ಮಂಗಳೂರು ಹೊರವಲಯದ ನೀರುಮಾರ್ಗ ಜಿ.ಆರ್ ಮೆಡಿಕಲ್ ಕಾಲೇಜು ಮಾನ್ಯತಾ ಪತ್ರವನ್ನು ನಕಲು ಮಾಡಿದ್ದು, ಇದರ ಬಗ್ಗೆ ಎಚ್ಚರ ವಹಿಸುವಂತೆ ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್ ಎಂ ಸಿ) ಸಾರ್ವಜನಿಕರಿಗೆ ಸೂಚಿಸಿದೆ.
ಎನ್ ಎಂ ಸಿ ಬಿಡುಗಡೆ ಮಾಡಿರುವ ಸಾರ್ವಜನಿಕ ನೋಟಿಸ್ ನಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ್ದು, ಜಿ ಆರ್ ಮೆಡಿಕಲ್ ಕಾಲೇಜು ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರವು 2ನೇ ಬ್ಯಾಚ್ (1ನೇ ನವೀಕರಣ) ಪ್ರಮಾಣ ಪತ್ರವನ್ನು ಎನ್ ಎಂ ಸಿ ನೀಡಿರುವುದಾಗಿ ಘೋಷಿಸಿದ್ದು, ಇದು ನಕಲಿ ಪತ್ರವಾಗಿದೆ. ಇದರ ಬಗ್ಗೆ ಎಚ್ಚರ ಸಾರ್ವಜನಿಕರು ಎಚ್ಚರ ವಹಿಸುವಂತೆ ತಿಳುವಳಿಕೆ ನೀಡಲಾಗಿದೆ.
ಎನ್ ಎಂ ಸಿ ಯ ವೈದ್ಯಕೀಯ ಮೌಲ್ಯಾಂಕನ ಮತ್ತು ಶ್ರೇಯಾಂಕ ಮಂಡಳಿ (ಎಂ ಎಆರ್ ಬಿ) ಸೆಪ್ಟೆಂಬರ್ 13 ರಂದು ಜಿ ಆರ್ ಮೆಡಿಕಲ್ ಕಾಲೇಜಿಗೆ ಮಾನ್ಯತೆ ನೀಡಿದೆ ಎಂದು ಪತ್ರದಲ್ಲಿದೆ. ಆದರೆ ಈ ಮಾನ್ಯತಾ ಪತ್ರವನ್ನು ಎಂ ಎ ಆರ್ ಬಿ ನೀಡಿಲ್ಲ. ಇದು ನಕಲಿ. ಈ ಹಿನ್ನೆಲೆಯಲ್ಲಿ ಈ ವಿಚಾರವನ್ನು ಸಾರ್ವಜನಿಕರ ಗಮನಕ್ಕೆ ತರುತ್ತಿದ್ದು, ನಕಲಿ ಪ್ರಮಾಣ ಪತ್ರ ಸೃಷ್ಟಿಸಿರುವ ಆರೋಪದ ಮೇಲೆ ಕಾನೂನು ಕ್ರಮ ಜರುಗಿಸಲಾಗುವುದು ಎನ್ ಎಂ ಸಿ ಹೊರಡಿಸಿರುವ ನೋಟಿಸ್ ನಲ್ಲಿ ತಿಳಿಸಿದೆ.

2021-22 ರಲ್ಲಿ ಎಂ ಎ ಆರ್ ಬಿ ಈ ಕಾಲೇಜಿಗೆ 150 ಸೀಟುಗಳ ಭರ್ತಿಗೆ ಮಾನ್ಯತೆ ನೀಡಿತ್ತು. ಆದರೆ ಅಗತ್ಯ ಮೂಲ ಸೌಕರ್ಯ ಕೊರತೆ ಹಿನ್ನೆಲೆಯಲ್ಲಿ 2022-23 ನೇ ಸಾಲಿನಲ್ಲಿ 2ನೇ ಬ್ಯಾಚ್ ಪ್ರವೇಶಕ್ಕೆ ಅನುಮತಿ ನಿರಾಕರಿಸಿತ್ತು. ಆದರೆ ಕಾಲೇಜು ಆಡಳಿತ ಮಂಡಳಿ ಇದನ್ನು ಗಣನೆಗೆ ತೆಗೆದುಕೊಳ್ಳದೆ ವಿದ್ಯಾರ್ಥಿಗಳಿಂದ ಲಕ್ಷಾಂತರ ರೂಪಾಯಿ ಡೊನೇಷನ್ ಪಡೆದು ಅನುಮತಿ ಇಲ್ಲದೆ ಸೀಟು ನೀಡಿತ್ತು. ಕಾಲೇಜು ಆಡಳಿತ ಮಂಡಳಿಯ ಬೇಜವಾಬ್ದಾರಿತನಕ್ಕೆ ಬೇಸತ್ತು ವಿದ್ಯಾರ್ಥಿಗಳು ಹಾಗೂ ಪೋಷಕರು ಪ್ರತಿಭಟನೆ ನಡೆಸಿದ್ದರು ಮಾತ್ರವಲ್ಲ ಹೈಕೋರ್ಟ್ ಮೆಟ್ಟಿಲೇರಿದ್ದರು.