‘ನನ್ನನ್ನು ಬಂಧಿಸಬಹುದು. ಆದರೆ ನನ್ನ ಚಳುವಳಿಯನ್ನಲ್ಲ’ ಈ ಒಂದು ಮಾತಿನ ಮೂಲಕ ನವ ತಲೆಮಾರಿನ ಹೋರಾಟಕ್ಕೆ ಕಿಚ್ಚು ಹಬ್ಬಿಸಿದ್ದ ದಿಟ್ಟೆ ನೇಹಾ ಬೋರಾ. ಇಂದು ಸೋಷಿಯಲ್ ಮೀಡಿಯಾ ಪ್ಲಾಟ್ ಫಾರ್ಮ್ ಆಗಲಿ, ಮಾಧ್ಯಮಗಳಲ್ಲಿ ಮಿಂಚುತ್ತಿರುವ ಏಕೈಕ ಹೆಸರು ನೇಹಾ ಬೋರಾ ಅವರದ್ದು. ಮೋದಿ- ಶಾ ಸರ್ಕಾರವನ್ನು ನಡುಗಿಸಿದ್ದ ದಿಟ್ಟ ಹೋರಾಟಗಾರ್ತಿ ಆಕೆ. ಪೊಲೀಸರು ಎಷ್ಟೇ ಬಾರಿ ಬಂಧಿಸಿದರೂ ಛಲ ಬಿಡದೆ ಮುನ್ನುಗ್ಗುವ ಯುವ ನಾಯಕಿ. ಪ್ರತಿಭಟನಾ ರಂಗದಲ್ಲಿ ಆಕೆಯ ರೋಷಾ ವೇಷಾ.. ಫ್ಯಾಶಿಸ್ಟ್ ಆಡಳಿತ ಪಕ್ಷವನ್ನು ಕಾಡುವ ಆಕೆಯ ಗಟ್ಟಿತನದ ಹೋರಾಟ.. ಇವೆಲ್ಲ ಇಂದು ನೇಹಾ ಬೋರಾ ಅನ್ನುವ ವಿದ್ಯಾರ್ಥಿ ನಾಯಕಿಯನ್ನು ಇಂದಿನ ಯುವ ತಲೆಮಾರಿಗೆ ಐಕಾನ್ ರೀತಿ ಪರಿಚಯಿಸಿದೆ.

ನಾವು ಇಂದಿರಾ ಗಾಂಧಿಯನ್ನು ಐರಾನ್ ಲೇಡಿ ಎಂದು ಕರೆಯುತ್ತೇವೆ. ಇಂದಿರಾ ಗಾಂಧಿಗಿದ್ದ ದಿಟ್ಟತನ, ಆಡಳಿತ ವೈಖರಿಯಲ್ಲಿ ನಡೆಸಿದ ರೀತಿಗೆ ಇಡೀ ದೇಶವೇ ಆಕೆಯನ್ನು ‘ಐರನ್ ಲೇಡಿ’ ಎಂದು ಕೊಂಡಾಡುತ್ತಿದೆ. ಆದರೆ ಈಗಿನ ಯುವ ತಲೆಮಾರಿಗೆ ನೇಹಾ ಬೋರಾ ಐರನ್ ಲೇಡಿ ರೀತಿಯಲ್ಲಿ ಗುರುತಿಸುತ್ತಿದ್ದಾರೆ. ಹೋರಾಟ ರಂಗದಲ್ಲಿ ಆಕೆಯ ಕಿಚ್ಚು, ಗಂಡಸರನ್ನು ನಾಚಿಸುವಂತೆ ತನ್ನ ಗಟ್ಟಿತನದ ನಿರ್ಧಾರದ ಮೂಲಕ ತಾನು ಅಂದುಕೊಂಡಿದ್ದನ್ನು ಸಾಧಿಸುವ ಛಲ ಇಂದು ಆಕೆಯನ್ನು ದೇಶದಾದ್ಯಂತ ಪರಿಚಯಿಸಿದೆ. ಜೆನ್ ಝೀ ಹೋರಾಟಕ್ಕೆ ನಿರ್ದಿಷ್ಟ ದಿಕ್ಕು ತೋರಿಸುವ ಮೂಲಕ ಅಸಾಧ್ಯವಾದುದನ್ನು ಸಾಧಿಸಬಹುದು ಅನ್ನುವುದನ್ನು ತೋರಿಸಿಕೊಟ್ಟ ಗಟ್ಟಿಗಿತ್ತಿ. ಕಮ್ಯೂನಿಸ್ಟ್ ಚಿಂತನೆಯನ್ನು ಮೈಗೂಡಿಸಿಕೊಂಡ ಈ ಯುವ ನಾಯಕಿ ಪ್ರತಿಭಟನಾ ರಂಗಕ್ಕೆ ಇಳಿಯುತ್ತಾರೆ ಅಂದಾಗ ಇಡೀ ಸರಕಾರವೇ ಗಡ ಗಡ ನಡುಗುತ್ತದೆ. ಅಂತಹದ್ದೊಂದು ಹೈಪ್ ಸೃಷ್ಟಿಸಿದ ಹೋರಾಟಗಾರ್ತಿ ನೇಹಾ ಬೋರಾ.
ಎಡಪಂಥೀಯ ವಿದ್ಯಾರ್ಥಿ ಸಂಘಟನೆಯಾದ ಅಲ್ ಇಂಡಿಯಾ ಸ್ಟೂಡೆಂಟ್ ಅಸೋಸಿಯೇಷನ್ (ಎಸಿ ಎಸ್ ಎ) ಅಧ್ಯಕ್ಷೆಯಾಗಿ ಯುವ ಜನತೆಯ ಶಿಕ್ಷಣ ಹಕ್ಕುಗಳ ಬಗ್ಗೆ ಹೋರಾಡುತ್ತಿರುವ ನೇಹಾ ಬೋರಾ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ಪಿಎಚ್ ಡಿ ವಿದ್ಯಾರ್ಥಿನಿ. ಉತ್ತರಖಂಡ ಮೂಲದ ನೇಹಾ ಬೋರಾ ರ ತಂದೆ ಭಾರತೀಯ ಸೈನ್ಯದಲ್ಲಿ ಸೇವೆ ಸಲ್ಲಿಸಿದ್ದರು.

ನಾವು ಸಾಮಾಜಿಕ ಜಾಲತಾಣ ಅಥವಾ ಮಾಧ್ಯಮಗಳಲ್ಲಿ ಹೋರಾಟದ ವಿಡಿಯೋ ಕಂಡಾಗ ಅವರ ಕಿಚ್ಚನ್ನು ಕಂಡು ಉಘೇ ಉಘೇ ಅನ್ನುತ್ತೇವೆ. ವಿಡಿಯೋ ವನ್ನು ಒಬ್ಬರಿಂದ ಮತ್ತೊಬ್ಬರಿಗೆ ಹಂಚುತ್ತೇವೆ. ಎ.ಸಿ ರೂಮಿನಲ್ಲಿ ಕೂತು ಅವರ ಹೋರಾಟವನ್ನು ಜಡ್ಜ್ ಮಾಡುವಷ್ಟು ಅವರ ಬದುಕು ಅಷ್ಟೊಂದು ಸಲೀಸಾಗಿ ಇರುವುದಿಲ್ಲ. ನೇಹಾ ಬೋರಾ ಳನ್ನೇ ಉಧಾಹರಣೆಯಾಗಿ ತೆಗೆದುಕೊಂಡರೆ, ಇಂದು ದೇಶ ವಿದೇಶಗಳಲ್ಲಿ ಆಕೆಯ ಹೋರಾಟವನ್ನು ಮೆಚ್ಚುತ್ತೇವೆ. ಆದರೆ ಖುದ್ದು ತಂದೆಯೇ ಆಕೆಯೊಂದಿಗೆ ಮಾತನಾಡದೆ ಹಲವು ವರ್ಷಗಳು ಸಂದಿದೆ. ಕಾರಣ ಬೋರಾ ಆಯ್ಕೆ ಮಾಡಿಕೊಂಡ ಮಾರ್ಗ ಕಾರಣ. ಇಡೀ ಸರ್ಕಾರವನ್ನು ಎದುರು ಹಾಕಿಕೊಂಡು ಈ ದೇಶಕ್ಕಾಗಿ, ಇಲ್ಲಿನ ನವ ತಲೆಮಾರಿಗಾಗಿ ತನ್ನ ಎಲ್ಲಾ ಕನಸುಗಳನ್ನು ಬದಿಗಿಟ್ಟು ಬೀದಿ ಹೋರಾಟಕ್ಕೆ ಇಳಿಯುವುದು ಅಷ್ಟು ಸುಲಭದ ಕೆಲಸವಲ್ಲ. ಅದು ಮುಳ್ಳಿನ ನಡಿಗೆ. ತನ್ನ ಪ್ರೀತಿ ಪಾತ್ರರನ್ನು, ಕುಟುಂಬವನ್ನು ಎದುರು ಹಾಕಿಕೊಳ್ಳಬೇಕಿದೆ. ಅದು ಕೆಲವೇ ಕೆಲವು ಧೈರ್ಯಶಾಲಿಗಳಿಗೆ ಮಾತ್ರ ಸಾಧ್ಯ. ಅದರಲ್ಲಿ ಒಬ್ಬಾಕೆ ನೇಹಾ ಬೋರಾ.
ಸಿಜೆಪಿಯ ಘಟಾನುಘಟಿ ನಾಯಕರು ನೀಟ್ ಪರೀಕ್ಷೆ, ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ಹಮ್ಮಿಕೊಂಡ ಹೋರಾಟದ ಮಗ್ಗುಲಿಗೆ ತಾರ್ಕಿಕ ಅಂತ್ಯ ಕಾಣಿಸಿದ್ದು ನೇಹಾ ಬೋರಾ ಸೇರಿದಂತೆ ಕೆಲವೇ ಕೆಲವು ಹೋರಾಟದ ಮನೋಭಾವದ ಕಮ್ಯುನಿಸ್ಟ್ ವೀರ ವನಿತೆಯರು. ನೀಟ್ ಪರೀಕ್ಷೆ ಅಕ್ರಮದ ವಿರುದ್ಧ ಜಂತರ್ ಮಂತರ್ ನಲ್ಲಿ ಅಹೋರಾತ್ರಿ ನಡೆಸಿದ್ದ ಬೃಹತ್ ಪ್ರತಿಭಟನೆಯಲ್ಲಿ ಸೋನಂ ವಾಗ್ಚುಕ್ ಜೊತೆ ಗಟ್ಟಿಯಾಗಿ ನಿಂತಿದ್ದ ಬೋರಾ, ಮುಖ್ಯ ಚುನಾವಣಾ ಆಯುಕ್ತ ವಿರುದ್ಧ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಎಲ್ಲಾ ಸಿಜೆಪಿ ನಾಯಕರನ್ನು ಬಂಧಿಸಿ ಅಘೋಷಿತ ತುರ್ತು ಪರಿಸ್ಥಿತಿ ರೀತಿ ನಿರ್ಮಿಸಿದ್ದ ದೆಹಲಿ ಪೊಲೀಸರ ಅಭೇದ್ಯ ಕೋಟೆಯನ್ನು ಭೇದಿಸಿ ತನ್ನ ದಂಡಿನ ಮೂಲಕ ಬ್ಯಾರಿಕೇಡ್ ಹತ್ತಿ ಕೇಂದ್ರ ಸರಕಾರಕ್ಕೆ ನಡುಗ ಹುಟ್ಟಿಸಿ ರೋಷಾಗ್ಮಿ ರೀತಿಯಲ್ಲಿ ಪ್ರತಿಭಟಿಸುವ ಮೂಲಕ ದೇಶದಾದ್ಯಂತ ಗಮನ ಸೆಳೆದ ಐರನ್ ಲೇಡಿ ನೇಹಾ ಬೋರಾ.

ಕೇವಲ ನೇಹಾ ಬೋರಾ ಮಾತ್ರವಲ್ಲ ಸಿಜೆಪಿ ಪ್ರತಿಭಟನೆಯನ್ನು ಜೀವಂತವಾಗಿರುವಂತೆ ನೋಡಿಕೊಂಡ ಹಲವು ಕಮ್ಯೂನಿಸ್ಟ್ ವೀರ ವನಿತೆಯರು ಕೂಡ ಇದ್ದಾರೆ. ಪೊಲೀಸರ ಲಾಠಿ ಏಟಿಗೆ ಬಗ್ಗದೆ, ಬಂಧನಕ್ಕೂ ಜಗ್ಗದೆ ಇಂಕ್ವಿಲಾಬ್ ಜಿಂದಾಬಾದ್ ಮೂಲಕ ಕೆಂಪು ವನಿತೆಯರು ಸರಕಾರವನ್ನೇ ನಡುಗಿಸುವಂತೆ ಮಾಡಿದ್ದಾರೆ. ಅವರಲ್ಲಿ ಪ್ರಮುಖ ಹೆಸರು ಕೇರಳದ ಪವಿತ್ರ ಪುಝಕಲ್. ಎಸ್ ಎಫ್ ಐ ವಿದ್ಯಾರ್ಥಿ ಸಂಘಟನೆಯ ನಾಯಕಿಯಾಗಿರುವ ಪವಿತ್ರ ಇಡೀ ಪ್ರತಿಭಟನೆಯಲ್ಲಿ ಹೋರಾಟದ ಕಿಚ್ಚು ಹಬ್ಬಿಸಿದ್ದರು. ಕ್ರಾಂತಿಯ ಕಿಡಿ ಎಸ್ ಎಫ್ ಐ ನಾಯಕಿ ಶರಣ್ಯ ವರ್ಮಾ, ದಿಟ್ಟ ಹೋರಾಟಗಾರ್ತಿ ಐಶಾ ಘೋಷ್. ಇವರೆಲ್ಲ ಆಡಳಿತಾರೂಢ ಸರ್ಕಾರವನ್ನು ತನ್ನ ಹೋರಾಟದ ಮೂಲಕ ನಿದ್ರೆ ಕಸಿದವರು. ಮತ್ತೊಂದು ವಿಶೇಷ ಇವರೆಲ್ಲ ಕಮ್ಯೂನಿಸ್ಟ್ ಫ್ಯಾಕ್ಟರಿಯಲ್ಲಿ ಉದಯಿಸಿದ ತಾರೆಗಳು. ಇಡೀ ದೇಶದಲ್ಲಿ ಕಮ್ಯೂನಿಸ್ಟ್ ಪಕ್ಷಕ್ಕೆ ಅಧಿಕಾರ ಇಲ್ಲದಿದ್ದರೂ, ಅನ್ಯಾಯದ ವಿರುದ್ಧ ಬೀದಿಗಿಳಿಯುವುದರಲ್ಲಿ ಇವರೇ ಮುಂಚೂಣಿಗಳು. ಕೆಂಪು ನೀಲಂಗಿ ಪಡೆಯ ಶ್ರಮದಿಂದ ಲಾಭಗಳಿಸುವುದು ಕಾಂಗ್ರೆಸ್ ನಂತಹ ಪಕ್ಷಗಳು. ಇಂತಹ ದಿಟ್ಟ ಹೋರಾಟಗಾರ್ತಿಯರನ್ನು ಪರಿಚಯಿಸಿದ ಕಮ್ಯೂನಿಸ್ಟರಿಗೊಂದು ಲಾಲ್ ಸಲಾಂ.
