ಹೈಸ್ಕೂಲಿಗೆ ಕೇಸರಿ ಎಂಟ್ರಿ. ಜಿಲ್ಲಾಡಳಿತ, ಶಿಕ್ಷಣ ಇಲಾಖೆ, ಸರಕಾರ ಜಾಣ ಮೌನ.!
ವಿದ್ಯಾಮಂದಿರ ಅನ್ನುವುದು ಸುಸಂಸ್ಕೃತ ಸಮಾಜವನ್ನು ತಯಾರು ಮಾಡುವ ಕೇಂದ್ರ. ಅಲ್ಲಿ ಯಾವುದೇ ಜಾತಿ, ಮತ, ಧರ್ಮದ ಕಾರ್ಯಕ್ರಮಕ್ಕೆ ಆಸ್ಪದ ಇಲ್ಲ. ಅದರಲ್ಲೂ ಮತೀಯ ಸಂಘಟನೆಗಳಿಗೆ ಎಂಟ್ರಿಯಂತೂ ಖಂಡಿತ ಇಲ್ಲವೇ ಇಲ್ಲ. ಈ ಬಗ್ಗೆ ಶಿಕ್ಷಣ ಇಲಾಖೆ ಸ್ಪಷ್ಟವಾಗಿಯೇ ಉಲ್ಲೇಖ ಮಾಡಿದೆ. ಆದರೆ ಹಿಂದುತ್ವದ ಪ್ರಯೋಗಶಾಲೆ ಎಂದು ಕರೆಯಿಸಿಕೊಳ್ಳುವ ಮಂಗಳೂರಿನ ಶಿಕ್ಷಣ ಸಂಸ್ಥೆಯೊಂದರಲ್ಲಿ ಪೂರ್ತಿ ಕೇಸರೀಕರಣ ರೀತಿಯ ಕಾರ್ಯಕ್ರಮ ನಡೆಸಿ ವಿದ್ಯಾರ್ಥಿಗಳಿಗೆ ಕೇಸರಿ ಶಾಲು ಹಾಕಿ ಕಾರ್ಯಕ್ರಮ ನಡೆಸಿರುವುದು, ಕಾರ್ಯಕ್ರಮ ಮುಖ್ಯೋಪಾಧ್ಯಾಯರ ನೇತೃತ್ವದಲ್ಲಿ ನಡೆದಿರುವುದು ನಾಗರಿಕ ಸಮಾಜವನ್ನು ಆತಂಕಕ್ಕೀಡು ಮಾಡಿದೆ. ಆಡಳಿತ ಮಂಡಳಿ ಹಾಗೂ ಶಿಕ್ಷಕರಿಗೆ ಮಾಹಿತಿ ಇಲ್ಲದೆ ಮುಖ್ಯೋಪಾಧ್ಯಾಯರೊಬ್ಬರ ಮುತುವರ್ಜಿಯಿಂದ ಸಂಘಟನೆಯೊಂದು ಶಾಲಾ ಆವರಣವನ್ನು ಕೇಸರಿಮಯ ಗೊಳಿಸಿರುವುದು.. ಇಂತಹ ಆತಂಕಕಾರಿ ಬೆಳವಣಿಗೆ ಜಿಲ್ಲೆಯಲ್ಲಿ ನಡೆದಿದ್ದರೂ ಶಿಕ್ಷಣ ಇಲಾಖೆ, ಜಿಲ್ಲಾಡಳಿತ, ಸರಕಾರ ಮೌನಕ್ಕೆ ಜಾರಿರುವುದು ಇನ್ನಷ್ಟು ಆತಂಕವನ್ನು ಸೃಷ್ಟಿಸುವಂತಾಗಿದೆ.

ಎಡಪದವಿನ ಸ್ವಾಮಿ ವಿವೇಕಾನಂದ ಅನುದಾನಿತ ಕಾಲೇಜಿನಲ್ಲಿ ಮೊನ್ನೆ ಆದಿತ್ಯವಾರದಂದು ಸಂಘಟನೆಯೊಂದರ ಸೇವಾ ಬ್ರಿಗೇಡ್ ವತಿಯಿಂದ ಭರ್ಜರಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಶಾಲೆಯ ಆವರಣಕ್ಕೆ ಇಂಟರ್ ಲಾಕ್ ಅಳವಡಿಸಿದ ಸಂಘಟನೆ ಅದರ ಉದ್ಘಾಟನೆ ನೆಪದಲ್ಲಿ ಶಾಲಾ ರಜಾದಿನದಂದು ವಿದ್ಯಾರ್ಥಿಗಳಿಗೆ ಕೇಸರಿ ಶಾಲು ಹಾಕಿ ಧಾರ್ಮಿಕ ಕಾರ್ಯಕ್ರಮದ ರೀತಿಯಲ್ಲಿ ಶಾಲಾ ಆವರಣವನ್ನು ಬದಲಾಯಿಸಲಾಗಿತ್ತು.
ಸ್ವಾಮಿ ವಿವೇಕಾನಂದ ಹೈಸ್ಕೂಲ್ ಮುಖ್ಯೋಪಾಧ್ಯಾಯರೊಬ್ಬರ ಮುಂದಾಳತ್ವದಲ್ಲಿ ಈ ಕಾರ್ಯಕ್ರಮ ನಡೆದಿದ್ದು, ಶಾಲಾ ಆಡಳಿತ ಮಂಡಳಿಗಾಗಲಿ, ಶಿಕ್ಷಕರ ಗಮನಕ್ಕಾಗಲಿ ಬಾರದೆ ಕಾರ್ಯಕ್ರಮ ನಡೆದಿದ್ದು ವಿಪರ್ಯಾಸ, ಸಂಘಿ ಮೇಷ್ಟ್ರು ಯಾರನ್ನು ಮೆಚ್ಚಿಸಲು ಈ ಕಾರ್ಯಕ್ರಮ ನಡೆಸಿದ್ದು ಅನ್ನುವ ಮಾತುಗಳು ಸಾರ್ವಜನಿಕವಾಗಿ ಕೇಳಿ ಬರುತ್ತಿದೆ.

ಆದಿತ್ಯವಾರ ರಜಾದಿನವಾಗಿದ್ದರಿಂದ ಪ್ರೌಢ ಶಾಲೆಯ ಒಂಭತ್ತನೆಯ ತರಗತಿಯ ವಿದ್ಯಾರ್ಥಿಗಳನ್ನು ಸ್ಪೆಷಲ್ ಕ್ಲಾಸ್ ಇದೆಯೆಂದು ಕರೆಯಿಸಿಕೊಂಡು ಈ ಕಾರ್ಯಕ್ರಮ ನಡೆಸಲಾಗಿದೆ. ಶಾಲಾ ಕೊಠಡಿಯೊಳಗೆ ಈ ಕಾರ್ಯಕ್ರಮ ನಡೆದಿದ್ದು, ಸಂಘಟನೆಯೊಂದರ ಕಾರ್ಯಕರ್ತರು ಕೇಸರಿ ಶಾಲು ಹಾಕಿಕೊಂಡಿರುವುದು ಮಾತ್ರವಲ್ಲ ಇಲ್ಲಿನ ವಿದ್ಯಾರ್ಥಿಗಳಿಗೂ ಕೇಸರಿ ಶಾಲು ಹಾಕಿಸಿ ಕಾರ್ಯಕ್ರಮ ನಡೆಸಲಾಗಿದೆ. ಶಾಲಾ ಆವರಣದೊಳಗೆ ಕೇಸರೀಕರಣ ಮಾಡುವ ಜೊತೆಗೆ ವಿದ್ಯಾರ್ಥಿಗಳನ್ನು ಬಳಸಿಕೊಂಡಿರುವುದು ಶಿಕ್ಷಣ ಇಲಾಖೆಯ ಆದೇಶಕ್ಕೆ ಕಿಂಚಿತ್ತೂ ಬೆಲೆ ನೀಡದಿರುವುದು ಬಹಿರಂಗವಾಗಿದೆ. ಇದರ ಹಿಂದೆ ಮುಖ್ಯೋಪಾಧ್ಯಾಯರೇ ಕೈಯಾಡಿಸಿದ್ದು, ಅವರ ವಿರುದ್ಧ ಸೂಕ್ತ ಕ್ರಮ ಜರುಗಿಸುವಂತೆ ಆಗ್ರಹಗಳು ಸಾರ್ವಜನಿಕವಾಗಿ ಕೇಳಿ ಬರುತ್ತಿದೆ.
ಎಡಪದವು ಹೈಸ್ಕೂಲ್ ನಲ್ಲಿ ಇಂತಹ ಘಟನೆಗಳು ಇದೇ ಮೊದಲಲ್ಲ. ಶಾಲೆಯ ಅಭಿವೃದ್ಧಿಗೆ ಯಾವ ಸಂಘಟನೆಗಳು ಕೈ ಜೋಡಿಸಿದರೂ ತಪ್ಪಿಲ್ಲ. ಆದರೆ ಅದನ್ನೇ ಮುಂದಿಟ್ಟು ಶಾಲೆಯನ್ನು ಮತೀಯ ಸಂಘಟನೆಗಳು ಹೈಜಾಕ್ ಮಾಡುವುದು ಅಪಾಯಕಾರಿ ಬೆಳವಣಿಗೆಯಾಗಿದೆ. ಈ ಹಿಂದೆಯೂ ಇದೇ ಶಾಲೆಯಲ್ಲಿ ಎಡಪದವು ವಲಯದ ಸಮಾಜೋತ್ಸವ ಕಾರ್ಯಕ್ರಮವನ್ನು ಇದೇ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿತ್ತು. ಎಡಪದವು ಸ್ವಾಮಿ ವಿವೇಕಾನಂದ ಹೈಸ್ಕೂಲ್ ಅನುದಾನಿತ ವಿದ್ಯಾಸಂಸ್ಥೆಯಾಗಿದ್ದು, ಇದು ಖಾಸಗಿ ಶಿಕ್ಷಣ ಸಂಸ್ಥೆಯಲ್ಲ. ಇಲ್ಲಿನ ಶಿಕ್ಷಕರಿಗೆ ವೇತನ ಸರಕಾರದ ಮೂಲಕವೇ ಪಾವತಿಯಾಗುತ್ತಿದೆ. ಸರಕಾರದ ಸಂಬಳ ಪಡೆದು ಮತೀಯ ಸಂಘಟನೆಯ ವಿಜೃಂಭಣೆಗೆ ಇಲ್ಲಿನ ಮುಖ್ಯ ಶಿಕ್ಷಕರೊಬ್ಬರು ಪ್ರೋತ್ಸಾಹ ನೀಡುತ್ತಿರುವುದು ಶೋಭೆ ತರುವಂತಹದ್ದಲ್ಲ.

ಶಾಲಾ ಕಾಲೇಜುಗಳಲ್ಲಿ ಧಾರ್ಮಿಕ, ಮತೀಯ ಸಂಘ ಸಂಸ್ಥೆಗಳ ಕಾರ್ಯಕ್ರಮಕ್ಕೆ ಕಟ್ಟುನಿಟ್ಟಿನ ಆದೇಶ ಇದ್ದರೂ, ಶಾಲೆಯ ಅಭಿವೃದ್ಧಿ ಹೆಸರಿನಲ್ಲಿ ಮತೀಯ ಸಂಘಟನೆಗಳು ಹೈಜಾಕ್ ಮಾಡಿ ಶಾಲೆಯಲ್ಲಿ ವಿಷದ ಬೀಜ ಬಿತ್ತುತ್ತಿರುವುದು ಇಲ್ಲಿನ ಶಿಕ್ಷಣ ಇಲಾಖೆ, ಜಿಲ್ಲಾಡಳಿತ ಹಾಗೂ ಸರಕಾರಕ್ಕೆ ನೇರ ಸವಾಲು ಹಾಕಿದಂತಾಗಿದೆ. ಶಾಲೆಯನ್ನು ಕೇಸರೀಮಯ ಗೊಳಿಸಲು ಸಂಘಟನೆಯೊಂದರ ಜೊತೆ ಕೈ ಜೋಡಿಸಿರುವ ಇಲ್ಲಿನ ಮುಖ್ಮೋಪಾಧ್ಯಾಯರ ಮೇಲೆ ಶಿಸ್ತು ಕ್ರಮ ಕೈಗೊಳ್ಳುವಂತೆ ಆಗ್ರಹಗಳು ಕೇಳಿ ಬರುತ್ತಿದೆ. ಶಿಕ್ಷಣ ಇಲಾಖೆ, ಜಿಲ್ಲಾಡಳಿತ ಹಾಗೂ ಸರಕಾರ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುತ್ತಾ ಎಂಬುದನ್ನು ಕಾದು ನೋಡೋಣ.
