ಕೃಷಿ ಭೂಮಿಯ ಸಂರಕ್ಷಣೆಗಾಗಿ ಸಂಘಟಿತ ಹೋರಾಟ ಅಗತ್ಯ – ಮುನೀರ್ ಕಾಟಿಪಳ್ಳ

ಕರಾವಳಿ

ಉಳುವವನೆ ಹೊಲದೊಡೆಯ ಘೋಷಣೆಯಡಿ ಗೇಣಿದಾರರು ನಡೆಸಿದ ಸಂಘರ್ಷಮಯ ಹೋರಾಟದಿಂದಾಗಿ ನೂರಾರು ಎಕರೆ ಭೂಮಿ ಹೊಂದಿದ್ದ ಭೂ ಒಡೆಯರು ರೈತರಿಗೆ ಭೂಮಿಯನ್ನು ಬಿಟ್ಟುಕೊಡಬೇಕಾಯ್ತು. ಅಂದು ಇಂತಹ ಚಾರಿತ್ರಿಕ ಹೋರಾಟದ ಕೇಂದ್ರವಾಗಿದ್ದ ಉಳ್ಳಾಲ ತಾಲೂಕಿನಲ್ಲಿ ಬಂಡವಾಳಶಾಹಿಗಳು ಸಣ್ಣ ರೈತರಿಂದ ವಿವಿಧ ರೀತಿಯ ಆಮಿಷ, ಬೆದರಿಕೆ, ರಾಜಕೀಯ ಬೆಂಬಲದ ಮೂಲಕ ಜಮೀನನ್ನು ಬಲವಂತವಾಗಿ ವಶ ಪಡಿಸಿಕೊಳ್ಳುತ್ತಿದ್ದಾರೆ. ಒಬ್ಬೊಬ್ಬ ಶಿಕ್ಷಣ, ಆರೋಗ್ಯದ ವ್ಯಾಪಾರಿಗಳು, ಭೂದಂಧೆ ಕೋರರ ಕೈಯಲ್ಲಿ ನೂರಾರು ಎಕರೆ ಭೂಮಿ ಜಮೆಯಾಗತೊಡಗಿದೆ. ಉಳ್ಳಾಲ ಮತ್ತೊಮ್ಮೆ ಜಮೀನ್ದಾರಿ ಯುಗಕ್ಕೆ ತೆರೆದುಕೊಳ್ಳುತ್ತಿದೆ. ಗ್ರಾಮಸ್ಥರು ಮೈಕೊಡವಿ ಹೋರಾಟಕ್ಕೆ ಇಳಿಯದಿದ್ದಲ್ಲಿ ಮನೆ ಮಠ ಕಳೆದುಕೊಂಡು ಬೀದಿಗೆ ಬೀಳುವ, ವಸತಿ, ಆಹಾರಕ್ಕೂ ಪರದಾಡುವ ಅಭದ್ರತೆಯ ಬದುಕಿಗೆ ಬೀಳಬೇಕಾಗುತ್ತದೆ.ಅದಕ್ಕಾಗಿ ಕೃಷಿ ಭೂಮಿಯ ಸಂರಕ್ಷಣೆಗಾಗಿ ಇಡೀ ಊರಿನ ಗ್ರಾಮಸ್ಥರು ಒಂದಾಗಿ ಸಂಘಟಿತ ಹೋರಾಟ ನಡೆಸಬೇಕೆಂದು ಸಿಪಿಐಂ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಮುನೀರ್ ಕಾಟಿಪಳ್ಳ ಎಚ್ಚರಿಸಿದರು.

ಅವರು ಇಂದು ಕುತ್ತಾರ್ ನಲ್ಲಿ ಜರುಗಿದ ಉಳ್ಳಾಲ ತಾಲೂಕಿನ ಬೆಳ್ಮ, ಮುನ್ನೂರು, ಅಂಬ್ಲಮೊಗರು ಗ್ರಾಮಗಳಲ್ಲಿ ಖಾಸಗಿ ಬಂಡವಾಳಶಾಹಿಗಳು ನೂರಾರು ಎಕರೆ ಕೃಷಿ ಭೂಮಿ ಖರೀದಿಸುತ್ತಿರುವುದರಿಂದ ಗಂಭೀರ ಸಮಸ್ಯೆಗಳಿಗೆ ಈಡಾಗಿರುವ ಗ್ರಾಮಸ್ಥರ ಪ್ರತಿನಿಧಿಗಳ ಸಮಾಲೋಚನಾ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.

ಕಾರ್ಮಿಕ ಮುಖಂಡರಾದ ಸುನಿಲ್ ಕುಮಾರ್ ಬಜಾಲ್ ಮಾತನಾಡುತ್ತಾ, ಈಗಾಗಲೆ ಮಂಗಳೂರಿನ ಹಲವು ಭಾಗಗಳಲ್ಲಿ ಖಾಸಗಿ ಧನಿಕರು, ಉದ್ಯಮಿಗಳು ಏಜಂಟರ ಮೂಲಕ ನೂರಾರು ಎಕರೆ ಜಮೀನು ಖರೀದಿಸಿದ್ದಾರೆ. ದಾಖಲೆಗಳನ್ನು ಪೋರ್ಜರಿಗೊಳಿಸುವುದು, ರಸ್ತೆ ಸಂಪರ್ಕ, ನೀರಿನ ಮೂಲಗಳನ್ನು ಮುಚ್ಚಿ ಭೂಮಿಯನ್ನು ತಾವು ನಿಗದಿ ಮಾಡಿದ ಭೂಮಿ ನೀಡುವಂತೆ ಬಲವಂತ ಪಡಿಸುವುದು ನಡೆಯುತ್ತಿದೆ. ರಾಜಕೀಯ, ಆಡಳಿತದ ಬಲವೂ ಭೂ ಮಾಫಿಯಾಗಳ ಪರವಾಗಿದ್ದು, ಬಲವಾದ ಸಂಘಟಿತ ಹೋರಾಟ ಕಟ್ಟದಿದ್ದಲ್ಲಿ ಅಪಾಯ ಕಾದಿದೆ ಎಂದರು.

ಹಿರಿಯ ರೈತ ಮುಖಂಡ, ಸಹಕಾರಿ ಧುರೀಣ ಕೃಷ್ಣಪ್ಪ ಸಾಲ್ಯಾನ್ ಅಧ್ಯಕ್ಷತೆ ವಹಿಸಿದ್ದರು.ಸಭೆಯಲ್ಲಿ ಮುನ್ನೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಮಹಾಬಲ ಟಿ ದೆಪ್ಪಲಿಮಾರ್, ಕಾರ್ಮಿಕ ನಾಯಕರಾದ ಜಯಂತ ನಾಯಕ್,ಜನಾರ್ಧನ ಕುತ್ತಾರ್,ಇಬ್ರಾಹಿಂ ಮದಕ,ರೈತ ನಾಯಕರಾದ ಶೇಖರ್ ಕುಂದರ್,ಜಯಂತ ಅಂಬ್ಲಮೊಗರು,ವಿಶ್ವನಾಥ ತೇವುಲ,ಸುಂದರ ಅಂಬ್ಲಮೊಗರು,ಯುವಜನ ನಾಯಕರಾದ ಹಿತೈಷ್ ಮುಂತಾದವರು ಹಾಜರಿದ್ದರು._

ಸಭೆಯಲ್ಲಿ ಕೃಷಿ ಭೂಮಿ ಸಂರಕ್ಷಣಾ ಹೋರಾಟ ಸಮಿತಿಯನ್ನು ರಚಿಸಲಾಯಿತು. ಗೌರವ ಸಂಚಾಲಕರಾಗಿ ಕೃಷ್ಣಪ್ಪ ಸಾಲ್ಯಾನ್,ಸಂಚಾಲಕರಾಗಿ ಜಯಂತ ನಾಯಕ್, ಸಹಸಂಚಾಲಕರಾಗಿ ಮಹಾಬಲ ಟಿ ದೆಪ್ಪಲಿಮಾರ್, ಶೇಖರ್ ಕುಂದರ್,ಇಬ್ರಾಹಿಂ ಮದಕ, ಜಯಂತ ಅಂಬ್ಲಮೊಗರು, ಜನಾರ್ದನ ಕುತ್ತಾರ್,ವಸಂತ ಬಡಕಬೈಲ್,ಸುಂದರ ಅಂಬ್ಲಮೊಗರುರವರನ್ನು ಆಯ್ಜೆಗೊಳಿಸಲಾಯಿತು. ಗೌರವ ಸಲಹೆಗಾರರಾಗಿ ಕೆ.ಯಾದವ ಶೆಟ್ಟಿ, ಮುನೀರ್ ಕಾಟಿಪಳ್ಳ, ಸುನಿಲ್ ಕುಮಾರ್ ಬಜಾಲ್ ರವರನ್ನು ಆರಿಸಲಾಯಿತು.*

ಸಮಸ್ಯೆಗಳ ಗಂಭೀರತೆಯನ್ನು ಜನತೆಯ ಮಧ್ಯೆ ಕೊಂಡೊಯ್ಯಲು ವಿವಿಧ ಹಂತದ ಕಾರ್ಯ ಕ್ರಮಗಳನ್ನು ಹಮ್ಮಿಕೊಳ್ಳಲಾಯಿತು.ಬಳಿಕ ಬ್ರಹತ್ ಹೋರಾಟವನ್ನು ಕೈಗೊಳ್ಳಬೇಕೆಂದು ಸಭೆಯಲ್ಲಿ ಅಭಿಪ್ರಾಯ ಪಡಲಾಯಿತು