ಆಳ್ವಾಸ್‌ ಶಿಕ್ಷಣ ಸಂಸ್ಥೆಯು ಒಟ್ಟಾರೆಯಾಗಿ ಪದವಿಪೂರ್ವ ವಿದ್ಯಾರ್ಥಿಗಳಿಂದ ಅಧಿಕ ವಸೂಲಿ ಮಾಡಿರುವುದು ತನಿಖಾ ತಂಡದ ವರದಿಯಿಂದ ಬಹಿರಂಗ

ಕರಾವಳಿ

ಮೂಡಬಿದ್ರೆಯ ಆಳ್ವಾಸ್‌ ಶಿಕ್ಷಣ ಸಂಸ್ಥೆಯು ರಾಜ್ಯ ಸರ್ಕಾರವು ನಿಗದಿಪಡಿಸಿದ್ದ ಶುಲ್ಕಕ್ಕಿಂತಲೂ ಹೆಚ್ಚುವರಿ ಕ್ಯಾಪಿಟೇಷನ್‌ ಶುಲ್ಕ ಮತ್ತು ಸ್ಟಡೀ ಮೆಟಿರಿಯಲ್ಸ್‌ಗಳಿಗಾಗಿ ಶುಲ್ಕ ಪಡೆದಿರುವುದನ್ನು ತನಿಖಾ ತಂಡವು ದೃಢಪಡಿಸಿರುವುದು ಇದೀಗ ಬಹಿರಂಗವಾಗಿದೆ. ಪ್ರಥಮ ಮತ್ತು ದ್ವಿತೀಯ  ಪದವಿಪೂರ್ವ ಪ್ರವೇಶಕ್ಕೆ ನಿಗದಿಪಡಿಸಿದ್ದ ಶುಲ್ಕಕ್ಕಿಂತಲೂ ಹೆಚ್ಚುವರಿಯಾಗಿ ಶುಲ್ಕ ಪಡೆದಿದ್ದಾರೆ ಎಂದು ರಮೇಶ್‌ ಬೆಟ್ಟಯ್ಯ ಎಂಬುವರು 2020ರ ಫೆ.7ರಂದು ದೂರು ಸಲ್ಲಿಸಿದ್ದರು.

ಬೆಟ್ಟಯ್ಯರವರ ದೂರನ್ನು ಆಧರಿಸಿ ತನಿಖೆ ನಡೆಸಲು ಸರ್ಕಾರವು ದಕ್ಷಿಣ ಕನ್ನಡ ಜಿಲ್ಲೆಯ ಜಂಟಿ  ನಿರ್ದೇಶಕರಾದ ಕುಸುಮಾ ಕುಮಾರಿ ನೇತೃತ್ವದಲ್ಲಿ ತನಿಖಾ ತಂಡ ರಚಿಸಿತ್ತು. ಈ ತನಿಖಾ ತಂಡವು ಆಳ್ವಾಸ್‌ ಶಿಕ್ಷಣ ಸಂಸ್ಥೆಯಲ್ಲಿ ತಪಾಸಣೆ ನಡೆಸಿ, ಹೆಚ್ಚುವರಿ ಶುಲ್ಕವೂ ಸೇರಿದಂತೆ ಮತ್ತಿತರ ಉಲ್ಲಂಘನೆಗಳ ಕುರಿತು ಆಡಳಿತ ಮಂಡಳಿಯು ಸಮಜಾಯಿಷಿ ಮತ್ತು ಸ್ಪಷ್ಟೀಕರಣ ನೀಡಿತ್ತು. ದೂರಿನಲ್ಲಿದ್ದ ಅಂಶ ಮತ್ತು ಆಡಳಿತ ಮಂಡಳಿಯ ಸಮಜಾಯಿಷಿ, ಸ್ಪಷ್ಟೀಕರಣ ಪರಿಶೀಲಿಸಿದ ನಂತರ ತನಿಖಾ ತಂಡವು ಆಳ್ವಾಸ್‌ ಶಿಕ್ಷಣ ಸಂಸ್ಥೆಯು ಸರ್ಕಾರವು ನಿಗದಿಪಡಿಸಿದ್ದ ಶುಲ್ಕಕ್ಕಿಂತಲೂ ಹೆಚ್ಚುವರಿಯಾಗಿ ಶುಲ್ಕ ಪಡೆದಿರುವುದನ್ನು ದೃಢಪಡಿಸಿದೆ.

ಆಳ್ವಾಸ್‌ ಪದವಿ ಪೂರ್ವ ಕಾಲೇಜು 2016-17ನೇ ಸಾಲಿನ ದಾಖಲಾತಿ ಮಾರ್ಗಸೂಚಿ ಮತ್ತು ಶುಲ್ಕಗಳ ಪಟ್ಟಿಯನ್ನು ತನಿಖಾ ತಂಡವು ಪರಿಶೀಲಿಸಿತು. ಇದರ ಪ್ರಕಾರ ಪ್ರಥಮ ಪಿಯುಸಿ ಪ್ರವೇಶ ಶುಲ್ಕ, ಬೋಧನಾ ಶುಲ್ಕ ಸೇರಿದಂತೆ ಇನ್ನಿತರ ಶುಲ್ಕಗಳೆಂದು ಸರ್ಕಾರವು ನಿಗದಿಪಡಿಸಿತ್ತು. ಆದರೆ ಆಳ್ವಾಸ್‌ ಶಿಕ್ಷಣ ಸಂಸ್ಥೆಯು ಒಟ್ಟಾರೆಯಾಗಿ ವಿದ್ಯಾರ್ಥಿಗಳಿಂದ ಅಧಿಕ ವಸೂಲಿ ಮಾಡಿರುವುದು ತನಿಖಾ ತಂಡದ ವರದಿಯಿಂದ ತಿಳಿದು ಬಂದಿದೆ.

ಸರ್ಕಾರವು ನಿಗದಿಪಡಿಸಿದ್ದ ಶುಲ್ಕಕ್ಕಿಂತಲೂ ಹೆಚ್ಚುವರಿಯಾಗಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಂದ ವಸೂಲಿ ಮಾಡಿತ್ತು. ಅಲ್ಲದೇ ಇಲಾಖೆ ನಿಗದಿಪಡಿಸಿರುವ ಶುಲ್ಕಗಳ ಜತೆಯಲ್ಲಿಯೇ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಂದ ಹೆಚ್ಚುವರಿ ಶುಲ್ಕ ವಸೂಲು ಮಾಡಿರುವುದನ್ನು ತನಿಖಾ ತಂಡದ ವರದಿಯಿಂದ ತಿಳಿದು ಬಂದಿದೆ. ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಂದ ವಿವಿದ ರೂಪದಲ್ಲಿ ಹಣ ವಸೂಲಿ ಮಾಡಿರುವುದು, ಅದೇ ರೀತಿ ದ್ವಿತೀಯ ಪಿಯುಸಿ ತರಗತಿಗಳ ವಿದ್ಯಾರ್ಥಿಗಳಿಗೆ ಸರ್ಕಾರವು ನಿಗದಿಪಡಿಸಿದ ದರಕ್ಕಿಂತ ಆಳ್ವಾಸ್‌ ಶಿಕ್ಷಣ ಸಂಸ್ಥೆಯು ಅಧಿಕ ದರ ವಸೂಲಿ ಮಾಡಿತ್ತು. ಪ್ರಥಮ ಪಿಯುಸಿಯಲ್ಲಿ ಕ್ಯಾಪಿಟಲ್‌ ಫೀ ಎಂದು ಅಧಿಕ ಪಟ್ಟು ವಸೂಲಿ ಮಾಡಿದ್ದರೆ ದ್ವಿತೀಯ ಪಿಯುಸಿಗೆ ಅದಕ್ಕಿಂತಲೂ ಜಾಸ್ತಿ ವಸೂಲಿ ಮಾಡಿತ್ತು.

ಇಲಾಖೆ ಮಾರ್ಗಸೂಚಿಗಳ ಪ್ರಕಾರ ದ್ವಿತೀಯ ಪಿಯುಸಿಗೆ 1,252 ರೂ. ಒಟ್ಟಾರೆ ಶುಲ್ಕ ನಿಗದಿಪಡಿಸಿತ್ತು. ಆಳ್ವಾಸ್‌ ಶಿಕ್ಷಣ ಸಂಸ್ಥೆಯು ಒಟ್ಟಾರೆಯಾಗಿ 49,000 ರೂ. ವಸೂಲಿ ಮಾಡಿದೆ. ಇಲಾಖೆಯು ನಿಗದಿಪಡಿಸಿದ ಶುಲ್ಕಕ್ಕಿಂತಲೂ ವಿದ್ಯಾರ್ಥಿಯಿಂದ ತಲಾ 47,748 ರೂ. ವಸೂಲು ಮಾಡಿರುವುದು ತನಿಖಾ ತಂಡವು ನೀಡಿರುವ ವರದಿಯಿಂದ ತಿಳಿದು ಬಂದಿದೆ. ಹಾಗೆಯೇ ಇಲಾಖೆಯು ನಿಗದಿಪಡಿಸಿರುವ ಶುಲ್ಕದ ಜತೆಯಲ್ಲಿಯೇ ಹೆಚ್ಚುವರಿಯಾಗಿ ವಸೂಲಿ ಮಾಡಿದೆ ಎಂದು ತನಿಖಾ ತಂಡವು ತನ್ನ ವರದಿಯಲ್ಲಿ ವಿವರಿಸಿದೆ. ಇದರಲ್ಲಿ ಹೆಚ್ಚುವರಿಯಾಗಿ ಹಲವು ವಿಧದ ಶುಲ್ಕವೂ ಸೇರಿದೆ ಎನ್ನಲಾಗಿದೆ.

ವೈದ್ಯಕೀಯ ಶುಲ್ಕ, ರಜಾ ದಾಖಲೆ, ಕ್ಯಾಲೆಂಡರ್‌ ಹಾಗೂ ಮ್ಯಾಗಝೀನ್‌ ಶುಲ್ಕಗಳನ್ನು ವಸೂಲು ಮಾಡಲು ಮಾರ್ಗಸೂಚಿಗಳಲ್ಲಿ ಇರುವುದಿಲ್ಲ. ಆದರೆ ಇತರೆ ಶುಲ್ಕಗಳಡಿಯಲ್ಲಿ ಈ ಮೇಲಿನ ಶುಲ್ಕಗಳನ್ನು ಪಡೆದಿರುತ್ತಾರೆ. ಎಂದು ತನಿಖಾ ತಂಡವು ತನ್ನ ವರದಿಯಲ್ಲಿ ವಿವರಿಸಿದೆ. ಅದೇ ರೀತಿ ಆಡಳಿತ ಮಂಡಳಿಯು ಕ್ಯಾಪಿಟೇಷನ್‌ ಶುಲ್ಕವನ್ನು ವಿದ್ಯಾರ್ಥಿಗಳಿಂದ ವಸೂಲಿ ಮಾಡಿರುವುದನ್ನೂ ತನಿಖಾ ತಂಡವು ಪತ್ತೆ ಹಚ್ಚಿದೆ. ಸರ್ಕಾರದ ಆದೇಶದಲ್ಲಿ ದ್ವಿತೀಯ ಪಿಯುಸಿಗೆ ದಾಖಲಾದ ವಿದ್ಯಾರ್ಥಿಗಳಿಂದ ಕ್ಯಾಪಿಟೇಷನ್‌ ಶುಲ್ಕವನ್ನು ವಸೂಲಿ ಮಾಡಬಾರದು ಎಂದು ಸರ್ಕಾರ ಆದೇಶ ಹೊರಡಿಸಿತ್ತು. ಆದರೂ ಕ್ಯಾಪಿಟೇಷನ್‌ ಶುಲ್ಕವನ್ನು ವಸೂಲಿ ಮಾಡಿದೆ ಎಂದು ತನಿಖಾ ವರದಿಯಲ್ಲಿ ವಿವರಿಸಲಾಗಿದೆ.

ರಾಷ್ಟ್ರಮಟ್ಟದಲ್ಲಿ ನಡೆಯುವ ನೀಟ್‌ ಸೇರಿದಂತೆ ಇನ್ನಿತರೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿದ್ಯಾರ್ಥಿಗಳನ್ನು ಸನ್ನದ್ಧಗೊಳಿಸಲು ಹೆಚ್ಚುವರಿ ಶುಲ್ಕ ಪಡೆಯಲು ಪದವಿಪೂರ್ವ ಶಿಕ್ಷಣ ಇಲಾಖೆಯಲ್ಲಿ ಮಾರ್ಗಸೂಚಿಗಳಿಲ್ಲ. ಆದರೆ ವಿದ್ಯಾರ್ಥಿಗಳ ಪಾಲಕರ ಒಪ್ಪಿಗೆ ಪಡೆದು ಹೆಚ್ಚುವರಿ ಶುಲ್ಕವನ್ನು ಪಡೆದಿದೆ ಎಂದು ತನಿಖಾ ತಂಡದ ತಪಾಸಣೆ ವರದಿಯಲ್ಲಿ ಉಲ್ಲೇಖಿಸಿದೆ. ಹೊರರಾಜ್ಯದ ವಿದ್ಯಾರ್ಥಿಗಳು ಹಾಗೂ ಬೇರೆ ತಾಲೂಕು ಮತ್ತು ಜಿಲ್ಲೆಗಳ ವಿದ್ಯಾರ್ಥಿಗಳು ಈ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಈ ವಿದ್ಯಾರ್ಥಿಗಳಿಗೆ ವಸತಿ ಸೌಲಭ್ಯವನ್ನು ಕಲ್ಪಿಸಿದೆ. ಆದರೆ ಹಾಸ್ಟೆಲ್‌ ನಡೆಸಲು ಇಲಾಖೆಯಿಂದ ಯಾವುದೇ ಅನುಮತಿ ನೀಡಲು ಅವಕಾಶ ಕಲ್ಪಿಸಿಲ್ಲ. ಎಂದು ತನಿಖಾ ತಂಡವು ತನ್ನ ವರದಿಯಲ್ಲಿ ಪ್ರಸ್ತಾವಿಸಿದೆ. ಈ ವರದಿಯನ್ನಾಧರಿಸಿ ಆಳ್ವಾಸ್‌ ಪದವಿಪೂರ್ವ ಕಾಲೇಜಿನ ಮಾನ್ಯತೆಯನ್ನು ರದ್ದುಗೊಳಿಸಬೇಕು ಎಂದು ಸರ್ಕಾರವು ನಿರ್ದೇಶನ ನೀಡಿತ್ತು. ಮಾನ್ಯತೆ ರದ್ದುಗೊಳಿಸಬೇಕು ಎಂದು ಸರ್ಕಾರವು ನೀಡಿದ್ದ ನಿರ್ದೇಶನ ಇನ್ನೂ ಪಾಲನೆಯಾಗಿಲ್ಲ ಎಂದು ತಿಳಿದು ಬಂದಿದೆ