ವಾಟ್ಸ್ಆ್ಯಪ್ ಸಂದೇಶ ಕಳುಹಿಸಲು ಇನ್ನು ಮುಂದಕ್ಕೆ ಶುಲ್ಕ ತೆರೆಬೇಕಾಗುತ್ತದೆ. ಅಕ್ಟೋಬರ್ ಒಂದರಿಂದ ಒಂದು ಸಂದೇಶಕ್ಕೆ 14 ಪೈಸೆ ಶುಲ್ಕ ವಿಧಿಸಲಾಗುತ್ತದೆ ಎಂಬ ಸುದ್ದಿ ಚರ್ಚೆಯಾಗುತ್ತಿದೆ. ಈ ಮಾಹಿತಿ ನಿಜ. ಆದರೆ ಈ ಶುಲ್ಕ ಸಾಮಾನ್ಯವಾಗಿ ಸ್ನೇಹಿತರು ಮತ್ತು ಕುಟುಂಬದವರೊಂದಿಗೆ ವಾಟ್ಸ್ಆ್ಯಪ್ ಬಳಸುವವರಿಗೆ ಅನ್ವಯಿಸುವುದಿಲ್ಲ. ಇದು ಗ್ರಾಹಕರಿಗೆ ಸಂದೇಶ ಕಳುಹಿಸುವ ವ್ಯವಹಾರಗಳ ವಾಟ್ಸ್ಆಯಪ್ ವ್ಯವಸ್ಥೆಗೆ ಸಂಬಂಧಿಸಿದ ಬದಲಾವಣೆಯಾಗಿದೆ. ಅಂದರೆ ಗ್ರಾಹಕರೊಂದಿಗೆ ದೊಡ್ಡ ಪ್ರಮಾಣದಲ್ಲಿ ಸಂವಹನ ನಡೆಸುವ ವ್ಯವಹಾರಗಳಿಗೆ ಅನ್ವಯಿಸುತ್ತದೆ.
ಮೆಟಾ ಸಂಸ್ಥೆಯ ವಾಟ್ಸ್ಆ್ಯಪ್ ಬಿಸಿನೆಸ್ ಪ್ಲಾಟ್ಫಾರ್ಮ್ ಬಳಸುವ ದೊಡ್ಡ ಕಂಪನಿಗಳು, ಬ್ಯಾಂಕ್ಗಳು, ಆನ್ಲೈನ್ ಖರೀದಿ ಸಂಸ್ಥೆಗಳು, ಪ್ರವಾಸ ಮತ್ತು ಆಹಾರ ವಿತರಣಾ ಸೇವೆಗಳು ಸೇರಿದಂತೆ ಗ್ರಾಹಕರಿಗೆ ಹೆಚ್ಚಿನ ಪ್ರಮಾಣದಲ್ಲಿ ಸಂದೇಶ ಕಳುಹಿಸುವ ವ್ಯವಹಾರಗಳಿಗೆ ಈ ಶುಲ್ಕ ಅನ್ವಯಿಸುತ್ತದೆ. ಆನ್ಲೈನ್ನಲ್ಲಿ ವಸ್ತು ಖರೀದಿಸಿದಾಗ ಆರ್ಡರ್ ದೃಢೀಕರಣ, ಲಾಗಿನ್ಗಾಗಿ ಒಟಿಪಿ ವಾಟ್ಸ್ಆಯಪ್ನಲ್ಲಿ ಬಂದರೆ, ವಿತರಣೆಯ ಮಾಹಿತಿ ಅಥವಾ ಬ್ಯಾಂಕ್ ಖಾತೆಗೆ ಸಂಬಂಧಿಸಿದ ಎಚ್ಚರಿಕೆ ವಾಟ್ಸ್ಆ್ಯಪ್ ನಲ್ಲಿ ಬಂದರೆ, ಆ ಸಂದೇಶವನ್ನು ಕಳುಹಿಸುವ ಸಂಸ್ಥೆ ಮೆಟಾಗೆ ಶುಲ್ಕ ಪಾವತಿಸಬೇಕಾಗುತ್ತದೆ. ಗ್ರಾಹಕರು ಈ ಶುಲ್ಕವನ್ನು ಪಾವತಿಸುವುದಿಲ್ಲ.
ಮೆಟಾ ಸಂಸ್ಥೆ ಅಕ್ಟೋಬರ್ ಒಂದು 2026 ರಿಂದ ವಾಟ್ಸ್ಆ್ಯಪ್ ಬಿಸಿನೆಸ್ ಪ್ಲಾಟ್ಫಾರ್ಮ್ನ ಸಂದೇಶ ಶುಲ್ಕ ವ್ಯವಸ್ಥೆಯಲ್ಲಿ ಬದಲಾವಣೆ ಮಾಡುತ್ತಿದೆ. ಇದುವರೆಗೆ ಗ್ರಾಹಕರೊಂದಿಗೆ ನಡೆಯುವ 24 ಗಂಟೆಗಳ ಸೇವಾ ಸಂವಹನ ಅವಧಿಯಲ್ಲಿ ಕೆಲವು ಸಂದೇಶಗಳನ್ನು ಉಚಿತವಾಗಿ ಕಳುಹಿಸಲು ಅವಕಾಶವಿತ್ತು. ಇನ್ನು ಮುಂದೆ ಕೆಲವು ಸೇವಾ ಮತ್ತು ಬಳಕೆ ಮಾಹಿತಿ ಸಂದೇಶಗಳಿಗೂ ಶುಲ್ಕ ಅನ್ವಯಿಸಲಿದೆ. ಇಲ್ಲಿಯೂ ಗ್ರಾಹಕರಿಗೆ ಯಾವುದೇ ಹೊಸ ಶುಲ್ಕವಿಲ್ಲ. ನೀವು ಬ್ಯಾಂಕ್, ವಿಮಾ ಸಂಸ್ಥೆ, ಆನ್ಲೈನ್ ಖರೀದಿ ಸಂಸ್ಥೆ ಅಥವಾ ಬೇರೆ ಯಾವುದೇ ವ್ಯವಹಾರಕ್ಕೆ ವಾಟ್ಸ್ಆ್ಯಪ್ನಲ್ಲಿ ಸಂದೇಶ ಕಳುಹಿಸಿದರೆ ಅದಕ್ಕಾಗಿ ಹಣ ಪಾವತಿಸಬೇಕಾಗಿಲ್ಲ. ಗ್ರಾಹಕರಿಂದ ವ್ಯವಹಾರಗಳಿಗೆ ಕಳುಹಿಸುವ ಸಂದೇಶಗಳು ಉಚಿತವಾಗಿಯೇ ಮುಂದುವರಿಯುತ್ತವೆ.
