ಎಸ್ ಐ ಆರ್ ಕಿತಾಪತಿ: ಮುಸ್ಲಿಂ ಬಾಹುಳ್ಯ ಕ್ಷೇತ್ರಗಳಲ್ಲಿ ಭರ್ಜರಿ ವೋಟ್ ಡಿಲೀಟ್; ಮುಸ್ಲಿಂ ಶಾಸಕರ ಸಂಖ್ಯೆಗೆ ಬೀಳುತ್ತಾ ಕತ್ತರಿ.!

ರಾಜ್ಯ

SIR ನಂತರ ಮುಸ್ಲಿಂ ಮತದಾರರ ಸಂಖ್ಯೆ ಗಣನೀಯ ಇಳಿಕೆ; ಯಾರಿಗೆ ಸಿಹಿ.? ಯಾರಿಗೆ ಕಹಿ.?

ದೇಶದಾದ್ಯಂತ ಭಾರೀ ವಿವಾದವನ್ನೇ ಸೃಷ್ಟಿಸಿದ ಎಸ್ ಐ ಆರ್ (ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ) ರಾಜ್ಯದಲ್ಲಿ ಹಲವು ಸಂದೇಹಕ್ಕೆ ಕಾರಣವಾಗಿದೆ. ಎಸ್ ಐ ಆರ್ ಪ್ರಕ್ರಿಯೆಯಲ್ಲಿ ಇಡೀ ದೇಶಕ್ಕೆ ಹೋಲಿಸಿದರೆ ಕರ್ನಾಟಕ ರಾಜ್ಯದಲ್ಲಿ ಅತಿ ಹೆಚ್ಚು ವೋಟ್ ಡಿಲೀಟ್ ಆಗಿರುವುದು ಅಂಕಿ ಅಂಶಗಳಿಂದ ತಿಳಿದು ಬರುತ್ತಿದೆ. ರಾಜ್ಯದಲ್ಲಿ ಎಸ್ ಐ ಆರ್ ಪ್ರಕ್ರಿಯೆ ಮುಗಿದಿದೆ. ಆದರೆ ಅದು ಮುಂದಿನ ಚುನಾವಣೆಯಲ್ಲಿ ದೊಡ್ಡ ಪೆಟ್ಟು ಯಾವ ಪಕ್ಷಕ್ಕೆ ಕೊಡಲಿದೆ ಅನ್ನುವ ವಿಶ್ಲೇಷಣೆ ಈಗ ಜೋರಾಗಿ ನಡೆಯುತ್ತಿದೆ.

ರಾಜ್ಯದಲ್ಲಿ SIR ಬಳಿಕ ಮುಸ್ಲಿಂ ಮತದಾರರ ಸಂಖ್ಯೆಯಲ್ಲಿ ಇತರ ಸಮುದಾಯಗಳಿಗೆ ಹೋಲಿಸಿದರೆ ಹೆಚ್ಚಿನ ಪ್ರಮಾಣದ ಇಳಿಕೆ ಕಂಡುಬಂದಿದೆ. ಬೆಂಗಳೂರನ್ನು ಹೊರತುಪಡಿಸಿ ರಾಜ್ಯದ 196 ವಿಧಾನಸಭಾ ಕ್ಷೇತ್ರಗಳಲ್ಲಿ ಮುಸ್ಲಿಂ ಮತದಾರರ ಸಂಖ್ಯೆ ಶೇ.15.32ರಷ್ಟು ಕುಸಿದಿದ್ದರೆ, ಮುಸ್ಲಿಮೇತರ ಮತದಾರರ ಸಂಖ್ಯೆ ಶೇ.12.18ರಷ್ಟು ಕಡಿಮೆಯಾಗಿದೆ ಎಂದು ಖಾಸಗಿ ಸಂಸ್ಥೆಯೊಂದು ನಡೆಸಿದ ಸರ್ವೇಯಲ್ಲಿ ಬಹಿರಂಗವಾಗಿದೆ. ಇದು ಜಾತ್ಯತೀತ ಪಕ್ಷಕ್ಕೆ ಮುಂದಿನ ಚುನಾವಣೆಯಲ್ಲಿ ದೊಡ್ಡ ಹೊಡೆತ ನೀಡುವ ಸಾಧ್ಯತೆ ಇದೆ ಅನ್ನುವ ವಿಶ್ಲೇಷಣೆ ಆರಂಭವಾಗಿದೆ.

ಎಸ್ ಐ ಆರ್ ಪರಿಷ್ಕರಣೆಗೂ ಮುನ್ನ 196 ಕ್ಷೇತ್ರಗಳಲ್ಲಿ 57.89 ಲಕ್ಷ ಮುಸ್ಲಿಂ ಮತದಾರರಿದ್ದರು. ಪರಿಷ್ಕರಣೆಯ ನಂತರ ಈ ಸಂಖ್ಯೆ 49.02 ಲಕ್ಷಕ್ಕೆ ಕುಸಿದಿದೆ. ಅಂದರೆ ಸುಮಾರು 8.87 ಲಕ್ಷ ಹೆಸರುಗಳು ಮತದಾರರ ಪಟ್ಟಿಯಿಂದ ಡಿಲೀಟ್ ಆಗಿದೆ. ಇದೇ ಅವಧಿಯಲ್ಲಿ ಮುಸ್ಲಿಮೇತರ ಮತದಾರರ ಸಂಖ್ಯೆ 3.94 ಕೋಟಿಯಿಂದ 3.46 ಕೋಟಿಗೆ ಇಳಿಕೆಯಾಗಿದೆ.

ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳಲ್ಲಿ ಮುಸ್ಲಿಂ ಮತದಾರರಿಗಿಂತ ಮುಸ್ಲಿಮೇತರ ಮತದಾರರ ಸಂಖ್ಯೆ ಹೆಚ್ಚು ಡಿಲೀಟ್ ಆಗಿದೆ. ಮುಸ್ಲಿಮೇತರ ಮತದಾರರ ಸಂಖ್ಯೆ ಶೇ.43.82ರಷ್ಟು ಕುಸಿದಿದ್ದರೆ, ಮುಸ್ಲಿಂ ಮತದಾರರ ಸಂಖ್ಯೆ ಶೇ.33.72ರಷ್ಟು ಕಡಿಮೆಯಾಗಿದೆ. ಬೆಂಗಳೂರಿನಲ್ಲಿ ವಿದೇಶಗಳಲ್ಲಿ ನೆಲೆಸಿರುವವರು ಹಾಗೂ ವಲಸಿಗರ ಸಂಖ್ಯೆ ಹೆಚ್ಚಿರುವುದು ಇದಕ್ಕೆ ಕಾರಣ ಅನ್ನಲಾಗಿದೆ. ತಮ್ಮ ಊರುಗಳಲ್ಲಿ ಹಾಗೂ ತಾವು ಕೆಲಸ ಮಾಡುವ ಸ್ಥಳಗಳಲ್ಲಿ ಎರಡೂ ಕಡೆಗಳಲ್ಲಿ ಮತ ಚಲಾಯಿಸುವ ಹೆಸರುಗಳು ಸೇರಿರುವುದರಿಂದ ಇಲ್ಲಿ ಹೆಚ್ಚಿನ ಪ್ರಮಾಣದ ಹೆಸರುಗಳು ಅಳಿಸುವಿಕೆ ಸಂಭವಿಸಿದೆ ಎನ್ನಲಾಗಿದೆ.

ರಾಜ್ಯದ ಒಟ್ಟಾರೆ ಲೆಕ್ಕಾಚಾರದಲ್ಲಿ ಮುಸ್ಲಿಂ ಮತದಾರರ ಸಂಖ್ಯೆ ಶೇ.18.84ರಷ್ಟು, ಅಂದರೆ 13.48 ಲಕ್ಷದಷ್ಟು ಕಡಿಮೆಯಾಗಿದೆ.

ಇನ್ನು ಮುಸ್ಲಿಂ ಶಾಸಕರು ಪ್ರತಿನಿಧಿಸುವ 10 ಕ್ಷೇತ್ರಗಳಲ್ಲಿ ಪರಿಷ್ಕರಣೆಗೂ ಮುನ್ನ 9.62 ಲಕ್ಷ ಮುಸ್ಲಿಂ ಮತದಾರರಿದ್ದು, ಇದೀಗ ಅದು 7.52 ಲಕ್ಷಕ್ಕೆ ಇಳಿದಿದೆ. ಇಲ್ಲಿ ಶೇ.21.8ರಷ್ಟು ಇಳಿಕೆ ದಾಖಲಾಗಿದೆ. ರಾಜ್ಯದಲ್ಲಿ ಜಮೀರ್ ಅಹಮದ್ ಶಾಸಕರಾಗಿರುವ ಚಾಮರಾಜಪೇಟೆ, ಯುಟಿ ಖಾದರ್ ಪ್ರತಿನಿಧಿಸುವ ಮಂಗಳೂರು (ಉಳ್ಳಾಲ) ಸೇರಿದಂತೆ ಮೈಸೂರಿನ ನರಸಿಂಹರಾಜ, ಶಿವಾಜಿನಗರ, ಬೆಳಗಾವಿ ಉತ್ತರ, ಗುಲ್ಬರ್ಗ ಉತ್ತರ, ರಾಮನಗರ, ಶಾಂತಿನಗರ, ಬೀದರ್, ಶಿಗ್ಗಾಂವಿ ವಿಧಾನಸಭಾ ಕ್ಷೇತ್ರಗಳಲ್ಲಿ ಮುಸ್ಲಿಂ ಮತದಾರರೇ ಮೆಜಾರಿಟಿ. ಈ ವಿಧಾನಸಭಾ ಕ್ಷೇತ್ರಗಳಲ್ಲಿ ಮುಸ್ಲಿಂ ಶಾಸಕರೇ ಫಿಕ್ಸೆಡ್. ಆದರೆ ಎಸ್ ಐ ಆರ್ ಪ್ರಕ್ರಿಯೆ ನಂತರ ಈ ವಿಧಾನ ಸಭಾ ಕ್ಷೇತ್ರಗಳಲ್ಲಿ ಮುಸ್ಲಿಂ ಮತದಾರರ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದ್ದು, ಮುಂದಿನ ಚುನಾವಣೆಯಲ್ಲಿ ದಶಕಗಳಿಂದ ಗೆದ್ದು ಬರುತ್ತಿದ್ದ ಮುಸ್ಲಿಂ ಶಾಸಕರಿಗೆ ದೊಡ್ಡ ಅಗ್ನಿಪರೀಕ್ಷೆ ಎದುರಾಗಿದೆ. ರಾಜ್ಯದಾದ್ಯಂತ ಮುಸ್ಲಿಂ ಮತದಾರರು ಬೇರೆ ಪರ್ಯಾಯ ಪಕ್ಷ ಇಲ್ಲದ ಕಾರಣ ಕಾಂಗ್ರೆಸ್ ಪಕ್ಷಕ್ಕೆ ಹೋಲ್ ಸೇಲ್ ಆಗಿ ಮತ ಹಾಕುತ್ತಾ ಬರುತ್ತಿದ್ದು, ಮತ ಪ್ರಮಾಣದ ಸಂಖ್ಯೆಗೆ ಹೋಲಿಸಿದರೆ ಮುಸ್ಲಿಂ ಶಾಸಕರ ಈಗಿರುವ ಸಂಖ್ಯೆಯೇ ಅತ್ಯಂತ ಕಡಿಮೆಯೇ. ಆದರೆ ಇದೀಗ ಮುಸ್ಲಿಂ ಬಾಹುಳ್ಯ ಪ್ರದೇಶದಲ್ಲಿ ಮುಸ್ಲಿಂ ಮತದಾರರ ಸಂಖ್ಯೆ ಗಣನೀಯವಾಗಿ ಡಿಲೀಟ್ ಆಗಿರುವುದರಿಂದ ಇನ್ನಷ್ಟು ಹೊಸ ಶಾಸಕರು ಗೆದ್ದು ಮುಸ್ಲಿಂ ಪ್ರಾತಿನಿಧ್ಯ ಹೆಚ್ಚಿಸಿಕೊಳ್ಳುವುದು ಬಿಡಿ, ಈಗ ಗೆದ್ದಿರುವ ಮುಸ್ಲಿಂ ಶಾಸಕರು ತನ್ನ ಸ್ಥಾನವನ್ನು ಉಳಿಸಿಕೊಳ್ಳುವುದೇ ದೊಡ್ಡ ಸಾಹಸ ಎಂದು ಹೇಳಬೇಕು. ಇದು ಮಾತ್ರವಲ್ಲ ರಾಜ್ಯದಲ್ಲಿ ಕಾಂಗ್ರೆಸ್ ಪರಂಪರಾಗತವಾಗಿ ಗೆದ್ದು ಬರುತ್ತಿದ್ದ ಕೆಲವು ಜಿಲ್ಲೆಗಳಲ್ಲಿ ಎಸ್ ಐ ಆರ್ ನಿಂದ ಮತದಾರರ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿರುವುದು ಕೂಡ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಹಿನ್ನಡೆಯಾಗುವ ಸಾಧ್ಯತೆ ಇದೆ. ಒಟ್ಟಾರೆ ಎಸ್ ಐ ಆರ್ ಪ್ರಕ್ರಿಯೆ ಯಾರಿಗೆ ಕಹಿ, ಯಾರಿಗೆ ಕಹಿ ಅನುಭವ ನೀಡುತ್ತೋ ಅನ್ನುವುದು 2028 ರ ವಿಧಾನ ಸಭಾ ಫಲಿತಾಂಶದ ನಂತರವಷ್ಟೇ ನಿರ್ಧಾರವಾಗಲಿದೆ.