ಸುರತ್ಕಲ್: ಬೆನ್ನಟ್ಟಿದ ಟ್ರಾಫಿಕ್ ಪೊಲೀಸ್; ಅಪಘಾತದಲ್ಲಿ ಬೈಕ್ ಸವಾರ ಮೃತ್ಯು

ಕರಾವಳಿ

ಹೆಲ್ಮೆಟ್ ಧರಿಸದ ಕಾರಣಕ್ಕೆ ದ್ವಿಚಕ್ರ ವಾಹನ ಸವಾರನೊಬ್ಬನನ್ನು ಬೆನ್ನಟ್ಟಿದ ಟ್ರಾಫಿಕ್ ಪೊಲೀಸರನ್ನು ಕಂಡು ವೇಗವಾಗಿ ಚಲಿಸಿದ ವಾಹನ ಸವಾರ ರಸ್ತೆ ಅಪಘಾತಕ್ಕೊಳಗಾಗಿ ಮೃತಪಟ್ಟ ದುರ್ಘಟನೆ ಶುಕ್ರವಾರ ರಾತ್ರಿ ಸುರತ್ಕಲ್ ಸಮೀಪದ ಕಾನ ಎಂಬಲ್ಲಿ ಸಂಭವಿಸಿದೆ.

ಕುಳಾಯಿಯಲ್ಲಿ ಟ್ಯೂಶನ್ ಗೆ ತೆರಳಿದ್ದ ಮಗನನ್ನು ಕರೆ ತರಲು ದ್ವಿಚಕ್ರ ವಾಹನದಲ್ಲಿ ಹೆಲ್ಮೆಟ್ ಧರಿಸದೆ ಸಂಚರಿಸುತ್ತಿದ್ದ ಸವಾರ ಕಾನ ಬಳಿ ವಾಹನ ತಪಾಸಣೆಯಲ್ಲಿ ನಿರತರಾಗಿದ್ದ ಮಂಗಳೂರು ಉತ್ತರ ಸಂಚಾರ ಪೊಲೀಸರು ಕಂಡು ವೇಗವಾಗಿ ಚಲಿಸಿ ಪರಾರಿಯಾಗಿದ್ದ. ಈ ಸಂದರ್ಭದಲ್ಲಿ ಬೆನ್ನಟ್ಟಿದ ಪೊಲೀಸರನ್ನು ಕಂಡು ಭಯಭೀತಿಗೊಂಡ ಸವಾರ ಎದುರಿನಿಂದ ಬರುತ್ತಿದ್ದ ಖಾಸಗಿ ಬಸ್ ಗೆ ಡಿಕ್ಕಿ ಹೊಡೆದಿದ್ದ ಎನ್ನಲಾಗಿದ್ದು, ಅಪಘಾತದ ರಭಸಕ್ಕೆ ರಸ್ತೆಗೆ ಎಸೆಯಲ್ಪಟ್ಟು ಆಸ್ಪತ್ರೆಗೆ ಸಾಗಿಸುವ ಮಧ್ಯೆ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಮೃತಪಟ್ಟವರನ್ನು 38 ವರ್ಷದ ಕಾನ ನಿವಾಸಿ ರೆಮ್ಮಿ ಎಂದು ಗುರುತಿಸಲಾಗಿದೆ.

ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಸಾರ್ವಜನಿಕರು ರಾತ್ರೋರಾತ್ರಿ ಸ್ಥಳಕ್ಕೆ ಜಮಾಯಿಸಿದ್ದು ಪೊಲೀಸರ ವಿರುದ್ಧವೇ ಪ್ರತಿಭಟನೆಗೆ ಮುಂದಾಗಿದ್ದಾರೆ. ತಪ್ಪಿತಸ್ಥ ಟ್ರಾಫಿಕ್ ಪೊಲೀಸ್ ಸಿಬ್ಬಂದಿ ಮೇಲೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಸಾರ್ವಜನಿಕರು ಸುರತ್ಕಲ್ -ಕಾನ ಮುಖ್ಯ ರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸಿದರು.