ಮಂಗಳೂರಿನಲ್ಲಿ ‘ಪಬ್’ ಹಾವಳಿ.. ರಾತ್ರಿಯಿಡೀ ಮೋಜು ಮಸ್ತಿ, ನಂಗಾನಾಚ್.!

ಕರಾವಳಿ

ಇದು ಮಂಗಳೂರು. ಇಲ್ಲಿ ಏನುಂಟು ಏನಿಲ್ಲ.. ಸ್ಮಾರ್ಟ್ ಸಿಟಿ ಅನ್ನುವ ಅನ್ವರ್ಥ ನಾಮದ ಜೊತೆಗೆ ಮೋಜು ಮಸ್ತಿಗೆ ಓಪನ್ ಆಗಿ ಅನುಮತಿ ಇರುವ ನಗರ ಬುದ್ಧಿವಂತರ ಜಿಲ್ಲೆ ಮಂಗಳೂರು. ಈ ಹಿಂದೆ ನಾಯಿಕೊಡೆಗಳಂತೆ ತಲೆ ಎತ್ತಿ ನಿಂತಿದ್ದ ಪಬ್ ಅನ್ನು ಕೆಲವೊಂದು ದಕ್ಷ ಪೊಲೀಸ್ ಅಧಿಕಾರಿಗಳ ಪರಿಶ್ರಮದಿಂದ ಹತೋಟಿಗೆ ತಂದಿದ್ದರು. ಆದರೆ ಇದೀಗ ಎಲ್ಲವೂ ಖುಲ್ಲಾಂ ಖುಲ್ಲಾ. ಹೇಳುವವರು ಇಲ್ಲ, ಕೇಳುವವರು ಇಲ್ಲ. ರಾತ್ರಿಯಿಡೀ ಯಾವುದೇ ನಿರ್ಭಯ ಇಲ್ಲದೆ ಪಬ್ ನಲ್ಲಿ ಜಾಗರಣೆ ನಡೆಯುತ್ತಿದೆ.

ವಿಚಿತ್ರ ಅಂದರೆ ಯಾವುದೇ ಧಾರ್ಮಿಕ ಅಥವಾ ಸಾಮಾಜಿಕ ಕಾರ್ಯಕ್ರಮಕ್ಕೆ ಅನುಮತಿ ಪಡೆಯಲು ಪೊಲೀಸ್ ಆಯುಕ್ತರ ಕಚೇರಿಗೆ ತೆರಳಿದರೆ ರಾತ್ರಿ 10 ಗಂಟೆಗೆ ಕಾರ್ಯಕ್ರಮ ಮುಗಿಸಬೇಕು. ಇಲ್ಲವಾದರೆ ಆಯೋಜಕರ ಮೇಲೆ ಕ್ರಮ ತೆಗೆದುಕೊಳ್ಳಲಾಗುವುದು ಅನ್ನುವ ನಿಯಮವುಳ್ಳ ಪುಟಗಳಷ್ಟು ಇರುವ ಹಿಂಬರಹ ಆಯೋಜಕರಿಗೆ ಬರುತ್ತದೆ. ಒಂದು ಒಳ್ಳೆಯ, ಸಮಾಜಮುಖಿ ಕಾರ್ಯಕ್ರಮಕ್ಕೂ ಪೊಲೀಸರ ಇಂತಿಷ್ಟು ಸಮಯದೊಳಗೆ ಮುಗಿಸಬೇಕು ಅನ್ನುವ ನಿಬಂಧನೆಗಳನ್ನು ಸಾರ್ವಜನಿಕರಿಗೆ ಹೇರುತ್ತಾರೆ. ಕಾನೂನು ಎಲ್ಲರಿಗೂ ಒಂದೇ ಅಲ್ವಾ? ರಾತ್ರಿ 10 ಗಂಟೆಗೆ ಬಂದ್ ಮಾಡಬೇಕಾದ ಪಬ್ ಗಳು ಮಧ್ಯರಾತ್ರಿ ಅಥವಾ ಇಡೀ ರಾತ್ರಿ ತೆರೆದುಕೊಂಡು ಖುಲ್ಲಾಂ ಖುಲ್ಲಾ ಮೋಜು ಮಸ್ತಿ ಯಲ್ಲಿ ತೊಡಗಿಕೊಂಡಿದ್ದರೂ ಪೊಲೀಸ್ ಇಲಾಖೆ ಮೌನಕ್ಕೆ ಜಾರಿರುವ ಹಿಂದಿನ ಮರ್ಮವೇನು? ಅಂದಾಜು ಮಂಗಳೂರು ನಗರದಲ್ಲೇ 20 ಕ್ಕೂ ಅಧಿಕ ಪಬ್ ಗಳು ಕಾರ್ಯಾಚರಿಸುತ್ತಿದೆಯಂತೆ. ಹೊರಗಿನವರಿಗೆ ಗೊತ್ತಾಗದಂತೆ ಕಳ್ಳ ಹೆಜ್ಜೆಯಲ್ಲಿ ಯುವಕ-ಯುವತಿಯರು ತೆರಳಿ ತಡರಾತ್ರಿಯವರೆಗೂ ಮೋಜು ಮಸ್ತಿಯಲ್ಲಿ ಮುಳುಗಿರುತ್ತಾರೆ. ಬಹುತೇಕ ಕಾಲೇಜು ವಿದ್ಯಾರ್ಥಿ-ವಿದ್ಯಾರ್ಥಿನಿಯರು ಅರ್ಧಂಬರ್ಧ ಡ್ರೆಸ್ ಹಾಕಿಕೊಂಡು ಮಧ್ಯರಾತ್ರಿವರೆಗೂ ಡಿಜೆ ಮ್ಯೂಸಿಕ್ ಸೌಂಡ್ ಪ್ಲೇ ಮಾಡಿ ಕುಡಿದು ತೂರಾಡುತ್ತಾ ಹೆಜ್ಜೆ ಹಾಕುತ್ತಿರುವುದು ಮಾಮೂಲಿಯಾಗಿದೆ. ಆ ಬಳಿಕ ಅಲ್ಲಿ ಏನು ನಡೆಯುತ್ತದೆ ಅನ್ನುವುದು ಕೂಡ ನಿಗೂಢವಾಗಿದೆ.

ಈ ರೀತಿ ನಂಗಾನಾಚ್ ನಡೆಸಲು ಪಬ್ ಗೆ ಅನುಮತಿ ಇದೆಯಾ? ಬಾರ್ ನಂತೆ ಬಂದ ಗ್ರಾಹಕರಿಗೆ ಬೇಕಾದ್ದನ್ನು ನೀಡಿ ಕುಡಿದು ಕಳುಹಿಸಿಕೊಡಲು ಅಷ್ಟೇ. ಅದು ಇಂತಿಷ್ಟು ಸಮಯದೊಳಗೆ ಮಾತ್ರ ಸಮಯವಿರುವುದು. ಆದರೆ ಪಬ್ ನಡೆಸುವವರಿಗೆ ರಾಜಕಾರಣಿಗಳ, ಪ್ರಭಾವೀಗಳ ಕೃಪಾಕಟಾಕ್ಷ ಇರುವುದರಿಂದ, ಪೊಲೀಸ್ ಇಲಾಖೆಗೆ ‘ಮಂತ್ಲಿ ಮಾಮೂಲು’ ಹೋಗುವುದರಿಂದ ಪಬ್ ಆಡಿದ್ದೇ ಆಟ ಅನ್ನುವಂತಾಗಿದೆ. ಮಂಗಳೂರಿನ ಹಂಪನಕಟ್ಟೆ, ಬಲ್ಮಠ, ಜ್ಯೋತಿ, ಕಂಕನಾಡಿ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಹಾಗೂ ಕಾಲೇಜು ಇರುವ ಸ್ಥಳಗಳಲ್ಲೇ ಹೆಚ್ಚಾಗಿ ಪಬ್ ಗಳು ಬಾಗಿಲು ತೆರೆದಿರುವುದರಿಂದ ಇವರ ವ್ಯವಹಾರ ಎಲ್ಲವೂ ಸಲೀಸಾಗಿಯೇ ನಡೆಯುತ್ತದೆ. ಬಹುತೇಕ ಪಬ್ ಗಳು ಅಕ್ರಮವಾಗಿ ಯಾವುದೇ ಅನುಮತಿ ಪಡೆಯದೇ ತಡರಾತ್ರಿಯವರೆಗೂ ಕಾರ್ಯಾಚರಿಸುತ್ತಿದೆ. ಯುವಕ ಯುವತಿಯರು ನಶೆಯ ದಾಸರಾಗಿ ಪರಿವರ್ತನೆಗೊಂಡಿದ್ದಾರೆ. ಕುಡಿಯಲು, ಕುಣಿಯಲು ಮಾತ್ರವಲ್ಲ ಬೇರೆಯದ್ದೇ ರೀತಿಯ ವ್ಯವಸ್ಥೆಗಳು ಕೂಡ ಪಬ್ ಒಳಗೆ ನಡೆಯುತ್ತಿರುತ್ತದೆ.

ಈಗಿನ ಸಂದರ್ಭದಲ್ಲಿ ವ್ಯವಸ್ಥೆಯನ್ನು ಮಂಗ ಮಾಡುವುದು ಎಷ್ಟು ಸುಲಭ ಅನ್ನುವುದಕ್ಕೆ ಪಬ್ ನಲ್ಲಿ ನಡೆಯುವ ಇದೊಂದು ಘಟನೆಯೇ ಸಾಕ್ಷಿ. ಪಬ್ ಒಳಗೆ ಹೋಗುವ ಮುಂಚೆ ದೇಹದಾರ್ಢ್ಯ ಹೊಂದಿರುವ, ಸಫಾರಿ ಡ್ರೆಸ್ ಹಾಕಿಕೊಂಡಿರುವ ವ್ಯಕ್ತಿಗಳು ದೇಶಸೇವೆ ಮಾಡುವ ರೀತಿಯಲ್ಲಿ ಬರುವ ಯುವಕ, ಯುವತಿಯರನ್ನು ತಪಾಸಣೆ ಮಾಡಿ ಒಳಗೆ ಕಳುಹಿಸುತ್ತಾರೆ. ಆದರೆ ಒಳಗಡೆ ಎಲ್ಲ ರೀತಿಯ ಅಮಲು ಪದಾರ್ಥಗಳು ಯುವಕ ಯುವತಿಯರ ಕೈಗೆ ಸುಲಭವಾಗಿ ಸಿಗುತ್ತದೆ. ಮತ್ತೆ ಯಾವ ಪುರುಷಾರ್ಥಕ್ಕೆ ಇವರ ತಪಾಸಣೆ.?

ಪಬ್ ಗಳ ಹಾವಳಿ ಮಂಗಳೂರಿಗೆ ಕೆಟ್ಟ ಹೆಸರು ತರುತ್ತಿದೆ. ಮತೀಯ ಸಂಘಟನೆಗಳು ಪಬ್ ಮೇಲೆ ದಾಳಿ ಮಾಡಿದಾಗ ಎಚ್ಚೆತ್ತುಕೊಳ್ಳುವ ಪೊಲೀಸ್ ಅಧಿಕಾರಿಗಳು, ಅದರ ಮೊದಲು ಮೋಜು ಮಸ್ತಿ, ನಂಗಾನಾಚ್ ಪಬ್ ನಲ್ಲಿ ನಡೆಯುತ್ತಿದ್ದರೂ ಯಾವುದೇ ಕ್ರಮಕ್ಕೆ ಮುಂದಾಗುತ್ತಿಲ್ಲ. ಇನ್ನಾದರೂ ಪೊಲೀಸ್ ಇಲಾಖೆ ಈ ಬಗ್ಗೆ ಕಠಿಣ ಕ್ರಮ ತೆಗೆದುಕೊಂಡು ಬುದ್ದಿವಂತರ ಜಿಲ್ಲೆಯ ಮಂಗಳೂರಿನ ಮಾನ ಬೀದಿಯಲ್ಲಿ ಹರಾಜಾಗುವುದನ್ನು ತಪ್ಪಿಸಬೇಕಿದೆ.