ಕುಶಾಲನಗರ: ವ್ಯಕ್ತಿಯೋರ್ವರನ್ನು ಅಪಹರಿಸಿ, ಚಿನ್ನಾಭರಣ ಸಹಿತ ನಗದು ದೋಚಿದ ಎಂಟು ಮಂದಿ ಆರೋಪಿಗಳ ಬಂಧನ

ರಾಜ್ಯ

ಕುಶಾಲನಗರ: ವ್ಯಕ್ತಿಯೋರ್ವರನ್ನು ಅಪಹರಿಸಿ ಚಿನ್ನಾಭರಣ ಮತ್ತು ನಗದು ದೋಚಿದ ಪ್ರಕರಣಕ್ಕೆ ಸಂಬಂಧಿಸಿ ಎಂಟು ಮಂದಿ ಆರೋಪಿಗಳನ್ನು ಕುಶಾಲನಗರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಬಂಧಿಸಲಾಗಿದೆ. ಮೈಸೂರು ನಿವಾಸಿ ಯಾಸಿನ್‌, ಶ್ರೀರಾಮ್‌ಪುರ ನಿವಾಸಿ ರುಕ್ಸಾನಾ, ಗೌಸಿಯ ನಗರ ರಿಯಾಜ್‌, ಸಹಬಾಜ್‌, ಅಬ್ದುಲ್‌, ರೇಣುಕಾ, ಸುಹೇಲ್‌ ಅಹಮ್ಮದ್‌, ಪಿರಿಯಾಪಟ್ಟಣ ನಿವಾಸಿ ಯಾಸಿನ್‌, ಗೌಸಿಯಾ ನಗರದ ಪೈಜಲ್‌ ಖಾನ್‌, ರಾಜೀವ್‌ ನಗರದ ಮುದಾಸಿರ್‌ ಬಂಧಿತ ಆರೋಪಿಗಳಾಗಿದ್ದಾರೆ. ಮತ್ತೋರ್ವ ಆರೋಪಿ ಪಿಳ್ಳೆ ಎಂಬಾತ ತಲೆ ಮರೆಸಿಕೊಂಡಿದ್ದಾನೆ

ಎಪ್ರಿಲ್ 4ರಂದು ರಾತ್ರಿ 7.30ರ ಸಮಯಕ್ಕೆ ಕುಶಾಲನಗರ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಿಂದ ಹೇಮಂತ್‌ ಎಂಬವರನ್ನು ಸ್ಕಾರ್ಪಿಯೋ ವಾಹನದಲ್ಲಿ ಆರೋಪಿಗಳು ಬಲವಂತವಾಗಿ ಅಪಹರಿಸಿ, ಬೆಟ್ಟದಪುರ ರಸ್ತೆಯಲ್ಲಿ ಚಾಕು ತೋರಿಸಿ, ಬೆದರಿಕೆ ಹಾಕಿ 5 ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದರು. ಹೇಮಂತ್‌ ಅವರ ಕೈಯ್ಯಲ್ಲಿದ್ದ ಒಟ್ಟು 6 ಚಿನ್ನದ ಉಂಗುರ, 1 ಬ್ರಾಸ್‌ಲೆಟ್‌, ಚಿನ್ನದ ಚೈನ್‌ ಹಾಗೂ ಚಿನ್ನದ ಲಾಕೆಟ್‌, ಎ.ಟಿ.ಎಂ ಕಾರ್ಡ್‌ಗಳು, 2 ಮೊಬೈಲ್‌ ಮತ್ತು 1 ಸ್ಮಾರ್ಟ್‌ ವಾಚ್‌ ಹಾಗೂ ಪರ್ಸ್‌ ಸಹಿತ 4 ಸಾವಿರ ರೂ. ನಗದನ್ನು ದೋಚಿ ಪರಾರಿಯಾಗಿದ್ದರೆಂದು ಆರೋಪಿಸಿ ಹೇಮಂತ್‌ ಎಪ್ರಿಲ್ 5ರಂದು ಕುಶಾಲನಗರ ಪಟ್ಟಣ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಕುಶಾಲನಗರ ಪೊಲೀಸರು ಪ್ರಕರಣದಲ್ಲಿ ಭಾಗಿಯಾಗಿದ್ದ ಓರ್ವ ಮಹಿಳೆ ಸೇರಿದಂತೆ ಒಟ್ಟು 8 ಆರೋಪಿಗಳನ್ನು ಬಂಧಿಸಿ ಸೊತ್ತುಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತ ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ ಸ್ಥಾರ್ಪಿಯೋ ವಾಹನ, ದರೋಡೆಗೈದ ಚಿನ್ನಾಭರಣ, ಮೊಬೈಲ್‌ಗ‌ಳ ಸಹಿತ ಸೊತ್ತುಗಳನ್ನು ವಶಪಡಿಸಿಕೊಂಡಿರುತ್ತಾರೆ. ಸೋಮವಾರಪೇಟೆ ಡಿವೈಎಸ್‌ಪಿ ನೇತ್ರತ್ವದಲ್ಲಿ, ಕುಶಾಲನಗರ ಟೌನ್‌ ಪೊಲೀಸ್‌ ಠಾಣೆಯ ವೃತ್ತ ನಿರೀಕ್ಷಕರು, ಠಾಣಾಧಿಕಾರಿಗಳು ಹಾಗೂ ಸಿಬಂದಿಗಳು ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.