ಮಂಗಳೂರು: ಹಜ್ ಭವನ ಶಿಲಾನ್ಯಾಸ ಕಾರ್ಯಕ್ರಮ: ಮುಖ್ಯಮಂತ್ರಿಯನ್ನು ತಡೆದ ಸಮುದಾಯದ ಖಿಲಾಡಿ ‘ಖಳನಾಯಕ’ ಯಾರು.?

ಕರಾವಳಿ

ಕರಾವಳಿ ಭಾಗಕ್ಕೆ ಮುಖ್ಯಮಂತ್ರಿ ಡಿಕೆಶಿ ಬಂದು ಹೋಗಿ ಎರಡು ದಿನಗಳು ಕಳೆದವು. ಆದರೆ ಇಲ್ಲಿ ತೆರೆಮರೆಯಲ್ಲಿ ನಡೆದಿರುವ ಕೆಲವೊಂದು ನಿಗೂಢತೆ ಇನ್ನು ಕೂಡ ಬಗೆಹರಿಯದೆ ಹಾಗೆಯೇ ಉಳಿದಿದೆ. ಹಾಗಾದರೆ ಇನ್ನು ಕೂಡ ಉತ್ತರ ಸಿಗದ ಆ ಸಸ್ಪೆನ್ಸ್ ಯಾವುದು.?

ಸೆಪ್ಟೆಂಬರ್ 17ರಂದು ಇಡೀ ಅವಿಭಜಿತ ಜಿಲ್ಲೆಯ ಮುಸ್ಲಿಂ ಸಮುದಾಯದ ದೊಡ್ಡದೊಂದು ಕನಸು ನನಸಾದ ದಿನ. ಅದು ಬೇರಾವುದೂ ಅಲ್ಲ. ಹಜ್ ಭವನದ ಶಿಲಾನ್ಯಾಸ ಕಾರ್ಯಕ್ರಮ. ಸರಕಾರದ ಮುಂದಾಳತ್ವದಲ್ಲಿ ನಡೆದ ಹಜ್ ಭವನದ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಖುದ್ದು ರಾಜ್ಯದ ಮುಖ್ಯಮಂತ್ರಿಗಳು ಮಂಗಳೂರಿನಲ್ಲಿದ್ದರೂ ಅವರು ಕಾರ್ಯಕ್ರಮಕ್ಕೆ ಗೈರು ಹಾಜರಾಗಿದ್ದರು. ಮುಸ್ಲಿಂ ಸಮುದಾಯದ ಕನಸಿನ ಕಾರ್ಯಕ್ರಮ. ಅದರಲ್ಲೂ ಸರಕಾರಿ ಕಾರ್ಯಕ್ರಮದಲ್ಲಿ ಸಿಎಂ ಭಾಗವಹಿಸುವಿಕೆಯನ್ನು ಕರಾವಳಿ ಭಾಗದ ಮುಸ್ಲಿಂ ಪ್ರಭಾವಿ ರಾಜಕಾರಣಿಗಳು, ಮುಖಂಡರು ತಡೆದಿದ್ದಾರಾ ಅನ್ನುವ ಅನುಮಾನ ಇದೀಗ ಬಲವಾಗಿ ಕೇಳಿ ಬರತೊಡಗಿದೆ.

ಮುಖ್ಯಮಂತ್ರಿಗಳು ಮಂಗಳೂರಿಗೆ ಆಗಮಿಸುವ ಕಾರ್ಯಕ್ರಮದ ಪಟ್ಟಿ ವಾರದ ಹಿಂದೆಯೇ ನಿರ್ಧರಿಸಲಾಗಿದೆ. ಮುಖ್ಯಮಂತ್ರಿ ಆದಿಯಾಗಿ ಇಡೀ ಸಚಿವರ ದಂಡು ಮಂಗಳೂರಿಗೆ ಪ್ರಯಾಣ ಬೆಳೆಸುವುದನ್ನು ಅರಿತೇ ಹಜ್ ಭವನದ ಶಂಕುಸ್ಥಾಪನೆಗೆ ದಿನಾಂಕ ನಿಗಡಿಪಡಿಸಲಾಗಿದೆ. ಮುಖ್ಯಮಂತ್ರಿಗಳು ಮಂಗಳೂರಿನಲ್ಲಿ ಇದ್ದ ಸಂದರ್ಭದಲ್ಲೇ ಕಾರ್ಯಕ್ರಮ ನಡೆದರೂ ಸಿಎಂ ಮಹತ್ವದ ಕಾರ್ಯಕ್ರಮದಲ್ಲಿ ಭಾಗಿಯಾಗಿರಲಿಲ್ಲ. ಕಾರ್ಯಕ್ರಮ ಬಜಪೆಯಲ್ಲಿ ನಡೆಯುತ್ತಿದ್ದರೂ, ಅದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಬಜಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದರೂ, ಕೆಲವೇ ಕಿಲೋಮೀಟರ್ ದೂರದಲ್ಲಿ ನಡೆಯುತ್ತಿದ್ದ ಸರಕಾರಿ ಕಾರ್ಯಕ್ರಮದಲ್ಲಿ ಭಾಗವಹಿಸದೆ ಇರುವುದು ಅನುಮಾನಕ್ಕೆ ಗುರಿಯಾಗಿದೆ. ಮುಖ್ಯಮಂತ್ರಿಗಳನ್ನು ಬರಮಾಡಿಕೊಳ್ಳಲು ಈ ಜಿಲ್ಲೆಯ ಪ್ರಭಾವಿ ಅಧಿಕಾರಸ್ಥ ರಾಜಕಾರಣಿಗಳು, ಮುಖಂಡರು ಹೋದರೂ ಅವರನ್ನು ಕಾರ್ಯಕ್ರಮಕ್ಕೆ ಕರೆತರಲು ಹಿಂದೇಟು ಹಾಕಿದ್ದು ಯಾಕೆ.? ಮುಖ್ಯಮಂತ್ರಿಗಳು ಕಾರ್ಯಕ್ರಮಕ್ಕೆ ಆಗಮಿಸಿದರೆ ಹಜ್ ಭವನದ ಕ್ರೆಡಿಟ್ ತಮ್ಮ ಕೈ ತಪ್ಪಬಹುದು ಎಂದು ಭಾವಿಸಿದರೇ..? ಕೆಲವರು ಸಮುದಾಯದಲ್ಲಿ ತಾವೇ ನಾಯಕರಾಗಿ ಮಿಂಚಬೇಕು ಅನ್ನುವ ಸ್ವಾರ್ಥ ಲಾಲಸೆ ಕಾರಣವಾಯಿತೇ..? ಕಾಂಗ್ರೆಸಿನ ಹಿರಿಯ ಮುಖಂಡ ಪೂಜಾರಿಯವರ ಮನೆಗೆ ಮುಖ್ಯಮಂತ್ರಿಗಳನ್ನು ಕರೆದುಕೊಂಡು ಹೋಗಲು ಅತೀವ ಹುಮ್ಮಸ್ಸು ತೋರಿಸಿದ, ಮೀನುಗಾರಿಕೆ ಧಕ್ಕೆಗೆ ಕರೆದುಕೊಂಡು ಹೋಗಲು ಸಮಯವಿರುವ ರಾಜಕಾರಣಿ, ಮುಖಂಡರಿಗೆ ಸಮುದಾಯದ ಕನಸಿನ ಯೋಜನೆಯ ಕಾರ್ಯಕ್ರಮಕ್ಕೆ ಕರೆದುಕೊಂಡು ಬರಲು ಸಮಯವಿಲ್ಲವಾಯಿತೇ..? ಹಜ್ ಭವನಕ್ಕೆ ಸಿಎಂ ಆಗಮಿಸಿದರೆ ಹಿಂದುತ್ವವಾದಿಗಳು ಕೆರಳುತ್ತಾರೆ ಎಂದು ಸಿಎಂರವರ ಕಿವಿಗೆ ಊದಿ ತಮ್ಮ ಬೇಳೆ ಬೇಯಿಸಿಕೊಂಡರೇ..?

ಕರಾವಳಿ ಭಾಗದಲ್ಲಿ ಮುಸ್ಲಿಂ ಸಮುದಾಯದ ಸುಪ್ರೀಂ ರಾಜಕೀಯ ಲೀಡರ್ ಎಂದು ಸ್ವಯಂಘೋಷಿಸಿಕೊಂಡಿರುವ ಕೆಲವು ನಾ(ಲಾ)ಯಕರ ಬಣ್ಣಗಳು ಒಂದೊಂದಾಗಿಯೇ ಇದೀಗ ಸಮುದಾಯಕ್ಕೆ ಅರ್ಥ ಆಗುತ್ತಿದೆ. ಇಲ್ಲಿ ಸಮುದಾಯದಿಂದ ತಾವೇ ಬೆಳೆಯಬೇಕು, ಇನ್ಯಾರೂ ಸಮುದಾಯದ ನಾಯಕರು ಬೆಳೆಯಬಾರದೆಂಬ ಕುತಂತ್ರ. ಸಮುದಾಯದ ನಾಯಕರೆನಿಸಿಕೊಂಡವರು ಕೋಮುವಾದಿಗಳೊಂದಿಗೆ ಭಾಯಿ ಭಾಯಿ, ವಿರೋಧ ಪಕ್ಷದ ಜೊತೆ ಸಟ್ಟಿಂಗ್ ಇಡುವ ಕೆಲವು ನಾಯಕರ ಬಣ್ಣ ಇದೀಗ ಜಗಜ್ಜಾಹೀರವಾಗುತ್ತಿದೆ. ಸಮುದಾಯದ ನಾಯಕರೆನಿಸಿಕೊಂಡ ಸ್ವಯಂ ಘೋಷಿತ ನಾಯಕರು ಒಂದನ್ನು ಅರ್ಥಮಾಡಿಕೊಳ್ಳಬೇಕು. ಕರಾವಳಿಯ ಬ್ಯಾರಿ ಸಮುದಾಯ ನಾಯಕತ್ವವನ್ನು ಯಾರ ಹೆಗಲಿಗೂ ಗುತ್ತಿಗೆ ನೀಡಿಲ್ಲ. ಸಂದರ್ಭ ಬಂದರೆ ಸಮುದಾಯ ಒಗ್ಗಟ್ಟಾಗಿ ಊಸರಬಳ್ಳಿಯಂತಹ ಖಿಲಾಡಿಗಳಿಗೆ ಶಾಸ್ವತವಾಗಿ ಮನೆಯ ಜಾಗ ತೋರಿಸಿದೆ. ತೋರಿಸಿದ ಎಷ್ಟೋ ಉದಾಹರಣೆಗಳು ಇವೆ. ಈ ಸಮುದಾಯ ಅಸಹಾಯಕ ಸಮುದಾಯವಲ್ಲ, ಸಮರ್ಥವಾಗಿದೆ. ಸಮುದಾಯದ ಕಣ್ಣಿಗೆ ಮಣ್ಣೆರಚಿ ನಾವು ಲೀಡರು, ಮುಖಂಡರು ಅಂದುಕೊಂಡರೆ ಅದು ಮುಠ್ಠಾಳತನ ಅಲ್ಲದೇ ಬೇರೆನಿಲ್ಲ. ಈ ಬ್ಯಾರಿ ಸಮುದಾಯಕ್ಕೆ ಅಂತಹವರನ್ನು ಪರ್ಮನೆಂಟಾಗಿ ಮನೆಗೆ ಕಳುಹಿಸಿ ಕೊಡುವ ತಾಕತ್ತು ಇದೆ. ಇದನ್ನು ನಾಯಕರೆನಿಸಿಕೊಂಡವರು ಅರ್ಥ ಮಾಡಿಕೊಳ್ಳಬೇಕು.