ಒಬ್ಬ ವ್ಯಕ್ತಿಯ ನಿಜವಾದ ಶ್ರೀಮಂತಿಕೆ ಆತನ ಬಳಿ ಇರುವ ಹಣ, ಆಸ್ತಿ ಅಥವಾ ಸಂಪತ್ತಿನಿಂದ ಅಳೆಯಲ್ಪಡುವುದಿಲ್ಲ. ಬದಲಾಗಿ, ಆತ ಎಷ್ಟು ಜನರ ಬದುಕಿಗೆ ನೆರವಾಗಿದ್ದಾನೆ, ಎಷ್ಟು ಜನರ ಕಷ್ಟಕ್ಕೆ ಸ್ಪಂದಿಸಿದ್ದಾನೆ ಮತ್ತು ಎಷ್ಟು ಜನರ ಮನಸ್ಸಿನಲ್ಲಿ ಒಳ್ಳೆಯ ಸ್ಥಾನ ಸಂಪಾದಿಸಿದ್ದಾನೆ ಎಂಬುದರ ಮೇಲೆ ಅಳೆಯಲ್ಪಡುತ್ತದೆ.
ಈ ಮಾತಿಗೆ ಉತ್ತಮ ಉದಾಹರಣೆಯೇ ಉಸ್ಮಾನ್ ರೈನ್ಬೋ ಅವರು. ಉಸ್ಮಾನ್ ಅವರು ಒಬ್ಬ ಯಶಸ್ವಿ ಉದ್ಯಮಿಯಾಗಿದ್ದು, ಹಳೆಯ ಆಂಟಿಕ್ ಮನೆಗಳ ಸಂರಕ್ಷಣೆ, ಅವುಗಳ ಮರುರೂಪಿಸುವಿಕೆ ಹಾಗೂ ಹಳೆಯ ಕಾಲದ ವೈಶಿಷ್ಟ್ಯವನ್ನು ಉಳಿಸಿಕೊಂಡಿರುವ ಪೀಠೋಪಕರಣಗಳ ಖರೀದಿ ಮತ್ತು ಮಾರಾಟದ ಮೂಲಕ ತಮ್ಮದೇ ಆದ ವೃತ್ತಿಪರ ಗುರುತನ್ನು ಬೆಳೆಸಿಕೊಂಡಿದ್ದಾರೆ. ಗುರುಪುರ ಕೈಕಂಬ ದ್ವಾರದ ಬಳಿ ಅವರ ಹಳೆಯ ಪೀಠೋಪಕರಣಗಳ ಸಂಗ್ರಹ ಇದಕ್ಕೊಂದು ಜ್ವಲಂತ ಸಾಕ್ಷಿ.
ಹಳೆಯ ಮನೆಗಳ ಸೌಂದರ್ಯ, ಪಾರಂಪರಿಕ ವಾಸ್ತುಶಿಲ್ಪ ಹಾಗೂ ಹಳೆಯ ಪೀಠೋಪಕರಣಗಳ ಮೌಲ್ಯವನ್ನು ಗುರುತಿಸಿ, ಅವುಗಳಿಗೆ ಹೊಸ ಜೀವ ನೀಡುವ ಅವರ ಕೆಲಸ ನಿಜಕ್ಕೂ ವಿಶೇಷವಾದದ್ದು. ವ್ಯಾಪಾರದಲ್ಲಿ ಯಶಸ್ಸು ಸಾಧಿಸುವುದರ ಜೊತೆಗೆ ತಮ್ಮದೇ ಆದ ಪರಿಶ್ರಮ ಮತ್ತು ಪ್ರತಿಭೆಯಿಂದ ಗುರುತಿಸಿಕೊಂಡಿರುವುದು ಶ್ಲಾಘನೀಯ. ಅನೇಕ ಪ್ರಮುಖ ಉದ್ಯಮಿಗಳು, ರಾಜಕಾರಣಿಗಳ ಮನೆಗೆ ಹೊಸ ಮೆರುಗನ್ನು ನೀಡಿರುವುದು ಇವರ ಹೆಗ್ಗಳಿಕೆ. ರಾಜ್ಯಮಟ್ಟದ ಅನೇಕ ಪ್ರಮುಖ ರಾಜಕಾರಣಿಗಳ ಆಪ್ತ ಒಡನಾಟ ಇವರಿಗಿದೆ. ಬೇರೆಯವರಂತೆ ಇವರು ಅದನ್ನು ತೋರ್ಪಡಿಸುತ್ತಿಲ್ಲ ಅಷ್ಟೇ.

ಯಶಸ್ವಿ ಉದ್ಯಮಿಯಾಗಿದ್ದರೂ ಅವರಲ್ಲಿ ಮಾನವೀಯ ಕಳಕಳಿ ಇನ್ನು ಜೀವಂತವಾಗಿದೆ. ರಸ್ತೆ ಅಪಘಾತಗಳು ಸಂಭವಿಸಿದಾಗ ಗಾಯಗೊಂಡವರನ್ನು ಕಂಡು ಸುಮ್ಮನೆ ಮುಂದೆ ಸಾಗುವವರೇ ಹೆಚ್ಚಾಗಿರುವ ಈ ಕಾಲದಲ್ಲಿ, ಅಪಘಾತಕ್ಕೊಳಗಾದವರಿಗೆ ತಕ್ಷಣ ನೆರವಿನ ಹಸ್ತ ಚಾಚಿ, ಅವರನ್ನು ಆಸ್ಪತ್ರೆಗೆ ತಲುಪಿಸುವ ಮಹಾನ್ ಕಾರ್ಯ ಈಗಲೂ ಮಾಡುತ್ತಿದ್ದಾರೆ. ಮಸೀದಿ, ದೇವಸ್ಥಾನ ಹಾಗೂ ಚರ್ಚ್ಗಳ ಅಭಿವೃದ್ಧಿ ಮತ್ತು ವಿವಿಧ ಧಾರ್ಮಿಕ ಕಾರ್ಯಗಳಿಗೆ ತಮ್ಮ ಕೈಲಾದ ಸಹಾಯವನ್ನು ನೀಡುವ ಮೂಲಕ, ಸರ್ವಧರ್ಮಗಳ ಗೌರವ ಮತ್ತು ಸಮಾಜದ ಸಾಮರಸ್ಯಕ್ಕೆ ಮಹತ್ವ ನೀಡುತ್ತಿದ್ದಾರೆ.
ಬಡ ಹೆಣ್ಣುಮಕ್ಕಳ ವಿವಾಹಕ್ಕೆ ನೆರವಿನ ಹಸ್ತ ಚಾಚುವ ಮೂಲಕ, ಅವರ ಕನಸುಗಳಿಗೆ ಬೆಂಬಲವಾಗಿ ನಿಂತು ಕುಟುಂಬಗಳ ಸಂತೋಷಕ್ಕೆ ಕಾರಣರಾಗುತ್ತಿದ್ದಾರೆ.
ಉಸ್ಮಾನ್ ಅವರಂತಹ ವ್ಯಕ್ತಿಗಳು ನಮಗೆ ಒಂದು ಮಹತ್ವದ ಸಂದೇಶವನ್ನು ನೀಡುತ್ತಾರೆ. ಜೀವನದಲ್ಲಿ ಎಷ್ಟೇ ಎತ್ತರಕ್ಕೆ ಬೆಳೆದರೂ ನಮ್ಮೊಳಗಿನ ಮಾನವೀಯತೆ ಎಂದಿಗೂ ಕಡಿಮೆಯಾಗಬಾರದು.
ಒಬ್ಬ ಉದ್ಯಮಿಯಾಗಿ ತಮ್ಮ ವೃತ್ತಿಯಲ್ಲಿ ಯಶಸ್ಸು ಸಾಧಿಸುವುದು ಒಂದು ಸಾಧನೆಯಾದರೆ, ಅದೇ ಸಮಯದಲ್ಲಿ ಸಮಾಜದ ಕಷ್ಟಗಳಿಗೆ ಸ್ಪಂದಿಸುವ ಒಳ್ಳೆಯ ಮನಸ್ಸನ್ನು ಉಳಿಸಿಕೊಂಡಿರುವುದು ಅದಕ್ಕಿಂತಲೂ ದೊಡ್ಡ ಸಾಧನೆ. ಇವರ ಇಂತಹ ಗುಣಗಳೇ ಅವರಿಗೆ ಶ್ರೀರಕ್ಷೆ. ಕನ್ನಡ ರಾಜ್ಯೋತ್ಸವದ ಅಂಗವಾಗಿ ದಕ್ಷಿಣ ಕನ್ನಡ ಜಿಲ್ಲಾ ವತಿಯಿಂದ ನೀಡಲ್ಪಡುವ 2026 ರ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗೆ ಅವರು ಭಾಜನರಾಗಿದ್ದಾರೆ.
