ಬ್ರಿಟೀಷರ ಕಾಲದ ಮೆಟಲ್ ವಿಸಿಲ್ ಚೈನ್, ಲೋಹದ ಗುಂಡಿ ಕ್ಯಾನ್ಸಲ್, ನೂತನ ವಿಸಿಲ್ ಗಾರ್ಡ್, ಮ್ಯಾಟ್ ಫಿನಿಶ್ ಬಟನ್‌: ಮುಖ್ಯಮಂತ್ರಿ

ರಾಜ್ಯ

ರಾಜ್ಯ ಪೊಲೀಸ್ ಇಲಾಖೆಯ ಕೆಳ ಹಂತದ ಸಿಬ್ಬಂದಿಗಳ ಅನುಕೂಲಕ್ಕಾಗಿ ಬ್ರಿಟಿಷ್ ಕಾಲದ ಹಳೆಯ ಮೆಟಲ್ ವಿಸಿಲ್ ಚೈನ್ ಹಾಗೂ ಲೋಹದ ಗುಂಡಿಗಳನ್ನು ಬದಲಾಯಿಸಿ, ಶೀಘ್ರದಲ್ಲೇ ನೂತನ ವಿಸಿಲ್ ಗಾರ್ಡ್ ಹಾಗೂ ಪಾಲಿಶ್ಡ್ ಮ್ಯಾಟ್ ಫಿನಿಶ್ ಬಟನ್‌ಗಳನ್ನು ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪ್ರಮುಖ ಘೋಷಣೆ ಮಾಡಿದ್ದಾರೆ. ಪೊಲೀಸ್ ಹುತಾತ್ಮರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಿಬ್ಬಂದಿಗಳ ದೈನಂದಿನ ಕರ್ತವ್ಯ ನಿರ್ವಹಣೆಯನ್ನು ಸುಲಭಗೊಳಿಸಲು ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಈ ಹಿಂದೆ ಬೇಸಿಗೆಯಲ್ಲಿ ಅಸ್ವಸ್ಥತೆ ಉಂಟುಮಾಡುತ್ತಿದ್ದ ಬ್ರಿಟಿಷ್ ಕಾಲದ ಸ್ಲೋಚ್ ಕ್ಯಾಪ್‌ಗಳನ್ನು ಬದಲಿಸಿ, ಇತರೆ ರಾಜ್ಯಗಳ ಮಾದರಿಯಂತೆ ನೇವಿ ಬ್ಲೂ ಬಣ್ಣದ ಪೀಕ್ ಕ್ಯಾಪ್‌ಗಳನ್ನು ಜಾರಿಗೆ ತರಲಾಗಿತ್ತು. ಈ ಐತಿಹಾಸಿಕ ಬದಲಾವಣೆಯ ಯಶಸ್ಸಿನ ಬೆನ್ನಲ್ಲೇ ಈಗ ಸಮವಸ್ತ್ರದ ವಿಸಿಲ್ ಚೈನ್ ಹಾಗೂ ಬಟನ್‌ಗಳ ಬದಲಾವಣೆಗೆ ಕ್ರಮ ಕೈಗೊಳ್ಳಲಾಗಿದೆ. ಪ್ರಸ್ತುತ ಬಳಕೆಯಲ್ಲಿರುವ ಲೋಹದ ಚೈನ್ ಮತ್ತು ಗುಂಡಿಗಳು ಹವಾಮಾನ ವೈಪರೀತ್ಯದಿಂದಾಗಿ ಬೇಗನೆ ತುಕ್ಕು ಹಿಡಿಯುತ್ತಿದ್ದು, ಇದರಿಂದ ಸಮವಸ್ತ್ರ ಹಾಳಾಗುವುದಲ್ಲದೆ ಸಿಬ್ಬಂದಿಗೆ ಚರ್ಮದ ಸಮಸ್ಯೆ ಸೇರಿದಂತೆ ಅನೇಕ ಆರೋಗ್ಯ ಸಮಸ್ಯೆಗಳು ಎದುರಾಗುತ್ತಿದ್ದವು.ಸಿಬ್ಬಂದಿಗಳ ಈ ಆರೋಗ್ಯ ಮತ್ತು ಕಾರ್ಯಾನುಕೂಲದ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ, ದೇಶದ ಸಿಕ್ಕಿಂ, ಪಂಜಾಬ್, ಆಂಧ್ರಪ್ರದೇಶ, ತೆಲಂಗಾಣ, ಕೇರಳ ಹಾಗೂ ದೆಹಲಿ ಸೇರಿದಂತೆ ಹಲವು ರಾಜ್ಯಗಳಲ್ಲಿ ಈಗಾಗಲೇ ಜಾರಿಯಲ್ಲಿರುವ ಖಾಕಿ ಅಥವಾ ನೀಲಿ ಬಣ್ಣದ ವಿಸಿಲ್ ಗಾರ್ಡ್ ಪದ್ಧತಿಯನ್ನು ನಮ್ಮ ರಾಜ್ಯದಲ್ಲೂ ಅಳವಡಿಸಿಕೊಳ್ಳಲು ತೀರ್ಮಾನಿಸಿದೆ. ಈಗಾಗಲೇ ಅರಣ್ಯ ಮತ್ತು ಸಾರಿಗೆ ಇಲಾಖೆಯ ಸಿಬ್ಬಂದಿಗೆ ಈ ಸೌಲಭ್ಯ ಕಲ್ಪಿಸಲಾಗಿದ್ದು, ಸದ್ಯದಲ್ಲೇ ಪೊಲೀಸ್ ಇಲಾಖೆಗೂ ಇದು ವಿಸ್ತರಣೆಯಾಗಲಿದೆ.