ಪುತ್ತೂರು ನಗರದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಬಳಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ನೇತೃತ್ವದಲ್ಲಿ ಸೆ. 17ರಂದು ನಡೆದ ಗಣೇಶೋತ್ಸವ ವಿಸರ್ಜನಾ ಶೋಭಾಯಾತ್ರೆಯ ವೇಳೆ ಕಾನೂನು ಮೀರಿ ಧ್ವನಿವರ್ಧಕ ಬಳಕೆ ಹಾಗೂ ಪೊಲೀಸ್ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪೊಲೀಸ್ ಉಪನಿರೀಕ್ಷಕರ ದೂರಿನ ಪ್ರಕಾರ ಪಂಚಮುಖಿ ಫ್ರೆಂಡ್ಸ್ ಎಂಬ ಹೆಸರಿನ ಟ್ಯಾಬ್ಲೋದಲ್ಲಿ ನಿಯಮ ಮೀರಿ ಧ್ವನಿವರ್ಧಕವನ್ನು ಸಾರ್ವಜನಿಕರಿಗೆ ತೊಂದರೆಯಾಗುವಂತೆ ಬಳಸಿದ್ದು, ಧ್ವನಿವರ್ಧಕ ಬಳಕೆಯನ್ನು ನಿಲ್ಲಿಸುವಂತೆ ಸಂಬಂಧಪಟ್ಟವರಿಗೆ ಸೂಚಿಸಿದ್ದರು. ಈ ವೇಳೆ ಟ್ಯಾಬ್ಲೋದ ಆಯೋಜಕರು ಧ್ವನಿವರ್ಧಕ ಬಳಕೆಯನ್ನು ನಿಲ್ಲಿಸಿದ್ದು, ಈ ಸಂದರ್ಭದಲ್ಲಿ ಕಾರ್ಯಕ್ರಮಕ್ಕೆ ಸಂಬಂಧಪಡದ ಅಜಿತ್ ರೈ ಹೊಸಮನೆ ಹಾಗೂ ಇತರರು ಸ್ಥಳಕ್ಕೆ ಆಗಮಿಸಿ ಧ್ವನಿವರ್ಧಕವನ್ನು ಬಂದ್ ಮಾಡಬಾರದು ಎಂದು ಹೇಳಿ, ಪುನಃ ಧ್ವನಿವರ್ಧಕ ಬಳಸುವಂತೆ ಸ್ತಬ್ದಚಿತ್ರದ ಆಯೋಜಕರಿಗೆ ಸೂಚಿಸಿದ್ದಾರೆ. ಬಳಿಕ ಧ್ವನಿವರ್ಧಕವನ್ನು ಪುನಃ ಬಳಸಲಾಗಿದ್ದು, ಕರ್ತವ್ಯದಲ್ಲಿದ್ದ ಪೊಲೀಸ್ ಅಧಿಕಾರಿಗಳು ಅದನ್ನು ಸ್ಥಗಿತಗೊಳಿಸುವಂತೆ ಸೂಚಿಸಿದರೂ ಸೂಚನೆಯನ್ನು ಪಾಲಿಸದೆ, ಧ್ವನಿವರ್ಧಕ ಬಳಕೆಗೆ ಸಂಬಂಧಿಸಿದ ಸುಪ್ರೀಂ ಕೋರ್ಟ್ ನಿರ್ದೇಶನಗಳು ಹಾಗೂ ಠಾಣೆಯಿಂದ ಕಾರ್ಯಕ್ರಮ ಆಯೋಜಕರಿಗೆ ನೀಡಲಾಗಿದ್ದ ಷರತ್ತುಗಳ ಕುರಿತು ಸ್ಥಳದಲ್ಲಿದ್ದವರಿಗೆ ತಿಳುವಳಿಕೆ ನೀಡಿದರೂ ಧ್ವನಿವರ್ಧಕ ಬಳಕೆಯನ್ನು ಮುಂದುವರಿಸಿ ಪೊಲೀಸ್ ಕರ್ತವ್ಯಕ್ಕೆ ಅಡ್ಡಿಪಡಿಸಲಾಗಿದೆ.
ಈ ಹಿನ್ನಲೆಯಲ್ಲಿ ಅಜಿತ್ ರೈ ಹೊಸಮನೆ, ಪಂಚಮುಖಿ ಫ್ರೆಂಡ್ಸ್, ಟ್ಯಾಬ್ಲೋ ಆಯೋಜಕರ ವಿರುದ್ಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಅಕ್ರ : 113/2026, ಕಲಂ :49,132,3(5) ಬಿ ಎನ್ ಎಸ್ 2023 ಮತ್ತು ಕಲಂ- 103,109 ಕೆ ಪಿ ಆಕ್ಟ್ ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.
