ಬ್ಯಾಂಕ್‌ವೊಂದರ ವ್ಯವಸ್ಥಾಪಕರು ಗ್ರಾಹಕನ ಖಾತೆಯಿಂದ ಬರೋಬ್ಬರಿ 18.41 ಕೋಟಿ ವಂಚಿಸಿರುವ ಪ್ರಕರಣ; ಸಿಸಿಬಿ ಪೊಲೀಸರಿಂದ ತನಿಖೆ

ರಾಜ್ಯ

ಸೈಬರ್ ವಂಚಕರು ಗ್ರಾಹಕರ ಖಾತೆಗಳಿಂದ ಕೋಟ್ಯಂತರ ರೂ. ವರ್ಗಾವಣೆ ಮಾಡಿಕೊಳ್ಳುತ್ತಿದ್ದಾರೆ. ಆದರೆ ಇದೀಗ ಖಾಸಗಿ ಬ್ಯಾಂಕ್‌ವೊಂದರ ವ್ಯವಸ್ಥಾಪಕರು ಬರೋಬ್ಬರಿ 18.41 ಕೋಟಿ ರೂ. ಹಣ ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದ್ದು, ಈ ಬಗ್ಗೆ ಸಿಸಿಬಿ ಪೊಲೀಸ್ ಠಾಣೆಯಲ್ಲಿ ವ್ಯವಸ್ಥಾಪಕ ವಿ. ಕೃಷ್ಣಮೂರ್ತಿ, ಅಪರಿಚಿತರಾದ ಹರೀಶ್, ಸಚಿನ್ ಸೇರಿ ವಿವಿಧ ಸಹಕಾರಿ ಬ್ಯಾಂಕುಗಳ ವ್ಯವಸ್ಥಾಪಕರು ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಾಗಿದೆ. ಬ್ಯಾಂಕಿನ ಗ್ರಾಹಕರು, ರಿಯಲ್ ಎಸ್ಟೇಟ್ ಉದ್ಯಮಿ ಸಿ.ಕೆ ನವೀನ್ ಎಂಬವರ ಗಮನಕ್ಕೆ ಬರದಂತೆ ಅವರ ಖಾತೆಯಿಂದ ಹಂತ ಹಂತವಾಗಿ ಕೋಟ್ಯಂತರ ರೂಪಾಯಿಯನ್ನು ಬ್ಯಾಂಕಿನ ವ್ಯವಸ್ಥಾಪಕ ಕೃಷ್ಣಮೂರ್ತಿ ಎಂಬವರು ಅಕ್ರಮವಾಗಿ ಹಣ ವರ್ಗಾವಣೆ ಮಾಡಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಬೆಂಗಳೂರು ಸಿಸಿಬಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಬ್ಯಾಂಕಿನ ವ್ಯವಸ್ಥಾಪಕರು, ಗ್ರಾಹಕ ನವೀನ್‌ಗೆ ‘ನಿಮ್ಮ ಖಾತೆಗೆ ತಾತ್ಕಾಲಿಕ ಓವರ್‌ಡ್ರಾಫ್ಟ್ (TOD) ಲೋನ್ ಬಿಡುಗಡೆಗೊಳಿಸುತ್ತೇವೆ. ಆದರೆ ನಾವು ಸೂಚಿಸುವ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾಯಿಸಬೇಕು’ ಎಂದಿದ್ದರು. ಇದಕ್ಕೆ ಒಪ್ಪಿದಾಗ ಸಾಲ ಬಿಡುಗಡೆಗೊಳಿಸಿದ್ದರು. ಬಳಿಕ ಸಾಲವಾಗಿ ಪಡೆದ ಹಣವನ್ನು ಕೆಲವು ಖಾತೆಗಳಿಗೆ ಗ್ರಾಹಕ ವರ್ಗಾಯಿಸಿರುತ್ತಾರೆ. ಬಳಿಕ ಅನುಮಾನ ಬಂದು ಈ ರೀತಿ ಮಾಡುವುದಿಲ್ಲವೆಂದು ವಿರೋಧ ವ್ಯಕ್ತಪಡಿಸಿದ್ದರು. ಆಗ ಬ್ಯಾಂಕಿನವರು ಖಾತೆ ಸ್ಥಗಿತಗೊಳಿಸುವುದಾಗಿ ಬೆದರಿಕೆ ಹಾಕಿ ಗಮನಕ್ಕೂ ಬರದಂತೆ ಹಣ ವರ್ಗಾವಣೆ ಮಾಡಿಕೊಂಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖವಾಗಿದೆ.
ದೂರುದಾರ ರಿಯಲ್ ಎಸ್ಟೆಟ್ ಉದ್ಯಮಿ ತಮ್ಮ ವ್ಯವಹಾರಕ್ಕಾಗಿ 2017-2018ರಲ್ಲಿ ಬನಶಂಕರಿಯಲ್ಲಿರುವ ಬ್ಯಾಂಕ್‌ವೊಂದರಲ್ಲಿ 7 ಪ್ರಮುಖ ಕರೆಂಟ್ ಖಾತೆಗಳನ್ನು ತೆರೆದು ಉತ್ತಮ ವಹಿವಾಟು ಮಾಡಿಕೊಂಡಿದ್ದರು. ಇದನ್ನೇ ಬಂಡವಾಳ ಮಾಡಿಕೊಂಡ ಬ್ಯಾಂಕ್‌ನ ವ್ಯವಸ್ಥಾಪಕ, ಗ್ರಾಹಕನಿಗೆ ತಾತ್ಕಾಲಿಕ ಓವರ್‌ಡ್ರಾಫ್ಟ್ (TOD) ಲೋನ್ ನೀಡುವ ನಾಟಕವಾಡಿ ಕೋಟ್ಯಂತರ ರೂಪಾಯಿ ವಂಚಿಸಿದ್ದಾರೆಂದು ದೂರಿನಲ್ಲಿದೆ ಹೇಳಲಾಗಿದೆ.

ದೂರುದಾರ ನವೀನ್‌ಗೆ ಸಂಬಂಧಿಸಿದ ಒಟ್ಟು ಏಳು ಬ್ಯಾಂಕ್ ಕರೆಂಟ್ ಖಾತೆಗಳಿಗೆ ವಿವಿಧ ದಿನಾಂಕಗಳಂದು ಒಟ್ಟು 7.69 ಕೋಟಿ ರೂ.ಗಳನ್ನು ಲೋನ್ ಹಣವಾಗಿ ವರ್ಗಾವಣೆ ಮಾಡಿದ್ದಾರೆ. ಬಳಿಕ ಅವರ ಖಾತೆಯಿಂದ ಒಟ್ಟು 12.67 ಕೋಟಿ ರೂ. ಹಣವನ್ನು ಅಪರಿಚಿತ ವ್ಯಕ್ತಿಗಳಾದ ಹರೀಶ್, ಸಚಿನ್ ಹಾಗೂ ವಿವಿಧ ಸೌಹಾರ್ದ ಬ್ಯಾಂಕ್‌ಗಳು ಸೇರಿ ಇತರೆ ಸಂಸ್ಥೆಗಳ ಖಾತೆಗಳಿಗೆ ಅಕ್ರಮವಾಗಿ ಹಣ ವರ್ಗಾಯಿಸಿಕೊಂಡಿದ್ದಾರೆ ಎಂದು ನವೀನ್ ಆರೋಪಿಸಿದ್ದಾರೆ.