ಅವಧಿ ಪೂರ್ತಿಗೊಳಿಸಿದ ವಿವಿಧ ನಿಗಮ ಮಂಡಳಿ ಸದಸ್ಯರು, ನಿರ್ದೇಶಕರರನ್ನು ಸೇವೆಯಿಂದ ಪದಮುಕ್ತಗೊಳಿಸಲು ಮಹತ್ವದ ಸೂಚನೆ

ರಾಜ್ಯ

ರಾಜ್ಯ ಸರ್ಕಾರವು ವಿವಿಧ ನಿಗಮ ಮತ್ತು ಮಂಡಳಿಗಳಿಗೆ ಸರ್ಜರಿ ಮಾಡಲು ಮುಂದಾಗಿದ್ದು, ಸರ್ಕಾರದಿಂದ ನಾಮನಿರ್ದೇಶನಗೊಂಡು ಎರಡು ವರ್ಷಗಳ ಅವಧಿ ಪೂರೈಸಿರುವ ಎಲ್ಲಾ ಸದಸ್ಯರು ಹಾಗೂ ನಿರ್ದೇಶಕರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸೇವೆಯಿಂದ ಪದಮುಕ್ತಗೊಳಿಸಲು ಮುಖ್ಯಮಂತ್ರಿಗಳ ಸಚಿವಾಲಯದಿಂದ ಮಹತ್ವದ ಸೂಚನೆ ನೀಡಲಾಗಿದೆ.​ಈ ಕುರಿತು ಮುಖ್ಯಮಂತ್ರಿಗಳ ಅಪರ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿ ನಾಥ್ ಅವರು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ನವೆಂಬರ್ 16, 2026 ರಂದು ಅಧಿಕೃತ ಟಿಪ್ಪಣಿ (ಕ್ರಮಾಂಕ: ACSCM/T/3439/2026) ಹೊರಡಿಸಿದ್ದಾರೆ.

ರಾಜ್ಯದ ಎಲ್ಲಾ ನಗರಾಭಿವೃದ್ಧಿ ಪ್ರಾಧಿಕಾರಗಳು ಹಾಗೂ ಸ್ಥಳೀಯ ಯೋಜನಾ ಪ್ರಾಧಿಕಾರಗಳನ್ನು ಹೊರತುಪಡಿಸಿ, ಉಳಿದ ಎಲ್ಲಾ ನಿಗಮ ಮತ್ತು ಮಂಡಳಿಗಳಲ್ಲಿ ಎರಡು ವರ್ಷದ ಅಧಿಕಾರಾವಧಿ ಪೂರೈಸಿರುವ ನಾಮನಿರ್ದೇಶಿತ ಸದಸ್ಯರು ಮತ್ತು ನಿರ್ದೇಶಕರನ್ನು ತಕ್ಷಣವೇ ಸೇವೆಯಿಂದ ಬಿಡುಗಡೆಗೊಳಿಸಿ ಸೂಕ್ತ ಆದೇಶ ಹೊರಡಿಸುವಂತೆ ಟಿಪ್ಪಣಿಯಲ್ಲಿ ತಿಳಿಸಲಾಗಿದೆ.​

ಹಳಬರನ್ನು ಪದಮುಕ್ತಗೊಳಿಸುವ ಪ್ರಕ್ರಿಯೆಯ ಜೊತೆಗೆ, ಈಗಾಗಲೇ ಮುಖ್ಯಮಂತ್ರಿಗಳು ಅನುಮೋದಿಸಿರುವ ನೂತನ ಸದಸ್ಯರು ಹಾಗೂ ನಿರ್ದೇಶಕರನ್ನು ಆಯಾ ನಿಗಮ ಮತ್ತು ಮಂಡಳಿಗಳಿಗೆ ನೇಮಕಾತಿ ಮಾಡಿರುವ ವಿವರಗಳನ್ನು ತಕ್ಷಣವೇ ಮುಖ್ಯಮಂತ್ರಿಗಳ ಅವಗಾಹನೆಗೆ ಸಲ್ಲಿಸಬೇಕು. ಈ ನಿಟ್ಟಿನಲ್ಲಿ ಸಂಬಂಧಪಟ್ಟ ಎಲ್ಲಾ ಇಲಾಖಾ ಕಾರ್ಯದರ್ಶಿಗಳಿಗೆ ಸೂಕ್ತ ನಿರ್ದೇಶನ ನೀಡುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳನ್ನು ಕೋರಲಾಗಿದೆ.