ನಮ್ಮ ಬೆವರಿನ ತೆರಿಗೆ ಹಣದಲ್ಲಿ ಅಧಿಕಾರಿಗಳ ‘ಖಾಸಗಿ ದರ್ಬಾರ್’ಗೆ ಕತ್ತರಿ.! ನೀವೂ ಆರ್.ಟಿ.ಐ (RTI) ಹಾಕಿ ಲೆಕ್ಕ ಕೇಳಿ.!

ರಾಜ್ಯ

✍️. ಅರ್ಜುನ್ ಮೂಲೆ

ರಕ್ತ-ಬೆವರು ಸುರಿಸಿ ಜನಸಾಮಾನ್ಯರು ಕಟ್ಟುವ ತೆರಿಗೆ ಹಣವನ್ನು ಕೆಲವು ಭ್ರಷ್ಟ ಹಾಗೂ ದುರಹಂಕಾರಿ ಅಧಿಕಾರಿಗಳು ತಮ್ಮ ಸ್ವಂತ ಆಸ್ತಿಯಂತೆ ಬಳಸುತ್ತಿರುವುದು ಹೊಸದೇನಲ್ಲ. ನಮ್ಮ ದುಡ್ಡಿನಲ್ಲಿ ಖರೀದಿಸಿದ ಸರ್ಕಾರಿ ಕಾರುಗಳಲ್ಲಿ ಅಧಿಕಾರಿಗಳ ಪತ್ನಿಯರ ಶಾಪಿಂಗ್, ಮಕ್ಕಳ ಶಾಲಾ ಪಿಕ್ ಅಪ್ ಹಾಗೂ ವಾರಾಂತ್ಯದ ಮೋಜಿನ ಪ್ರವಾಸಗಳು ಎಗ್ಗಿಲ್ಲದೆ ನಡೆಯುತ್ತಿವೆ. ಈ ಹಗಲು ದರೋಡೆಯ ವಿರುದ್ಧ ಸಾಮಾಜಿಕ ಕಾರ್ಯಕರ್ತರು ನಿರಂತರವಾಗಿ ದ್ವನಿ ಎತ್ತಿದ ಪರಿಣಾಮ, ಕೊನೆಗೂ ಎಚ್ಚೆತ್ತುಕೊಂಡಿರುವ ಸರ್ಕಾರವು ಸರ್ಕಾರಿ ವಾಹನಗಳ ಖಾಸಗಿ ದುರ್ಬಳಕೆಗೆ ಲಗಾಮು ಹಾಕುವ ಮಹತ್ವದ ಆದೇಶವೊಂದನ್ನು ಹೊರಡಿಸಿದೆ.

ನವೆಂಬರ್ 17, 2026ರ ಸರ್ಕಾರದ ಅಧಿಕೃತ ಜ್ಞಾಪನದ ಪ್ರಕಾರ, ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಶೇಕಡಾ 60ರಷ್ಟು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಸರ್ಕಾರಿ ವಾಹನಗಳ ಖಾಸಗಿ ಬಳಕೆಯ ದರಗಳನ್ನು ದಿಢೀರ್ ಪರಿಷ್ಕರಣೆ ಮಾಡಲಾಗಿದೆ. ಇನ್ಮುಂದೆ ಸರ್ಕಾರಿ ಅಧಿಕಾರಿಗಳು ನಾಮನಿರ್ದಿಷ್ಟ ವಾಹನವನ್ನು ತಮ್ಮ ವೈಯಕ್ತಿಕ ಕೆಲಸಗಳಿಗೆ ಬಳಸಿದರೆ, 500 ಕಿ.ಮೀ ವರೆಗಿನ ಓಡಾಟಕ್ಕೆ ಮಾಸಿಕ 1,600 ರೂ.ಗಳನ್ನು ಕಡ್ಡಾಯವಾಗಿ ಪಾವತಿಸಲೇಬೇಕು. ಒಂದು ವೇಳೆ ಖಾಸಗಿ ಬಳಕೆ 500 ಕಿ.ಮೀ ಮೀರಿದರೆ, ಪ್ರತಿ ಹೆಚ್ಚುವರಿ ಕಿಲೋಮೀಟರ್‌ಗೆ ತಲಾ 6 ರೂಪಾಯಿಯಂತೆ ತಮ್ಮ ಜೇಬಿನಿಂದಲೇ ದಂಡದ ರೂಪದಲ್ಲಿ ಕಟ್ಟಬೇಕು ಎಂದು ಸರ್ಕಾರ ಕಟ್ಟುನಿಟ್ಟಾಗಿ ಆದೇಶಿಸಿದೆ.

ಈ ಆದೇಶ ಕೇವಲ ಕಾಗದದಲ್ಲಿ ಉಳಿಯಬಾರದು, ಇದು ಪ್ರತಿಯೊಬ್ಬ ಜಾಗೃತ ನಾಗರಿಕನಿಗೂ ಸಿಕ್ಕಿರುವ ಅತಿ ದೊಡ್ಡ ಪ್ರಬಲ ಅಸ್ತ್ರವಾಗಿದೆ. ಇನ್ಮುಂದೆ ಯಾವುದಾದರೂ ಮಾಲ್, ಸಿನಿಮಾ ಮಂದಿರ, ಮದುವೆ ಮನೆ ಅಥವಾ ಪ್ರವಾಸಿ ತಾಣಗಳಲ್ಲಿ ಸರ್ಕಾರಿ ಬೋರ್ಡ್ ಹಾಕಿದ ಕಾರುಗಳು ನಿಂತಿದ್ದರೆ ತಕ್ಷಣ ನಿಮ್ಮ ಮೊಬೈಲ್‌ನಲ್ಲಿ ಫೋಟೋ ಹಾಗೂ ವಿಡಿಯೋ ತೆಗೆಯಿರಿ. ಮಾಹಿತಿ ಹಕ್ಕು (RTI) ಕಾಯ್ದೆಯನ್ನು ಬಳಸಿ, ಆ ಅಧಿಕಾರಿಯ ವಾಹನದ ಲಾಗ್ ಬುಕ್ (Logbook) ಮಾಹಿತಿಯನ್ನು ಕೇಳಿ.

ಅವರು ಖಾಸಗಿ ಓಡಾಟಕ್ಕೆ ಸರ್ಕಾರಕ್ಕೆ 1600 ರೂ. ಕಟ್ಟಿದ್ದಾರೋ ಅಥವಾ ಸಾರ್ವಜನಿಕರ ಹಣದಲ್ಲಿ ಪುಕ್ಕಟ್ಟೆ ಮಜಾ ಉಡಾಯಿಸುತ್ತಿದ್ದಾರೋ ಎನ್ನುವುದನ್ನು ಬೀದಿಗೆ ತನ್ನಿ. ನಾವು ಪ್ರಶ್ನಿಸದೆ ಹೋದರೆ ವ್ಯವಸ್ಥೆಯಲ್ಲಿರುವ ಈ ರಕ್ತ ಹೀರುವ ಜಿಗಣೆಗಳು ಎಂದಿಗೂ ಸುಧಾರಿಸುವುದಿಲ್ಲ.

ಅತಿ ದೊಡ್ಡ ಎಚ್ಚರಿಕೆಯೆಂದರೆ, ಬಹುತೇಕ ಅಧಿಕಾರಿಗಳು ತಮ್ಮ ಖಾಸಗಿ ಓಡಾಟವನ್ನು ‘ಸರ್ಕಾರಿ ಕೆಲಸ’ (Official Duty) ಎಂದೇ ಲಾಗ್ ಬುಕ್‌ನಲ್ಲಿ ನಮೂದಿಸಿ ಸುಳ್ಳು ಲೆಕ್ಕ ಬರೆಯುವ ಕಳ್ಳಾಟವಾಡುತ್ತಾರೆ. ಕೇವಲ ದರ ನಿಗದಿ ಮಾಡಿದರೆ ಸಾಲದು, ಸರ್ಕಾರಿ ಖಜಾನೆಯಿಂದ ಪ್ರತಿ ತಿಂಗಳು ವಾಹನದ ನಿರ್ವಹಣೆಗೆ ಬಿಡುಗಡೆಯಾಗುವ ಹಣ ಮತ್ತು ವಾಸ್ತವಿಕ ಬಳಕೆಯ ನಡುವಿನ ವ್ಯತ್ಯಾಸವನ್ನು ಮಹಾಲೇಖಪಾಲರು ಹಾಗೂ ಇಲಾಖಾ ಮುಖ್ಯಸ್ಥರು ಕಟ್ಟುನಿಟ್ಟಾಗಿ ತಪಾಸಣೆ ಮಾಡಬೇಕು.

ಜನಸಾಮಾನ್ಯರು ಅಧಿಕಾರಿಗಳ ಐಷಾರಾಮಿ ಜೀವನವನ್ನು ಪೋಷಿಸುವ ಎಟಿಎಂ (ATM) ಯಂತ್ರಗಳಲ್ಲ. ವ್ಯವಸ್ಥೆಯಲ್ಲಿ ಬೇರೂರಿರುವ ಈ ಊಳಿಗಮಾನ್ಯ ಪದ್ಧತಿಯನ್ನು ಬೇರುಸಹಿತ ಕಿತ್ತೆಸೆಯಲು, ಪ್ರತಿಯೊಬ್ಬ ನಾಗರಿಕನೂ ಈಗಲೇ ಎಚ್ಚೆತ್ತುಕೊಂಡು, ಲೆಕ್ಕ ಕೇಳುವ ಹೋರಾಟಕ್ಕೆ ಇಳಿಯಬೇಕಾದ ತುರ್ತು ಅನಿವಾರ್ಯತೆ ಇದೆ.