ಸುರತ್ಕಲ್ ಪೊಲೀಸರ ಕಾರ್ಯಾಚರಣೆ: ಮಹಿಳೆಯರ ಸರ ಸುಲಿಗೆ ಪ್ರಕರಣದ ಆರೋಪಿಯ ಬಂಧನ; ಚಿನ್ನಾಭರಣಗಳ ವಶ.

ಕರಾವಳಿ

ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಚೊಕ್ಕಬೆಟ್ಟು ಅಜಾದ್ ನಗರದ ಎರಡನೇ ಬ್ಲಾಕ್ ನಲ್ಲಿರುವ ಶ್ರೀಮತಿ ಜಾಹೀದ್ ಎಂಬವರು ತನ್ನ ಮನೆಯ ಬೆಡ್ ರೂಮಿನಲ್ಲಿ ಮಲಗಿದ ಸಮಯದಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಕಿಟಿಕಿಯಿಂದ ಕೈ ಹಾಕಿ ಶ್ರೀಮತಿ ಜಾಹೀದಾರವರ ಕುತ್ತಿಗೆಯಲ್ಲಿದ್ದ ಚಿನ್ನದ ಕರಿಮಣಿ ಸರವನ್ನು ಎಳೆದು ಪರಾರಿಯಾಗಲು ಯತ್ನಿಸಿದಾಗ, ಕರಿಮಣಿ ಸರ ತುಂಡಾಗಿ ಸುಮಾರು 20 ಸಾವಿರ ರೂ. ಮೌಲ್ಯದ ಕರಿಮಣಿ ಸರದ ತುಂಡನ್ನು ಆರೋಪಿಯು ಕಸಿದುಕೊಂಡು ಹೋಗಿದ್ದು, ಉಳಿದ ಕರಿಮಣಿ ಸರದ ತುಂಡು ಜಾಹಿದಾ ಅವರಲ್ಲೇ ಬಾಕಿಯಾಗಿದ್ದು, ಈ ಬಗ್ಗೆ ಪಿರ್ಯಾದುದಾರರು ದಿನಾಂಕ: 26-06-2026 ರಂದು ನೀಡಿರುವ ದೂರಿನಂತೆ ಸುರತ್ಕಲ್ ಠಾಣೆಯಲ್ಲಿ ಮೊ.ಸಂ: 78/2026ರಂತೆ ಪ್ರಕರಣ ದಾಖಲಿಸಲಾಗಿತ್ತು.

ದಿನಾಂಕ 27-06-2026 ರಂದು ಬೆಳಿಗ್ಗಿನ ಜಾವ ಚೊಕ್ಕಬೆಟ್ಟು 8ನೇ ಬ್ಲಾಕ್ ನಿವಾಸಿ ಫಯಾಜ್ ಎಂಬವರು ಮುಂಜಾನೆ 5:00ರ ಸಮಯಕ್ಕೆ ಮಸೀದಿಗೆ ಪ್ರಾರ್ಥನೆಗೆಂದು ಹೋದಾಗ ತನ್ನ ಮನೆಯ ಬಾಗಿಲನ್ನು ಮುಚ್ಚಿಹೋಗಿದ್ದು, ಅದೇ ವೇಳೆಗೆ ಅಪರಿಚಿತ ವ್ಯಕ್ತಿಯು ಬಾಗಿಲನ್ನು ತೆರೆದು ಮನೆಯ ಒಳಗಡೆ ಪ್ರವೇಶಿಸಿ ಬೆಡ್ ರೂಮಿನಲ್ಲಿ ಮಲಗಿದ್ದ ಶ್ರೀಮತಿ ಅಪ್ರೀನಾ ಎಂಬವರ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಸುಲಿಗೆ ಮಾಡಲು ಯತ್ನಿಸಿದಾಗ ಚಿನ್ನದ ಸರ ತುಂಡಾಗಿ, ಸುಮಾರು ಒಂದು ಲಕ್ಷ ರೂ. ಮೌಲ್ಯದ ಚಿನ್ನದ ಸರದ ತುಂಡನ್ನು ಆರೋಪಿಯು ಕಸಿದುಕೊಂಡು ಪರಾರಿಯಾಗಿದ್ದ. ಚಿನ್ನದ ಬಾಕಿ ತುಂಡು ಹಾಗೂ ಪೆಂಡೆಂಟ್ ಪಿರ್ಯಾದಿ ಬಳಿ ಇದ್ದು, ಈ ಬಗ್ಗೆಯು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಮೊ.ಸಂ:79/2026 ರಂತೆ ಪ್ರಕರಣ ದಾಖಲಾಗಿತ್ತು.

ಈ ಎರಡೂ ಸುಲಿಗೆ ಪ್ರಕರಣದ ಜಾಡು ಹಿಡಿದು ತನಿಖೆ ನಡೆಸಿದ ಸುರತ್ಕಲ್ ಪೊಲೀಸರು, ಪ್ರಕರಣದ ಆರೋಪಿ ಮೊಹಮ್ಮದ್ ಅಬ್ದುಲ್ ಜಾಫರ್ 2ನೇ ಬ್ಲಾಕ್ ಕಾಟಿಪಳ್ಳ, ಸುರತ್ಕಲ್, ಎಂಬಾತನನ್ನು ದಿನಾಂಕ 29-06-2026 ರಂದು ಮಂಗಳೂರು ನಗರದ ಸ್ಟೇಟ್ ಬ್ಯಾಂಕ್ ಬಳಿ ವಶಕ್ಕೆ ಪಡೆದು, ಹೆಚ್ಚನ ವಿಚಾರಣೆ ನಡೆಸಿ, ಆತ ಕಳವುಗೈದ ಎರಡೂ ಪ್ರಕರಣಕ್ಕೆ ಸಂಬಂಧಿಸಿದ ಚಿನ್ನಾಭರಣವನ್ನು ವಶಪಡಿಸಿಕೊಂಡಿರುತ್ತಾರೆ.

ಆರೋಪಿ ಮೊಹಮ್ಮದ್ ಅಬ್ದುಲ್ ಜಾಫರ್ ನ ವಿರುದ್ಧ ಈ ಹಿಂದೆ ಸುರತ್ಕಲ್ ಪೊಲೀಸ್ ಠಾಣೆ ಮೊ.ಸಂ: 36/2025 ಮತ್ತು ಉರ್ವಾ ಪೊಲೀಸ್ ಠಾಣೆ ಮೊ.ಸಂ: 123/2018 ರಂತೆ ಎರಡು ಕಳವು ಪ್ರಕರಣ ದಾಖಲಾಗಿರುತ್ತದೆ.