ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ವಿರೋಧಿಸಿ ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜಿನಾಮೆಗೆ ಆಗ್ರಹಿಸಿ ನವೆಂಬರ್ 2 ರಂದು ಬೆಳ್ತಂಗಡಿಯಲ್ಲಿ ಪ್ರಜಾತಂತ್ರ ಬಚಾವೋ ಆಂದೋಲನ ಸಮಿತಿ ವತಿಯಿಂದ ಬೃಹತ್ ತಿರಂಗಾ ನಡಿಗೆ ಮತ್ತು ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ.
ಸಂವಿಧಾನ ವಿರೋಧಿ ಎಸ್ಐಆರ್ ನಿಂದಾಗಿ ಪ್ರಜಾಪ್ರಭುತ್ವದ ಮೌಲ್ಯಗಳು ಹಾಗೂ ಮತದಾನದ ಹಕ್ಕುಗಳು ಅಪಾಯದಲ್ಲಿದ್ದು, ಅರ್ಹ ಮತದಾರರನ್ನು ಎಸ್ಐಆರ್ ಮೂಲಕ ಮತದಾನದ ಹಕ್ಕನ್ನು ಕಸಿದುಕೊಳ್ಳಲಾಗುತ್ತಿದೆ. ಆ ಮೂಲಕ ದೇಶದಲ್ಲಿ ಶಾಶ್ವತವಾಗಿ ನೆಲೆ ನಿಲ್ಲಲು ಬಿಜೆಪಿ ಚುನಾವಣಾ ಆಯೋಗವನ್ನು ದುರುಪಯೋಗ ಪಡಿಸಿಕೊಳ್ಳುತ್ತಿದೆ. ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಹೆಸರಿನಲ್ಲಿ ಮುಸ್ಲಿಂ, ಕ್ರೈಸ್ತ, ಆದಿವಾಸಿ, ದಲಿತ ಸಮುದಾಯದ ಮತದಾನದ ಹಕ್ಕನ್ನು ಮೊಟಕುಗೊಳಿಸಲು ಪ್ರಯತ್ನಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಎಸ್ಐಆರ್ ವಿರುದ್ಧ ದೇಶದಾದ್ಯಂತ ನಡೆಯುತ್ತಿರುವ ಹೋರಾಟದ ಭಾಗವಾಗಿ ಬೆಳ್ತಂಗಡಿಯಲ್ಲಿ ಬೃಹತ್ ಹೋರಾಟವನ್ನು ಹಮ್ಮಿಕೊಳ್ಳಲಾಗಿದೆ. ಅಂದು ಸಂಜೆ 4 ಘಂಟೆಗೆ ಸಂತೆಕಟ್ಟೆ ಅಯ್ಯಪ್ಪ ದೇವಸ್ಥಾನದಿಂದ ಬೆಳ್ತಂಗಡಿ ಬಸ್ ನಿಲ್ದಾಣದ ವರೆಗೆ ತಿರಂಗಾ ನಡಿಗೆ ಕಾರ್ಯಕ್ರಮವನ್ನು ನಡೆಯಲಿದ್ದು, ನಂತರ ಬಸ್ ನಿಲ್ದಾಣದ ಬಳಿ ಪ್ರತಿಭಟನೆ ನಡೆಯಲಿದೆ. ಈ ಪ್ರತಿಭಟನೆಯಲ್ಲಿ ತಾಲೂಕಿನ ಸಮಾನ ಮನಸ್ಕ ಪಕ್ಷಗಳು ಹಾಗೂ ಸಂಘಟನೆಗಳು ಭಾಗವಹಿಸಲಿದ್ದು, ಸಾವಿರಾರು ಜನರು ಭಾಗವಹಿಸಲಿದ್ದಾರೆ.
ಶಿವಸುಂದರ್ ಭಾಗಿ: ನಾಡಿನ ಖ್ಯಾತ ಪ್ರಗತಿಪರ ಚಿಂತಕ, ಅಂಕಣಕಾರ ಮತ್ತು ಹೋರಾಟಗಾರ ಶಿವಸುಂದರ್ ರವರು ಬೆಳ್ತಂಗಡಿಯಲ್ಲಿ ನಡೆಯುವ ಬೃಹತ್ ತಿರಂಗಾ ನಡಿಗೆ ಮತ್ತು ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಪ್ರಜಾತಂತ್ರ ಬಚಾವೋ ಆಂದೋಲನ ಸಮಿತಿ ಸಂಚಾಲಕ ಶೇಖರ್ ಲಾಯಿಲ ತಿಳಿಸಿದ್ದಾರೆ.
