ಪಕ್ಷೇತರರಾಗಿ ಕಾಂಗ್ರೆಸ್ ಗೆ ಸಡ್ಡು ಹೊಡೆಯಲು ಅಲ್ಪಸಂಖ್ಯಾತ ಸಮುದಾಯದಿಂದ ತೀರ್ಮಾನ
ರಾಜ್ಯದಾದ್ಯಂತ ಜನವರಿಯಲ್ಲಿ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಚುನಾವಣೆಯ ಪರ್ವ ಆರಂಭವಾಗಲಿದೆ. ಈಗಾಗಲೇ ಮೀಸಲಾತಿ ಪಟ್ಟಿ ಬಿಡುಗಡೆಯಾಗಿರುವುದರಿಂದ ಚುನಾವಣೆಯ ಕಾವು ಏರತೊಡಗಿದೆ. ಆಕಾಂಕ್ಷಿಗಳ ದೊಡ್ಡ ದಂಡು ಟಿಕೆಟ್ ಗಿಟ್ಟಿಸಿಕೊಳ್ಳಲು ತಮ್ಮ ಕಸರತ್ತು ಆರಂಭಿಸಿದ್ದಾರೆ. ಮೂಡಬಿದ್ರೆ ವಿಧಾನಸಭಾ ಕ್ಷೇತ್ರದ ಪುತ್ತಿಗೆ ಜಿಲ್ಲಾ ಪಂಚಾಯತ್ ಕ್ಷೇತ್ರದಲ್ಲಿ ಆಕಾಂಕ್ಷಿಗಳ ದೊಡ್ಡ ದಂಡು ಟಿಕೆಟ್ ಪಡೆಯಲು ಪೈಪೋಟಿ ನಡೆಸುತ್ತಿದ್ದಾರೆ. ಮುಸ್ಲಿಂ ಹಾಗೂ ಕ್ರಿಶ್ಚಿಯನ್ ಸಮುದಾಯ ಹೆಚ್ಚಿರುವ ಪುತ್ತಿಗೆಯಲ್ಲಿ ಸಾಮಾನ್ಯ ಮೀಸಲಾತಿ ಪ್ರಕಟಗೊಂಡಿರುವುದರಿಂದ ಸ್ಪರ್ಧೆಗೆ ಹಲವರು ಟವೆಲ್ ಹಾಕಿ ಕೂತಿದ್ದಾರೆ.
ಹೇಳಿ ಕೇಳಿ ಪುತ್ತಿಗೆ ಜಿಲ್ಲಾ ಪಂಚಾಯತ್ ಕ್ಷೇತ್ರದಲ್ಲಿ ಅಲ್ಪಸಂಖ್ಯಾತ ಸಮುದಾಯವೇ ನಿರ್ಣಾಯಕ ಮತದಾರರು. ವಿಶೇಷ ಎಂದರೆ ಅಲ್ಪಸಂಖ್ಯಾತ ಸಮುದಾಯವಾದ ಮುಸ್ಲಿಂ, ಕ್ರೈಸ್ತರು ಹೆಚ್ಚಿರುವ ಪುತ್ತಿಗೆಯಲ್ಲಿ ಈವರೆಗೂ ಅಲ್ಪಸಂಖ್ಯಾತ ಸಮುದಾಯಕ್ಕೆ ಕಾಂಗ್ರೆಸ್ ಪಕ್ಷ ಸ್ಪರ್ಧಿಸುವ ಅವಕಾಶವನ್ನೇ ನೀಡಿಲ್ಲ. ಈ ಬಾರಿ ಸಾಮಾನ್ಯ ಮೀಸಲಾತಿ ಬಂದಿರುವುದರಿಂದ ಅಲ್ಪಸಂಖ್ಯಾತ ಸಮುದಾಯ ಕೂಡ ಟಿಕೆಟ್ ಗಿಟ್ಟಿಸಿಕೊಳ್ಳಲು ಪೈಪೋಟಿ ಆರಂಬಿಸಿದೆ. ಕಾಂಗ್ರೆಸ್ ಪಕ್ಷಕ್ಕೆ ಓಟು ಬ್ಯಾಂಕ್ ಆಗಿರುವ ಅಲ್ಪಸಂಖ್ಯಾತ ಸಮುದಾಯಕ್ಕೆ ಈ ಬಾರಿಯಾದರೂ ಟಿಕೆಟ್ ನೀಡುತ್ತಾ ಅನ್ನುವುದು ಯಕ್ಷ ಪ್ರಶ್ನೆಯಾಗಿದೆ. ಒಂದು ವೇಳೆ ಟಿಕೆಟ್ ನೀಡದಿದ್ದರೆ ಅಲ್ಪಸಂಖ್ಯಾತ ಸಮುದಾಯ ಪಕ್ಷೇತರರಾಗಿ ಸ್ಪರ್ಧಿಸುವ ಮೂಲಕ ಟಾಂಗ್ ಕೊಡುವ ಪ್ರಯತ್ನ ಮಾಡಲಿದೆ ಅನ್ನುವ ಮಾತು ಕೇಳಿ ಬರುತ್ತಿದೆ.

ಪುತ್ತಿಗೆ ಜಿಲ್ಲಾ ಪಂಚಾಯತ್ ಇರುವೈಲು, ಹೊಸಬೆಟ್ಟು, ತಾಕೊಡೆ, ತೋಡಾರು, ಮಿಜಾರು, ಪುತ್ತಿಗೆ, ಪಾಲಡ್ಕ, ಸಂಪಿಗೆ, ಕಲ್ಲಮುಂಡ್ಕೂರು ಕ್ಷೇತ್ರಗಳನ್ನು ಒಳಗೊಂಡಿದ್ದು ಅಲ್ಪಸಂಖ್ಯಾತ ಸಮುದಾಯವೇ ಈ ಕ್ಷೇತ್ರದಲ್ಲಿ ಹೆಚ್ಚಿದ್ದಾರೆ. ಅಲ್ಪಸಂಖ್ಯಾತ ಸಮುದಾಯದ ಹಲವು ಮುಂಚೂಣಿ ನಾಯಕರು ಈ ಭಾಗದಲ್ಲಿ ಕಾಂಗ್ರೆಸ್ ಪರ ಕೆಲಸ ಮಾಡುತ್ತಿದ್ದು, ಈ ಬಾರಿಯಾದರೂ ಟಿಕೆಟ್ ನೀಡದಿದ್ದರೆ ಕಾಂಗ್ರೆಸ್ ಗೆ ದೊಡ್ಡ ಸಂಕಷ್ಟ ಉಂಟಾಗಲಿದೆ. ಕಾಂಗ್ರೆಸ್ ಪಕ್ಷ ಅಲ್ಪಸಂಖ್ಯಾತ ಸಮುದಾಯಕ್ಕೆ ಮಣೆ ಹಾಕುವ ಬದಲು ಬೇರೆ ಸಮುದಾಯಕ್ಕೆ ಟಿಕೆಟ್ ನೀಡಿದರೆ ಇಲ್ಲಿ ಅಲ್ಪಸಂಖ್ಯಾತ ಸಮುದಾಯದಿಂದ ಜೆಡಿಎಸ್ ಅಥವಾ ಪಕ್ಷೇತರ ಮೂಲಕ ಸ್ಪರ್ಧೆಯೊಡ್ಡುವ ಮೂಲಕ ತಮ್ಮ ಪವರ್ ತೋರಿಸಲು ಮುಂದಾಗಿದ್ದಾರೆ. ಒಟ್ಟಾರೆ ಪುತ್ತಿಗೆ ಜಿಲ್ಲಾ ಪಂಚಾಯತ್ ಕ್ಷೇತ್ರ ಈ ಬಾರಿ ಈ ಕಾರಣದಿಂದ ಗಮನ ಸೆಳೆಯುತ್ತಿದೆ.
ಕಳೆದ ಹಲವು ವರ್ಷಗಳಿಂದ ಈ ಕ್ಷೇತ್ರದಲ್ಲಿ ಅಲ್ಪಸಂಖ್ಯಾತರಾದ ಮುಸ್ಲಿಮರಿಗಾಗಲೀ, ಕ್ರೈಸ್ತರಿಗಾಗಲೀ ಅವಕಾಶ ಸಿಗಲಿಲ್ಲ. ಈಬಾರಿ ಮೀಸಲಾತಿ ಅನುಕೂಲಕರವಾಗಿ ಬಂದಿರುವುದರಿಂದ ಸಹಜವಾಗಿಯೇ ಈ ಕೂಗು ಕೇಳಿ ಬರುತ್ತಿದೆ. ಮುಸ್ಲಿಂ, ಕ್ರೈಸ್ತರ ಮತಗಳೇ ಈ ಕ್ಷೇತ್ರದಲ್ಲೂ ನಿರ್ಣಾಯಕವಾಗಿದೆ. ಎರಡೂ ಸಮುದಾಯ ಒಟ್ಟಾಗಿ ದುಡಿದರೆ ಗೆಲ್ಲುವುದಂತು ಗ್ಯಾರಂಟಿ.

ಇರುವೈಲು, ಹೊಸಬೆಟ್ಟು, ತಾಕೊಡೆ, ತೋಡಾರು, ಮಿಜಾರು, ಪುತ್ತಿಗೆ, ಪಾಲಡ್ಕ, ಸಂಪಿಗೆ, ಕಲ್ಲಮುಂಡ್ಕೂರು ಹೀಗೆ ಎಲ್ಲ ಕಡೆಗಳಲ್ಲೂ ಕ್ರೈಸ್ತ, ಮುಸ್ಲಿಂ ಮತದಾರರಿದ್ದಾರೆ.
ಇರುವೈಲು ಗ್ರಾಮ ಪಂಚಾಯತ್ ಸದಸ್ಯರಾಗಿ ಹಲವು ಬಾರಿ ಆಯ್ಕೆಯಾಗಿ ಜನಸೇವೆಯಲ್ಲಿರುವ ವಲೇರಿಯನ್ ಕುಟಿನ್ಹೊ, ಹೊಸಬೆಟ್ಟು ಪಂಚಾಯತ್ ಸದಸ್ಯರಾದ ವಿಲ್ಫ್ರೆಡ್ ಮೆಂಡೋನ್ಸ, ಜನಪರ ಕೆಲಸಗಳನ್ನು ಮಾಡುತ್ತಿರುವ ರೆಕ್ಸನ್ ಪಿಂಟೊ, ಸಮಾಜಸೇವಕರಾಗಿರುವ ರಾಜೇಶ್ ಡಿಸೋಜ ಕಡಲಕೆರೆ, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ವಲೇರಿಯನ್ ಸಿಕ್ವೇರಾ, ಬಿಜೆಪಿಯ ಜೋಯ್ಲಸ್ ಡಿಸೋಜ, ಜನಪರ ನಾಯಕ ಎಂ.ಎ.ರಝಾಕ್ ತೋಡಾರ್, ಮಾಜಿ ತಾಲೂಕು ಪಂಚಾಯತ್ ಸದಸ್ಯ ಎಂ.ಎ.ಎಸ್. ಅಬೂಬಕ್ಕರ್ ರವರ ಮಗ ಎಂ.ಎ.ಎಸ್. ಆಸಿಫ್, ಪಾಲಡ್ಕ ಪರಿಸರದಲ್ಲಿ ಉದ್ಯಮಿ ಕಂ ಪಂಚಾಯತ್ ಉಪಾಧ್ಯಕ್ಷರಾಗಿದ್ದ ಪ್ರವೀಣ್ ಸಿಕ್ವೇರಾ, ಕಾಂಗ್ರೆಸ್ ಯುವ ಮುಖಂಡ ವಸೀರ್ ಪುತ್ತಿಗೆ, ಕಲ್ಲಮುಂಡ್ಕೂರು ಪರಿಸರದ ಜಾಕಿಮ್ ಕೊರೆಯಾ, ಬಿಜೆಪಿ ಯುವ ನಾಯಕ ಗ್ಲೆನ್ ವಿಶಾಲ್ ಡಿಸಿಲ್ವಾ ಮುಂತಾದವರೆಲ್ಲ ಅಲ್ಪಸಂಖ್ಯಾತ ಸಮುದಾಯದ ನಾಯಕರೇ ಆಗಿದ್ದಾರೆ. ಇವರೆಲ್ಲರಿಗೂ ಸ್ಪರ್ಧಿಸುವ ಅವಕಾಶವಿದೆ. ಪಕ್ಷಗಳು ಮಣೆ ಹಾಕದಿದ್ದಲ್ಲಿ ಎರಡೂ ಸಮುದಾಯ ಒಂದಾಗಿ ಮಾತುಕತೆ ನಡೆಸಿ ಒಮ್ಮತದ ಸೂಕ್ತ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಪ್ಲಾನ್ ರೆಡಿಯಾಗಿದೆಯೆಂದು ತಿಳಿದು ಬಂದಿದೆ.
