ಇಡೀ ದೇಶಕ್ಕೆ 2002ರ ವರ್ಷವನ್ನು ಮೂಲ ವರ್ಷವಾಗಿ ನಿಗದಿಪಡಿಸಲಾಗಿದೆ. ಈ ವಿಷಯದಲ್ಲಿ ಹಸ್ತಕ್ಷೇಪ ಮಾಡಲು ಬರುವುದಿಲ್ಲ: ಸುಪ್ರೀಂ ಕೋರ್ಟ್

ರಾಷ್ಟ್ರೀಯ

ಸಿಕ್ಕಿಂನಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಗೆ (SIR‌) 2002ನೇ ವರ್ಷವನ್ನು ಆಧಾರವಾಗಿರಿಸಿಕೊಂಡಿರುವ ಚುನಾವಣಾ ಆಯೋಗದ ನಿರ್ಧಾರದಲ್ಲಿ ಹಸ್ತಕ್ಷೇಪ ಮಾಡಲು ಸುಪ್ರೀಂ ಕೋರ್ಟ್‌ ಸೋಮವಾರ ನಿರಾಕರಿಸಿದೆ. ಸಿಕ್ಕಿಂ ಮೂಲನಿವಾಸಿ ಸುರಕ್ಷಾ ಸಂಘವು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್‌, ನ್ಯಾಯಮೂರ್ತಿಗಳಾದ ಜಾಯ್‌ಮಾಲ್ಯಾ ಬಾಗ್ಚಿ ಹಾಗೂ ವಿ. ಮೋಹನಾ ಅವರನ್ನೊಳಗೊಂಡ ಪೀಠವು ವಜಾಗೊಳಿಸಿದೆ.

ರಾಜ್ಯದಲ್ಲಿ ಎಸ್‌ಐಆರ್‌ ಪ್ರಕ್ರಿಯೆಗಾಗಿ 2002ರ ಬದಲಿಗೆ 1993 ಅನ್ನು ಮೂಲ ವರ್ಷವಾಗಿ ನಿಗದಿಪಡಿಸಲು ಚುನಾವಣಾ ಸಮಿತಿಗೆ ನಿರ್ದೇಶನ ನೀಡಬೇಕೆಂದು ಅರ್ಜಿಯಲ್ಲಿ ಕೋರಲಾಗಿತ್ತು. ‘2002ರಲ್ಲಿ ಸೇರಿಸಲಾದ ಮತದಾರರ ದತ್ತಾಂಶವು ಸಿಕ್ಕಿಂನ ಜನಸಂಖ್ಯಾ ದತ್ತಾಂಶಕ್ಕೆ ಹೊಂದಾಣಿಕೆಯಾಗುತ್ತಿಲ್ಲ. ಈ ವರ್ಷವನ್ನು ಮೂಲ ವರ್ಷವಾಗಿ ಬಳಸುವುದರಿಂದ ಮತ್ತಷ್ಟು ವ್ಯತ್ಯಾಸ ಉಂಟಾಗಲಿದೆ’ ಎಂದು ಎನ್‌ಜಿಒ ವಾದಿಸಿತ್ತು.’ಈ ಪ್ರಕ್ರಿಯೆಯ ಮಧ್ಯದಲ್ಲಿ ನಿಯಮಗಳನ್ನು ಬದಲಾಯಿಸಲು ಸಾಧ್ಯವಿಲ್ಲ. ಇಡೀ ದೇಶಕ್ಕೆ 2002ರ ವರ್ಷವನ್ನು ಮೂಲ ವರ್ಷವಾಗಿ ನಿಗದಿಪಡಿಸಲಾಗಿದೆ. ಈ ವಿಷಯದಲ್ಲಿ ನಾವು ಹಸ್ತಕ್ಷೇಪ ಮಾಡುವುದಿಲ್ಲ’ ಎಂದು ನ್ಯಾಯಪೀಠ ಹೇಳಿದೆ.