ರಾಗಾ ಭೇಟಿ ಬಳಿಕ ನಡೆದಿದ್ದೇನು.? ಸಿದ್ದು ಶೈನಿಂಗ್.. ಡಿಕೆ ಪಾಳಯದಲ್ಲಿ ಬಿರುಗಾಳಿ.!
‘ಇರಲಾರದೆ ಇರುವೆ ಬಿಟ್ಟು ಕೊಂಡ ಹಾಗೆ’ ಅನ್ನುವ ಗಾದೆಮಾತಿಗೆ ತಕ್ಕಂತೆ ಮುಖ್ಯಮಂತ್ರಿ ಡಿಕೆಶಿ ಪಾಡಾಗಿದೆ. ಹೈಕಮಾಂಡ್ ಹೇಳಿದಂತೆ ಮುಖ್ಯಮಂತ್ರಿ ಕುರ್ಚಿ ಬಿಟ್ಟುಕೊಟ್ಟು ಸೈಲೆಂಟ್ ಮೂಡ್ ಗೆ ಜಾರಿದ್ದ ಸಿದ್ದರಾಮಯ್ಯ ಅವರನ್ನು ಮತ್ತೆ ಬಡಿದು ಎಬ್ಬಿಸುವಂತೆ ಮಾಡಿದ್ದು ಸ್ಟಿಂಗ್ ಆಪರೇಶನ್. ಖೆಡ್ಡಾ ತೋಡಿ ಹಳ್ಳಕ್ಕೆ ಬೀಳಿಸಿ ಇನ್ನು ನನ್ನ ರಾಜ್ಯಭಾರ ಸಲೀಸು ಅಂದುಕೊಂಡವರಿಗೆ ಇದೀಗ ಸಿದ್ದರಾಮಯ್ಯ ಮತ್ತೆ ಮೈಕೊಡವಿ ಎದ್ದು ನಿಂತು ಹಳೆಯ ಸ್ಟೈಲಿಗೆ ಮರಳಿರುವುದು ಕಂಡು ರಾಜ್ಯ ರಾಜಕಾರಣದಲ್ಲೇ ಬಿರುಗಾಳಿ ಎಬ್ಬಿದೆ. ಸಿದ್ದು ಸಿಡಿದರೆ ತನ್ನ ಕುರ್ಚಿ ಸೇಫಲ್ಲ ಅನ್ನುವುದು ಡಿಕೆಶಿ ಗೂ ತಿಳಿದಿದೆ. ಇಮೇಜ್ ಇರುವಾಗಲೇ ಗದ್ದುಗೆಯಿಂದ ಕೆಳಗಿಳಿಸಿದ ಸಿದ್ದರಾಮಯ್ಯ ಅವರನ್ನು ಸಂಭಾಳಿಸುವುದೇ ಇದೀಗ ಹೈಕಮಾಂಡ್ ಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಆಪರೇಷನ್ ಬ್ಲ್ಯಾಕ್ ಮೇಲ್ ಪ್ರಕರಣದ ಚೆಂಡು ಇದೀಗ ದೆಹಲಿ ಕಾಂಗ್ರೆಸ್ ಅಂಗಳಕ್ಕೆ ಬಂದು ತಲುಪಿದೆ. ಇಂಡಿ ಒಕ್ಕೂಟದ ಮಹಾ ಸಮಾವೇಶಕ್ಕೆ ದೆಹಲಿಗೆ ಹೋಗಿದ್ದ ಸಿದ್ದು, ಕಾಂಗ್ರೆಸ್ ಹೈಕಮಾಂಡ್ ನಾಯಕರಾದ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಭೇಟಿ ಮಾಡಿದ್ದಾರೆ. ಸಿದ್ದರಾಮಯ್ಯರ ಈ ನಡೆ ರಾಜ್ಯ ರಾಜಕಾರಣದಲ್ಲಿ ಭಾರೀ ಸ್ಪೋಟಕ್ಕೆ ಕಾರಣವಾಗಿದೆ. ಸಿದ್ದರಾಮಯ್ಯರಿಗೆ ಖೆಡ್ಡಾ ತೋಡಿ ಸೈಲೆಂಟ್ ಆಗಿಸಲು ಪ್ರಯತ್ನ ಪಟ್ಟಿದ್ದ ಕಾಂಗ್ರೆಸ್ಸಿನ ಒಂದು ಬಣಕ್ಕೆ ಸಿದ್ದರಾಮಯ್ಯರ ಮತ್ತೆ ಹಳೆಯ ಖದರು ಕಂಡು ತಳಮಳ ಶುರುವಾಗಿದೆ.
ಮಾನ ಹೋದ ಮೇಲೆ ಮರ್ಯಾದೆಗೆ ಅಂಜಿ ಪ್ರಯೋಜನವೇನು.? ರಾಜ್ಯದಲ್ಲಿ ಆಪರೇಷನ್ ಸ್ಟಿಂಗ್ ಷಡ್ಯಂತ್ರದಿಂದ ನನ್ನ ಇಮೇಜಿಗೆ ಧಕ್ಕೆ ಬಂದಿದ್ದು, ನನ್ನ ಚಾರಿತ್ರ್ಯ ಹರಣ ಮಾಡಲಾಗಿದೆ. ನೀವು ಹೇಳಿದಂತೆ ಕೇಳಿ ಅಧಿಕಾರ ಬಿಟ್ಟು ಕೊಟ್ಟಿದ್ದೇನೆ. ಆದರೆ ನನ್ನ ವಿರುದ್ಧವೇ ನಮ್ಮ ಪಕ್ಷದ ನಾಯಕರು ಸ್ಟಿಂಗ್ ಆಪರೇಶನ್ ಹರಿಯಬಿಟ್ಟು ನನ್ನ ಗೌರವಕ್ಕೆ ಧಕ್ಕೆ ತಂದಿದ್ದಾರೆ. ಇದರ ಹಿಂದೆ ಬೇರೆ ಯಾವುದೇ ಪಕ್ಷದ ನಾಯಕ ಇರುವುದಲ್ಲ. ನಮ್ಮದೇ ಪಕ್ಷದ ಆಳುವ ನಾಯಕನೇ ಇದರ ಸೂತ್ರಧಾರಿ. ನನ್ನ ಮೇಲೆ ಬಂದಿರುವ ಆರೋಪ ತೊಳೆದು ಹೋಗಬೇಕಾದರೆ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಆಗಲೇ ಬೇಕು. ಮತ್ತೆ ನಾನು ಮುಖ್ಯಮಂತ್ರಿ ಆಗಲೇಬೇಕು. ದೆಹಲಿಯಲ್ಲಿ ಹೈಕಮಾಂಡ್ ನಾಯಕರನ್ನು ಭೇಟಿಯಾಗಿ ಸಿದ್ದು ಬಿಟ್ಟ ಬಾಣಕ್ಕೆ ಕಾಂಗ್ರೆಸ್ ಹೈಕಮಾಂಡ್ ನಾಯಕರೇ ಬೆದರಿ ಬೆಂಡಾಗಿದ್ದಾರೆ.

ಆಪರೇಷನ್ ಸ್ಟಿಂಗ್ ಪ್ರಕರಣದ ತನಿಖೆಯನ್ನು ರಾಜ್ಯ ಸರಕಾರ ಹಳ್ಳ ಹಿಡಿಸಿದೆ. ಬೆಳಿಗ್ಗೆ ಆರೆಸ್ಟ್ ಮಾಡಿದರೆ ಸಂಜೆ ಬೇಲ್ ಸಿಗುತ್ತಿದೆ. ಇದರ ಹಿಂದಿರುವ ಪಿತಾಮಹರನ್ನು ಸ್ವತಹ ಸರಕಾರವೇ ರಕ್ಷಿಸುತ್ತಿದೆ. ನನಗೆ ಈ ಪರಿಸ್ಥಿತಿ ಆದರೆ, ಬೇರೆಯವರ ಪರಿಸ್ಥಿತಿ ಹೇಗಿರಬೇಡ.? ರಾಜ್ಯ ಕಾಂಗ್ರೆಸ್ ನಾಯಕರ ಆಸಲಿಯತ್ತನ್ನು ದೆಹಲಿ ಹೈಕಮಾಂಡ್ ನಾಯಕರಿಗೆ ಇಂಚಿಂಚೂ ಮಾಹಿತಿ ನೀಡಿದ್ದಾರೆ. ಸಿದ್ದರಾಮಯ್ಯ ಕ್ಷುದ್ರರಾಗಿರುವುದನ್ನು ಕಂಡು ರಾಹುಲ್ ಗಾಂಧಿಯೇ ಬೇಸ್ತು ಬಿದ್ದಿದ್ದಾರೆ.
ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಆಗಲೇಬೇಕು. ಆ ಜಾಗದಲ್ಲಿ ಮತ್ತೆ ನಾನೇ ಮುಖ್ಯಮಂತ್ರಿ ಆಗಬೇಕು. ಸಿದ್ದರಾಮಯ್ಯ ಹಠಕ್ಕೆ ಬಿದ್ದವರಂತೆ ಹೈಕಮಾಂಡ್ ಮುಂದೆ ಡಿಮ್ಯಾಂಡ್ ಇಟ್ಟಿರುವುದು ರಾಹುಲ್ ಗಾಂಧಿ ಆದಿಯಾಗಿ ಕಾಂಗ್ರೆಸ್ ಹೈ ನಾಯಕರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಸಿದ್ದರಾಮಯ್ಯ ಅವರನ್ನು ಸೈಡ್ ಲೈನಿಗೆ ತಂದರೆ ರಾಜ್ಯದಲ್ಲಿ ಪಕ್ಷಕ್ಕೆ ಉಳಿಗಾಲವಿಲ್ಲ ಅನ್ನುವುದು ಹೈಕಮಾಂಡ್ ಗೂ ತಿಳಿದ ವಿಷಯ. ದೆಹಲಿ ಕಾಂಗ್ರೆಸ್ ಗೆ ಎಟಿಎಂ ಕೇಂದ್ರವಾಗಿರುವ ಕರ್ನಾಟಕವನ್ನು ಅಷ್ಟೂ ಸುಲಭದಲ್ಲಿ ಬಿಟ್ಟು ಕೊಡಲು ದೆಹಲಿ ಹೈಕಮಾಂಡ್ ಗೂ ಇಷ್ಟವಿಲ್ಲ. ಈ ನಡುವೆ ದೆಹಲಿ ಹೈಕಮಾಂಡ್ ಮುಂದೆ ಕಡ್ಡಿ ಮುರಿದಂತೆ ಹೇಳಿದ ಸಿದ್ದರಾಮಯ್ಯ ಡಿಮ್ಯಾಂಡ್ ಕೇಳಿ ಹೈಕಮಾಂಡ್ ಗೂ ಕೈ ಕಟ್ಟಿ ಹಾಕಿದಂತಾಗಿದೆ. ಈಗಾಗಲೇ ನಡೆದ ವಿಧಾನಪರಿಷತ್ ಚುನಾವಣೆ ಫಲಿತಾಂಶದಲ್ಲಿ ಸಿದ್ಧು ಫ್ಯಾಕ್ಟರ್ ಕೆಲಸ ಮಾಡಿದ ಪರಿಣಾಮ ಕಾಂಗ್ರೆಸ್ ಶೂನ್ಯಕ್ಕೆ ಇಳಿದಿದೆ.
ಸಿದ್ದರಾಮಯ್ಯ ಹೈಕಮಾಂಡ್ ಮುಂದೆ ಇಟ್ಟಿರುವ ಡಿಮ್ಯಾಂಡ್ ಹಿಂದೆ ಅವರ ಇನ್ನೊಂದು ಮಾಸ್ಟರ್ ಸ್ಟ್ರೋಕ್ ಕೂಡ ಇದೆ ಅನ್ನುವ ಮಾತು ರಾಜ್ಯ ರಾಜಕಾರಣದಲ್ಲಿ ತೇಲಾಡುತ್ತಿದೆ. ಸಿದ್ದರಾಮಯ್ಯ ವಿರುದ್ಧ ಹನಿಟ್ರ್ಯಾಪ್ ಸುದ್ದಿ ಹೊರಬೀಳುತ್ತಿದ್ದಂತೆ ಆಲ್ಲಿಗೆ ಮಾಸ್ ಲೀಡರ್ ಸಿದ್ದರಾಮಯ್ಯ ಕಥೆ ಮುಗಿಯಿತು ಅಂದುಕೊಂಡವರೇ ಹೆಚ್ಚು. ಆದರೆ ಹಾಗಾಗಲೇ ಇಲ್ಲ. ಮತ್ತೆ ಸಿದ್ದರಾಮಯ್ಯ ಪುಟಿದು ಎದ್ದಿದ್ದಾರೆ. ಸಿಸಿಬಿ ಇದೊಂದು ಕಟ್ಟುಕತೆ ಎಂದೇಳಿ ಕ್ಲೀನ್ ಚಿಟ್ ಕೊಟ್ಟು ಬಿಟ್ಟಿತು. ಟಗರು ಮತ್ತೆ ಅಖಾಡಕ್ಕೆ ಇಳಿಯಲು ಶುರುವಿಟ್ಟುಕೊಂಡರು . ಮುಖ್ಯಮಂತ್ರಿ ಹುದ್ದೆ ತ್ಯಜಿಸಿ ಮೂಲೆ ಸೇರಿದ್ದ ಸಿದ್ದರಾಮಯ್ಯ ರಿಗೆ ಸ್ಟ್ರಿಂಗ್ ಆಪರೇಷನ್ ಅನುಕಂಪದ ದೊಡ್ಡ ಅಲೆಯನ್ನೇ ಸೃಷ್ಟಿಸಿತು. ಮತ್ತೆ ಕಾರ್ಯಕ್ರಮದಲ್ಲಿ ಸಿದ್ದು ಹಳೆಯ ಸ್ಟೈಲಿನಲ್ಲಿ ಗುಡುಗಲು ಆರಂಭಿಸಿದ್ದಾರೆ. ಸಿದ್ದರಾಮಯ್ಯ ಮೌನದಿಂದ ಇರಬಾರದು, ಮತ್ತೆ ಹಳೆ ಖದರಿಗೆ ಬರಬೇಕೆಂದು ಅವರ ಅಭಿಮಾನಿಗಳ ಆಸೆ ಕೂಡ ಹೌದು. ಇದೀಗ ಮತ್ತೆ ಸಿದ್ದು ಹಳೆ ಗೆಟಪ್ಪಿನಲ್ಲಿ ಕಾಣಿಸಿಕೊಂಡಿದ್ದಾರೆ. ಈ ನಡೆ ಡಿಕೆ ಪಾಳಯದಲ್ಲೂ ದೊಡ್ಡ ಕಂಪನಕ್ಕೆ ಕಾರಣವಾಗಿದೆ.

ಉಪಾಯ ಬಲ್ಲವನಿಗೆ ಅಪಾಯವಿಲ್ಲ. ಸಿದ್ದರಾಮಯ್ಯ ಅವರ ರಾಜಕೀಯ ತಂತ್ರಗಾರಿಕೆ ಸುಮ್ನೇನಾ.. ಸಿದ್ದರಾಮಯ್ಯ ಬಳಿ ಒಂದೇ ಕಲ್ಲಲ್ಲಿ ಎರಡು ಹಕ್ಕಿ ಹೊಡೆಯುವ ಪ್ಲ್ಯಾನ್. ಸಿದ್ದರಾಮಯ್ಯ ಪ್ರಪೋಸಲ್ ಏನೆಂದರೆ ನನ್ನ ಮೇಲೆ ಬಂದಿರುವ ಕಳಂಕ ತಪ್ಪಬೇಕಾದರೆ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಮಾಡಿ ಮತ್ತೆ ನನ್ನನ್ನು ಮುಖ್ಯಮಂತ್ರಿ ಮಾಡಿ. ನಾಯಕತ್ವ ಬದಲಾವಣೆ ಮಾಡಲು ತಮಗೆ ಕಷ್ಟ ಆದರೆ ಅಹಿಂದ ಸಮಾವೇಶ ಮಾಡಲು ಪರ್ಮೀಶನ್ ಕೊಡಿ. ರಾಜ್ಯದಾದ್ಯಂತ ಸುತ್ತಾಡಿ ಸಮುದಾಯವನ್ನು ಸಂಘಟಿಸುತ್ತೇನೆ. ಸಿದ್ದರಾಮಯ್ಯ ಪವರ್ ಗೇಮ್ ಕಂಡು ಖುದ್ದು ಹೈಕಮಾಂಡ್ ಬೇಸ್ತುಬಿದ್ದಿದೆ.
ಒಂದು ಗಾದೆ ಮಾತಿದೆ. ಅತ್ತ ದರಿ ಇತ್ತ ಪುಲಿ, ಗಂಟಲಲ್ಲಿ ಮುಳ್ಳು ಸಿಕ್ಕಿ ಹಾಕಿಕೊಂಡ ಆಗೆ. ಸಿದ್ದರಾಮಯ್ಯ ಡಿಮ್ಯಾಂಡ್ ಕಂಡು ಡಿಕೆಶಿ ಹಾಗೂ ಕಾಂಗ್ರೆಸ್ ಹೈಕಮಾಂಡ್ ಇಕ್ಕಟ್ಟಿಗೆ ಸಿಲುಕಿದಂತಾಗಿದೆ. ನಾಯಕತ್ವ ಬದಲಾವಣೆ ಮಾಡಿದರೆ ಡಿಕೆಶಿ ಬಣ ಉಲ್ಟಾ ಹೊಡೆದರೆ ಸರಕಾರವೇ ಉರುಳಿ ಬೀಳಬಹುದು, ಒಂದು ವೇಳೆ ಸಿದ್ದರಾಮಯ್ಯ ಅವರಿಗೆ ಹೈಕಮಾಂಡ್ ಅಹಿಂದ ಸಮಾವೇಶ ನಡೆಸಲು ಗ್ರೀನ್ ಸಿಗ್ನಲ್ ನೀಡಿದರೆ ರಾಜ್ಯದಲ್ಲಿ ಮತ್ತೊಂದು ಪವರ್ ಸೆಂಟರ್ ಸೃಷ್ಟಿಯಾಗಿ ಸರಕಾರಕ್ಕೆ ಕಂಟಕ ತರಬಹುದು. ಹೈಕಮಾಂಡ್ ಒಪ್ಪಿಗೆ ಸೂಚಿಸದೇ ಇದ್ದರೂ ಸಿದ್ದು ಅಹಿಂದ ಸಮಾವೇಶಕ್ಕೆ ಇಳಿದರೆ 2028 ರಲ್ಲಿ ರಾಜ್ಯ ಕಾಂಗ್ರೆಸ್ ಪರಿಸ್ಥಿತಿ ಏನು.? ಒಂದೊಮ್ಮೆ ಯಡಿಯೂರಪ್ಪ ಬಿಜೆಪಿ ವಿರುದ್ಧ ಸೆಟೆದು ನಿಂತು ಕೆಜೆಪಿ ಕಟ್ಟಿ ರಾಜ್ಯದಲ್ಲಿ ಬಿಜೆಪಿಗೆ ಸಮಾಧಿ ಕಟ್ಟಿದ್ದರು. ಯಡಿಯೂರಪ್ಪ ರಂತೆ ಸಿದ್ದರಾಮಯ್ಯ ಕೂಡ ಮಾಸ್ ಲೀಡರ್. ಅಹಿಂದ ವರ್ಗವೇ ಅವರ ಬೆನ್ನಿಗಿದೆ. ಇದೀಗ ಸಿದ್ದರಾಮಯ್ಯ ಅವರನ್ನು ಹೇಗೆ ಸಮಾಧಾನಪಡಿಸುವುದು ಅನ್ನುವ ಚಿಂತೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಇದೆ. ಸಿದ್ದರಾಮಯ್ಯ ಅವರನ್ನು ನೆಗ್ಲೆಕ್ಟ್ ಮಾಡಿದರೆ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಕತೆ ಗೋವಿಂದ.!
