ರಾಜ್ಯ ಪೊಲೀಸ್ ಮುಖ್ಯಸ್ಥರಾದ ಎಂ.ಎ.ಸಲೀಂ ರವರ ಸೇವಾವಧಿಯನ್ನು ವಿಸ್ತರಣೆ ಮಾಡಲಾಗಿದೆ. 2025ರ ಮೇನಲ್ಲಿ ಪ್ರಭಾರ ರಾಜ್ಯ ಪೊಲೀಸ್ ಮಹಾನಿರ್ದೇಶಕರಾಗಿದ್ದ ಎಂ.ಎ. ಸಲೀಂ ರವರ ಸೇವಾವಧಿಯನ್ನು 2027ರ ಆ. 29ರವರೆಗೆ ವಿಸ್ತರಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. 1993ರ ಬ್ಯಾಚ್ IPS ಅಧಿಕಾರಿಯಾಗಿರುವ ಎಂ.ಎ.ಸಲೀಂ ಅವರು 2025ರ ಮೇನಲ್ಲಿ ಪ್ರಭಾರ ರಾಜ್ಯ ಪೊಲೀಸ್ ಮಹಾನಿರ್ದೇಶಕರಾಗಿ ನೇಮಕರಾಗಿದ್ದರು. ಬಳಿಕ 2025ರ ಆಗಸ್ಟ್ ನಲ್ಲಿ ಪೂರ್ಣಾವಧಿಗೆ ನೇಮಕ ಮಾಡಲಾಗಿದ್ದು, ಈ ವರ್ಷದ ಜೂನ್ನಲ್ಲಿ ನಿವೃತ್ತಿಯಾಗಬೇಕಿತ್ತು. ಸುಪ್ರೀಂಕೋರ್ಟ್ ತೀರ್ಪಿನ ಅನುಸಾರ ಎಂ.ಎ.ಸಲೀಂ ಅವರ ಸೇವಾವಧಿಯನ್ನು ಇನ್ನೂ ಒಂದು ವರ್ಷಕ್ಕೆ ವಿಸ್ತರಿಸಲಾಗಿದೆ.
ಸುಪ್ರೀಂಕೋರ್ಟ್ ಆದೇಶದಂತೆ ಡಿಜಿಪಿಗೆ ಕನಿಷ್ಠ 2 ವರ್ಷಗಳ ಅಧಿಕಾರಾವಧಿ ಇರಬೇಕು. ಹೀಗಾಗಿ 22.09.2006ರ ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಅನುಸಾರ DG & IGP ಎಂ.ಎ. ಸಲೀಂ ಅವರ ಅವಧಿ ಒಟ್ಟು 2 ವರ್ಷಕ್ಕೆ ವಿಸ್ತರಣೆ ಮಾಡಲಾಗಿದೆ. ಇದೀಗ ರಾಜ್ಯ ಸರ್ಕಾರ, ಇನ್ನೊಂದು ವರ್ಷ ಅಂದರೆ 2027ರ ಅಕ್ಟೋಬರ್ 29ರವರೆಗೆ ಸೇವಾ ಅವಧಿ ವಿಸ್ತರಣೆ ಮಾಡಿದೆ.
ಡಾ. ಎಂ. ಎ. ಸಲೀಂ ಅವರು 1993ನೇ ಸಾಲಿನ ಕರ್ನಾಟಕ ಕೇಡರ್ನ ಅಧಿಕಾರಿಯಾಗಿದ್ದು, ಈ ಹಿಂದೆ ಕಲಬುರಗಿ, ಕುಶಾಲನಗರ, ಸಿಐಡಿಯಲ್ಲೂ ಸೇವೆ ಸಲ್ಲಿಸಿದ್ದಾರೆ. ಬೆಂಗಳೂರು ಸ್ಪೆಷಲ್ ಟ್ರಾಫಿಕ್ ಕಮಿಷನರ್ ಆಗಿ ಕಾರ್ಯ ನಿರ್ವಹಿಸಿ ಅನೇಕ ಸಂಚಾರ ಸುಧಾರಣೆ ಜಾರಿಗೆ ತಂದ ಕೀರ್ತಿಯು ಇವರಿಗೆ ಸಲ್ಲುತ್ತದೆ.
