ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಆಸರೆ ಮುಸ್ಲಿಂ ಸಮುದಾಯ; ಮುಸ್ಲಿಂ ಸಮುದಾಯಕ್ಕೆ ಜಿಲ್ಲಾಧ್ಯಕ್ಷ ಹುದ್ದೆ ಮರೀಚಿಕೆಯೇ..?

ಕರಾವಳಿ

ರಾಜ್ಯದಲ್ಲಿ ಮುಸ್ಲಿಂ ಉಪಮುಖ್ಯಮಂತ್ರಿ ಬೇಕು ಅನ್ನುವ ಕೂಗು ಹಾಗೊಮ್ಮೆ ಈಗೊಮ್ಮೆ ಎದ್ದೇಳುತ್ತಿದೆ. ಆದರೆ ಮುಸ್ಲಿಂ ಮುಖ್ಯಮಂತ್ರಿ ಅನ್ನುವುದು ಕನಸಾಗಿಯೇ ಉಳಿಯಲಿದೆ. ಇನ್ನು ಜಿಲ್ಲೆಯ ಅಧ್ಯಕ್ಷ ಹುದ್ದೆಗೆ ಮುಸ್ಲಿಂ ಸಮುದಾಯ ಏರಲು ಸಾಧ್ಯವಾಗದೇ ಇರುವುದು ದೊಡ್ಡ ದುರಂತ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಆಸರೆ ಮುಸ್ಲಿಂ ಸಮುದಾಯ. ವಿಧಾನಸಭಾ ಚುನಾವಣೆ ಇರಲಿ, ಲೋಕಸಭಾ ಚುನಾವಣೆ ಇರಲಿ ಮುಸ್ಲಿಂ ಸಮುದಾಯದ ಮತಗಳು ಕಾಂಗ್ರೆಸ್ ಪಕ್ಷಕ್ಕೆ ಹೋಲ್‍ಸೇಲ್ ಆಗಿ ಬೀಳುತ್ತಿದೆ. ಮುಸ್ಲಿಂ ಸಮುದಾಯ ಕೈಕೊಟ್ಟರೆ ಇಲ್ಲಿ ಕಾಂಗ್ರೆಸ್ ಪಕ್ಷ ಠೇವಣಿ ಉಳಿಸಿಕೊಳ್ಳುವುದೇ ಕಷ್ಟ. ಅಂತಹದರಲ್ಲಿ ಮುಸ್ಲಿಂ ಸಮುದಾಯಕ್ಕೆ ಜಿಲ್ಲಾಧ್ಯಕ್ಷ ಹುದ್ದೆ ನೀಡಲು ಮೀನಮೇಷ ಏಕೆ…?

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾಗಿ ಬಂಟ, ಬಿಲ್ಲವ, ಕ್ರೈಸ್ತ ಸಮುದಾಯಕ್ಕೆ ಪ್ರಾತಿನಿಧ್ಯ ದೊರಕಿದೆ. ಆದರೆ ಈವರೆಗೂ ಮುಸ್ಲಿಂ ಸಮುದಾಯಕ್ಕೆ ಪೂರ್ಣಾವಧಿ ಜಿಲ್ಲಾಧ್ಯಕ್ಷ ಹುದ್ದೆ ಲಭಿಸಿಲ್ಲ. 2013ರ ಸಮಯದಲ್ಲಿ ಇಬ್ರಾಹಿಂ ಕೋಡಿಜಾಲ್ ಹಂಗಾಮಿ ಅಧ್ಯಕ್ಷರಾಗಿದ್ದರು. ಆ ಸಂದರ್ಭದಲ್ಲಿ ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಏಳರಲ್ಲಿ ಕಾಂಗ್ರೆಸ್ ವಿಜಯ ದುಂಧುಬಿ ಭಾರಿಸಿತ್ತು. ಮುಸ್ಲಿಂ ಸಮುದಾಯಕ್ಕೆ ಅಧ್ಯಕ್ಷ ಕೊಟ್ಟರೆ ಕಾಂಗ್ರೆಸ್ ಗೆಲ್ಲಲು ಸಾಧ್ಯವಿಲ್ಲ ಅನ್ನುವ ಪ್ರೊಪಗಾಂಡ ಹರಿಯಬಿಡಲಾಗುತ್ತಿದೆ. ಆದರೆ ಕೋಡಿಜಾಲ್ ಹಂಗಾಮಿ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಕಾಂಗ್ರೆಸ್ ವಿಜಯ ಪತಾಕೆ ಹಾರಿಸಿದ್ದು ಹೇಗೆ… ಕಳೆದ ಎರಡು ಅವಧಿಯಲ್ಲಿ ಬಿಲ್ಲವ ಸಮುದಾಯದ ವ್ಯಕ್ತಿ ಜಿಲ್ಲಾಧ್ಯಕ್ಷರಾಗಿದ್ದರೂ, ಕನಿಷ್ಟ ಪಕ್ಷ ಓರ್ವ ಬಿಲ್ಲವ ಅಭ್ಯರ್ಥಿಯನ್ನು ಗೆಲ್ಲಿಸಲು ಯಾಕೆ ಸಾಧ್ಯವಾಗಿಲ್ಲ.

ಈ ಬಾರಿ ಜಿಲ್ಲಾಧ್ಯಕ್ಷ ರೇಸ್‍ನಲ್ಲಿ ಮುಸ್ಲಿಂ ಸಮುದಾಯದಿಂದ ಎಂ.ಎಸ್. ಮುಹಮ್ಮದ್, ಲುಕ್ಮಾನ್ ಬಂಟ್ವಾಳ್, ಸುಹೈಲ್ ಕಂದಕ್, ಸಾಹುಲ್ ಹಮೀದ್, ಅಬ್ಬಾಸ್ ಆಲಿ ಕಣದಲ್ಲಿದ್ದು ಇವರ ಪೈಕಿ ಒಬ್ಬರಿಗೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹುದ್ದೆ ನೀಡಲಿ. ಕಾಂಗ್ರೆಸ್ಸಿಗೆ ಬೆನ್ನೆಲುಬಾಗಿ ನಿಂತ ಸಮುದಾಯಕ್ಕೆ ಕೃತಜ್ಞತೆ ನೀಡಿದಂತಾಗಬಹುದು. ಕಾಂಗ್ರೆಸ್ಸಿನಿಂದ ಇದನ್ನು ನಿರೀಕ್ಷಿಸಬಹುದೇ..?