ಕರ್ನಾಟಕದ ಜೋಸೆಫ್ ವಿಜಯ್ ಯಾರು.?, ವಿಜಯೇಂದ್ರ ಮಡಿಲಲ್ಲಿ ಮೂರು ಸೂತ್ರ

ರಾಜ್ಯ

ಹಿರಿಯೂರು ಬೇಕಿದ್ರೆ ತಗೊಳ್ಳಿ; ಡೆವಿಲ್ ವರ್ಕರ್ ಬಿಕೆ

✍️. ಆರ್.ಟಿ.ವಿಠ್ಠಲಮೂರ್ತಿ

ಕೆಲ ದಿನಗಳ ಹಿಂದೆ ನೆಲಮಂಗಲ ಸಮೀಪದ ರೆಸಾರ್ಟ್ ನಲ್ಲಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರನ್ನು ಕಾಂಗ್ರೆಸ್ ನ ಹಿರಿಯ ನಾಯಕರೊಬ್ಬರು ಭೇಟಿ ಮಾಡಿದ್ದಾರೆ. ವಾಲ್ಮೀಕಿ ಸಮುದಾಯದ ಪ್ರಮುಖ ನಾಯಕರಲ್ಲಿ ಒಬ್ಬರು ಎಂದು ಗುರುತಿಸಲ್ಪಟ್ಟಿರುವ ಈ ನಾಯಕರು ಕುಮಾರಸ್ವಾಮಿ ಅವರ ಬಳಿ ತಮ್ಮ ನೋವು ತೋಡಿಕೊಂಡರಂತೆ.

‘ಸಾರ್, ನಾನು ಈ ಹಿಂದೆ ಮೂರ್ನಾಲ್ಕು ಬಾರಿ ಕಾಂಗ್ರೆಸ್ ತೊರೆದು ಬರುವುದಾಗಿ ಹೇಳಿದ್ದೆ. ಆದರೆ ಹೊರಗೆ ಬರುವ ಸನ್ನಿವೇಶವೇ ಉದ್ಭವವಾಗಲಿಲ್ಲ. ನನ್ನ ಜತೆ ಇದ್ದ ಶಾಸಕರ ಒಂದು ಗುಂಪು: ಪಕ್ಷ ತೊರೆಯಲು ಸದಾ ಕಾಲ ಸಿದ್ದವಾಗಿತ್ತಾದರೂ ನಾನೇ ಹೆಜ್ಜೆ ಮುಂದಿಡಲಿಲ್ಲ, ಬೇಸರ ಮಾಡಿಕೊಳ್ಳಬೇಡಿ ಎಂದಾಗ ಕುಮಾರಸ್ವಾಮಿ ಸ್ವಲ್ಪ ಹೊತ್ತು ಮೌನವಾಗಿದ್ದರಂತೆ.

ನಂತರ ಮಾತನಾಡಿದ ಅವರು, ‘ಬ್ರದರ್, ಈ ಹಿಂದೆ ನೀವು ಪಕ್ಷ ತೊರೆದು ಬರುವ ಮಾತನಾಡಿದಾಗಲೆಲ್ಲ ನಾನು ಬಿಜೆಪಿ ವರಿಷ್ಟರ ಗಮನಕ್ಕೆ ತಂದಿದ್ದೆ. ಆದರೆ ಮೂರ್ನಾಲ್ಕು ಬಾರಿ ಶಾಸಕರ ಒಂದು ಗುಂಪಿನೊಂದಿಗೆ ಹೊರಬರುವುದಾಗಿ ಹೇಳಿದ ನೀವು ಅದೇಕೇ ಮೌನವಾದಿರೋ ಗೊತ್ತಿಲ್ಲ. ಹೀಗಾಗಿ ನಾನು ಬಿಜೆಪಿ ವರಿಷ್ಟರ ಬಳಿ ಪುನ: ಈ ಬಗ್ಗೆ ಮಾತನಾಡಲಿಲ್ಲ’ ಎಂದಿದ್ದಾರೆ.

ಆಗ ಪುನ: ಮಾತನಾಡಿದ ಆ ನಾಯಕರು: ‘ಸಾರ್, ನಾನು ಯಾವ ಕಾರಣಕ್ಕಾಗಿ ಬರಲಿಲ್ಲ ಎಂಬುದು ಬಹುತೇಕ ನಿಮಗೆ ಗೊತ್ತೇ ಇದೆ. ಅವತ್ತು ಪಕ್ಷ ಬಿಡದಂತೆ ನನ್ನನ್ನು ತಡೆಯುವ ನಾಯಕರಿದ್ದರು. ಆದರೆ ಈಗ ಯಾರೂ ನನ್ನನ್ನು ತಡೆಯುವ ಸ್ಥಿತಿ ಇಲ್ಲ. ಹೀಗಾಗಿ ಪುನ: ನಿಮ್ಮ ಬಳಿ ಬಂದಿದ್ದೇನೆ. ನೀವು ಯಾವಾಗ ಹೇಳುತ್ತೀರೋ ಆಗ ಕಾಂಗ್ರೆಸ್ ತೊರೆದು ಬರಲು ತಯಾರಿದ್ದೇನೆ’ ಎಂದು ವಿವರಿಸಿದ್ದಾರೆ.

ಅವರಾಡಿದ ಮಾತನ್ನು ಕೇಳಿದ ಕುಮಾರಸ್ವಾಮಿ ಅವರು: ‘ಈಗ ತಕ್ಷಣ ಹೊರಬರಬೇಡಿ ಬ್ರದರ್, ನಿಮ್ಮ ಕಾಂಬಿನೇಷನ್ನಿನ ದೃಷ್ಟಿಯಿಂದ ನೀವು ಮುಂದೆ ಬಿಜೆಪಿಗೆ ಸೇರುವುದು ಉತ್ತಮ. ಜಾತಿ ಲೆಕ್ಕಾಚಾರದ ದೃಷ್ಟಿಯಿಂದ ನಿಮಗೆ ಅದು ಪ್ಲಸ್ ಆಗುತ್ತದೆ’ ಎಂದಿದ್ದಾರಲ್ಲದೆ ಈ ಕುರಿತು ತಮಗಿರುವ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

‘ಬ್ರದರ್, ನೀವು ಬಿಜೆಪಿ ಸೇರಿದಿರಿ ಎಂದುಕೊಳ್ಳಿ. ನಿಮಗೆ ನಿಮ್ಮ ಕ್ಷೇತ್ರದಲ್ಲಿ ಹಲವು ವೋಟ್ ಬ್ಯಾಂಕುಗಳು ಜತೆಯಾಗುತ್ತವೆ. ವಾಸ್ತವವಾಗಿ ಕರ್ನಾಟಕದ ವಾಲ್ಮೀಕಿ ಸಮುದಾಯದ ಬಹುತೇಕ ಮತದಾರರು ಕಾಂಗ್ರೆಸ್ ಬಗ್ಗೆ ಒಲವು ಹೊಂದಿಲ್ಲ. ಇದೇ ರೀತಿ ಸಿದ್ಧರಾಮಯ್ಯನವರ ಪದಚ್ಯುತಿಯ ನಂತರ ಕುದಿಯುತ್ತಿರುವ ಕುರುಬ ಮತ ಬ್ಯಾಂಕು ಮುಂದಿನ ಚುನಾವಣೆಯಲ್ಲಿ ಸ್ಥಳೀಯ ಅಗತ್ಯಕ್ಕನುಗುಣವಾಗಿ ಹೆಜ್ಜೆ ಇಡುತ್ತದೆ.

ಹೀಗಾಗಿ ನಿಮಗೆ ವಾಲ್ಮೀಕಿ ಮತ ಬ್ಯಾಂಕಿನ ಜತೆ ಕುರುಬ ಮತ ಬ್ಯಾಂಕ್ ಕೂಡಾ ದೊಡ್ಡ ಮಟ್ಟದ ಶಕ್ತಿ ನೀಡಲಿದೆ.ಇನ್ನು ಲಿಂಗಾಯತ ಮತ ಬ್ಯಾಂಕ್ ಸಾಲಿಡ್ಡಾಗಿ ಬಿಜೆಪಿ ಜತೆ ನಿಲ್ಲತೊಡಗಿದ್ದು, ಈ ಮತ ಬ್ಯಾಂಕ್ ನಿಸ್ಸಂಶಯವಾಗಿ ನಿಮ್ಮ ಜತೆ ನಿಲ್ಲಲಿದೆ. ಯಾವಾಗ ಪ್ರಬಲ ಮತ ಬ್ಯಾಂಕುಗಳು ನಿಮ್ಮ ಜತೆಗಿರುವುದು ಸ್ಪಷ್ಟವಾಗುತ್ತದೋ.? ಆಗ ಸಣ್ಣ ಸಣ್ಣ ಮತ ಬ್ಯಾಂಕುಗಳ ಒಲವು ನಿಮ್ಮ ಪರವಾಗಿರುತ್ತದೆ.

ಹೀಗಾಗಿ ಈ ಸಲ ಯೋಚಿಸಬೇಡಿ. ಸ್ವಲ್ಪ ಸಮಯ ತೆಗೆದುಕೊಳ್ಳಿ. ಯಾಕೆಂದರೆ ವಿಧಾನಸಭಾ ಚುನಾವಣೆ ಒಂದೂವರೆ ವರ್ಷ ಇದೆ. ಹೀಗಾಗಿ ಕೆಲ ಕಾಲದ ನಂತರ ನಿಮ್ಮ ಜತೆ ಯಾರು ಬರುತ್ತಾರೆ ಎಂಬುದನ್ನು ಸ್ಪಷ್ಟಪಡಿಸಕೊಂಡು ಹೊರಬನ್ನಿ. ನಾನು ಬಿಜೆಪಿಯ ಟಾಪ್ ಲೀಡರುಗಳ ಜತೆ ಮಾತನಾಡುತ್ತೇನೆ’ ಎಂದು ಕುಮಾರಸ್ವಾಮಿ ವಿವರಿಸಿದ್ದಾರೆ.

ಯಾವಾಗ ಕುಮಾರಸ್ವಾಮಿ ಅವರು ಈ ಮಾತು ಹೇಳಿದರೋ? ಆಗ ಖುಷಿಯಾದ ಈ ನಾಯಕರು, ‘ತಮ್ಮ ಪಕ್ಷದವರೇ, ತಮ್ಮ ವಿರುದ್ಧ ಷೆಡ್ಯಂತ್ರ ಹೆಣೆದು, ಸಂಕಷ್ಟಕ್ಕೆ ದೂಡಿದ ವಿವರಗಳನ್ನು ನೀಡಿ ಅಲ್ಲಿಂದ ಹೊರಟಿದ್ದಾರೆ.

ವಿಜಯೇಂದ್ರ ಮಡಿಲಲ್ಲಿ ಮೂರು ಸೂತ್ರ
ಇನ್ನು ಕಳೆದ ವಾರ ದಿಲ್ಲಿಗೆ ಹೋದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದಾರೆ.

ಹೀಗೆ ಅವರು ಅಮಿತ್ ಶಾ ಅವರನ್ನು ಭೇಟಿ ಮಾಡಲು ದಿಲ್ಲಿಗೆ ಹೊರಟಿದ್ದೇ ತಡ,ಬಿಜೆಪಿಯ ಭಿನ್ನರ ಪಾಳಯದಿಂದ ಹಲವು ಮಾತುಗಳು ತೇಲಿ ಬಂದಿವೆ.

‘ಯೇ, ನೋಡುತ್ತಿರಿ. ವಿಜಯೇಂದ್ರ ಅವರು ಅಧ್ಯಕ್ಷ ಸ್ಥಾನದಿಂದಿಳಿಯುವುದು ಪಕ್ಕಾ. ಅವರ ಜಾಗಕ್ಕೆ ನಿರಾಣಿ, ಸುನೀಲ್ ಕುಮಾರ್ ಇಲ್ಲವೇ ಮಹೇಶ್ ಟೆಂಗಿನಕಾಯಿ ಬರುತ್ತಾರೆ. ಮೋಸ್ಟ್ ಲೀ ವಿಜಯೇಂದ್ರ ವಿಧಾನಸಬೆಯ ವಿರೋಧ ಪಕ್ಷದ ನಾಯಕರಾಗಬಹುದು. ಅವರಣ್ಣ ಬಿ.ವೈ. ರಾಘವೇಂದ್ರ ಅವರು ಸೆಂಟ್ರಲ್ ಕ್ಯಾಬಿನೆಟ್ಟಿಗೆ ಸೇರಬಹುದು’ ಎಂಬ ಮಾತು ಭಿನ್ನರ ಪಾಳಯದಿಂದ ಕೇಳಿ ಬರತೊಡಗಿದ್ದೇ ತಡ, ಎಲ್ಲರ ಗಮನ ವಿಜಯೇಂದ್ರ-ಅಮಿತ್ ಶಾ ಭೇಟಿಯ ಕ್ಲೈಮ್ಯಾಕ್ಸ್ ಏನಾಗಬಹುದು? ಎಂಬ ಕಡೆ ಸರಿದಿದೆ.

ಆದರೆ ಮೂಲಗಳ ಪ್ರಕಾರ: ತಮ್ಮನ್ನು ಭೇಟಿ ಮಾಡಿದ ವಿಜಯೇಂದ್ರ ಅವರಿಗೆ ಶಬಾಷ್ ಗಿರಿ ಕೊಟ್ಟ ಅಮಿತ್ ಶಾ ಅವರು: ‘ಅಧ್ಯಕ್ಷರೇ ಕೊಂಚ ಮಾರ್ಪಾಡುಗಳನ್ನು ಮಾಡಿಕೊಂಡರೆ ನೀವು ದೊಡ್ಡದನ್ನು ಸಾಧಿಸಬಹುದು’ ಎಂದಿದ್ದಾರೆ.

ಅಷ್ಟೇ ಅಲ್ಲ, ವಿಜಯೇಂದ್ರ ಅವರ ಸಂಘಟನಾ ಕೌಶಲ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಇದಕ್ಕೆ ಇನ್ನಷ್ಟು ಫೋರ್ಸು ಬರಬೇಕೆಂದರೆ ನೀವು ಮೂರು ಸೂತ್ರಗಳನ್ನು ಅನುಸರಿಸಬೇಕು’ ಎಂದಿದ್ದಾರೆ.

ಅದರ ಪ್ರಕಾರ, ಮೊದಲನೆಯದಾಗಿ, ಪಕ್ಷದಲ್ಲಿರುವ ಅಸಮಾಧಾನಿತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಎರಡನೆಯದಾಗಿ ಪಕ್ಷದ ಪದಾಧಿಕಾರಿಗಳ ಪಟ್ಟಿಯನ್ನು ಪುನರ್ರಚಿಸಿ ಶೇಕಡಾ ಐವತ್ತರಷ್ಟು ಸ್ಥಾನಗಳನ್ನು ಹಿರಿಯರಿಗೆ ಕೊಡಬೇಕು. ಮೂರನೆಯದಾಗಿ ದೇವೇಗೌಡ-ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ ಜತೆಗಿನ ಸಖ್ಯಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳಬೇಕು’ ಅಂತ ಅಮಿತ್ ಷಾ ವಿವರಿಸಿದ್ದಾರೆ.

ಹೀಗೆ ಪರಸ್ಪರ ಮಾತುಕತೆಯ ಸಂದರ್ಭದಲ್ಲಿ ಅಧ್ಯಕ್ಷ ಸ್ಥಾನದ ಅವಧಿ ಮುಗಿದ ಬಗ್ಗೆ ವಿಜಯೇಂದ್ರ ಅವರು ಪ್ರಸ್ತಾಪಿಸಿದಾಗ: ‘ಅಧ್ಯಕ್ಷರಾಗಿ ನೀವೇ ಮುಂದುವರಿಯುತ್ತೀರಿ. ಅದರೆ ಅದರ ಪ್ರೊಸೀಜರ್ ಅಗಲೇಬೇಕಲ್ಲ? ಹೀಗಾಗಿ ಮುಂದಿನ ತಿಂಗಳು ಸಂಬಂಧಪಟ್ಟವರು ದಿಲ್ಲಿಯಿಂದ ಕರ್ನಾಟಕಕ್ಕೆ ಬರುತ್ತಾರೆ. ನಿಮ್ಮನ್ನು ಮತ್ತೊಮ್ಮೆ ಅಧಿಕೃತವಾಗಿ ಪ್ರತಿಷ್ಟಾಪಿಸುತ್ತಾರೆ’ ಅಂತ ಅಮಿತ್ ಶಾ ಸ್ಪಷ್ಟವಾಗಿ ಹೇಳಿದ್ದಾರೆ.

ಯಾವಾಗ ಅವರು ಈ ಮಾತು ಹೇಳಿದರೋ? ಆಗ ಖುಷಿಯಾದ ವಿಜಯೇಂದ್ರ ನೆಮ್ಮದಿಯಿಂದ ಕರ್ನಾಟಕಕ್ಕೆ ವಾಪಸ್ಸಾಗಿದ್ದಾರೆ.

ಹಿರಿಯೂರು ಬೇಕಿದ್ರೆ ತಗೊಳ್ಳಿ
ಈ ಮಧ್ಯೆ ಹಿರಿಯೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಎನ್.ಡಿ.ಎ ಅಭ್ಯರ್ಥಿ ಯಾರಾಗಬೇಕು? ಎಂಬ ವಿಷಯದಲ್ಲಿ ಫೈಟು ಶುರುವಾಗಿದೆಯಲ್ಲ? ಈ ಫೈಟಿಗೆ ಒಂದೆರಡು ದಿನಗಳಲ್ಲಿ ಅಂತ್ಯ ಹಾಡಲು ಜೆಡಿಎಸ್ ರಾಜ್ಯಾಧ್ಯಕ್ಷ, ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ನಿರ್ಧರಿಸಿದ್ದಾರೆ.
ಮೂಲಗಳ ಪ್ರಕಾರ, ಈಗಾಗಲೇ ಅಮಿತ್ ಶಾ ಅವರನ್ನು ಭೇಟಿ ಮಾಡಿರುವ ಕುಮಾರಸ್ವಾಮಿ ಅವರು: ‘ಸಾರ್, ಹಿರಿಯೂರಿನಲ್ಲಿ ಜೆಡಿಎಸ್ ನೆಲೆ ಭದ್ರವಾಗಿದೆ. ಹಾಗೆಂದ ಮಾತ್ರಕ್ಕೆ ಎನ್.ಡಿ.ಎ ಅಭ್ಯರ್ಥಿ ನಮ್ಮ ಪಕ್ಷದವರೇ ಆಗಬೇಕು ಅಂತ ನಾವು ಪಟ್ಟು ಹಿಡಿಯುವುದಿಲ್ಲ. ಯಾಕೆಂದರೆ ನಮಗೆ ಒಟ್ಟಾರೆಯಾಗಿ ಎನ್.ಡಿ.ಎ ಮುಖ್ಯ. ಹೀಗಾಗಿ ನಿಮ್ಮ ಪಕ್ಷದವರೇ ಅಭ್ಯರ್ಥಿಯಾದರೂ ನಾನು ಫೀಲ್ಡಿಗಿಳಿದು ಗೆಲುವಿಗಾಗಿ ಶ್ರಮಿಸುತ್ತೇನೆ. ಎಲ್ಲಕ್ಕಿಂತ ಮುಖ್ಯವಾಗಿ ಮೊನ್ನೆ ವಿಧಾನಪರಿಷತ್ತಿನ ನಾಲ್ಕು ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಎನ್.ಡಿ.ಎ ಜಯಭೇರಿ ಬಾರಿಸಿದೆ. ಈಗ ಹಿರಿಯೂರಿನಲ್ಲೂ ಆ ಪರಂಪರೆ ಮುಂದುವರಿಯಬೇಕು’ ಎಂದಿದ್ದಾರೆ. ಆಗೆಲ್ಲ ಅಮಿತ್ ಶಾ ಅವರು: ‘ನನಗೆ ಗೊತ್ತು. ಕುಮಾರ್ ಸೋಮೀಜಿ. ನಿಮ್ಮ ಪಕ್ಷದವರೇ ಅಭ್ಯರ್ಥಿಯಾಗಲಿ ಎಂದಿದ್ದಾರೆ. ಹೀಗೆ ಅವರು ಹೇಳಿದರೂ ಈ ವಾರ ರಾಜ್ಯದ ಬಿಜೆಪಿ ನಾಯಕರ ಜತೆ ಮಾತನಾಡಲಿರುವ ಕುಮಾರಸ್ವಾಮಿ: ‘ಹಿರಿಯೂರಿನ ಸೀಟು ಬೇಕಿದ್ರೆ ನೀವೇ ತಗೊಳ್ಳಿ’ ಅಂತ ಸ್ಪಷ್ಟವಾಗಿ ಹೇಳಲಿದ್ದಾರೆ. ಅವರ ಮಾತಿಗೆ ಬಿಜೆಪಿ ನಾಯಕರು ಏನು ಹೇಳಲಿದ್ದಾರೆ ಎಂಬುದರ ಮೇಲೆ ಎನ್.ಡಿ.ಎ ಅಭ್ಯರ್ಥಿ ಯಾರು? ಎಂಬುದು ಫೈನಲ್ ಆಗಲಿದೆ.

ಡೆವಿಲ್ ವರ್ಕರ್ ಬಿಕೆ
ಈ ಮಧ್ಯೆ ಕೆಪಿಸಿಸಿ ಅಧ್ಯಕ್ಷರಾದ ಬಿ.ಕೆ. ಹರಿಪ್ರಸಾದ್ ಅವರ ಕಾರ್ಯವೈಖರಿಯ ಬಗ್ಗೆ ಪಕ್ಷದ ವರಿಷ್ಟರು ಖುಷಿಯಾಗಿದ್ದಾರಂತೆ.
ಕಾರಣ? ಕರ್ನಾಟಕದಲ್ಲಿ ಪಕ್ಷ ಸಂಘಟನೆಯ ಕುರಿತು ಅವರು ತೋರಿಸುತ್ತಿರುವ ಕಾಳಜಿ.
ಇನ್ನೇನು, ಕರ್ನಾಟಕದಲ್ಲಿ ಸಾಲು-ಸಾಲು ಚುನಾವಣೆಗಳು ಬರುತ್ತಿದ್ದು, ಅದಕ್ಕೂ ಮುನ್ನ ಪಕ್ಷದ ಪದಾಧಿಕಾರಿಗಳ ಪಟ್ಟಿಯನ್ನು ಪುನರ್ರಚಿಸುವುದು ಹೇಗೆ?ಎಂಬುದರಿಂದ ಹಿಡಿದು ಇನ್ನೂರಕ್ಕೂ ಹೆಚ್ಚು ಬ್ಲಾಕ್ ಕಾಂಗ್ರೆಸ್ಸುಗಳಿಗೆ ಸೆಕ್ರೆಟರಿಗಳನ್ನು ನೇಮಿಸುವ ಪ್ರಕ್ರಿಯೆಯ ತನಕ ಎಲ್ಲವನ್ನೂ ಬಿಕೆ, ಅಂತಿಮ ಹಂತಕ್ಕೆ ತಂದಿದ್ದಾರೆ.

ಎಲ್ಲಕ್ಕಿಂತ ಮುಖ್ಯವಾಗಿ ಇವತ್ತು ತಳಮಟ್ಟದಲ್ಲಿ ಸಂಘಟನೆಯನ್ನು ಬಲಪಡಿಸುವುದು ಅಗತ್ಯ ಎಂಬುದನ್ನು ಬಲ್ಲ ಬಿಕೆ, ಯಾರು ಬ್ಲಾಕ್ ಕಾಂಗ್ರೆಸ್ ಸೆಕ್ರೆಟರಿಗಳಾಗಬೇಕು? ಅಂತ ಕಂದಾಯ ಸಚಿವ ಡಾ.ಜಿ. ಪರಮೇಶ್ವರ್ ನೇತೃತ್ವದ ಸಮಿತಿ ನೀಡಿದ ವರದಿಯನ್ನು ಮುಂದಿಟ್ಟುಕೊಂಡು ಮೊನ್ನೆ ದಿಲ್ಲಿಗೆ ಹೋಗಿ ಬಂದಿದ್ದಾರೆ. ಅಷ್ಟೇ ಅಲ್ಲ, ರಾಜಕೀಯ ವ್ಯವಹಾರಗಳ ಸಮಿತಿ ತುರ್ತಾಗಿ ರಚನೆಯಾಗಬೇಕು ಅಂತ ಹೇಳಿ ಬಂದಿದ್ದಾರೆ. ಹೀಗೆ ಪಕ್ಷ ಸಂಘಟನೆಯ ವಿಷಯದಲ್ಲಿ ಬಿಕೆ ಅವರಿಗಿರುವ ಕಮಿಟ್ ಮೆಂಟು ಹೆಜ್ಜೆ, ಹೆಜ್ಜೆಗೂ ಸಾಬೀತಾಗತೊಡಗಿದ್ದು, ಇದೇ ಕಾರಣಕ್ಕಾಗಿ ವರಿಷ್ಟರು ಬಿಕೆ ಬಗ್ಗೆ ಖುಷಿಯಾಗಿದ್ದಾರೆ.

ಲಾಸ್ಟ್ ಸಿಪ್
ಮುಂದಿನ ವಿಧಾನಸಭಾ ಚುನಾವಣೆಯ ಹೊತ್ತಿಗೆ ಕರ್ನಾಟಕದಲ್ಲೂ ತಮಿಳ್ನಾಡಿನ ಜೋಸೆಫ್ ವಿಜಯ್ ತರ ಒಬ್ಬ ಚಿತ್ರ ನಟನನ್ನು ಮೇಲೆತ್ತಿ ನಿಲ್ಲಿಸಲು ಕಾಂಗ್ರೆಸ್ ನಾಯಕರು ಯೋಚಿಸುತ್ತಿದ್ದಾರೆ.

ಅವರ ಪ್ರಕಾರ, ಈಗಾಗಲೇ ಒಬ್ಬ ನಾಯಕ ನಟನನ್ನು ಗುರುತಿಸಲಾಗಿದ್ದು,ಅವರಿಗಿರುವ ಅಭಿಮಾನಿಗಳ ಸಮೂಹ ಅಮೇಜಿಂಗ್.

ಇಷ್ಟಿದ್ದರೂ ಸಧ್ಯಕ್ಕೆ ರಾಜಕಾರಣದ ಫ್ರಂಟ್ ಲೈನಿಗೆ ಬಂದು ನಿಲ್ಲುವ ಸ್ಥಿತಿಯಲ್ಲಿ ಇಲ್ಲದ ಈ ನಾಯಕ, 2027 ರ ಜೂನ್ ಹೊತ್ತಿಗೆ ದೊಡ್ಡ ಸದ್ದಿನೊಂದಿಗೆ ಲೈಮ್ ಲೈಟಿಗೆ ಬರಲಿದ್ದಾರೆ.

ಹೀಗೆ ಅವರು ಲೈಮ್ ಲೈಟಿಗೆ ಬಂದ ಕೂಡಲೇ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದು, ರಾಜ್ಯಾದ್ಯಂತ ಪ್ರವಾಸ ಮಾಡಲು ಕಳಿಸುವುದು ಕಾಂಗ್ರೆಸ್ ನಾಯಕರ ಯೋಚನೆ.

ಕಾಂಗ್ರೆಸ್ ನ ಟಾಪ್ ಲೀಡರುಗಳ ಪ್ರಕಾರ, ಈ ನಾಯಕ ನಟ ಒಂದು ವರ್ಷ ಜನರ ಮಧ್ಯೆ ಇದ್ದರೆ ದೊಡ್ಡ ಟ್ರೆಂಡ್ ಕ್ರಿಯೇಟ್ ಮಾಡಬಲ್ಲರು.