✍️. ಆರ್.ಟಿ.ವಿಠ್ಠಲಮೂರ್ತಿ
ಕಳೆದ ವಾರ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಭಾಗವಹಿಸಲು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಕೆಲ ನಾಯಕರು ದಿಲ್ಲಿಗೆ ಹೊರಟಿದ್ದಾರೆ. ಹೀಗೆ ಐದಾರು ಮಂದಿ ಪ್ರಮುಖರು ಇದ್ದ ವಿಮಾನ ದಿಲ್ಲಿಯ ಕಡೆ ದೌಡಾಯಿಸುತ್ತಿದ್ದಂತೆಯೇ ಡಿ.ಕೆ.ಶಿವಕುಮಾರ್ ಅವರು ಸಿದ್ದರಾಮಯ್ಯ ಅವರ ಜತೆ ಮಾತನಾಡಲು ಬಯಸಿದ್ದಾರೆ.ಆದರೆ ಅವರು ಮಾತನಾಡಲು ಹೊರಟರೆ ಸಿದ್ದರಾಮಯ್ಯ ಅವರು ‘ಹಾ!’ ಎಂದಷ್ಟೇ ಉದ್ಗರಿಸಿ ಮೌನವಾಗಿದ್ದಾರೆ. ಆದರೂ ಪಟ್ಟು ಬಿಡದ ಡಿ.ಕೆ.ಶಿವಕುಮಾರ್ ಏನನ್ನೋ ಹೇಳಲು ಹೋದರೆ ‘ಹಾ! ನನಗೆ ನಿದ್ರೆ ಬರುತ್ತಿದೆ’ ಅಂತ ಹೇಳಿ ಸುಮ್ಮನೆ ಒರಗಿಕೊಂಡಿದ್ದಾರೆ.
ಸರಿ, ದಿಲ್ಲಿ ಬರುವವರೆಗೆ ಸಿದ್ದರಾಮಯ್ಯ ಅವರು ಏನೂ ಮಾತನಾಡದೆ ಸುಮ್ಮನಿದ್ದರಲ್ಲ?ಹಾಗಂತಲೇ ದಿಲ್ಲಿಯಲ್ಲಿ ವಿಮಾನ ಇಳಿಯುವಾಗ ಡಿ.ಕೆ. ಶಿವಕುಮಾರ್ ಅವರು ತಾವೇ ಮುಂದಾಗಿ: ‘ಸಾರ್ ಬನ್ನಿ, ನ್ಯೂ ಕರ್ನಾಟಕ ಭವನಕ್ಕೆ ಹೋಗೋಣ’ ಅಂತ ಕರೆದರಂತೆ. ಆದರೆ ಆಗಲೂ ಉತ್ಸಾಹ ತೋರದ ಸಿದ್ದರಾಮಯ್ಯ ಅವರು: ‘ನೋ, ನೋ, ನಾನು ನ್ಯೂ ಕರ್ನಾಟಕ ಭವನಕ್ಕೆ ಬರುವುದಿಲ್ಲ. ಓಲ್ಡ್ ಕರ್ನಾಟಕ ಭವನಕ್ಕೆ ಹೋಗುತ್ತೇನೆ’ ಅಂತ ಹೇಳಿದ್ದಾರೆ. ಅಷ್ಟೇ ಅಲ್ಲ, ವಿಮಾನ ನಿಲ್ದಾಣಕ್ಕೆ ತಮಗಾಗಿ ಬಂದ ಕಾರು ಹತ್ತಿ ಹೊರಟೇ ಬಿಟ್ಟಿದ್ದಾರೆ. ಇದಾದ ನಂತರ ಮಧ್ಯಾಹ್ನ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ನಡೆಯಿತಲ್ಲ? ಈ ಸಭೆಯಲ್ಲಿ ಭಾಗವಹಿಸಿದರೂ ಸಿದ್ದರಾಮಯ್ಯ ಬಿಗುವಾಗಿಯೇ ಇದ್ದರಂತೆ. ಹೀಗೆ ಬಿಗುವಾಗಿದ್ದ ಸಿದ್ದರಾಮಯ್ಯ ಅವರನ್ನು ಹಸನ್ಮುಖಿಯಾಗಿಸಲು ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಮತ್ತು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಪ್ರಯತ್ನಿಸಿದರೂ ಅವರು ಹೇಳಿದ್ದಕ್ಕೆಲ್ಲ ‘ಆ! ಹಾ!’ಅಂತಷ್ಟೇ ಪ್ರತಿಕ್ರಿಯಿಸಿದ ಸಿದ್ಧರಾಮಯ್ಯ ಯಥಾಪ್ರಕಾರ ಬಿಗುವಾಗಿಯೇ ಕುಳಿತಿದ್ದಾರೆ.
ಹೀಗೆ ದಿಲ್ಲಿ ಪ್ರವಾಸದ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರು ನಡೆದುಕೊಂಡ ರೀತಿಯೇ ಈಗ ಕಾಂಗ್ರೆಸ್ ಪಾಳಯದಲ್ಲಿ ಹಲವಾರು ಅನುಮಾನಗಳಿಗೆ ಕಾರಣವಾಗಿದೆ. ಅರ್ಥಾತ್, ಸಿದ್ದರಾಮಯ್ಯ ಅವರು ಯಾವ ಕಾರಣಕ್ಜಾಗಿ ಬಿಗುವಾಗಿದ್ದಾರೆ? ಯಾವ ಬೆಳವಣಿಗೆಯಿಂದ ಅವರು ಕೋಪಗೊಂಡಿದ್ದಾರೆ? ಮತ್ತು ಈ ಕೋಪ ಮುಂದುವರಿದರೆ ಯಾವ ಹಂತಕ್ಕೆ ಹೋಗಬಹುದು? ಎಂದೆಲ್ಲ ಯೋಚಿಸಿರುವ ಕಾಂಗ್ರೆಸ್ ನಾಯಕರು ಇದಕ್ಕಾಗಿ ಫುಲ್ಲು ತಲೆ ಕೆಡಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ, ಈ ಮುಂಚೆ ದಸರೆಯ ನಂತರ ಅಹಿಂದ ವರ್ಗಗಳನ್ನು ಸಂಘಟಿಸಲು ರಾಜ್ಯ ಪ್ರವಾಸ ಮಾಡುವುದಾಗಿ ಸಿಗ್ನಲ್ಲು ರವಾನಿಸಿದ್ದ ಸಿದ್ದರಾಮಯ್ಯ ಈಗ ಸೆಪ್ಟೆಂಬರ್ ನಲ್ಲೇ ಅಹಿಂದ ಸಮಾವೇಶ ನಡೆಸುವ ಸಿಗ್ನಲ್ಲು ಪಾಸ್ ಮಾಡಿದ್ದಾರೆ. ಇದರ ಪರಿಣಾಮ ಏನಾಗಬಹುದು? ಅಂತ ಯೋಚಿಸತೊಡಗಿದ್ದಾರೆ.

ಅಂದ ಹಾಗೆ ಸಿದ್ದರಾಮಯ್ಯಾವರು ಮುಖ್ಯಮಂತ್ರಿಯಾಗಿದ್ದಾಗ ಅಹಿಂದ ಸಮಾವೇಶ ನಡೆಸಲು ಯತ್ನಿಸಿದರೆ ಡಿಸಿಎಂ ಆಗಿದ್ದ ಡಿ.ಕೆ.ಶಿವಕುಮಾರ್ ವರಿಷ್ಟರ ಮೇಲೆ ಪ್ರಭಾವ ಬೀರಿ ಅದಕ್ಕೆ ಬ್ರೇಕ್ ಹಾಕಿಸುತ್ತಿದ್ದರು. ಮತ್ತು ಸಿದ್ದರಾಮಯ್ಯ ಅವರು ಕೂಡಾ ಒಲ್ಲದ ಮನಸ್ಸಿನಿಂದಲೇ ಅದನ್ನು ಒಪ್ಪುತ್ತಿದ್ದರು. ಆದರೆ ಈಗ ಸಿದ್ಧರಾಮಯ್ಯ ಅವರು ಮುಖ್ಯಮಂತ್ರಿ ಅಲ್ಲವಲ್ಲ? ಹೀಗಾಗಿ ಅವರಿಗೀಗ ವರಿಷ್ಟರ ಯಾವ ಕಟ್ಟುಪಾಡುಗಳ ಚಿಂತೆ ಇಲ್ಲ. ‘ಸಿದ್ದರಾಮಯ್ಯನವರೇ ಸಧ್ಯಕ್ಕೆ ಇಂತಹ ಸಮಾವೇಶ ಬೇಡ ಅಂತ ಹೇಳುವುದು ವರಿಷ್ಟರಿಗೂ ಕಷ್ಟ. ಹಾಗೇನಾದರೂ ಹೇಳಲು ಹೋದರೆ ಸಿದ್ದರಾಮಯ್ಯ ಉಚಾಯಿಸಿಬಿಡಬಹುದು. ಈ ಹಿಂದೆ ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಸರ್ಕಾರವಿದ್ದಾಗ ಸಿದ್ದರಾಮಯ್ಯ ಉಪಮುಖ್ಯಮಂತ್ರಿ ಆಗಿದ್ದರಲ್ಲ? ಆ ಸಂದರ್ಭದಲ್ಲಿ ದೇವೇಗೌಡರ ಪುತ್ರ ಕುಮಾರಸ್ವಾಮಿ ಅವರಿಗೆ ಪಕ್ಷದಲ್ಲಿ ಟಾಪ್ ಪ್ರಿಯಾರಿಟಿ ಸಿಗುತ್ತಿದೆ. ಮತ್ತು ಅದಕ್ಕಾಗಿ ತಮ್ಮನ್ನು ನಿರ್ಲಕ್ಷಿಸುವ ಕೆಲಸವಾಗುತ್ತಿದೆ ಅಂತ ಕೆರಳಿ ಅಹಿಂದ ಬಾವುಟ ಎತ್ತಿ ಹಿಡಿದಿದ್ದರು. ಮುಂದೆ ಏನಾಯಿತು? ಎಂಬುದು ಇತಿಹಾಸ. ಈಗ ಕೂಡಾ ಸಿದ್ದರಾಮಯ್ಯ ಅಂತಹದ್ದೇ ಒಂದು ಪರಿಸ್ಥಿತಿಯಲ್ಲಿದ್ದಾರೆ. ಕೇವಲ ಐದು ತಿಂಗಳ ಹಿಂದೆ: ‘ಯಾವ ಕಾರಣಕ್ಕೂ ನಿಮ್ಮನ್ನು ಕೆಳಗಿಲಿಸುವುದಿಲ್ಲ ಸಿದ್ದರಾಮಯ್ಯಾಜೀ ಎಂದಿದ್ದ ರಾಹುಲ್ ಗಾಂಧಿ ಏಕಾಏಕಿ ಬದಲಾಗಿ ಉಲ್ಟಾ ಹೊಡೆದಿದ್ದೇಕೆ? ಎಂಬುದು ಅವರಿಗೆ ಅರಗಿಸಿಕೊಳ್ಳಲಾಗದಷ್ಟು ಕೋಪ ತಂದಿದೆ. ಒಂದು ವೇಳೆ ಈ ಕೋಪವೇ ಮುಂದುವರಿದರೆ ಅವರೇನು ಮಾಡಬಹುದು? ಎಂಬುದೇ ಕಾಂಗ್ರೆಸ್ ವರಿಷ್ಟರ ಲೇಟೆಸ್ಟು ಚಿಂತೆ.
ಮೂಲಗಳ ಪ್ರಕಾರ, ಇಂತಹ ಚಿಂತೆಯ ಬೆನ್ನಲ್ಲೇ ಕಾಂಗ್ರೆಸ್ ವರಿಷ್ಟರು ಮುಂದಿನ ತಿಂಗಳು ಸಂಪುಟದಲ್ಲಿ ಸಣ್ಣ ಸೈಜಿನ ಪರಿಷ್ಕರಣೆ ಮಾಡಲು ತಯಾರಿ ನಡೆಸಿದ್ದಾರೆ. ಅದರ ಪ್ರಕಾರ, ಸಿದ್ದರಾಮಯ್ಯ ಅವರು ಬಯಸಿದಂತೆ ಬಸವರಾಜ ಶಿವಣ್ಣನವರ್ ಮತ್ತು ಎಂ.ಕೃಷ್ಣಪ್ಪ ಅವರನ್ನು ಸಂಪುಟಕ್ಕೆ ತೆಗೆದುಕೊಳ್ಳಲು ಬಯಸಿದ್ದಾರೆ.
ಈಗಿರುವ ಮಾಹಿತಿಯಂತೆ ಡಿಕೆಶಿ ಸಂಪುಟದಲ್ಲಿರುವ ಇಬ್ಬರು ಸಚಿವರ ಮನವೊಲಿಸಿ ರಾಜೀನಾಮೆ ಕೊಡಿಸುವುದು ಸಧ್ಯದ ಲೆಕ್ಕಾಚಾರ. ಅ ಮೂಲಕ ಈಗ ಖಾಲಿ ಇರುವ ಒಂದು ಹುದ್ದೆಯ ಜತೆ ಇನ್ನು ಎರಡು ಹುದ್ದೆಗಳಿಗೆ ಬಸವರಾಜ ಶಿವಣ್ಣನವರ್, ರುಪಕಲಾ ಶಶಿಧರ್ ಮತ್ತು ಎಂ.ಕೃಷ್ಣಪ್ಪ ಅವರನ್ನು ಸಂಪುಟಕ್ಕೆ ತೆಗೆದುಕೊಳ್ಳಲು ಪ್ಲಾನು ಮಾಡಲಾಗಿದೆ. ಈ ಬೆಳವಣಿಗೆಯ ನಂತರವಾದರೂ ಸಿದ್ದರಾಮಯ್ಯ ಸಿಟ್ಟು ಕಡಿಮೆ ಆಗಬಹುದಾ? ಎಂಬುದು ವರಿಷ್ಟರ ಚಿಂತೆ. ಮುಂದೇನು ಕತೆಯೋ?

ಗೌಡರಿಗೆ ಸೀಟು ತಪ್ಪಿಸಿದವರು
ಈ ಮಧ್ಯೆ ದಿಲ್ಲಿಯ ಪಾರ್ಲಿಮೆಂಟ್ ಪಡಸಾಲೆಯಲ್ಲಿ ಜೆಡಿಎಸ್ ನಾಯಕರ ಕಿವಿಗೆ ಒಂದು ಸುದ್ದಿ ಬಿದ್ದಿದೆ. ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರಿಗೆ ರಾಜ್ಯಸಭೆಯ ಸೀಟು ತಪ್ಪಿಸಿದವರು ಯಾರು? ಎಂಬುದೇ ಆ ಸುದ್ದಿ.
ಮೂಲಗಳ ಪ್ರಕಾರ, ದೇವೇಗೌಡರು ರಾಜ್ಯಸಭೆಗೆ ಪುನರಾಯ್ಕೆಯಾಗಬೇಕು ಅಂತ ಸ್ವತ: ಪ್ರಧಾನಿ ನರೇಂದ್ರಮೋದಿ ಬಯಸಿದ್ದರು. ದೇವೇಗೌಡರು ದೇಶದಲ್ಲಿರುವ ಏಕೈಕ ಮಾಜಿ ಪ್ರಧಾನಿ ಮತ್ತು ಕಾಂಗ್ರೆಸ್ ಪಕ್ಷದ ವಿರುದ್ದ ಪರಿಣಾಮಕಾರಿಯಾಗಿ ಧಾಳಿ ಮಾಡಬಲ್ಲ ಸಾಮರ್ಥ್ಯ ಹೊಂದಿದವರು ಎಂಬುದೇ ಇದಕ್ಕೆ ಮುಖ್ಯ ಕಾರಣ.
ಇವತ್ತು ರಾಜ್ಯಸಭೆಯಲ್ಲಿ ತಮ್ಮ ಪರವಾಗಿ ಡಜನ್ನು ಜನ ಹೋರಾಡುವ ಬದಲು ಒಬ್ಬ ಮಾಜಿ ಪ್ರಧಾನಿ ಧ್ವನಿ ಎತ್ತಿದರೆ ಅದು ತಮಗೆ ಸಿಗುವ ಸರ್ಟಿಪಿಕೇಟು ಎಂಬುದು ನರೇಂದ್ರಮೋದಿ ಅವರ ಲೆಕ್ಕಾಚಾರ. ಆದರೆ ಯಾವಾಗ ಈ ಸುಳಿವು ಸಿಕ್ಕಿತೋ? ಆಗ ರಾಜ್ಯ ಬಿಜೆಪಿಯ ಕೆಲ ನಾಯಕರು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಅವರನ್ನು ಭೇಟಿ ಮಾಡಿದ್ದಾರೆ. ಅಷ್ಟೇ ಅಲ್ಲ, ‘ದೇವೇಗೌಡರು ರಾಜ್ಯಸಭೆಗೆ ಹೋದರೆ ರಾಜ್ಯ ಬಿಜೆಪಿಯ ಪವರ್ರು ಡೌನ್ ಆದಂತೆ’ ಅಂತ ವಿವರಿಸಿದ್ದಾರೆ.
ಯಾವಾಗ ದಿಲ್ಲಿ ಮತ್ತು ಬೆಂಗಳೂರಿನ ಬಿಜೆಪಿ ನಾಯಕರು ತಮ್ಮ ಬಳಿ ಈ ವಿಷಯ ಹೇಳಿದರೋ? ಅಗ ನಿತಿನ್ ನಬಿನ್ ಅವರು ಪ್ರಧಾನಿ ನರೇಂದ್ರಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರ ಬಳಿ ರಾಜ್ಯ ನಾಯಕರ ಸಂಕಟದ ಬಗ್ಗೆ ವಿವರಿಸಿ: ‘ಇವತ್ತು ಕರ್ನಾಟಕದಲ್ಲಿ ನಾವು ಗೆಲ್ಲಲು ಸಾಧ್ಯವಿರುವ ರಾಜ್ಯಸಬೆಯ ಸೀಟು ನಮ್ಮವರಿಗೇ ಸಿಗಬೇಕು’ ಅಂತ ಸಲಹೆ ನೀಡಿದ್ದಾರೆ. ಯಾವಾಗ ರಾಷ್ಟ್ರೀಯ ಅಧ್ಯಕ್ಷರು ಈ ಸಲಹೆ ನೀಡಿದರೋ? ಅಗ ಮೋದಿ-ಅಮಿತ್ ಶಾ ದುಸುರಾ ಮಾತನಾಡಿಲ್ಲ. ಅಲ್ಲಿಗೆ ಕರ್ನಾಟಕದಿಂದ ಬಿಜೆಪಿಯ ಎಂ.ನಾಗರಾಜ್ ಅವರು ರಾಜ್ಯಸಭೆಗೆ ಆಯ್ಕೆಯಾಗಿ ದೇವೇಗೌಡರು ಮೌನವಾಗಿರುವ ಸ್ಥಿತಿ ಬಂದಿದೆ.
ಯಾವಾಗ ದೇವೇಗೌಡರಿಗೆ ರಾಜ್ಯಸಭೆಯ ಸೀಟು ತಪ್ಪಿದ್ದರ ಹಿಂದಿನ ಹಿಕಮತ್ತು ಗೊತ್ತಾಯಿತೋ? ಇದಾದ ನಂತರ ದಳಪತಿಗಳಿಗೆ ತುಂಬ ಬೇಸರವಾಗಿದೆಯಂತೆ.
ಪಟ್ಟಣದ ಮೇಲೆ ಡಿಕೆ ಬಾಂಬು!
ಇನ್ನು ಸಿದ್ದರಾಮಯ್ಯ ಆಸ್ಥಾನದ ‘ಬೀರಬಲ್’ ಎಂದೇ ಖ್ಯಾತರಾಗಿದ್ದ ರಾಮದುರ್ಗದ ಶಾಸಕ, ಹಿರಿಯ ನಾಯಕ ಅಶೋಕ್ ಪಟ್ಟಣ್ ಅವರಿಗೆ ಮೊನ್ನೆ ಅಚ್ಚರಿ ಕಾದಿತ್ತಂತೆ. ಅಂದ ಹಾಗೆ ಸಿಎಂ ಹುದ್ದೆಯಿಂದ ಸಿದ್ದರಾಮಯ್ಯ ಕೆಳಗಿಳಿದು ಡಿ.ಕೆ.ಶಿವಕುಮಾರ್ ಅ ಜಾಗಕ್ಕೆ ಬಂದರಲ್ಲ? ಅ ಸಂದರ್ಭದಲ್ಲಿ ಅಶೋಕ್ ಪಟ್ಟಣ್ ಅವರೂ ಮಂತ್ರಿಗಿರಿಗಾಗಿ ಲಾಬಿ ನಡೆಸಿದ್ದರು. ಆದರೆ ಇದಕ್ಕಾಗಿ ಹಲವು ಸಲ ದಿಲ್ಲಿಗೆ ಹೋಗಿ ಬಂದರೂ ಅವರ ಪ್ರಯತ್ನ ಸಕ್ಸಸ್ ಅಗಿರಲಿಲ್ಲ. ಹಾಗಂತಲೇ ಎರಡನೇ ಕಂತಿನ ಸಂಪುಟ ವಿಸ್ತರಣೆಯಾಗಿ ಮಂತ್ರಿಗಳಿಗೆ ಖಾತೆ ಹಂಚಿಕೆಯಾದ ನಂತರ ಮೊನ್ನೆ ದಿಲ್ಲಿಗೆ ಹೋಗಿದ್ದ ಅಶೋಕ್ ಪಟ್ಟಣ್ ಅವರು ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರನ್ನು ಸಂಪರ್ಕಿಸಿ ತಮ್ಮ ಅಹವಾಲು ಹೇಳಿಕೊಂಡಿದ್ದಾರೆ. ‘ತಮ್ಮನ್ನು ಮಂತ್ರಿ ಮಾಡಲೇಬೇಕು’ ಅಂತ ಒತ್ತಾಯಿಸಿದ್ದಾರೆ. ಆಗೆಲ್ಲ ಅವರ ಅಹವಾಲು ಕೇಳಿಸಿಕೊಂಡ ಸುರ್ಜೇವಾಲಾ ಅವರು: ‘ಅಶೋಕ್ ಜೀ. ನೀವು ತುಂಬ ಸೀನಿಯರ್ರು. ನಿಮಗೆ ಒಳ್ಳೆಯ ಜಾಗ ಸಿಗಬೇಕು ಅಂತ ನನಗೆ ಗೊತ್ತು’ ಎಂದಿದ್ದಾರೆ.

ಅಷ್ಟೇ ಅಲ್ಲ, ಈ ವಿಷಯಕ್ಕೆ ಸಂಬಂಧಪಟ್ಟಂತೆ ನಾನು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಜತೆ ಮಾತನಾಡಿದ್ದೇನೆ. ನೀವು ಅವರನ್ನು ಭೇಟಿ ಮಾಡಿ’ ಎಂದಿದ್ದಾರೆ. ಯಾವಾಗ ಸುರ್ಜೇವಾಲಾ ಅವರು ಭರವಸೆಯ ಧಾಟಿಯಲ್ಲಿ ಮಾತನಾಡಿದರೋ? ಅಗ ಅಶೋಕ್ ಪಟ್ಟಣ್ ಅವರು ಖುಷಿಯಿಂದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿದ್ದಾರೆ. ಆದರೆ ಈ ಸಂದರ್ಭದಲ್ಲಿ ಪಟ್ಟಣ್ ಅವರನ್ನು ನೋಡಿದ ಡಿ.ಕೆ.ಶಿವಕುಮಾರ್ ಅವರು ರಪ್ಪಂತ ಪ್ರಸಾದ ಉದುರಿಸಿಬಿಟ್ಟರಂತೆ.
‘ರೀ ಅಶೋಕ್ ಪಟ್ಟಣ್. ಎಂಟು ವರ್ಷದಿಂದ ನೀವು ವಿಧಾನಸಭೆಯ ಚೀಫ್ ವ್ಹಿಪ್ ಆಗಿದ್ದೀರಿ. ಇನ್ನು ಬೇರೆಯವರಿಗೆ ಅವಕಾಶ ಸಿಗುವುದು ಯಾವಾಗ? ಅಂತ ಕೇಳಿದ್ದಲ್ಲದೆ ಆ ಹುದ್ದೆಗೆ ರಾಜೀನಾಮೆ ಕೊಟ್ಟುಬಿಡಿ ಅಂತ ಸೂಚಿಸಿದ್ದಾರೆ. ಯಾವಾಗ ಡಿಕೆಶಿ ಹೊಸ ಹುದ್ದೆಯ ಬಗ್ಗೆ ಮಾತನಾಡದೆ ಇರುವ ಜಾಗವನ್ನೂ ಕಿತ್ತುಕೊಳ್ಳುವ ಮಾತನಾಡಿದರೋ? ಅದಾದ ನಂತರ ಅಶೋಕ್ ಪಟ್ಟಣ್ ಧಿಗ್ಭ್ರಾಂತರಾಗಿದ್ದಾರಂತೆ.

ಲಾಸ್ಟ್ ಸಿಪ್
ರಾಜ್ಯ ವಿಧಾನಪರಿಷತ್ತಿನ ಐದು ಸ್ಥಾನಗಳಿಗೆ ಕಾಂಗ್ರೆಸ್ ನಲ್ಲಿ ನೇಮಕಾತಿ ಕಸರತ್ತು ಪ್ರಾರಂಭವಾಗಿದ್ದು ಸಿದ್ದು ಕ್ಯಾಂಪಿನ ಚಿಮ್ಕೋಡ್, ಡಿಕೆ ಕ್ಯಾಂಪಿನ ವಿಜಯ್ ಮುಳಗುಂದ ಮತ್ತು ಖರ್ಗೆ ಕ್ಯಾಂಪಿನ ಮುಸ್ಲಿಂ ನಾಯಕರೊಬ್ಬರ ಹೆಸರುಗಳು ಫ್ರಂಟ್ ಲೈನಿಗೆ ಬಂದಿವೆ. ಇದೇ ರೀತಿ ಮಹಿಳೆಯರ ಕೋಟಾದಲ್ಲಿ ಮಾಜಿ ಸಚಿವರಾದ ರಾಣಿ ಸತೀಶ್, ಮಂಜುಳಾ ನಾಯ್ಡು ಮತ್ತು ಕಾಂತಾ ನಾಯಕ್ ಅವರ ಹೆಸರುಗಳು ರೇಸಿನಲ್ಲಿದ್ದು ಈ ಮೂವರ ಪೈಕಿ ಒಬ್ಬರು ಪರಿಷತ್ ಗೆ ಬರಬಹುದು.
ಉಳಿದಂತೆ ಮತ್ತೊಂದು ಸ್ಥಾನಕ್ಕೆ ರಮೇಶ್ ಬಾಬು ಅವರ ಹೆಸರು ಕೇಳಿ ಬಂದಿದ್ದು, ಅವರಿಗೆ ಖರ್ಗೆ, ಡಿಕೆ, ಸಿದ್ದು ಹೀಗೆ ಮೂವರ ಬೆಂಬಲವೂ ಇದೆಯಂತೆ.
