ನಕಲಿ ಔಷಧ ಮಾರಾಟ ಪ್ರಕರಣಕ್ಕೆ ಮಹತ್ವದ ತಿರುವು; ವಿದೇಶದಲ್ಲಿ ಕಸ್ಟಮ್ಸ್‌ ಅಧಿಕಾರಿಗಳ ಕೈಗೆ ಸಿಕ್ಕಿ ಬಿದ್ದ ಆರೋಪಿಗಳು

ರಾಜ್ಯ

ರಾಜ್ಯದಲ್ಲಿ ಭಾರೀ ಸಂಚಲನ ಉಂಟು ಮಾಡಿದ ನಕಲಿ ಹಾಗೂ ಕಳಪೆ ಔಷಧ ಮಾರಾಟ ಪ್ರಕರಣಕ್ಕೆ ಈಗ ಮತ್ತೊಂದು ಮಹತ್ವದ ತಿರುವು ಸಿಕ್ಕಿದೆ. ಬೆಂಗಳೂರಿನಲ್ಲಿ ನಡೆದ ಔಷಧ ದಂಧೆಯ ಹಿಂದೆ ವಿದೇಶಿ ಸಂಪರ್ಕವಿರುವುದು ತನಿಖೆಯಲ್ಲಿ ಬಯಲಾಗಿದ್ದು, ಪ್ರಕರಣದ ಪ್ರಮುಖ ರೂವಾರಿ ಎನ್ನಲಾದ ನಾಗರಬಾವಿಯ ಪ್ರಶಾಂತ್‌ ಹಾಗೂ ಆತನ ಇಬ್ಬರು ಸಹಚರರು ಪಶ್ಚಿಮ ಏಷ್ಯಾದ ದೇಶವೊಂದರ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್‌ ಅಧಿಕಾರಿಗಳ ಕೈಗೆ ಸಿಕ್ಕಿದ್ದಾರೆ ಎನ್ನಲಾಗಿದೆ.

ಕ್ಯಾನ್ಸರ್ ಸೇರಿದಂತೆ ಗಂಭೀರ ಕಾಯಿಲೆಗಳಿಗೆ ಬಳಸುವ ಔಷಧಗಳು ಪಶ್ಚಿಮ ಏಷ್ಯಾದ ಕೆಲವು ದೇಶಗಳಲ್ಲಿ ಕಡಿಮೆ ದರಕ್ಕೆ ಸಿಗುತ್ತವೆ. ಇದನ್ನೇ ದಂಧೆಗೆ ಬಳಸಿಕೊಂಡಿದ್ದ ಆರೋಪಿಗಳು, ಕಡಿಮೆ ಬೆಲೆಗೆ ದೊಡ್ಡ ಪ್ರಮಾಣದಲ್ಲಿ ಔಷಧ ಖರೀದಿಸಿ ಭಾರತಕ್ಕೆ ಅಕ್ರಮವಾಗಿ ಸಾಗಿಸಲು ಮುಂದಾಗಿದ್ದರು ಎನ್ನಲಾಗಿದೆ.

ಭಾರೀ ಪ್ರಮಾಣದ ಔಷಧಗಳನ್ನು ವಿಮಾನದಲ್ಲಿ ಸಾಗಿಸುತ್ತಿದ್ದ ಇಬ್ಬರು ಸಹಚರರನ್ನು ಕಂಡು ಅನುಮಾನಗೊಂಡ ಕಸ್ಟಮ್ಸ್‌ ಅಧಿಕಾರಿಗಳು ತಪಾಸಣೆ ನಡೆಸಿದ್ದಾರೆ. ಈ ವೇಳೆ ಅಕ್ರಮ ಸಾಗಣೆ ಬೆಳಕಿಗೆ ಬಂದಿದೆ ಎನ್ನಲಾಗಿದೆ.

ವಿಚಾರಣೆ ನಡೆಸಿದಾಗ ಸಹಚರರು ಬೆಂಗಳೂರಿನ ಪ್ರಶಾಂತ್‌ ಹೆಸರನ್ನು ಅಧಿಕಾರಿಗಳ ಮುಂದೆ ಬಹಿರಂಗಪಡಿಸಿದ್ದಾರೆ. ಬಳಿಕ ಪ್ರಕರಣದ ಪ್ರಮುಖ ಆರೋಪಿ ಎನ್ನಲಾದ ಪ್ರಶಾಂತ್‌ನನ್ನೂ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ. ಪ್ರಶಾಂತ್‌ ಪತ್ನಿಯನ್ನು ಪೊಲೀಸರು ವಿಚಾರಣೆ ನಡೆಸಿದ ವೇಳೆ ವಿದೇಶಿ ಕನೆಕ್ಷನ್‌ಗೆ ಸಂಬಂಧಿಸಿದ ಈ ಮಾಹಿತಿ ಹೊರಬಂದಿದೆ ಎನ್ನಲಾಗಿದೆ.ಪೊಲೀಸರ ದಾಳಿಗೂ ಮುನ್ನವೇ ವಿದೇಶಕ್ಕೆ ಹಾರಿದ್ದ

ಫಾರ್ಮ್‌ಹೌಸ್‌ ಮೇಲೆ ಪೊಲೀಸರು ದಾಳಿ ನಡೆಸುವ ಮುನ್ನವೇ ಆಗಸ್ಟ್‌ 8ರಂದು ಪ್ರಶಾಂತ್‌ ವಿದೇಶಕ್ಕೆ ತೆರಳಿದ್ದ ಎನ್ನಲಾಗಿದೆ. ಹೀಗಾಗಿ ಪೊಲೀಸರ ಕಾರ್ಯಾಚರಣೆಯ ಬಗ್ಗೆ ಮುಂಚಿತವಾಗಿಯೇ ಮಾಹಿತಿ ಸಿಕ್ಕಿತ್ತೇ ಎಂಬ ಅನುಮಾನವೂ ತನಿಖಾಧಿಕಾರಿಗಳಲ್ಲಿ ಮೂಡಿದೆ.

ಸದ್ಯ ಪ್ರಕರಣದಲ್ಲಿ ವಿದೇಶದಿಂದ ಔಷಧಗಳ ಖರೀದಿ, ಅಕ್ರಮ ಸಾಗಣೆ, ಬೆಂಗಳೂರಿನಲ್ಲಿ ಮರುಪ್ಯಾಕಿಂಗ್‌ ಹಾಗೂ ನಕಲಿ ಲೇಬಲ್‌ ಅಂಟಿಸಿ ಮಾರಾಟ ಮಾಡುತ್ತಿದ್ದ ಸಂಪೂರ್ಣ ಜಾಲದ ಬಗ್ಗೆ ತನಿಖೆ ನಡೆಯುತ್ತಿದೆ. ಈ ದಂಧೆಯಲ್ಲಿ ಇನ್ನೂ ಎಷ್ಟು ಮಂದಿ ಭಾಗಿಯಾಗಿದ್ದಾರೆ ಹಾಗೂ ದೇಶದ ಯಾವೆಲ್ಲೆಡೆ ನಕಲಿ ಔಷಧಗಳನ್ನು ಪೂರೈಕೆ ಮಾಡಲಾಗಿದೆ ಎಂಬುದನ್ನು ಪೊಲೀಸರು ಪತ್ತೆಹಚ್ಚುತ್ತಿದ್ದಾರೆ.