ಮಂಗಳೂರಿನ ಪ್ರತಿಷ್ಠಿತ ಮದುವೆ ಹಾಲ್ ನಲ್ಲಿ ಮಗುವಿನ ಚಿನ್ನ ಕಳವು ಪ್ರಕರಣ: ಬರ್ಕೆ ಪೊಲೀಸರಿಂದ ಮಿನ್ನತ್ ಬಂಧನ

ಕರಾವಳಿ

ಸಣ್ಣ ಸಣ್ಣ ಮಕ್ಕಳ ಕುತ್ತಿಗೆಯಲ್ಲಿದ್ದ ಚೈನ್ ಎಗರಿಸುವ ಚಾಲಾಕಿ ಕಳ್ಳಿ

ಮಂಗಳೂರಿನ ಪ್ರತಿಷ್ಠಿತ ಕೊಡಿಯಾಲ್ ಬೈಲ್ ನಲ್ಲಿರುವ ಟಿ.ಎಂ.ಎ ಪೈ ಹಾಲ್ ನಲ್ಲಿ ನಡೆದಿದ್ದ ಮಗುವಿನ ಚಿನ್ನ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಬರ್ಕೆ ಪೊಲೀಸರು ಆರೋಪಿತೆಯನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ.

ಅಕ್ಟೋಬರ್ 18 ರಂದು ಕೊಡಿಯಾಲ್ ಬೈಲ್ ಹಾಲ್ ನಲ್ಲಿ ಮದುವೆ ಸಮಾರಂಭ ನಡೆಯುತ್ತಿದ್ದ ಸಂದರ್ಭ 3 ವರ್ಷ 6 ತಿಂಗಳ ಸಣ್ಣ ಬಾಲಕಿಯ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಅಪರಿಚಿತ ಮಹಿಳೆಯೊಬ್ಬರು ಎಳೆದುಕೊಂಡು ಕಳವು ಮಾಡಿಕೊಂಡ ಪ್ರಕರಣ ನಡೆದಿತ್ತು.

ಕಳವಾದ ಚಿನ್ನದ ಸರವು ಪೆಂಡೆಂಟ್ ಹೊಂದಿದ್ದು, ಸುಮಾರು 10 ಗ್ರಾಂ ತೂಕ ಹಾಗೂ ಅಂದಾಜು ರೂ 1,35,000/- ಮೌಲ್ಯದ್ದಾಗಿರುತ್ತದೆ. ಈ ಸಂಬಂಧ ಶೀಮಾಬಾನು ರವರು ನೀಡಿದ ದೂರಿನಂತೆ ಬರ್ಕೆ ಪೊಲೀಸ್ ಠಾಣೆಯಲ್ಲಿ ಅ.ಕ್ರ 95/2026, ಕಲಂ 304(2) ಬಿ.ಎನ್.ಎಸ್ ರಂತೆ ಪ್ರಕರಣ ದಾಖಲಾಗಿತ್ತು .

ಚೈನ್ ಕಸಿದುಕೊಂಡು ಹೋದ ಮಹಿಳೆಯ ಬಗ್ಗೆ ಮಾಹಿತಿಯನ್ನು ಪಡೆದುಕೊಂಡ ಪೊಲೀಸರು ಅಕ್ಟೋಬರ್ 19 ರಂದು ಉಳ್ಳಾಲ ನಿವಾಸಿ ಮಿನ್ನತ್ ಎಂಬ ಮಹಿಳೆಯನ್ನು ವಶಕ್ಕೆ ಪಡೆದಿದ್ದು, ಘಟನೆ ನಡೆದ 24 ಗಂಟೆಯೊಳಗೆ ಆರೋಪಿ ಮಹಿಳೆಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಮಹಿಳೆಯಿಂದ ಕಳವು ಮಾಡಿದ ಮಗುವಿನ 10 ಗ್ರಾಂ ತೂಕದ ಚಿನ್ನದ ಸರವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

ಬಂಧಿತ ಮಹಿಳೆ ಈ ಹಿಂದೆಯೂ ಹಲವಾರು ಮದುವೆ ಹಾಲ್ ನಲ್ಲಿ ಇಂತಹ ಕೃತ್ಯದಲ್ಲಿ ತೊಡಗಿಕೊಂಡಿರುವುದು ಪತ್ತೆಯಾಗಿದೆ. ಸಣ್ಣ ಸಣ್ಣ ಮಕ್ಕಳ ಕುತ್ತಿಗೆಯಲ್ಲಿದ್ದ ಚಿನ್ನದ ಸರವೇ ಈಕೆಯ ಟಾರ್ಗೆಟ್ ಆಗಿದ್ದು, ಇದೇ ಕಾರಣಕ್ಕೆ ಮದುವೆ ಹಾಲ್ ಗೆ ತೆರಳುತ್ತಿದ್ದರು. ಈಕೆಯ ವಿರುದ್ಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ 3 ಕಳವು ಪ್ರಕರಣ ಹಾಗೂ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಒಟ್ಟು 5 ಕಳವು ಪ್ರಕರಣಗಳು ಸೇರಿ ಒಟ್ಟು 9 ಪ್ರಕರಣಗಳು ದಾಖಲಾಗಿ ನ್ಯಾಯಾಲಯದ ವಿಚಾರಣೆಯಲ್ಲಿರುವುದು ಬೆಳಕಿಗೆ ಬಂದಿದೆ. ಈಕೆಯು ಹಲವು ಪ್ರಕರಣಗಳಲ್ಲಿ ಭಾಗಿಯಾಗಿರುವುದರಿಂದ ಹೊಸ ಭಾರತೀಯ ನ್ಯಾಯ ಸಂಹಿತೆಯಲ್ಲಿ ಕಲಂ 112 ಸಂಘಟಿತ ಅಪರಾಧ ಸೇರಿಸಿ ತನಿಖೆ ಕೈಗೊಳ್ಳಲಾಗಿದೆ.

ಈ ಪತ್ತೆ ಕಾರ್ಯದಲ್ಲಿ ಬರ್ಕೆ ಠಾಣೆಯ ಪಿ.ಎಸ್.ಐ ಗುರುಪ್ಪ ಕಾಂತಿ, ಪಿ.ಎಸ್.ಐ ವಿನಾಯಕ ತೋರಗಲ್ ಹಾಗೂ ಕ್ರೈಂ ಸಿಬ್ಬಂದಿಗಳು ಭಾಗವಹಿಸಿರುವುದಾಗಿ ಮಂಗಳೂರು ಪೊಲೀಸ್ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ..