ಹತ್ತಿರವಾಗುತ್ತಿದೆ ಸರ್ಜರಿ ಡೇಟು, ಯೋಗೀಶ್ವರ್ ವಿಥ್ ಪುಲಿಕೇಶಿ
✍️. ಆರ್.ಟಿ.ವಿಠ್ಠಲಮೂರ್ತಿ
ಕೆಲ ದಿನಗಳ ಹಿಂದೆ ಕಾಂಗ್ರೆಸ್ ವರಿಷ್ಟರು ವೀಕ್ಷಕರೊಬ್ಬರನ್ನು ಕರ್ನಾಟಕಕ್ಕೆ ಕಳಿಸಿದ್ದಾರೆ. ಹೀಗೆ ವರಿಷ್ಟರ ಸೂಚನೆಯಂತೆ ಬಂದ ಆ ವೀಕ್ಷಕರು ಮಾಜಿ ಮುಖ್ಯಮಂತ್ರಿ, ಹಿರಿಯ ನಾಯಕ ಎಂ.ವೀರಪ್ಪ ಮೊಯ್ಲಿ ಅವರನ್ನು ಭೇಟಿ ಮಾಡಿದ್ದಾರೆ. ಈ ಭೇಟಿಯ ಸಂದರ್ಭದಲ್ಲಿ ಪಕ್ಷದ ಬೆಳವಣಿಗೆಗಳ ಬಗ್ಗೆ ಆ ವೀಕ್ಷಕರು ತಮ್ಮ ಅಭಿಪ್ರಾಯ ಕೇಳಿದಾಗ ವೀರಪ್ಪ ಮೊಯ್ಲಿ ನೋವಿನಿಂದ ಮಾತನಾಡಿದರಂತೆ.
ಕಾರಣ? ಮುಖ್ಯಮಂತ್ರಿ ಹುದ್ದೆಯಿಂದ ಸಿದ್ದರಾಮಯ್ಯ ಅವರು ಕೆಳಗಿಳಿದು ಡಿ.ಕೆ.ಶಿವಕುಮಾರ್ ಆ ಜಾಗಕ್ಕೆ ಬಂದರಲ್ಲ? ಹೀಗೆ ಮುಖ್ಯಮಂತ್ರಿ ಹುದ್ದೆಗೇರಿದ ಡಿ.ಕೆ.ಶಿವಕುಮಾರ್ ತಮ್ಮ ಎರಡನೇ ಕಂತಿನ ಸಂಪುಟ ವಿಸ್ತರಣೆಗೆ ಬರೋಬ್ಬರಿ ಎರಡು ತಿಂಗಳು ಕಾಯಬೇಕಾಯಿತು. ಅಷ್ಟೇ ಅಲ್ಲ, ಮಂತ್ರಿಗಳಾದವರಿಗೆ ಖಾತೆಗಳನ್ನು ಕೊಡಲೂ ದೊಡ್ಡ ಸರ್ಕಸ್ಸು ನಡೆಸಬೇಕಾಯಿತು. ಹೀಗೆ ಮಂತ್ರಿಗಳಿಗೆ ಖಾತೆಗಳನ್ನು ಕೊಡಲೂ ಸರ್ಕಸ್ಸು ನಡೆಯುತ್ತಿದ್ದ ಸಂದರ್ಭಕ್ಕೆ ಸರಿಯಾಗಿ ಈ ವೀಕ್ಷಕರು ತಮ್ಮೆದುರು ಬಂದು ಕುಳಿತಾಗ ವೀರಪ್ಪ ಮೊಯ್ಲಿ ಸಹಜವಾಗಿಯೇ ಕಿರಿಕಿರಿ ಮಾಡಿಕೊಂಡಿದ್ದಾರೆ. ಹಾಗಂತಲೇ ರಾಜ್ಯ ಕಾಂಗ್ರೆಸ್ ನಲ್ಲಿ ನಡೆಯುಯ್ತಿರುವ ಬೆಳವಣಿಗೆಗಳ ಬಗ್ಗೆ ಪ್ರಶ್ನಿಸಿದಾಗ ನೇರವಾಗಿಯೇ ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದಾರೆ.
‘ನೋಡಿ. ಸಚಿವ ಸಂಪುಟ ರಚನೆ ಎಂಬುದು ಮತ್ತು ಯಾರನ್ನು ಮಂತ್ರಿ ಮಾಡಿಕೊಳ್ಳಬೇಕು ಎಂಬುದು ಮುಖ್ಯಮಂತ್ರಿಯವರಿಗೆ ಬಿಟ್ಟಿದ್ದು. ಅದು ಅವರ ಪರಮಾಧಿಕಾರ. ಆದರೆ ಈ ಪರಮಾಧಿಕಾರಕ್ಕೆ ಬ್ರೇಕ್ ಹಾಕಿದರೆ ಗತಿ ಏನು?’ ‘ಇವತ್ತು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಸಂಪುಟಕ್ಕೆ ಯಾರು ಸೇರಬೇಕು? ಅವರಿಗೆ ಯಾವ ಖಾತೆಗಳನ್ನು ಕೊಡಬೇಕು? ಅಂತ ದಿಲ್ಲಿಯಲ್ಲೇ ನಿರ್ಧರಿಸುವುದಾದರೆ ಡಿ.ಕೆ.ಶಿವಕುಮಾರ್ ಅವರು ತಮ್ಮಿಚ್ಚೆಯಂತೆ ಆಡಳಿತ ನಡೆಸುವುದು ಹೇಗೆ? ಅಂದ ಹಾಗೆ ಮುಖ್ಯಮಂತ್ರಿಗಳಾದವರು ರಾಜ್ಯದ ಅಭಿವೃದ್ಧಿಗೆ ಸಂಬಂಧಿಸಿದಂತೆ ತಮ್ಮದೇ ಕನಸುಗಳನ್ನು ಇಟ್ಟುಕೊಂಡಿರುತ್ತಾರೆ. ಆ ಕನಸುಗಳನ್ನು ನನಸು ಮಾಡಲು ದುಡಿಯುತ್ತಾರೆ. ಆದರೆ ಅವರು ಹೀಗೆ ದುಡಿಯಲು ತಮ್ಮದೇ ಆದ ಸಚಿವರ ತಂಡವನ್ನು ಹೊಂದಿರಬೇಕು. ಹೀಗೆ ತಮ್ಮ ಬಯಕೆಯ ತಂಡವಿದ್ದಾಗ ಬಯಸಿದಂತೆ ಮುಂದುವರಿಯಲು ಮುಖ್ಯಮಂತ್ರಿಗಳಿಗೆ ಸಾಧ್ಯ. ಒಂದು ವೇಳೆ ತಂಡದಲ್ಲಿ ಅವರು ಬಯಸಿದವರ ಸಂಖ್ಯೆ ಕಡಿಮೆ ಇದ್ದರೆ ಅವರು ತಮ್ಮ ಕನಸಿಗೆ ಪೂರಕವಾಗಿ ದುಡಿಯುವುದು ಹೇಗೆ?
ನಿಮಗೆ ನನ್ನದೇ ಉದಾಹರಣೆ ಕೊಡುತ್ತೇನೆ. 1992 ರಲ್ಲಿ ಬಂಗಾರಪ್ಪನವರು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿದು ನಾನು ಆ ಜಾಗಕ್ಕೆ ಬಂದೆನಲ್ಲ? ಇದಾದ ನಂತರ ನಾನು ಜಿಲ್ಲೆ, ಜಾತಿ, ಪ್ರದೇಶಾವಾರು ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ಸಂಪುಟಕ್ಕೆ ಸೇರಬೇಕಾದವರ ಪಟ್ಟಿ ತಯಾರಿಸಿದೆ. ಹೀಗೆ ಸಂಪುಟಕ್ಕೆ ಸೇರಬೇಕಾದವರ ಪಟ್ಟಿ ತಯಾರಿಸಿದ ಮೇಲೆ ಅದನ್ನು ಹೈಕಮಾಂಡ್ ಗಮನಕ್ಕೆ ತರಬೇಕಲ್ಲ?ಹಾಗಂತಲೇ ಅದನ್ನು ದಿಲ್ಲಿಗೆ ಕಳಿಸಿದೆ. ಅವತ್ತು ಅದನ್ನು ದಿಲ್ಲಿಗೆ ಕಳಿಸಿದಾಗ ವತಿಷ್ಟರು ಕೆಲ ತಿದ್ದುಪಡಿ ಮಾಡಬಹುದು. ಪಟ್ಟಿಯಲ್ಲಿ ಇಂತಿಂತವರಿಗೆ ಜಾಗ ಕೊಡಿ ಅಂತ ಹೇಳಬಹುದು ಅಂತ ನಾನು ಯೋಚಿಸಿದ್ದೆ. ಆದರೆ ಅವತ್ತು ನಾನು ಕಳಿಸಿದ ಪಟ್ಟಿಯನ್ನು ನೋಡಿದ ಪ್ರಧಾನಿ ಪಿ.ವಿ.ನರಸಿಂಹರಾಯರು: ‘ಮಂತ್ರಿ ಮಂಡಲ ರಚಿಸುವುದು ಮುಖ್ಯಮಂತ್ರಿಗಳ ಪರಮಾಧಿಕಾರ. ಅದನ್ನು ಬಳಸಿ ನೀವು ನಿಮಗೆ ಸಹಕಾರ ನೀಡಬಲ್ಲಂತಹ ಮಂತ್ರಿ ಮಂಡಲ ರಚಿಸಿಕೊಳ್ಳಿ. ಈ ಪಟ್ಟಿಯ ವಿಷಯದಲ್ಲಿ ನಾವು ಹೇಳುವುದೇನಿಲ್ಲ’ ಅಂದು ಬಿಟ್ಟರು. ಅಂದ ಹಾಗೆ ಮಂತ್ರಿ ಮಂಡಲ ರಚಿಸಿದ ನಂತರ ಅಸಮಾಧಾನಿತರು ಎದ್ದು ನಿಲ್ಲುವುದಿಲ್ಲ ಅಂತೇನಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅದೆಲ್ಲವೂ ಸಹಜ. ಹಾಗೆಯೇ ಅದನ್ನು ಸರಿಹೊಂದಿಸಿಕೊಂಡು ಹೋಗುವುದು ನಮ್ಮ ಜವಾಬ್ದಾರಿ. ಆದರೆ ಇದೆಲ್ಲದರ ನಡುವೆ ಒಬ್ಬ ಮುಖ್ಯಮಂತ್ರಿ ತಾನು ಬಯಸಿದ ಸಂಪುಟವನ್ನು ಹೊಂದುವುದಿದೆಯಲ್ಲ? ಅದು ಡೆಮಾಕ್ರಸಿಯ ಸೊಗಸು. ಪ್ರಧಾನಿ ಪಿ.ವಿ.ನರಸಿಂಹರಾಯರು ಅದನ್ನು ತೋರಿಸಿದ್ದರು.

ಮುಂದೆ ಒಂದು ಸಂದರ್ಭದಲ್ಲಿ ನನಗೆ ಫೋನು ಮಾಡಿದ ಪಿ.ವಿ. ನರಸಿಂಹರಾಯರು: ‘ವೀರಪ್ಪ ಮೊಯ್ಲಿಯವರೇ ನಿಮ್ಮ ಬಳಿ ನನ್ನದದು ಮನವಿ ಇದೆ’ ಎಂದರು. ಅವರ ಮಾತು ಕೇಳಿದ ನಾನು: ‘ನೀವು ಮನವಿ ಮಾಡುವುದೇ? ಬೇಡ ಸಾರ್. ಆದೇಶ ಮಾಡಿ. ಅದನ್ನು ಪಾಲಿಸುತ್ತೇನೆ’ ಎಂದೆ. ಅಗವರು: ‘ವೀರಪ್ಪ ಮೊಯ್ಲಿಯವರೇ,ನಿಮ್ಮ ಸಂಪುಟಕ್ಕೆ ಎಸ್.ಎಂ. ಕೃಷ್ಣ ಅವರನ್ನು ಸೇರಿಸಿಕೊಳ್ಳಿ ಎಂಬುದು ನನ್ನ ಮನವಿ’ ಎಂದರು. ಅವರು ಹಾಗೆ ಹೇಳಿದ ತಕ್ಷಣ ನಾನು: ‘ಸಾರ್. ಎಸ್.ಎಂ.ಕೃಷ್ಣ ಅವರನ್ನು ನನ್ನ ಸಂಪುಟಕ್ಕೆ ಸೇರಿಸಿಕೊಳ್ಳುತ್ತೇನೆ. ಅಷ್ಟೇ ಅಲ್ಲ, ಅವರನ್ನು ಉಪಮುಖ್ಯಮಂತ್ರಿ ಮಾಡುತ್ತೇನೆ’ ಎಂದೆ. ಅದಕ್ಕವರು ಸಂತೋಷ ವೀರಪ್ಪ ಮೊಯ್ಲಿಯವರೇ’ ಎಂದರು. ಇದನ್ನು ನಾನು ನಿಮಗೇಕೆ ಹೇಳಿದೆ ಎಂದರೆ ಮುಖ್ಯಮಂತ್ರಿಯಾದವರಿಗೆ ಇಂತಹ ಪರಮಾಧಿಕಾರ ಇದ್ದರೆ ಅವರು ತಮ್ಮ ಕನಸನ್ನು ನನಸು ಮಾಡುವ ದಾರಿಯಲ್ಲಿ ನಡೆಯಬಹುದು. ಇದೇ ಕಾರಣಕ್ಕಾಗಿ ನಾನು ಎಲ್ಲ ಅಡತಡೆಗಳ ಮಧ್ಯೆಯೂ ಹಲವು ಮಹತ್ವದ ಯೋಜನೆಗಳನ್ನು, ಕಾರ್ಯಕ್ರಮಗಳನ್ನು ಜಾರಿಗೆ ತರಲು ಸಾಧ್ಯವಾಯಿತು. ಆದರೆ ಇವತ್ತು ಮಂತ್ರಿ ಮಂಡಲ ರಚನೆ ಮತ್ತು ಸಚಿವರಿಗೆ ಖಾತೆಗಳನ್ನು ಹಂಚುವ ವಿಷಯದಲ್ಲಿ ಅಗಿರುವ ದಿಲ್ಲಿಯ ಹಸ್ತಕ್ಷೇಪ ಒಳ್ಳೆಯ ಬೆಳವಣಿಗೆಯಲ್ಲ’ ಅಂತ ವೀರಪ್ಪ ಮೊಯ್ಲಿ ನೇರವಾಗಿ ಹೇಳಿದ್ದಾರೆ.
ಹೀಗೆ ಅವತ್ತು ವೀರಪ್ಪಮೊಯ್ಲಿ ಅವರು ಇತಿಹಾಸದ ಬೆಳವಣಿಗೆಗಳ ಜತೆ ಪ್ರಸಕ್ತ ಬೆಳವಣಿಗೆಗಳ ತುಲನೆ ಮಾಡಿದ ರೀತಿಯನ್ನು ಕಂಡು ಆ ವೀಕ್ಷಕರು ಬೆರಗಾದರಂತೆ.
ಡಲ್ಲಾಯಿತು ಜಮೀರ್ ಪವರ್
ಈ ಮಧ್ಯೆ ವಸತಿ ಸಚಿವ ಜಮೀರ್ ಅಹ್ಮದ್ ಅವರಿಗೆ ಕೆಂಡದಂತ ಕೋಪ ಬಂದಿದೆಯಂತೆ. ಇದಕ್ಕೆ ವಕ್ಫ್, ಹಜ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಖಾತೆ ಅವರ ಕೈ ತಪ್ಪಿರುವುದೇ ಮುಖ್ಯ ಕಾರಣ. ಈ ಹಿಂದೆ ಸಚಿವರಾಗಿದ್ದಾಗ ವಸತಿ ಖಾತೆಯ ಜತೆ ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಖಾತೆಯನ್ನೂ ಪಡೆದಿದ್ದ ಜಮೀರ್ ಅಹ್ಮದ್ ತಾವು ಕರ್ನಾಟಕದ ಟಾಪೆಸ್ಟ್ ಮುಸ್ಲಿಂ ಲೀಡರು ಅಂತ ಬಿಂಬಿಸಿಕೊಂಡಿದ್ದರು.
ಸಾಲದು ಎಂಬಂತೆ ಸಿದ್ದರಾಮಯ್ಯ ಅವರು ಕೂಡಾ ಮುಸ್ಲಿಂ ಕೋಟೆಯ ಪವರ್ ಫುಲ್ ಲೀಡರುಗಳನ್ನು ಬದಿಗೆ ಸರಿಸಿ ಜಮೀರ್ ಅಹ್ಮದ್ ಅವರನ್ನು ಟಾಲೆಸ್ಟ್ ಮುಸ್ಲಿಂ ಲೀಡರ್ ಎಂಬಂತೆ ಮಾಡಿದ್ದರು. ಅಷ್ಟೇ ಅಲ್ಲ, ಸಿಎಂ ಹುದ್ದೆಯಲ್ಲಿ ತಾವು ಉಳಿದು, ಸಂಪುಟ ಪುನರ್ರಚನೆ ಮಾಡುವ ಅವಕಾಶ ಸಿಕ್ಕರೆ ಜಮೀರ್ ಅಹ್ಮದ್ ಅವರನ್ನು ಉಪಮುಖ್ಯಮಂತ್ರಿ ಪಟ್ಟಕ್ಕೇರಿಸಲು ಯೋಚಿಸಿದ್ದರು. ಇದು ಯಾವ ಲೆವೆಲ್ಲಿಗೆ ಹೋಗಿತ್ತೆಂದರೆ ಕರ್ನಾಟಕದಲ್ಲಿ ಅಜೀಜ್ ಸೇಠ್, ಜಾಫರ್ ಷರೀಫ್, ಸಿ.ಎಂ. ಇಬ್ರಾಹಿಂ ಅವರಂತಹ ನಾಯಕರ ನಂತರ ಜಮೀರ್ ಅಹ್ಮದ್ ಅವರೇ ಸರ್ವೋಚ್ಚ ಮುಸ್ಲಿಂ ನಾಯಕ ಎಂಬ ಇಮೇಜ್ ಬಿಲ್ಡ್ ಆಗುವಂತೆ ಮಾಡಿತ್ತು. ಆದರೆ ಬದಲಾದ ಸನ್ನಿವೇಶದಲ್ಲಿ ಮಂತ್ರಿಯಾಗಲೂ ಸರ್ಕಸ್ಸು ಮಾಡಿದ್ದ ಜಮೀರ್ ಅಹ್ಮದ್ ತಮಗೆ ಹಿಂದಿದ್ದ ಖಾತೆಯನ್ನೇ ಕೊಡಬೇಕು ಅಂತ ಪಟ್ಟು ಹಿಡಿದಿದ್ದರು. ಆದರೆ ಅವರೇನೇ ಸರ್ಕಸ್ಸು ಮಾಡಿದರೂ ವಕ್ಪ್, ಹಜ್ ಮತ್ತು ಅಲ್ಪಸಂಖ್ಯಾತರ ಅಭಿವೃದ್ಧಿ ಖಾತೆ ಅವರ ಕೈ ತಪ್ಪಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಸಚಿವ ಯು.ಟಿ.ಖಾದರ್ ಅವರ ಕೈ ಸೇರಿದೆ. ಮೂಲಗಳ ಪ್ರಕಾರ, ವಕ್ಪ್, ಹಜ್ ಮತ್ತು ಅಲ್ಪಸಂಖ್ಯಾತರ ಅಭಿವೃದ್ದಿ ಖಾತೆ ಯು.ಟಿ.ಖಾದರ್ ಅವರ ಕೈ ಸೇರಲು ಅವರ ಸಹೋದರ ಇಫ್ತಿಕಾರ್ ಅಲಿ ಅವರು ನಡೆಸಿದ ಲಾಬಿಯೇ ಕಾರಣ.

ಅಂದ ಹಾಗೆ ಕಾಂಗ್ರೆಸ್ ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರಿಗೆ ಆಪ್ತರಾಗಿರುವ ಇಫ್ತಿಕಾರ್ ಅಲಿ ತಮ್ಮ ಸಹೋದರ ಯು.ಟಿ.ಖಾದರ್ ಅವರಿಗೆ ಈ ಖಾತೆ ಹೆಚ್ಚುವರಿಯಾಗಿ ದಕ್ಕುವಂತೆ ನೋಡಿಕೊಂಡಿದ್ದಾರೆ. ಇದಕ್ಕೆ ಕರ್ನಾಟಕದ ಪ್ರಬಲ ನಾಯಕರ ಒತ್ತಾಸೆ ಇರುವುದೂ ಸುಳ್ಳಲ್ಲ. ಪರಿಣಾಮ? ಇದುವರೆಗೆ ಮುಸ್ಲಿಂ ಕೋಟೆಯ ಮೇಲೆ ನಿಂತು ಬಾವುಟ ಹಾರಿಸುತ್ತಿದ್ದ ಜಮೀರ್ ಅಹ್ಮದ್ ವಿಪರೀತ ಕೋಪ ಮಾಡಿಕೊಂಡಿದ್ದಾರೆ. ಅಂದ ಹಾಗೆ ಮುಸ್ಲಿಂ ಪಾಳೇಪಟ್ಟಿನಲ್ಲಿ ಪ್ರಭಾವಿಯಾಗಲು ಬಯಸುವ ಯಾವುದೇ ನಾಯಕ ವಕ್ಪ್, ಹಜ್ ಮತ್ತು ಅಲ್ಪಸಂಖ್ಯಾತರ ಅಭಿವೃದ್ಧಿ ಖಾತೆ ತಮಗಿರಲಿ ಅಂತ ಬಯಸುತ್ತಾರೆ.
ಯಾಕೆಂದರೆ ಮುಸ್ಲಿಂ ಮತ ಕೋಟೆಯ ಅನುದಿನದ ನಿರ್ವಹಣೆಯಲ್ಲಿ ಈ ಖಾತೆಯ ಪಾತ್ರ ದೊಡ್ಡದು. ಈಗ ಆ ಖಾತೆಯೇ ತಮ್ಮ ಕೈ ತಪ್ಪಿರುವುದರಿಂದ ಕುಪಿತಗೊಂಡಿರುವ ಜಮೀರ್ ಅಹ್ಮದ್ ಅವರು ಇದೇ ಕಾರಣಕ್ಕಾಗಿ ಜಿಲ್ಲೆಯ ಉಸ್ತುವಾರಿ ಬೇಡ,ಸ್ವಾತಂತ್ರ್ಯ ದಿನಾಚರಣೆಯ ದಿನ ಬಾವುಟ ಹಾರಿಸುವ ಜವಾಬ್ದಾರಿ ಬೇಡ ಅಂತ ಹೇಳಿದ್ದು.ಈ ವಿಷಯದಲ್ಲಿ ಮೇಲ್ನೋಟಕ್ಕೇನೋ ಅವರು ಬೇರೆ ಕಾರಣ ನೀಡಿರಬಹುದು. ಆದರೆ ಅವರ ಕೋಪದ ಹಿಂದಿರುವ ಕಾರಣ ಮಾತ್ರ ಇದೇ.
ಹತ್ತಿರವಾಗುತ್ತಿದೆ ಸರ್ಜರಿ ಡೇಟು
ಇನ್ನು ರಾಜ್ಯ ಬಿಜೆಪಿಗೆ ಸರ್ಜರಿ ಮಾಡಲು ಪಕ್ಷದ ವರಿಷ್ಟರು ಸಜ್ಜಾಗುತ್ತಿದ್ದು, ಇದರ ಹಿನ್ನೆಲೆಯಲ್ಲಿಯೇ ವಿವಿಧ ನಾಯಕರ ಜತೆ ಮಾತುಕತೆ ಆರಂಭಿಸಿದ್ದಾರೆ.
ಮೂಲಗಳ ಪ್ರಕಾರ, ಇಂತಹ ಕಾರಣಗಳಿಗಾಗಿಯೇ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ರಾಜ್ಯದ ಮೂವರು ನಾಯಕರನ್ನು ಕರೆಸಿ ಮಾತನಾಡಿದ್ದಾರೆ. ಈ ಪೈಕಿ ಒಬ್ಬರು ಕೇಂದ್ರ ಸಚಿವರಾದ ವಿ.ಸೋಮಣ್ಣ, ಮತ್ತೊಬ್ಬರು ಮಾಜಿ ಸಚಿವ ಮುರುಗೇಶ್ ನಿರಾಣಿ. ಮಗದೊಬ್ಬರು ಅರವಿಂದ ಬೆಲ್ಲದ್. ಸಧ್ಯಕ್ಕೆ ಕೇಂದ್ರ ಸಂಪುಟ ಪುನರ್ರಚಿಸಲು ತಯಾರಿ ನಡೆದಿದ್ದು, ಇದರ ಬೆನ್ನಲ್ಲೇ ಕರ್ನಾಟಕದ ಕಡೆ ಗಮನ ಹರಿಸುವುದಾಗಿ ನಿತಿನ್ ನಬಿನ್ ಹೇಳಿದ್ದಾರೆ. ಅದೇ ಕಾಲಕ್ಕೆ ಕರ್ನಾಟಕದ ಪ್ರಸಕ್ತ ರಾಜಕೀಯ ಸ್ಥಿತಿ, ಆಡಳಿತಾರೂಢ ಕಾಂಗ್ರೆಸ್ ಪಕ್ಷವನ್ನು ಎದುರಿಸಲು ರೂಪಿಸಬೇಕಾದ ಕಾರ್ಯತಂತ್ರದ ಬಗ್ಗೆ ನಿತಿನ್ ನಬಿನ್ ಚರ್ಚಿಸಿದ್ದಾರೆ. ಮೂಲಗಳ ಪ್ರಕಾರ, ಇದು ರಾಜ್ಯ ಬಿಜೆಪಿಗೆ ಮೇಜರ್ ಸರ್ಜರಿ ನಡೆಯುವ ಸಂಕೇತ.
ಯೋಗೀಶ್ವರ್ ವಿಥ್ ಪುಲಿಕೇಶಿ
ಇನ್ನು ಬಿಜೆಪಿ ಸರ್ಕಾರದ ಅವಧಿಯಲ್ಲಿ ಪವರ್ ಫುಲ್ಲಾಗಿ ಮೆರೆದಿದ್ದ ಚನ್ನಪಟ್ಟಣ ಶಾಸಕ ಸಿ.ಪಿ.ಯೋಗೀಶ್ವರ್ ಈಗ ಫುಲ್ಲು ಪುಲಿಕೇಶಿಯ ಕನಸು ಕಾಣುತ್ತಿದ್ದಾರೆ.
ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿಕೂಟದ ಟಿಕೆಟ್ ಸಿಗದೆ ಕಾಂಗ್ರೆಸ್ಸಿಗೆ ವಲಸೆ ಬಂದ ಯೋಗೀಶ್ವರ್ ಉಪಚುನಾವಣೆಯಲ್ಲಿ ಗೆದ್ದಿದ್ದರು.
ಅದರೆ ಉಪಚುನಾವಣೆಯಲ್ಲಿ ಗೆದ್ದರೂ ಕಾಂಗ್ರೆಸ್ ನಲ್ಲಿ ಹೆಚ್ಚು ಅವಕಾಶ ಸಿಗುವುದು ಕಷ್ಟ ಎಂಬುದನ್ನರಿತ ಯೋಗೀಶ್ವರ್ ಡಿಫರೆಂಟು ಯೋಜನೆಗಳಿಗೆ ಕೈ ಹಾಕಿದ್ದಾರಲ್ಲದೆ ಅದರಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಆ ದೃಷ್ಟಿಯಿಂದ ಅವರನ್ನೀಗ ತುಂಬ ಕಾಡುತ್ತಿರುವುದು ಎರಡನೇ ಪುಲಿಕೇಶಿ. ಬಾದಾಮಿ ಚಾಲುಕ್ಯರ ದೊರೆ ಎರಡನೇ ಪುಲಿಕೇಶಿ ಇತಿಹಾಸದ ಪುಟಗಳಲ್ಲಿ ಅಜರಾಮರನಾದವನು.
ಅಪ್ರತಿಮ ಶೂರನಾದ ಪುಲಿಕೇಶಿ ಎಂತಹ ಅದ್ಭುತವಾದ ಸೈನ್ಯ ಹೊಂದಿದ್ದನೆಂದರೆ ಆತ ಮಾಡಿದ ಯುದ್ಧಗಳಲ್ಲಿ ಗೆಲುವು ಖಾಯಂ. ಆತನ ಮಗನ ಹೆಸರಿನ ಸಮರ ನೌಕೆ ಐ.ಎನ್.ಎಸ್ ವಿಕ್ರಮಾದಿತ್ಯ ಭಾರತೀಯ ಸೇನೆಯ ಹೆಮ್ಮೆ. ಇದೇ ರೀತಿ ಅಜೇಯ ನೌಕಾಬಲವನ್ನು ಹೊಂದಿದ್ದ ಪುಲಿಕೇಶಿಯ ಗೌರವಾರ್ಥ ವಿಶಾಖಪಟ್ಟಣದಲ್ಲಿ ಒಂದು ಪ್ರತಿಮೆಯನ್ನು ಸ್ಥಾಪಿಸಲಾಗಿದೆ. ಇಂತಹ ಪುಲಿಕೇಶಿಯ ಸೈನ್ಯದ ಹೆಸರು ಕರ್ಣಾಟ ಬಲಂ.
ಈಗ ಈ ಮಹಾನ್ ದೊರೆ ಪುಲಿಕೇಶಿಯ ಕನಸಿನಲ್ಲಿರುವ ಸಿ.ಪಿ.ಯೋಗೀಶ್ವರ್ ಆತನ ಕಥಾವಸ್ತುವನ್ನು ಹೊಂದಿರುವ ರೈತಪರ ಚಿಂತನೆಯ ‘ಕರ್ಣಾಟ ಬಲಂ ಅಜೇಯಂ’ ಎಂಬ ಚಲನಚಿತ್ರದ ನಿರ್ಮಾಣದಲ್ಲಿ ತಲ್ಲೀನರಾಗಿದ್ದಾರೆ. ಅವರ ಪುತ್ರ ಧ್ಯಾನ್ ಯೋಗೀಶ್ವರ್ ನಾಯಕನಾಗಿರುವ ಚಿತ್ರದ ಶೂಟಿಂಗ್ ಕಾರ್ಯ ಒಂದು ಹಂತಕ್ಕೆ ಬಂದಿದ್ದು ಇಂದಿನಿಂದ ಮೈಸೂರು, ಮೇಲ್ಕೋಟೆ ಭಾಗದಲ್ಲಿ ಚಿತ್ರೀಕರಣಗೊಳ್ಳಲಿದೆ.
ಅಂದ ಹಾಗೆ ರಾಜಕಾರಣದಲ್ಲಿದ್ದರೂ ಕನಸುಗಳ ಬೆಂಬತ್ತುವ ಯೋಗೀಶ್ವರ್ ಅವರಿಗೆ ರಾಜಕಾರಣದಲ್ಲಿ ಹೇಳಿಕೊಳ್ಳುವಂತಹ ಟಾಸ್ಕ್ ಇಲ್ಲ.ಹೀಗಾಗಿ ಅವರು ಪುಲಿಕೇಶಿಯ ಕನಸಿನಲ್ಲಿ ಮುಳುಗಿ ಹೋಗಿದ್ದಾರೆ. ಅವರ ಆಪ್ತರ ಪ್ರಕಾರ: ‘ಕರ್ಣಾಟ ಬಲಂ ಅಜೇಯಂ’ ಚಿತ್ರ ಅದ್ಭುತವಾಗಿ ಮೂಡಿ ಬರುತ್ತಿದ್ದು ಇದಕ್ಕೆ ಯೋಗೀಶ್ವರ್ ಹಾಕಿರುವ ಶ್ರಮ ದೊಡ್ಡದು.
