ಬಂಟ್ವಾಳ: ಜೀವನದಿ ನೇತ್ರಾವತಿ ಒಡಲಿಗೆ ಕೋಳಿ ತ್ಯಾಜ್ಯ ಎಸೆಯುವ ಕಿಡಿಗೇಡಿಗಳು

ಕರಾವಳಿ

ಜನರ ಆರೋಗ್ಯದ ಜೊತೆ ಚೆಲ್ಲಾಟವಾಡುವವರ ವಿರುದ್ಧ ಕಠಿಣ ಕ್ರಮಕ್ಕೆ ಸಾರ್ವಜನಿಕರ ಒತ್ತಾಯ

ಬಂಟ್ವಾಳ: ಜಿಲ್ಲೆಯ ಜೀವನದಿ ನೇತ್ರಾವತಿ ಒಡಲಿಗೆ ಕೋಳಿ ತ್ಯಾಜ್ಯ ಎಸೆದಿರುವ ಘಟನೆ ಪಾಣೆಮಂಗಳೂರು ಹಳೆ ನೇತ್ರಾವತಿ ಸೇತುವೆ ಮೇಲೆ ನಡೆದಿರುವುದು ಶುಕ್ರವಾರ ಬೆಳಕಿಗೆ ಬಂದಿದೆ. ಇಲ್ಲಿನ ಹಳೆ ನೇತ್ರಾವತಿ ಸೇತುವೆ ಮೇಲಿಂದ ಸೇತುವೆ ಬದಿಯ ತಡೆಬೇಲಿಯ ಮಧ್ಯದಿಂದ ಯಾರೋ ಕೋಳಿ ತ್ಯಾಜ್ಯಗಳನ್ನು ನದಿ ನೀರಿಗೆ ಎಸೆದು ಹೋಗಿದ್ದು, ಅದರ ತ್ಯಾಜ್ಯ ಹಾಗೂ ಕೋಳಿ ರೆಕ್ಕೆಗಳ ಕಳೇಬರಗಳು ಸೇತುವೆಯ ಮೇಲೆಯೂ ಚೆಲ್ಲಿಕೊಂಡಿರುವ ದೃಶ್ಯ ಕಂಡು ಬಂದಿದೆ.



ನೇತ್ರಾವತಿ ನದಿಗೆ ಈಗಾಗಲೇ ಅಲ್ಲಲ್ಲಿ ಕಿರು ಡ್ಯಾಂಗಳನ್ನು ನಿರ್ಮಿಸಿ ಜಿಲ್ಲೆಯ ನಗರ ವಾಸಿಗಳಿಗೆ ಕುಡಿಯಲು ನೀರು ಪೂರೈಸಲಾಗುತ್ತಿದ್ದು, ಇದ್ಯಾವುದರ ಬಗ್ಗೆಯೂ ಪರಿಜ್ಞಾನ ಇಲ್ಲದೆ ಇರುವ ಕೋಳಿ ಅಂಗಡಿದಾರರು ಅಂಗಡಿಯಲ್ಲಿ ಸಂಗ್ರಹವಾಗುವ ಮಲಿನ ತ್ಯಾಜ್ಯಗಳನ್ನು ತಂದು ನೀರಿನ ಮೂಲಗಳಿಗೆ ಎಸೆಯುತ್ತಿರುವುದು ನಗರ ವಾಸಿಗಳ ಆತಂಕಕ್ಕೆ ಕಾರಣವಾಗಿದೆ. ಕುಡಿಯಲು ಬಳಸುವ ನೀರಿನ ಮೂಲಗಳಿಗೆ ಮಲಿನ ತ್ಯಾಜ್ಯ ಎಸೆಯುವ ದುಷ್ಕರ್ಮಿಗಳ ಬಗ್ಗೆ ಸಂಬಂಧಪಟ್ಟ ಇಲಾಖೆ ಕಠಿಣ ಕ್ರಮ ಕೈಗೊಂಡು ಜನರ ಕುಡಿಯುವ ನೀರಿನ ಬಗ್ಗೆ ಸುರಕ್ಷತೆ ಖಾತ್ರಿ ಪಡಿಸುವಂತೆಯೂ ನಗರ ವಾಸಿಗಳು ಆಗ್ರಹಿಸಿದ್ದಾರೆ.



ವಿವಿಧೆಡೆ ಹಲವು ಅನಧಿಕೃತ ಕೋಳಿ ಅಂಗಡಿಗಳು ಕಾರ್ಯಾಚರಿಸುತ್ತಿದ್ದು, ಸ್ಥಳೀಯ ಸಂಸ್ಥೆಯಿಂದ ಈ ಬಗ್ಗೆ ಯಾವುದೇ ಪರವಾನಿಗೆಯೂ ಇಲ್ಲ, ಸ್ವಚ್ಛತೆ ಬಗ್ಗೆಯೂ ಯಾವುದೇ ಖಾತ್ರಿ ಇಲ್ಲ. ಅಂಗಡಿ ಒಳಗೂ ತ್ಯಾಜ್ಯ ಸಂಗ್ರಹಕ್ಕೆ ಇರುವ ವ್ಯವಸ್ಥೆಗಳ ಬಗ್ಗೆ, ವಿಲೇವಾರಿ ಕ್ರಮಗಳ ಬಗ್ಗೆಯೂ ಹಾಗೂ ನಗರ ಹಾಗೂ ಗ್ರಾಮೀಣ ಪ್ರದೇಶ ಹಾಗೂ ಜನವಸತಿ ಪ್ರದೇಶಗಳಲ್ಲಿರುವ ಅಂಗಡಿದಾರರು ದುರ್ವಾಸನೆ ಹಾಗೂ ತ್ಯಾಜ್ಯದ ಬಗ್ಗೆ ಕೈಗೊಳ್ಳುತ್ತಿರುವ ಕ್ರಮಗಳ ಬಗ್ಗೆಯೂ ಸಾರ್ವಜನಿಕ ವಲಯದಿಂದ ವ್ಯಾಪಕ ದೂರುಗಳು ಕೇಳಿ ಬರುತ್ತಿದೆ. ಈ ಬಗ್ಗೆ ಸ್ಥಳಿಯಾಡಳಿತ ಸೂಕ್ತ ಪರಿಶೀಲನೆ ನಡೆಸಿ, ತಪ್ಪಿತಸ್ಥರ ವಿರುದ್ದ ಕಠಿಣ ಕ್ರಮ ಕೈಗೊಂಡು ನೀರಿನ ಮೂಲಗಳನ್ನು ಮಲಿನಗೊಳಿಸುತ್ತಿರುವ ಕಿಡಿಗೇಡಿಗಳ ಬಗ್ಗೆಯೂ ಪತ್ತೆ ಹಚ್ಚಿ ದಂಡದಂತಹ ಕಠಿಣ ಕ್ರಮ ಜರುಗಿಸಬೇಕು. ಈ ಬಗ್ಗೆ ಜಿಲ್ಲಾಡಳಿತ ಮೌನವಹಿಸದೆ ಜನರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ ಕಟ್ಟುನಿಟ್ಟಿನ ಕ್ರಮಕ್ಕೆ ಸೂಚನೆ ನೀಡುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.