ಟ್ರಂಪ್ ಸರ್ಕಾರದಿಂದ ಮತ್ತೆ ಭಾರತಕ್ಕೆ ಆಘಾತ.! ಭಾರತದ ಸರಕುಗಳ ಮೇಲೆ ಶೇ. 25 ರಷ್ಟು ಸುಂಕ ವಿಧಿಸುವ ಪ್ರಸ್ತಾಪ

ಅಂತಾರಾಷ್ಟ್ರೀಯ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸರ್ಕಾರ ಮತ್ತೆ ಭಾರತಕ್ಕೆ ಆಘಾತ ನೀಡಿದ್ದು, ಭಾರತ, ಚೀನಾ, ಜಪಾನ್ ಮತ್ತು ಯುರೋಪಿಯನ್ ಒಕ್ಕೂಟ ಸೇರಿದಂತೆ 14 ಪ್ರಮುಖ ವ್ಯಾಪಾರ ಪಾಲುದಾರ ದೇಶಗಳ ಮೇಲೆ ಹೊಸ ಆಮದು ಸುಂಕ ವಿಧಿಸಲು ಪ್ರಸ್ತಾವನೆ ಮುಂದಿಟ್ಟಿದೆ.

ಕೈಗಾರಿಕಾ ವಲಯದಲ್ಲಿ ಉತ್ಪಾದನಾ ಸಾಮರ್ಥ್ಯ ಮಿತಿಮೀರುತ್ತಿರುವುದು ಮತ್ತು ಇದರಿಂದ ಅಮೆರಿಕದ ವ್ಯಾಪಾರಕ್ಕೆ ಆಗುತ್ತಿರುವ ಹಾನಿಯನ್ನು ತಡೆಯುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲು ಮುಂದಾಗಿದೆ. ಈ ಪ್ರಸ್ತಾವನೆಯ ಪ್ರಕಾರ, ಭಾರತದಿಂದ ಆಮದಾಗುವ ಕೆಲವು ಉತ್ಪನ್ನಗಳ ಮೇಲೆ ಶೇ.25ರವರೆಗೆ ಸುಂಕ ವಿಧಿಸುವ ಸಾಧ್ಯತೆಯಿದೆ.

ಆದರೆ, ಅಮೆರಿಕದೊಂದಿಗೆ ವ್ಯಾಪಾರ ಒಪ್ಪಂದ ಅಂತಿಮಗೊಂಡರೆ ಭಾರತದ ಮೇಲಿನ ಸುಂಕ ಪ್ರಮಾಣ ಶೇ.17ಕ್ಕೆ ಇಳಿಯಬಹುದು. ಮತ್ತೊಂದೆಡೆ, ಚೀನಾದ ಕೆಲವು ಉತ್ಪನ್ನಗಳ ಮೇಲಿನ ಒಟ್ಟು ಸುಂಕ ಪ್ರಮಾಣ ಶೇ.45ರವರೆಗೂ ತಲುಪುವ ಸಾಧ್ಯತೆಯಿದೆ. ಬ್ರೆಜಿಲ್, ಬಾಂಗ್ಲಾದೇಶ, ಕಾಂಬೋಡಿಯಾ, ಇಂಡೋನೇಷ್ಯಾ, ಮಲೇಷ್ಯಾ, ಸಿಂಗಾಪುರ, ದಕ್ಷಿಣ ಕೊರಿಯಾ, ಸ್ವಿಟ್ಜರ್ಲೆಂಡ್, ತೈವಾನ್, ಥಾಯ್ಲೆಂಡ್ ಮತ್ತು ವಿಯೆಟ್ನಾಂ ಕೂಡ ಹೊಸ ಸುಂಕದ ಪ್ರಸ್ತಾವನೆಯಲ್ಲಿ ಸೇರಿವೆ.

ಅಮೆರಿಕದ ವ್ಯಾಪಾರ ಪ್ರತಿನಿಧಿ ಕಚೇರಿ (USTR) 16 ವ್ಯಾಪಾರ ಪಾಲುದಾರ ರಾಷ್ಟ್ರಗಳ ಕುರಿತು ಎಂಟು ತಿಂಗಳ ಕಾಲ ನಡೆಸಿದ ತನಿಖೆಯ ಬಳಿಕ ಬುಧವಾರ ಈ ಪ್ರಸ್ತಾವನೆ ಪ್ರಕಟಿಸಲಾಗಿದೆ. ಮೆಕ್ಸಿಕೊ ಮತ್ತು ನಾರ್ವೆ ದೇಶಗಳ ತನಿಖೆ ಇನ್ನೂ ಪೂರ್ಣಗೊಳ್ಳದ ಕಾರಣ ಸದ್ಯಕ್ಕೆ ಅವುಗಳನ್ನು ಈ ಪಟ್ಟಿಯಿಂದ ಹೊರಗಿಡಲಾಗಿದೆ.

ಈ ದೇಶಗಳು ತಮ್ಮ ನೀತಿ, ಸಬ್ಸಿಡಿ ಮತ್ತು ಇತರ ವ್ಯಾಪಾರ ನಿರ್ಬಂಧಗಳ ಮೂಲಕ ಕೈಗಾರಿಕಾ ಉತ್ಪಾದನಾ ಸಾಮರ್ಥ್ಯವನ್ನು ಕೃತಕವಾಗಿ ಹೆಚ್ಚಿಸುತ್ತಿವೆ. ಇದರಿಂದ ಅಮೆರಿಕದ ವ್ಯಾಪಾರಕ್ಕೆ ಅಡ್ಡಿಯಾಗುತ್ತಿದೆ ಎಂಬುದು ವಾಷಿಂಗ್ಟನ್‌ನ ಆರೋಪವಾಗಿದೆ. ಕಡಿಮೆ ಬೆಲೆಯ ಸರಕುಗಳು ಹೆಚ್ಚಿನ ಪ್ರಮಾಣದಲ್ಲಿ ಅಮೆರಿಕದ ಮಾರುಕಟ್ಟೆಗೆ ಹರಿದುಬರುತ್ತಿದ್ದು, ಇದರಿಂದ ಸ್ಥಳೀಯ ಉತ್ಪಾದನಾ ಕಂಪನಿಗಳಿಗೆ ತೊಂದರೆಯಾಗುತ್ತಿದೆ ಎಂದು ಟ್ರಂಪ್ ಆಡಳಿತ ವಾದಿಸಿದೆ.