ಲೋಕಾಯುಕ್ತದಲ್ಲಿ ಭ್ರಷ್ಟಾಚಾರ ಪ್ರಕರಣ: ವಿಚಾರಣಾ ನ್ಯಾಯಾಲಯ ತೀರ್ಪು ಪ್ರಕಟಿಸದಂತೆ ಹೈಕೋರ್ಟ್ ತಡೆಯಾಜ್ಞೆ

ರಾಜ್ಯ

ಲೋಕಾಯುಕ್ತ ಸಂಸ್ಥೆಯಲ್ಲೇ ಭ್ರಷ್ಟಾಚಾರದ ಸದ್ದು ಈ ಹಿಂದೆ ಕೇಳಿಬಂದಿತ್ತು. ಈ ವಿಚಾರ ಕೋರ್ಟ್ ಮೆಟ್ಟಿಲೇರಿತ್ತು. ಆದರೀಗ ವಿಚಾರಣ ನ್ಯಾಯಾಲಯ ತೀರ್ಪು ಪ್ರಕಟಿಸದಂತೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಮಾಜಿ ಲೋಕಾಯುಕ್ತ ನ್ಯಾಯಮೂರ್ತಿ ವೈ.ಭಾಸ್ಕರ ರಾವ್ ವಿರುದ್ಧ ಭ್ರಷ್ಟಾಚಾರ ಆರೋಪ ಕೇಳಿಬಂದಿತ್ತು. ಮತ್ತೋರ್ವ ಆರೋಪಿ ಅಶೋಕ್ ಕುಮಾರ್ ಅವರು ಪ್ರಕರಣ ರದ್ದು ಕೋರಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ಪರಿಶೀಲಿಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ, ತೀರ್ಪು ಪ್ರಕಟಿಸದಂತೆ ತಡೆಯಾಜ್ಞೆ ನೀಡಿದೆ.

ನ್ಯಾಯಮೂರ್ತಿ ವೈ.ಭಾಸ್ಕರ್ ರಾವ್ ಅವರು ಆರೋಪಿಯಾಗಿರುವ ಪ್ರಕರಣದಲ್ಲಿ ಎಸ್​ಐಟಿಯನ್ನು ಪೊಲೀಸ್ ಠಾಣೆ ಎಂದು ಪರಿಗಣಿಸಬಹುದೇ ಎಂಬ ಪ್ರಶ್ನೆ ಕುರಿತ ಅರ್ಜಿ ವಿಚಾರಣೆ ಸುಪ್ರೀಂಕೋರ್ಟ್​​ನಲ್ಲಿ ಬಾಕಿ ಇದೆ. ಹಾಗಾಗಿ, ಕೋರ್ಟ್ ಸಾಕ್ಷ್ಯ ವಿಚಾರಣೆ ಮುಂದುವರಿಸಬಹುದು. ಆದರೆ, ತೀರ್ಪು ಪ್ರಕಟಿಸುವಂತಿಲ್ಲ” ಎಂದು ಹೈಕೋರ್ಟ್ ಮಧ್ಯಂತರ ಆದೇಶ ನೀಡಿದೆ. ಉಳಿದ ಎಲ್ಲ ಅರ್ಜಿಗಳ ವಿಚಾರಣೆಯನ್ನು ಸೆ.11ಕ್ಕೆ ಮುಂದೂಡಲಾಗಿದೆ.

2015ರಲ್ಲಿ ಲೋಕಾಯಕ್ತರಾಗಿದ್ದ ನ್ಯಾಯಮೂರ್ತಿ ವೈ.ಭಾಸ್ಕರ ರಾವ್ ಅವರ ವಿರುದ್ಧ ಭ್ರಷ್ಟಾಚಾರ ಆರೋಪ ಕೇಳಿ ಬಂದಿತ್ತು. ಭಾಸ್ಕರ ರಾವ್ ಪುತ್ರ ಅಶ್ವಿನ್ ರಾವ್ ಬಂಧನವೂ ಆಗಿತ್ತು. ಆನಂತರ ಭಾಸ್ಕರ ರಾವ್ ಲೋಕಾಯುಕ್ತ ಹುದ್ದೆಗೆ ರಾಜೀನಾಮೆ ನೀಡಿದ್ದರು.