ಕೌಟುಂಬಿಕ ಜೀವನದಲ್ಲಿ ಪತ್ನಿಯ ಸ್ಥಾನಮಾನ ಮತ್ತು ಆಕೆಯ ವೈಯಕ್ತಿಕ ಸ್ವಾತಂತ್ರ್ಯದ ಬಗ್ಗೆ ಕರ್ನಾಟಕ ಹೈಕೋರ್ಟ್ ಅತ್ಯಂತ ಮಹತ್ವದ ಹಾಗೂ ಕ್ರಾಂತಿಕಾರಿ ತೀರ್ಪನ್ನು ನೀಡಿದೆ. ಪತ್ನಿಯಾದವಳು ಕೇವಲ ಮನೆಗೆಲಸ ಮಾಡಲು ಮತ್ತು ಪತಿಯ ಪೋಷಕರನ್ನು ನೋಡಿಕೊಳ್ಳಲು ಇರುವವಳು ಎಂದು ಭಾವಿಸುವುದು ತಪ್ಪು. ಪತಿ ಸೇರಿದಂತೆ ಮನೆಯ ಯಾರೂ ಕೂಡ ಮಹಿಳೆಗೆ ಇಂತಹ ಕೆಲಸಗಳನ್ನು ಮಾಡುವಂತೆ ಬಲವಂತ ಮಾಡುವಂತಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ನ್ಯಾಯಮೂರ್ತಿ ಚಿಲ್ಲಾಕೂರ್ ಸುಮಲತಾ ಅವರ ಪೀಠವು ಒಂದು ಮಹತ್ವದ ಅಂಶವನ್ನು ಉಲ್ಲೇಖಿಸಿದೆ. ವೃದ್ಧ ಪೋಷಕರನ್ನು ನೋಡಿಕೊಳ್ಳುವುದು ಪ್ರಾಥಮಿಕವಾಗಿ ಮಗ ಅಥವಾ ಮಗಳ ಜವಾಬ್ದಾರಿಯೇ ಹೊರತು ಅದನ್ನು ಸೊಸೆ ಅಥವಾ ಅಳಿಯನ ಮೇಲೆ ಹೇರುವಂತಿಲ್ಲ. ವಿವಾಹ ಎನ್ನುವುದು ಒಬ್ಬರ ವೈಯಕ್ತಿಕ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳಲು ಅಥವಾ ಅವರ ಇಚ್ಛೆಯ ವಿರುದ್ಧ ಆಜ್ಞಾಪಿಸಲು ನೀಡುವ ಪರವಾನಗಿ ಅಲ್ಲ ಎಂದು ಕೋರ್ಟ್ ಖಡಕ್ ಆಗಿ ಹೇಳಿದೆ. ಪತ್ನಿಯ ನಿಷ್ಠೆಯನ್ನು ಅವಳ ವಿಧೇಯತೆಯ ಆಧಾರದ ಮೇಲೆ ಅಳೆಯುವುದು ತಪ್ಪು ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟಿದ್ದಾರೆ.
ಮಹಿಳೆ ತನ್ನ ತವರು ಮನೆಗೆ ಇಷ್ಟ ಬಂದಾಗ ಭೇಟಿ ನೀಡುವ ಮತ್ತು ತನ್ನ ವೃತ್ತಿಜೀವನದ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಸಂಪೂರ್ಣ ಹಕ್ಕಿದೆ. ಅದಕ್ಕಾಗಿ ಗಂಡನ ಮನೆಯ ಪ್ರತಿಯೊಬ್ಬರ ಅನುಮತಿ ಪಡೆಯಬೇಕು ಎನ್ನುವ ನಿಯಮವನ್ನು ಒಪ್ಪಲು ಸಾಧ್ಯವಿಲ್ಲ. ಮಹಿಳೆ ಕೇವಲ ಮನೆಗೆಲಸಕ್ಕಷ್ಟೇ ಸೀಮಿತವಾಗಬೇಕು ಎಂದು ನಿರೀಕ್ಷಿಸುವುದು ಆಕೆಯ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗುತ್ತದೆ ಎಂದು ಹೈಕೋರ್ಟ್ ಹೇಳಿದೆ.
ಕೂಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬ ತನ್ನ ಪತ್ನಿ ಮತ್ತು ಮಗಳಿಗೆ ಮಾಸಿಕ 9 ಸಾವಿರ ರೂಪಾಯಿ ಜೀವನಾಂಶ ನೀಡಬೇಕೆಂದು ಕೌಟುಂಬಿಕ ನ್ಯಾಯಾಲಯ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದ. ತನ್ನ ಪತ್ನಿ ಪೋಷಕರನ್ನು ನೋಡಿಕೊಳ್ಳುತ್ತಿಲ್ಲ ಮತ್ತು ಸರಿಯಾಗಿ ಮನೆಗೆಲಸ ಮಾಡುತ್ತಿಲ್ಲ ಎಂಬುದು ಪತಿಯ ವಾದವಾಗಿತ್ತು. ಆದರೆ ಇದಕ್ಕೆ ಪ್ರತಿಯಾಗಿ ಪತ್ನಿ ಪತಿಯ ಮದ್ಯಪಾನ ಜೂಜು ಮತ್ತು ದೈಹಿಕ ಹಿಂಸೆಯ ಬಗ್ಗೆ ನ್ಯಾಯಾಲಯಕ್ಕೆ ವಿವರಿಸಿದ್ದಳು. ಪತಿಯ ವರ್ತನೆ ಮಾಲೀಕ ಮತ್ತು ನೌಕರನ ನಡುವಿನ ಸಂಬಂಧದಂತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಹೈಕೋರ್ಟ್ ಪತಿಯ ಅರ್ಜಿಯನ್ನು ವಜಾಗೊಳಿಸಿತು. ಅಲ್ಲದೆ ಕೌಟುಂಬಿಕ ನ್ಯಾಯಾಲಯ ನೀಡಿದ್ದ ಜೀವನಾಂಶದ ಆದೇಶವನ್ನು ಎತ್ತಿಹಿಡಿಯುವ ಮೂಲಕ ಮಹಿಳೆಯರ ಹಕ್ಕುಗಳನ್ನು ಎತ್ತಿ ಹಿಡಿದಿದೆ.
