಯಂತೆ ಹರಡಿರುವ ಬಗ್ಗೆ ಕೇಳಿದರೆ: ‘ನವೆಂಬರ್ ತನಕ ಏನೂ ಆಗಲ್ಲ ಸುಮ್ಮನಿರಿ’ ಅಂತ ಯಡಿಯೂರಪ್ಪ ಹೇಳಿದರಂತೆ.
ಹೀಗೆ ಯಡಿಯೂರಪ್ಪ ಅವರು ಹೇಳಿದ್ದನ್ನು ಕೇಳಿಕೊಂಡು ಬಂದ ಈ ನಾಯಕರು: ‘ವಿಜಯೇಂದ್ರ ಇಳಿಯಲ್ಲ, ಅವರು ಇಳಿದ್ರೆ ಕರ್ನಾಟಕದ ಲಿಂಗಾಯತರಿಗೆ ಡಿಕೆ ಹೊಸ ನಾಯಕರಾಗುವುದು ತಪ್ಪಲ್ಲ’ ಎನ್ನುತ್ತಿದ್ದಾರೆ.
ಅವರ ಪ್ರಕಾರ, ‘ರಾಮಕೃಷ್ಣ ಹೆಗಡೆ ತೆರವು ಮಾಡಿದ ಲಿಂಗಾಯತ ನಾಯಕತ್ವ ಯಡಿಯೂರಪ್ಪ ಅವರ ಪಾಲಾಯಿತು. ಅವರು ತೆರವು ಮಾಡುವ ಜಾಗಕ್ಕೆ ಬರಲು ವಿಜಯೇಂದ್ರ ಅಣಿಯಾಗುತ್ತಿದ್ದಾರೆ.
ಈಗ ಬಿಜೆಪಿ ವರಿಷ್ಟರೇನಾದರೂ ಇದಕ್ಕೆ ಕಲ್ಲು ಹಾಕಿದರೆ ಲಿಂಗಾಯತ ಮತ ಬ್ಯಾಂಕಿನ ದೊಡ್ಡ ಷೇರು ಸಿಎಂ ಡಿ.ಕೆ.ಶಿವಕುಮಾರ್ ಅವರ ಜತೆ ನಿಲ್ಲುತ್ತದೆ. ಮತ್ತು ಇದಕ್ಕೆ ಪೂರಕವಾದ ಹೆಜ್ಜೆಗಳನ್ನು ಡಿಕೆ ಇಡುತ್ತಿದ್ದಾರೆ. ಅವರು ಅಜ್ಜಯ್ಯನ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದೇ ಇರಬಹುದು. ಟಿಬಿ ಡ್ಯಾಮ್ ಪ್ರೋಗ್ರಾಮಿನಲ್ಲಿ ಅಜ್ಜಯ್ಯನ ಹೆಸರು ಮೆರೆಸಿದ್ದೇ ಇರಬಹುದು. ಒಟ್ಟಿನಲ್ಲಿ ಅವರಿಡುತ್ತಿರುವ ಸ್ಟೆಪ್ಪುಗಳು ಲಿಂಗಾಯತ ಮತ ಬ್ಯಾಂಕಿಗೆ ಆಕರ್ಷಕವಾಗಿ ಕಾಣುತ್ತಿವೆ. ಬಿಜೆಪಿ ವರಿಷ್ಟರಿಗೆ ಇದು ಅರ್ಥವಾದರೆ ಓಕೆ, ಇಲ್ಲವಾದರೆ ಲಿಂಗಾಯತ ಮತ ಬ್ಯಾಂಕಿನ ಮುಂದಿನ ನಾಯಕ ಡಿಕೆ’ಎನ್ನುತ್ತಿದ್ದಾರೆ.
