ಅಪಾರ್ಟ್ಮೆಂಟ್ ನಿವಾಸಿಗಳ ಹಿತರಕ್ಷಣೆ ಹಾಗೂ ಅವರಿಗೆ ಶಾಸನಬದ್ಧ ಹಕ್ಕುಗಳನ್ನು ಒದಗಿಸುವ ಸಲುವಾಗಿ ರಾಜ್ಯ ಸರ್ಕಾರ ರೂಪಿಸಿರುವ ‘ಕರ್ನಾಟಕ ಅಪಾರ್ಟ್ಮೆಂಟ್ ಮಾಲೀಕತ್ವ ಮತ್ತು ನಿರ್ವಹಣಾ ಮಸೂದೆ’ಗೆ ರಾಜ್ಯಪಾಲರು ಅಂಕಿತ ಹಾಕಿದ್ದಾರೆ.
ಕಟ್ಟಡದ ಆವರಣ ಪ್ರದೇಶ ಸೇರಿದಂತೆ ಎಲ್ಲರೂ ಬಳಸುವ ಜಾಗಗಳು (ಕಾಮನ್ ಸ್ಪೇಸ್), ರಸ್ತೆಗಳು ಹಾಗೂ ಕಾಂಪೌಂಡ್ ಗೋಡೆಗಳ ಮಾಲೀಕತ್ವ ವಿಚಾರದಲ್ಲಿ ಸಾಕಷ್ಟು ಗೊಂದಲಗಳಿದ್ದವು. ಫ್ಲ್ಯಾಟ್ ಗಳನ್ನು ಸಂಪೂರ್ಣ ಮಾರಾಟ ಮಾಡಿದ ನಂತವೂ ಇಂತಹ ಜಾಗಗಳ ಮೇಲೆ ನಿರ್ಮಾಣ ಕಂಪನಿಗಳ ಮಾಲೀಕರು ಹಕ್ಕುಸ್ವಾಮ್ಯ ಹೊಂದಿದ್ದರು. ಬಳಕೆ ಮಾಡಿಕೊಳ್ಳುತ್ತಿ ದ್ದರು. ಈ ಕುರಿತು ವ್ಯಾಜ್ಯಗಳು ಸಾಮಾನ್ಯ ವಾಗಿದ್ದವು. ಕುಂದುಕೊರತೆಗಳನ್ನು ನಿವಾರಿಸಲು ಹಳೆಯ ಕಾನೂನಲ್ಲಿ ಸೂಕ್ತ ಪರಿಹಾರ ಇರಲಿಲ್ಲ. ಹೊಸ ಕಾಯ್ದೆ ಅಪಾರ್ಟ್ಮೆಂಟ್ ನಿವಾಸಿಗಳ ಗೊಂದಲಗಳಿಗೆ ಶಾಶ್ವತ ಪರಿಹಾರ ಒದಗಿಸಲಿದೆ.
ಒಂದೇ ಅಥವಾ ಹಲವು ಕಟ್ಟಡಗಳಲ್ಲಿ ಎಂಟಕ್ಕಿಂತ ಹೆಚ್ಚು ಅಪಾರ್ಟ್ ಮೆಂಟ್ ಹೊಂದಿರುವ ಯೋಜನೆಗಳಿಗೆ ಹೊಸ ಕಾಯಿದೆ ಅನ್ವಯಿಸಲಿದೆ. ಫ್ಲ್ಯಾಟ್, ವಿಲ್ಲಾ, ರೋ ಹೌಸ್, ಕಚೇರಿ, ಅಂಗಡಿ ಮತ್ತು ವಾಣಿಜ್ಯ ಘಟಕಗಳನ್ನೂ ‘ಅಪಾರ್ಟ್ ಮೆಂಟ್ ’ ವ್ಯಾಪ್ತಿಗೆ ತರಲಾಗಿದೆ. ಪ್ರತಿಯೊಂದು ಯೋಜನೆಗೂ ಒಂದೇ ನೋಂದಾಯಿತ ಅಪಾರ್ಟ್ ಮೆಂಟ್ ಮಾಲೀಕರ ಸಂಘ ಇರಬೇಕು. ಬಹುಪಾಲು ಘಟಕಗಳು ಹಂಚಿಕೆಯಾದ ಮೂರು ತಿಂಗಳೊಳಗೆ ಸಂಘ ರಚನೆಗೆ ಕ್ರಮ ಕೈಗೊಳ್ಳಬೇಕು ಎಂದು ಕಾಯಿದೆಯಲ್ಲಿ ಹೇಳಲಾಗಿದೆ.

ಸ್ವಾಧೀನ ಪ್ರಮಾಣಪತ್ರ ದೊರೆತ 60 ದಿನಗಳೊಳಗೆ ಜಮೀನಿನ ದಾಖಲೆಗಳು, ಮಂಜೂರಾದ ನಕ್ಷೆ, ಅಗ್ನಿ ಮತ್ತು ಲಿಫ್ಟ್ ಸುರಕ್ಷತಾ ಪ್ರಮಾಣಪತ್ರ, ನಕ್ಷೆಗಳು, ನಿರ್ವಹಣಾ ಒಪ್ಪಂದ ಹಾಗೂ ಮಾಲೀಕರಿಂದ ಸಂಗ್ರಹಿಸಿದ ಕಾರ್ಪಸ್ ಮತ್ತು ನಿರ್ವಹಣಾ ಹಣವನ್ನು ಸಂಘಕ್ಕೆ ಹಸ್ತಾಂತರಿಸುವುದು ಪ್ರವರ್ತಕರ ಜವಾಬ್ದಾರಿಯಾಗಿದೆ.
ಕಾಮನ್ ಏರಿಯಾ ಮತ್ತು ಸೌಲಭ್ಯಗಳಲ್ಲಿ ಪ್ರತಿಯೊಬ್ಬ ಮಾಲೀಕರಿಗೂ ಅವಿಭಜಿತ ಹಕ್ಕು ಇರಲಿದೆ. ತೆರೆದ, ಸ್ಟಿಲ್ಟ್, ಬೇಸ್ ಮೆಂಟ್ ಹಾಗೂ ಪೋಡಿಯಂ ಪಾರ್ಕಿಂಗ್ ಗಳನ್ನು ಸಾಮಾನ್ಯ ಪ್ರದೇಶವೆಂದು ಪರಿಗಣಿಸಲಾಗಿದ್ದು, ಅವುಗಳನ್ನು ಪ್ರತ್ಯೇಕ ಆಸ್ತಿಯಾಗಿ ಮಾರಾಟ ಮಾಡುವಂತಿಲ್ಲ. ನಿರ್ವಹಣಾ ಶುಲ್ಕವನ್ನು ಸಾಮಾನ್ಯವಾಗಿ ಸೂಪರ್ ಬಿಲ್ಟ್ ಅಪ್ ಪ್ರದೇಶದ ಅನುಪಾತದಲ್ಲಿ ನಿಗದಿಪಡಿಸಲಾಗುತ್ತದೆ. ಬಾಕಿ ಉಳಿಸಿದರೂ ನೀರು, ವಿದ್ಯುತ್, ಲಿಫ್ಟ್, ಅಗ್ನಿ ಸುರಕ್ಷತೆ ಮತ್ತು ಮನೆ ಪ್ರವೇಶದಂತಹ ಅಗತ್ಯ ಸೇವೆಗಳನ್ನು ಸ್ಥಗಿತಗೊಳಿಸುವಂತಿಲ್ಲ.
