ಡೊನಾಲ್ಡ್ ಟ್ರಂಪ್ ವಿರುದ್ಧ ಮಾಜಿ ಮಾಡೆಲ್ ಬೀಟ್ರಿಸ್ ಕ್ಯೂಲ್ ಅತ್ಯಾಚಾರದ ಆರೋಪ

ರಾಷ್ಟ್ರೀಯ

ಅಮೆರಿಕದಲ್ಲಿ ಈಗ ಮಧ್ಯಂತರ ಚುನಾವಣೆಯ ಭರಾಟೆ. ತಮ್ಮ ಜನಪ್ರಿಯತೆಯನ್ನು ಓರೆಗೆ ಹಚ್ಚಲಿರುವ ಈ ಚುನಾವಣೆಯನ್ನು, ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಗೆಲ್ಲಲೇಬೇಕಿದೆ. ಆದರೆ ಡೆಮಾಕ್ರೆಟಿಕ್ ಪಕ್ಷವು ಸಿದ್ಧಪಡಿಸಿದ ವರದಿಯ ಪ್ರಕಾರ, ಮಾಜಿ ಮಿಸ್ ಸ್ವಿಟ್ಜರ್ಲೆಂಡ್‌ ಬೀಟ್ರಿಸ್ ಕ್ಯೂಲ್ ಅವರು ಡೊನಾಲ್ಡ್ ಟ್ರಂಪ್ ವಿರುದ್ಧ ಅತ್ಯಾಚಾರದ ಆರೋಪ ಹೊರಿಸಿದ್ದಾರೆ.

1993ರ ನವೆಂಬರ್‌ನಲ್ಲಿ ರಿಪಬ್ಲಿಕನ್ ನಾಯಕ ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಈ ಹಿಂದೆ ಆರೋಪಿಸಿದ್ದ ಮಾಡೆಲ್ ಬ್ರೀಟಿಸ್‌ ಕ್ಯೂಲ್‌ , ಆ ಘಟನೆಯ ಸಮಯದಲ್ಲಿ ಟ್ರಂಪ್ ತಮ್ಮ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಅಮೆರಿಕದಲ್ಲಿ ಶಿಕ್ಷೆಗೊಳಗಾದ ಲೈಂಗಿಕ ಅಪರಾಧಿ ಜೆಫ್ರಿ ಎಪ್ಸ್ಟೀನ್ ಅವರೊಂದಿಗಿನ ಡೊನಾಲ್ಡ್ ಟ್ರಂಪ್ ಸಂಬಂಧಗಳು ತೀವ್ರ ಚರ್ಚೆಗೊಳಗಾಗಿದ್ದು, ಈ ಕುರಿತು ಯುಎಸ್ ಹೌಸ್ ಡೆಮೋಕ್ರಾಟ್‌ಗಳು ನಡೆಸಿದ ತನಿಖೆಯನ್ನು ಈ ವರದಿ ವಿವರಿಸಿದೆ.

ವರದಿಯಲ್ಲಿ ಉಲ್ಲೇಖಿಸಲಾದ ಆರೋಪಗಳನ್ನು ಶ್ವೇತಭವನ ನಿರಾಕರಿಸಿದೆ. ವಕ್ತಾರರು ಇದನ್ನು “ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಐತಿಹಾಸಿಕ ಸಾಧನೆಗಳಿಂದ ಜನರ ಗಮನವನ್ನು ಬೇರೆಡೆ ಸೆಳೆಯಲು ಡೆಮಾಕ್ರ್ಯಾಟ್ಸ್‌ಗಳ ಹತಾಶ ಪ್ರಯತ್ನ”‌ ಎಂದು ಕರೆದಿದ್ದಾರೆ. 53 ಪುಟಗಳ ವರದಿಯಲ್ಲಿ ಹೌಸ್ ನ್ಯಾಯಾಂಗ ಸಮಿತಿಯಲ್ಲಿರುವ ಡೆಮೋಕ್ರಾಟ್‌ಗಳು, 2019ರಲ್ಲಿ ಫೆಡರಲ್ ಕಸ್ಟಡಿಯಲ್ಲಿ ನಿಧನರಾದ ಜೆಫ್ರಿ ಎಪ್ಸ್ಟೀನ್ ಅವರ ಒಂದು ಕಾಲದ ಆಪ್ತ ಸ್ನೇಹಿತ ಡೊನಾಲ್ಡ್ ಟ್ರಂಪ್ ವಿರುದ್ಧ ಮಾಡಲಾದ ಲೈಂಗಿಕ ದುರುಪಯೋಗದ ಆರೋಪಗಳನ್ನು‌ ಪಟ್ಟಿ ಮಾಡಿದ್ದಾರೆ. ವರದಿಯು ಡೆಮೋಕ್ರಾಟ್‌ಗಳೊಂದಿಗಿನ ಬ್ರೀಟಿಸ್‌ ಕ್ಯೂಲ್ ಅವರ ಸಂದರ್ಶನಗಳ ಸರಣಿಯನ್ನು ಒಳಗೊಂಡಿದೆ.

“1993ರಲ್ಲಿ ಡೊನಾಲ್ಡ್ ಟ್ರಂಪ್ ನನ್ನ ಮೇಲೆ ಕ್ರೂರ ರೀತಿಯಲ್ಲಿ ಅತ್ಯಾಚಾರ ಮಾಡಿದ್ದಾರೆ. ಜೆಫ್ರಿ ಎಪ್ಸ್ಟೀನ್ ಜೊತೆ ಸಮಯ ಕಳೆದ ನಂತರ, ಅಟ್ಲಾಂಟಿಕ್ ಸಿಟಿಯಲ್ಲಿರುವ ಟ್ರಂಪ್‌ ಅವರ ಪ್ಲಾಜಾ ಹೋಟೆಲ್‌ ಕೋಣೆಯೊಳಗೆ ನನ್ನ ಮೇಲೆ ಹಲ್ಲೆ ನಡೆಸಲಾಯಿತು. ನನ್ನ ಬಟ್ಟೆ ಹರಿದು ಅತ್ಯಾಚಾರ ಎಸಗಿದ ಟ್ರಂಪ್‌, ರಕ್ತ ಬರುತ್ತಿದ್ದರೂ ಬಿಡಲಿಲ್ಲ” ಎಂದು ಬ್ರೀಟಸ್‌ ಕ್ಯೂಲ್‌ ಈ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

ಬ್ರೀಟಸ್‌ ಕ್ಯೂಲ್‌ ಅವರ ಪ್ರಕಾರ, ಅವರು ಮೊದಲ ಬಾರಿಗೆ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿಯಾದಾಗ ಅವರಿಗೆ 24 ವರ್ಷ ವಯಸ್ಸಾಗಿತ್ತು. ನ್ಯೂಯಾರ್ಕ್‌ನ ಪ್ಲಾಜಾ ಹೋಟೆಲ್‌ನಲ್ಲಿ ನಡೆದ ಸೌಂದರ್ಯ ಸ್ಪರ್ಧೆಯೊಂದರಲ್ಲಿ ಈ ಭೇಟಿ ನಡೆದಿತ್ತು. ಆ ಸಮಯದಲ್ಲಿ ಈ ಹೋಟೆಲ್ ರಿಪಬ್ಲಿಕನ್ ನಾಯಕರಾದ ಟ್ರಂಪ್ ಅವರ ಒಡೆತನದಲ್ಲಿತ್ತು. ಬ್ರೀಟಿಸ್‌ ಕ್ಯೂಲ್‌ ಅವರಿಗೆ ವೀಸಾ ವ್ಯವಸ್ಥೆ ಮಾಡಿಕೊಡುವುದಾಗಿ ಹಾಗೂ ನ್ಯೂಯಾರ್ಕ್ ವಿಶ್ವವಿದ್ಯಾಲಯದಲ್ಲಿ (NYU) ಪ್ರವೇಶ ಸಿಗುವಂತೆ ಮಾಡುವುದಾಗಿ, ಡೊನಾಲ್ಡ್‌ ಟ್ರಂಪ್ ಸುಳ್ಳು ಭರವಸೆ ನೀಡಿದ್ದರು. ಟ್ರಂಪ್‌ ಹೋಟೆಲ್‌ನಿಂದ ತೆರಳಿದ ಬಳಿಕ ಅಲ್ಲಿಗೆ ಬಂದ ಜೆಫ್ರಿ ಎಪ್ಸ್ಟೀನ್‌, ಸ್ವಿಸ್‌ ಮಾಡೆಲ್‌ಗೆ ‘ಮಾರ್-ಎ-ಲಾಗೋ’ನಲ್ಲಿ ನಡೆಯುವ ಪಾರ್ಟಿಯೊಂದಕ್ಕೆ ಆಹ್ವಾನಿಸಿದ್ದ.

ವರದಿಯಲ್ಲಿ ತಿಳಿಸಿರುವಂತೆ, ಕ್ಯೂಲ್‌ ಈ ಅತ್ಯಾಚಾರವನ್ನು ‘ಕ್ರೂರ’ ಎಂದು ಬಣ್ಣಿಸಿದ್ದಾರೆ. ಈ ಕೃತ್ಯದ ನಂತರ, ಟ್ರಂಪ್ ತಮ್ಮನ್ನು ಹಾಸಿಗೆಯ ಅಂಚಿನಲ್ಲಿ ಕೂರಿಸಿ, ವೀಸಾ ಮತ್ತು NYU ಪ್ರವೇಶಾತಿ ಕಲ್ಪಿಸಿಕೊಡುವ ತಮ್ಮ ಭರವಸೆಗಳನ್ನು ಪುನರುಚ್ಚರಿಸಿದರು. ಅಲ್ಲದೇ ಈ ವಿಷಯವನ್ನು ಯಾರಿಗೂ ತಿಳಿಸದಂತೆ ಎಚ್ಚರಿಕೆಯನ್ನೂ ನೀಡಿದ್ದರು.

ಒಟ್ಟಿನಲ್ಲಿ ಡೆಮಾಕ್ರೆಟಿಕ್‌ ವರದಿಯಲ್ಲಿರುವಂತೆ ಬ್ರೀಟಸ್‌ ಕ್ಯೂಲ್‌ ಅವರ ಆರೋಪಗಳು ಗಂಭೀರವಾಗಿದ್ದು, ಶ್ವೇತಭವನದ ನಿರಾಕರಣೆ ಹೊರತಾಗಿಯೂ, ಈ ಅತ್ಯಚಾರದ ಆರೋಪ ಡೊನಾಲ್ಡ್‌ ಟ್ರಂಪ್‌ ಅವರಿಗೆ ಮಧ್ಯಂತರ ಚುನಾವಣೆಯಲ್ಲಿ ಹೊಡೆತ ನೀಡಲಿದೆ ಎಂದು ವಿಶ್ಲೇಷಕರು ಅಂದಾಜಿಸಿದ್ದಾರೆ.