ರಾಜ್ಯ ಸರ್ಕಾರದ ವಿವಿಧ ನಿಗಮ ಮಂಡಳಿಗಳು ಹಾಗೂ ಪ್ರಾಧಿಕಾರಗಳ ಆಡಳಿತಾತ್ಮಕ ಕಾರ್ಯಚಟುವಟಿಕೆಗಳನ್ನು ಚುರುಕುಗೊಳಿಸುವ ನಿಟ್ಟಿನಲ್ಲಿ 428 ಮಂದಿಯನ್ನು ನಿರ್ದೇಶಕರು ಹಾಗೂ ಸದಸ್ಯರುಗಳನ್ನು ನೇಮಕ ಮಾಡಿ ಸರ್ಕಾರ ತುರ್ತು ಆದೇಶ ಹೊರಡಿಸಿದೆ.ಮುಖ್ಯಮಂತ್ರಿಗಳ ಆದೇಶದಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಜಂಟಿ ಕಾರ್ಯದರ್ಶಿಯವರು ಸರ್ಕಾರದ ಎಲ್ಲಾ ಅಪರ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು ಹಾಗೂ ಕಾರ್ಯದರ್ಶಿಗಳಿಗೆ ಅಧಿಕೃತ ಟಿಪ್ಪಣಿ ಮೂಲಕ ಈ ಸಂಬಂಧ ತಕ್ಷಣವೇ ಅಗತ್ಯ ಕ್ರಮ ವಹಿಸಿ ಆದೇಶ ಹೊರಡಿಸಲು ಸೂಚನೆ ನೀಡಿದ್ದಾರೆ.
ಮುಖ್ಯಮಂತ್ರಿಗಳ ಅನುಮೋದಿತ ಪಟ್ಟಿಯ ಅನ್ವಯ, ರಾಜ್ಯಾದ್ಯಂತ ಹಲವು ಪ್ರಮುಖ ನಿಗಮ-ಮಂಡಳಿಗಳಿಗೆ ಕಾಂಗ್ರೆಸ್ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರನ್ನು ನಿರ್ದೇಶಕರು ಹಾಗೂ ಸದಸ್ಯರನ್ನಾಗಿ ನೇಮಿಸಲಾಗಿದೆ. ಈ ಪಟ್ಟಿಯಲ್ಲಿ ವಿವಿಧ ಸಮುದಾಯದ ಅಭಿವೃದ್ಧಿ ನಿಗಮಗಳು ಸೇರಿದಂತೆ 400ಕ್ಕೂ ಹೆಚ್ಚು ಸ್ಥಾನಗಳಿಗೆ ನೇಮಕಾತಿ ಪಟ್ಟಿಯನ್ನು ಅಂತಿಮಗೊಳಿಸಲಾಗಿದೆ.ಆಡಳಿತ ಸುಧಾರಣೆ ಹಾಗೂ ನಿಗಮ-ಮಂಡಳಿಗಳ ಕಾರ್ಯನಿರ್ವಹಣೆಗೆ ವೇಗ ನೀಡುವ ಉದ್ದೇಶದಿಂದ ಈ ನೇಮಕಾತಿ ನಡೆದಿದ್ದು, ಸಂಬಂಧಪಟ್ಟ ಎಲ್ಲಾ ಇಲಾಖೆಗಳು ತಮ್ಮ ಅಧೀನದ ನಿಗಮ-ಪ್ರಾಧಿಕಾರಗಳಿಗೆ ಅಧಿಕೃತವಾಗಿ ನೇಮಕಾತಿ ಆದೇಶಗಳನ್ನು ಹೊರಡಿಸುವ ಪ್ರಕ್ರಿಯೆ ನಡೆದಿದೆ.
