ದಕ್ಷಿಣ ಕನ್ನಡ: ಪದ್ಮ-ಚೌಟ ವಿಜಯದ ಮಾಲೆ ಯಾರಿಗೆ? ವರ್ಕೌಟ್ ಆಗುತ್ತಾ ಜಾತಿ-ರಾಜಕಾರಣ.. ಇಲ್ಲಿದೆ ಸಖತ್ತ್ ಡೀಟೈಲ್ಸ್.!

ಕರಾವಳಿ

ಬಿಲ್ಲವರ ಪರಮೋಚ್ಚ ನಾಯಕ ಪೂಜಾರಿಗೆ ಕೈ ಕೊಟ್ಟ ಬಿಲ್ಲವರು, ಪದ್ಮರಾಜ್ ಕೈ ಹಿಡಿದಾರೇ.!

ಬಲು ಜಿದ್ದಾಜಿದ್ದಿನ ಕ್ಷೇತ್ರವಾಗಿ ಮಂಗಳೂರು ಲೋಕಸಭೆ ಮಾರ್ಪಟ್ಟಿದೆ. ಚುನಾವಣೆ ದಿನಾಂಕ ಮೊದಲು ಅನಾಯಾಸವಾಗಿ ಬಿಜೆಪಿ ವಿಜಯ ದುಂದುಭಿ ಮೊಳಗಿಸುತ್ತದೆ ಅನ್ನುವ ಸುದ್ಧಿಯಲ್ಲಿದ್ದ ಮಂಗಳೂರು ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿ ಕೂಡ ಗೆಲುವಿಗೆ ಪಟ್ಟು ಹಾಕಬೇಕಾದ ಪರಿಸ್ಥಿತಿಯೂ ಎದುರಾಗಿದೆ. ಇದಕ್ಕೆ ಮುಖ್ಯ ಕಾರಣ ಮಂಗಳೂರು ಲೋಕಸಭೆಯಲ್ಲಿ ನಂ 1 ಸ್ಥಾನದಲ್ಲಿರುವ ಬಿಲ್ಲವ ಮತದಾರರ ಜಾತಿ ಪ್ರೇಮ. ಹಿಂದುತ್ವದ ಕೋಟೆಯಲ್ಲಿ ಜಾತಿ ಸಮೀಕರಣ ವರ್ಕೌಟ್ ಆಗುತ್ತದಾ.? ಕಾಂಗ್ರೆಸ್ ಅಚ್ಚರಿಯ ಗೆಲುವು ಸಾಧ್ಯನಾ.? ಇತ್ತ ಜಾತಿ ಸಮೀಕರಣ ಬಿಜೆಪಿಗೆ ಗೆಲುವು ತಂದುಕೊಡೂತ್ತಾ ಅನ್ನುವ ಸಖತ್ತ್ ಡೀಟೈಲ್ಸ್ ಇಲ್ಲಿದೆ ನೋಡಿ.

ಲೋಕಸಭಾ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಬಿಸಿಯೇರುತ್ತಿದೆ. ಸಹಜವಾಗಿಯೇ ಎಲ್ಲಾ ಪಕ್ಷದಲ್ಲೂ ಭಿನ್ನಮತ ಹೊಗೆಯಾಡುತ್ತಿದೆ. ಅದರಲ್ಲೂ ಬಿಜೆಪಿಯಲ್ಲಿ ಎಲ್ಲಕ್ಕಿಂತ ಹೆಚ್ಚಾಗಿ ಬಂಡಾಯದ ಬೇಗುದಿ ಇದೆ. ಈ ನಡುವೆ ಬಿಜೆಪಿ-ಜೆಡಿಎಸ್ ದೋಸ್ತಿ ಲಾಭವೋ.? ನಷ್ಟವೋ.? ಅನ್ನುವುದು ಚುನಾವಣಾ ಫಲಿತಾಂಶದ ನಂತರವಷ್ಟೇ ತಿಳಿದುಬರಲಿದೆ.

ಕಾಂಗ್ರೆಸ್ ಪಕ್ಷ ಈ ಬಾರಿ ಗ್ಯಾರಂಟಿಯನ್ನೇ ನೆಚ್ಚಿಕೊಂಡಿದ್ದು, ಬಿಜೆಪಿ ಮತ್ತದೇ ಮೋದಿ ಜಪ ಬಲದಲ್ಲಿ ಚುನಾವಣೆ ಎದುರಿಸುತ್ತಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಇಡೀ ರಾಜ್ಯದಲ್ಲಿ ಕಾಂಗ್ರೆಸ್ಸಿಗೆ ಸಿಕ್ಕಿದ್ದು ಒಂದು ಸ್ಥಾನ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಈ ಬಾರಿ ಮಾಡು ಇಲ್ಲವೇ ಮಡಿ ರೀತಿಯ ಪಂದ್ಯ. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಒಂದೊಮ್ಮೆ ಕಳಪೆ ಪ್ರದರ್ಶನ ನೀಡಿದರೆ ಗ್ಯಾರಂಟಿ ಸರಕಾರವೇ ಸಂಕಷ್ಟ ಎದುರಿಸುವ ಸಾಧ್ಯತೆ ಕೂಡ ಇದೆ.

ಇತ್ತ ಕರಾವಳಿ ಭಾಗ ಬಿಜೆಪಿಯ ಭದ್ರಕೋಟೆ. ಇಲ್ಲಿ ಅಭ್ಯರ್ಥಿ ಯಾರೇ ಇರಲಿ ಬಿಜೆಪಿಗೆ ಗೆಲುವು ಅನ್ನುವ ರೀತಿಯ ವಾತಾವರಣ ಇದೆ. ಇಂದಿರಾ ಗಾಂಧಿ ಕಾಲದಲ್ಲಿ ಒಂದು ಲೈಟ್ ಕಂಬವನ್ನು ನಿಲ್ಲಿಸಿದರೂ ಕಾಂಗ್ರೆಸ್ ಗೆಲ್ಲುತ್ತೆ ಅನ್ನುವ ವಾತಾವರಣವಿತ್ತು. ಅದು ಈಗ ಕರಾವಳಿಯಲ್ಲಿ ಬಿಜೆಪಿಗೆ ಅನ್ವರ್ಥವಾಗಿದೆ. ಆದರೆ ಇತಿಹಾಸ ಕೆದಕುತ್ತಾ ಹೋದರೆ ಕರಾವಳಿ ಬಿಜೆಪಿಯ ಭದ್ರಕೋಟೆ ಆಗಿರಲಿಲ್ಲ. ಇಲ್ಲಿ ಕಾಂಗ್ರೆಸ್ ಬಾವುಟ ಹಾರಿದ್ದೇ ಹೆಚ್ಚು. ಜನಾರ್ದನ ಪೂಜಾರಿ, ಆಸ್ಕರ್ ಫರ್ನಾಂಡಿಸ್ ಕರಾವಳಿ ಭಾಗದಲ್ಲಿ ಸತತವಾಗಿ ಗೆಲ್ಲುತ್ತಾ ಬಂದಿದ್ದರು. ಆದರೆ 90 ರ ದಶಕದ ನಂತರ ರಾಮಜನ್ಮಭೂಮಿ ವಿವಾದ ಮುನ್ನೆಲೆಗೆ ಬಂದ ನಂತರ ಬಿಜೆಪಿಯೇ ಕರಾವಳಿಯನ್ನು ನಿರಂತರವಾಗಿ ಆಳುತ್ತಿದೆ. 1991 ರ ಲೋಕಸಭಾ ಚುನಾವಣೆ ನಂತರ ಸತತ ಎಂಟು ಚುನಾವಣೆಗಳಲ್ಲೂ ಇಲ್ಲಿ ಬಿಜೆಪಿಯದ್ದೇ ಪ್ರಾಬಲ್ಯ. ಕಾಂಗ್ರೆಸ್ ಇಲ್ಲಿ ಮಕಾಡೆ ಮಲಗಿದೆ.

90 ರ ದಶಕದ ನಂತರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿಯಿಂದ ವಿ.ಧನಂಜಯ ಕುಮಾರ್ ಸತತವಾಗಿ ನಾಲ್ಕು ಬಾರಿ ಆಯ್ಕೆಯಾದರೆ, ಸದಾನಂದ ಗೌಡ ಒಂದು ಬಾರಿ, ನಳೀನ್ ಕುಮಾರ್ ಕಟೀಲ್ ಹ್ಯಾಟ್ರಿಕ್ ಗೆಲುವನ್ನು ಕಂಡಿದ್ದರು. ಪ್ರತಿ ಲೋಕಸಭಾ ಚುನಾವಣೆಯಲ್ಲೂ ಬಿಜೆಪಿ ಗೆಲುವಿನ ಅಂತರ ಹೆಚ್ಚಾಗುತ್ತಾ ಹೋಯಿತು. ಬಿಜೆಪಿಯದ್ದು ಆನೆ ನಡೆದಿದ್ದೇ ಹಾದಿ ಅನ್ನುವಂತಾಯಿತು. ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮಿಥುನ್ ರೈ ಅನ್ನುವ ಬಂಟ ಯುವ ನಾಯಕನನ್ನು ಕಣಕ್ಕಿಳಿಸಿ ಬಿಜೆಪಿಗೆ ಠಕ್ಕರ್ ಕೊಡುವ ಪ್ರಯತ್ನ ಮಾಡಿತ್ತಾದರೂ ಮೋದಿ ಜಪದ ಮುಂದೆ ಅದು ಠುಸ್ಸಾಯಿತು. ಕಾಂಗ್ರೆಸ್ ಗೆ ದಕ್ಕಿದ್ದು ಹೀನಾಯ ಸೋಲು. ಬಿಜೆಪಿಯ ಗೆಲುವಿನ ಅಂತರ ಅಂದಾಜು 3 ಲಕ್ಷದಷ್ಟು ಹೆಚ್ಚಾಯ್ತು.

ಆದರೆ ಈ ಬಾರಿ ಚುನಾವಣೆ ಬಿಜೆಪಿಗೆ ಅಷ್ಟೇನೂ ಸುಲಭದಂತೆ ಕಾಣುತ್ತಿಲ್ಲ. ಕರಾವಳಿಯಲ್ಲಿ ಪ್ರಪ್ರಥಮ ಬಾರಿಗೆ ಎಂಬಂತೆ ಜಾತಿ ರಾಜಕಾರಣದ ಸದ್ದು ಈ ಬಾರಿ ಜೋರಾಗಿ ಕೇಳಿ ಬರುತ್ತಿದೆ. ಜಾತಿ ರಾಜಕಾರಣದ ಹಿನ್ನೆಲೆ ನೋಡಿದಾಗ ಇಲ್ಲಿ ಕಾಂಗ್ರೆಸ್ ಸೋಲುವುದು ಕಷ್ಟವೇ. ಆದರೆ ಕಳೆದ ಎಂಟು ಚುನಾವಣೆ ಹಿಂದುತ್ವ, ಮೋದಿ ಅಲೆ, ಜಾತಿ ರಾಜಕಾರಣವನ್ನು ಮೀರಿ ಬೆಳೆದು ನಿಂತಿತ್ತು. ಮಂಗಳೂರು ಲೋಕಸಭಾ ಕ್ಷೇತ್ರದಲ್ಲಿ ಬಿಲ್ಲವ ಮತದಾರರ ಸಂಖ್ಯೆಯೇ ಅತೀ ಹೆಚ್ಚು. ಬಹುತೇಕ ಬಿಲ್ಲವರು ಜಾತಿ ನೋಡದೆ ಬಿಜೆಪಿಗೆ ಮತ ಹಾಕುತ್ತಾ ಬಂದಿರುವುದರಿಂದ ಇಲ್ಲಿ ಬಿಜೆಪಿ ಬಾವುಟ ಹಾರಿಸಲು ಕಾರಣವಾಗಿದೆ. ಆದರೆ ಈ ಬಾರಿ ಅಂತಹ ಪರಿಸ್ಥಿತಿ ಕ್ಷೇತ್ರದಲ್ಲಿ ಕಾಣಸಿಗುತ್ತಿಲ್ಲ. ಬಿಲ್ಲವರಲ್ಲಿ ರಾಜಕೀಯ ಪ್ರಜ್ಞೆ ಮೂಡಿದಂತೆ ಕಾಣುತ್ತಿದೆ. ತಮ್ಮ ಸಮುದಾಯದ ಜನರನ್ನು ರಾಜಕೀಯವಾಗಿ ಬಿಜೆಪಿ ಬಳಸಿಕೊಂಡಿದೆ ಅಷ್ಟೇ, ಈ ಬಾರಿ ಯಾವುದೇ ಪಕ್ಷವಿರಲಿ, ತಮ್ಮ ಸಮುದಾಯದ ಅಭ್ಯರ್ಥಿ ಪರ ಮತ ಚಲಾಯಿಸುವಂತೆ ಬಿಲ್ಲವ ಸಂಘಟನೆಗಳು, ಬಿಲ್ಲವ ಮುಂದಾಳುಗಳು ತೆರೆಮರೆಯಲ್ಲಿ ಬಿಲ್ಲವ ಮತದಾರರ ಮನ ಒಲಿಸುವ ಕೆಲಸ ಜೋರಾಗಿ ನಡೆಯುತ್ತಿದೆ.
ಪಕ್ಷ ನೋಡದೆ ಜಾತಿ ಆಧಾರಿತವಾಗಿ ಮತ ನೀಡಿ ಅನ್ನುವ ಕ್ಯಾಂಪೈನ್ ಗಳು ಬಿಲ್ಲವರ ನಡುವೆ ನಡೆಯುತ್ತಿದೆ.

ಬಿಜೆಪಿಯಿಂದ ಹ್ಯಾಟ್ರಿಕ್ ಗೆದ್ದ ನಳೀನ್ ಕುಮಾರ್ ಕಟೀಲ್ ರಿಗೆ ಗೇಟ್ ಪಾಸ್ ನೀಡಿ ಹೊಸ ಮುಖ ಕ್ಯಾಪ್ಟನ್ ಬ್ರಿಜೇಶ್ ಚೌಟರನ್ನು ಕಣಕ್ಕಿಳಿಸಿದೆ. ಇತ್ತ ಕಾಂಗ್ರೆಸ್ ಬಿಲ್ಲವ ಮುಂದಾಳು, ಜನಾರ್ದನ ಪೂಜಾರಿ ಅತ್ಯಾಪ್ತ ಪದ್ಮರಾಜ್ ರಿಗೆ ಟಿಕೆಟ್ ದೊರೆತಿದೆ. ಉಡುಪಿಯಲ್ಲಿ ಬಿಜೆಪಿಯಿಂದ ಬಿಲ್ಲವ ಕೋಟಾ ಶ್ರೀನಿವಾಸ ಪೂಜಾರಿಗೆ ಟಿಕೆಟ್ ನೀಡಿದರೆ, ಕಾಂಗ್ರೆಸ್ ಸಜ್ಜನ, ಪಕ್ಷಾಂತರಿ ಬಂಟ ಸಮುದಾಯದ ಜಯಪ್ರಕಾಶ್ ಹೆಗ್ಡೆಗೆ ಟಿಕೆಟ್ ನೀಡಿದೆ. ಬಹುತೇಕ ಬಿಲ್ಲವರೇ ನಂ 1 ಸ್ಥಾನದಲ್ಲಿ ದಕ್ಷಿಣ ಕನ್ನಡ ದಲ್ಲಿ ಇರುವುದರಿಂದ ಈ ಬಾರಿ ಪಕ್ಷ ಪ್ರೇಮ ಮರೆತು ಜಾತಿ ಆಧಾರಿತವಾಗಿ ಮಂಗಳೂರಿನಲ್ಲಿ ಪದ್ಮರಾಜ್, ಉಡುಪಿಯಲ್ಲಿ ಕೋಟಾ ಗೆ ಮತ ಚಲಾಯಿಸುವಂತೆ ಬಿಲ್ಲವ ಸಮುದಾಯದಲ್ಲಿ ಭಾರೀ ಕಸರತ್ತು ನಡೆಯುತ್ತಿದೆ.

ಮಂಗಳೂರು ಲೋಕಸಭಾ ಕ್ಷೇತ್ರದಲ್ಲಿ ಮುಸ್ಲಿಂ-ಕ್ರೈಸ್ತರ ಮತದಾರರ ಸಂಖ್ಯೆ ಅಂದಾಜು 6.5 ಲಕ್ಷದಷ್ಟಿದೆ. ಹಿಂದೂ ಮತಗಳು ಜಾತಿ ಆಧಾರಿತವಾಗಿ ಒಡೆದರೆ ಇಲ್ಲಿ ಕಾಂಗ್ರೆಸ್ ಗೆಲುವು ಸುಲಭ. ಆದರೆ ಕಳೆದ ಎಂಟು ಚುನಾವಣೆಗಳಲ್ಲಿ ಈ ಲೆಕ್ಕಾಚಾರ ಉಲ್ಟಾ ಪಲ್ಟಾ ಆಗಿತ್ತು. ಆದರೆ ಈ ಬಾರಿ ಬಿಲ್ಲವ ಪ್ರಭಾವಿ ಮುಖಂಡ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿರುವುದರಿಂದ ಜಾತಿ ಸಮೀಕರಣ ವರ್ಕೌಟ್ ಆದರೆ ಇಲ್ಲಿ ಕಾಂಗ್ರೆಸ್ ಗೆಲುವು ಬಲು ಸುಲಭ. ಆದರೆ ದಕ್ಷಿಣ ಕನ್ನಡ ಜಿಲ್ಲೆಯ ಮತದಾರ ಜಾತಿಯ ಹಿಂದೆ ಓಡಿದ ಇತಿಹಾಸವೇ ಬಲು ವಿರಳ. ಇಲ್ಲಿ ಏನಿದ್ದರೂ ಸೈದ್ಧಾಂತಿಕ ಹೋರಾಟದ ಹಿನ್ನೆಲೆಯಲ್ಲಿಯೇ ಚುನಾವಣೆ ನಡೆದಿರುವುದು. ಆದರೆ ಈ ಬಾರಿ ಹೊಸ ಮನ್ವಂತರಕ್ಕೆ ಜಿಲ್ಲೆ ಸಾಕ್ಷಿಯಾಗುತ್ತಾ ಅನ್ನುವುದನ್ನು ಕಾದು ನೋಡಬೇಕಿದೆ.

ಇನ್ನು ಬಿಜೆಪಿ, ಮೋದಿಯನ್ನೆ ನಂಬಿರುವ, ಅವುಗಳ ಬದಲು ಬೇರೆ ಯಾವುದೇ ವಿಷಯಕ್ಕೂ ಆಸ್ಪದ ಕೊಡದ ಬಿಲ್ಲವ ಯುವ ಮತದಾರರು ಜಾತಿ ಆಧಾರಿತವಾಗಿ ಮತ ಚಲಾಯಿಸುವ ಬಗ್ಗೆ ಯಾವ ರಿಯಾಕ್ಟ್ ನೀಡುತ್ತಾರೆ ಅನ್ನುವುದೇ ಯಕ್ಷ ಪ್ರಶ್ನೆ. ಇತ್ತ ಬಿಲ್ಲವ ಸಮುದಾಯದಲ್ಲಿ ನಡೆಯುತ್ತಿರುವ ಜಾಗೃತಿ ಕೇವಲ ತೋರಿಕೆಗಾಗಿ ನಡೆದು ಅದು ಮತವಾಗಿ ಪರಿವರ್ತನೆ ಆಗದಿದ್ದರೆ, ಇತ್ತ ಸೈಲೆಂಟಾಗಿ ಬಿಲ್ಲವ ನಂತರ ಹೆಚ್ಚಿನ ಮತದಾರ ಹೊಂದಿರುವ ಬಂಟ ಸಮುದಾಯ ಏಕಪಕ್ಷೀಯ ತೀರ್ಮಾನ ಕೈಗೊಂಡರೆ ಚೌಟರ ಗೆಲುವಿನ ಅಂತರ ನಾಲ್ಕು ಲಕ್ಷದ ಕಡೆಗೆ ಹೊರಟರೂ ಅಚ್ಚರಿಯಿಲ್ಲ. ಇತ್ತ ಬಿಲ್ಲವರ ಮತವೂ ಇಲ್ಲ, ಅತ್ತ ಸಾಂಪ್ರದಾಯಿಕವಾಗಿ ಬೀಳುತ್ತಿದ್ದ ಬಂಟರ ಮತವೂ ಕೈ ತಪ್ಪಿ ಕಾಂಗ್ರೆಸ್ ಪರಿತಪಿಸುವ ಸಾಧ್ಯತೆಯೂ ಇದೆ. ಜಾತಿ ಆಧಾರಿತವಾಗಿ ನಡೆಯುವ ಮತದಾನ ಕೈಕೊಟ್ಟರೆ ಇನ್ನೊಂದು ಪ್ರಬಲ ಸಂಖ್ಯೆಯಲ್ಲಿರುವ ಸಮುದಾಯ ಸೈಲೆಂಟಾಗಿ ಒಗ್ಗೂಡಿದರೆ ಫಲಿತಾಂಶವೇ ವ್ಯತಿರಿಕ್ತವಾಗಬಹುದು. ಯಾವುದಕ್ಕೂ ಎಚ್ಚರಿಕೆಯ ಹೆಜ್ಜೆ ಇಡುವ ಅಗತ್ಯ ಖಂಡಿತ ಇದೆ.