ಮಕ್ಕಳ ಭವಿಷ್ಯದ ಬಗ್ಗೆ ಹೆತ್ತವರು ಕನಸು ಕಾಣುವುದು ತಪ್ಪೇ.?
ಹೆತ್ತು ಹೊತ್ತು ಮುದ್ದಿಸಿ, ಕಣ್ಣಲ್ಲಿ ಕಣ್ಣಿಟ್ಟು ಬೆಳೆಸಿ, ಕೊಟ್ಯಾಂತರ ಡೊನೇಷನ್ ಕೊಟ್ಟು ಡಾಕ್ಟರ್ ಮಾಡಲೂ ತಯಾರಾದ ಹೆತ್ತವರಿಗೆ ಕರುಳ ಕುಡಿಗಳು ಕೊಡುವ ಗಿಪ್ಟಾದರೂ ಏನೂ..? ಕಳೆದ ಎರಡು ಮೂರು ದಿನಗಳಿಂದ ಜಿಲ್ಲೆ, ರಾಜ್ಯದಾದ್ಯಂತ ಭಾರೀ ಸುದ್ದಿ ಮಾಡಿದ್ದ ಮೆಡಿಕಲ್ ಕಾಲೇಜು ವಿದ್ಯಾರ್ಥಿನಿಯೊಬ್ಬಳ ಇನ್ ಸೈಡ್ ಸ್ಟೋರಿ ಕೇಳಿದಾಗ ಮಕ್ಕಳ ಬಗ್ಗೆ ಪೋಷಕರು ವಹಿಸಬೇಕಾದ ಕಾಳಜಿ ಹಾಗೂ ಹದಿಹರೆಯದ ಸಮಯದಲ್ಲಿ ಪ್ರೇಮ ಪಾಶಕ್ಕೆ ಸಿಲುಕಿ ಹೆತ್ತವರ ಕನಸನ್ನು ಸಮಾಧಿ ಮಾಡುವ ಯುವತಿಯರು, ಯುವಕರು ಕಲಿಯಬೇಕಾದ ಪಾಠವೇನು.? ಎಂಬ ಬಗ್ಗೆ ಈ ಸಮಾಜ ಗಂಭೀರವಾದ ಚರ್ಚೆ ನಡೆಸಬೇಕಾದ ಅವಶ್ಯಕತೆ ಇದೆ.
ದೇರಳಕಟ್ಟೆಯ ವೈದ್ಯಕೀಯ ಕಾಲೇಜಿನಲ್ಲಿ ಪ್ರಥಮ ವರ್ಷದ ಎಂಬಿಬಿಎಸ್ ವ್ಯಾಸಂಗ ಮಾಡುವ ಜಿಲ್ಲೆಯ ಮುಸ್ಲಿಂ ಯುವತಿಯೊಬ್ಬಳನ್ನು ಅವಳದೇ ಕುಟುಂಬ ವರ್ಗ ಕಾಲೇಜು ಕ್ಯಾಂಪಸ್ ನಿಂದ ಥಾರ್ ವಾಹನದಲ್ಲಿ ಹೊತ್ತೊಯ್ದ ಆ ಘಟನೆ ಹಲವರ ಕಣ್ಣು ತೆರೆಸಬೇಕಾಗಿದೆ. ಎಕ್ಸ್ ಪರ್ಟ್ ನಿಂದ ಬರಕಾ ತನಕ.. ಎಜೆ ಯಿಂದ ಕಣಚೂರು ವರೆಗೆ ತೆರೆದುಕೊಂಡ ಲವ್ ಕಹಾನಿಯ ಬಗ್ಗೆ ತಿಳಿದುಕೊಳ್ಳುವ ಅವಶ್ಯಕತೆ ಇದೆ. ಇದು ಒಂದು ಕುಟುಂಬದ ಅವಸ್ಥೆಯಲ್ಲ.! ಈ ಬಗ್ಗೆ ಇಡೀ ಸಮಾಜವೇ ಚಿಂತಿಸಬೇಕಿದೆ.

ಜಿಲ್ಲೆಯ ಮುಸ್ಲಿಂ ಯುವತಿಗೆ ಹೊರ ಜಿಲ್ಲೆಯ ಹಿಂದೂ ಯುವಕನ ಜೊತೆ ಪ್ರೇಮಾಂಕುರ ಆಗಿದ್ದು ನಗರದ ಪ್ರತಿಷ್ಠಿತ ಎಕ್ಸ್ ಫರ್ಟ್ ಕಾಲೇಜಿನಲ್ಲಿ. ಪ್ರೀತಿ ಪ್ರೇಮದ ಹೆಸರಿನಲ್ಲಿ ಕಾಲೇಜಿಗೆ ಚಕ್ಕರ್ ಹೊಡೆದು ಸುತ್ತಾಟವೇ ಮೈನ್ ಅಜೆಂಡಾ ಆದಾಗ ಅಲ್ಲಿನ ಕಾಲೇಜು ಆಡಳಿತ ಮಂಡಳಿಯೇ ಅವರಿಬ್ಬರ ಮೇಲೆ ಶಿಸ್ತು ಕ್ರಮ ಕೈಗೊಂಡಿತ್ತು. ಇದು ಪೋಷಕರ ಗಮನಕ್ಕೆ ಬಂದಿತ್ತು. ಅಲ್ಲಿಂದ ಆಕೆಯನ್ನು ಬರಕಾ ಕಾಲೇಜಿಗೆ ಸೇರಿಸಲಾಯಿತು. ಇನ್ನಾದರೂ ತಾವು ಮುದ್ದಿನಿಂದ ಸಾಕಿದ ಗಿಣಿ ಬದಲಾಗಬಹುದು ಅನ್ನುವ ನಿರೀಕ್ಷೆ ಅವರದಾಗಿತ್ತು. ಆದರೆ ಪೋಷಕರು ಅಂದುಕೊಂಡಂತೆ ಅಂತಹದ್ದೇನೂ ನಡೆಯಲೇ ಇಲ್ಲ. ಪ್ರೇಮ ಪಾಶಕ್ಕೆ ಬಿದ್ದ ಆಕೆ ತನ್ನ ಬಾಯ್ ಫ್ರೆಂಡ್ ಜೊತೆ ಕದ್ದು ಮುಚ್ಚಿ ಸಂಪರ್ಕ ದಲ್ಲೇ ಇದ್ದಳು. ನೀಟ್ ಪರೀಕ್ಷೆಯಲ್ಲಿ ಮಾರ್ಕ್ಸ್ ಸಿಗದಿದ್ದ ಕಾರಣ ಮೆರಿಟ್ ಸೀಟ್ ಕನಸಿನ ಮಾತು ಸರಿ. ಎಜೆ ಯಲ್ಲಿ ಮ್ಯಾನೇಜ್ ಮೆಂಟ್ ಸೀಟು ಬೇಕು ಎಂಬ ಹಠಕ್ಕೆ ಅಷ್ಟೇನೂ ಶ್ರೀಮಂತರಲ್ಲದಿದ್ದರೂ ಚಿನ್ನ ಮಾರಿ ಲಕ್ಷಾಂತರ ರೂಪಾಯಿ ಕೂಡಿಟ್ಟು ಮಗಳ ಆಸೆಯನ್ನು ಪೂರೈಸಲು ಸೀಟು ಕೊಡಿಸಿದರು. ಮಗಳನ್ನು ಪವಿತ್ರ ಯಾತ್ರೆಗೆ ಕರೆದುಕೊಂಡು ಹೋಗಿ ಇನ್ನೆಂದೂ ಅಂತಹ ತಪ್ಪು ಮಾಡುವುದಿಲ್ಲ ಎಂದು ಪ್ರಮಾಣ ಮಾಡಿಸಿ ಮಗಳನ್ನು ಕಾಲೇಜಿಗೆ ಸೇರಿಸಿದರು. ಆದರೆ ಪ್ರೇಮದ ಮುಂದೆ ಯಾವ ಧರ್ಮ-ದೇವರ ಪ್ರಾರ್ಥನೆ ಫಲಿಸಲಿಲ್ಲ. ಮಗಳಿಗಾಗಿ ಸರ್ವಸ್ವವನ್ನು ತ್ಯಾಗ ಮಾಡಿದ ಕುಟುಂಬಕ್ಕೆ ಬರಸಿಡಿಲಿನಂತಹ ಸುದ್ದಿ ಬಂದಿತ್ತು. ಆಕೆಯ ಬಾಯ್ ಫ್ರೆಂಡ್ ಕೂಡ ಅದೇ ಕಾಲೇಜಿನಲ್ಲಿ ಸೀಟು ಪಡೆದಿದ್ದ. ಇದನ್ನು ಅರಿತ ಆಕೆಯ ಪೋಷಕರು ಅಲ್ಲಿನ ವಿದ್ಯಾಭ್ಯಾಸವನ್ನು ಮೊಟಕುಗೊಳಿಸಿ ಮನೆಯಲ್ಲೇ ಗೃಹ ಬಂಧನದಲ್ಲಿ ಇರಿಸಿದರು. ಪಪ್ಪಾ.. ನನಗೆ ಡಾಕ್ಟರ್ ಆಗಲೇಬೇಕು, ನನಗೆ ಎಂಬಿಬಿಎಸ್ ಸೀಟು ಕೊಡಿಸಿ, ನಾನು ಬದಲಾಗುತ್ತೇನೆ. ಎಂದು ಅಂಗಲಾಚಿದಾಗ ಹೆತ್ತ ಕರುಳು ಕರಗಿ, ಬೇರೆ ದಾರಿ ಕಾಣದೆ ತಮ್ಮಲ್ಲಿರುವ ಸರ್ವಸ್ವವನ್ನು ತ್ಯಾಗ ಮಾಡಿ ಆಕೆಗೆ ದೇರಳಕಟ್ಟೆಯ ಕಾಲೇಜಿನಲ್ಲಿ ಕೋಟಿ ಕೊಟ್ಟು ಸೀಟು ಕೊಡಿಸಿದರು. ಮಗಳ ಭವಿಷ್ಯ ಚೆನ್ನಾಗಿರಬೇಕು, ಆಕೆ ಡಾಕ್ಟರ್ ಆಗಿ ತಮ್ಮ ಕುಟುಂಬಕ್ಕೆ ಕೀರ್ತಿ ತರಬೇಕು ಅನ್ನುವ ಆಸೆ ಹೊತ್ತಿದ್ದ ಕುಟುಂಬಕ್ಕೆ ಆಕೆ ತಂದಿದ್ದು ಮಾತ್ರ ಅಪಕೀರ್ತಿ.! ತನ್ನ ಬಾಯ್ ಫ್ರೆಂಡ್ ನನ್ನು ಕಣಚೂರು ಕ್ಯಾಂಪಸ್ ಗೆ ಕರೆಸಿ ಚಕ್ಕಂದ ಆಡಿದಳು. ಕ್ಲಾಸ್ ಗೆ ಚಕ್ಕರ್ ಹೊಡೆದಳು. ಇಲ್ಲಿನ ಶಿಸ್ತು ನಿಯಮಕ್ಕೆ ಆಕೆ ಕಡೆಗಣಿಸಿದ ಕಾರಣ ಹೆತ್ತವರಿಗೂ ವಿಷಯ ಮುಟ್ಟಿಸಿದರು. ತನ್ನ ಮಗಳು ತಮ್ಮ ಕೈ ತಪ್ಪಿ ಹೋಗಿರುವುದು ಕನ್ಫರ್ಮ್ ಆದಾಗ ಅವರ ಕುಟುಂಬಿಕರು ಬಲವಂತವಾಗಿ ಕ್ಯಾಂಪಸ್ಸಿನಿಂದಲೇ ಎತ್ತಾಕಿಕೊಂಡು ಹೋದರು. ಮನೆಗೆ ಕೀರ್ತಿತರಬೇಕಾದವಳು ಕುಟುಂಬದ ಮಾನ-ಮರ್ಯಾದೆಯನ್ನು ಬೀದಿಗೆ ತಂದೇ ಬಿಟ್ಟಳು ಕರುಳ ಕುಡಿ.
ವಾಸ್ತವಾಗಿ ಕುಟುಂಬಸ್ಥರು ಸ್ವಲ್ಪ ಬಲ ಪ್ರಯೋಗ ನಡೆಸಿ ಮಗಳನ್ನು ಕರೆದುಕೊಂಡು ಹೋಗಿರುವುದನ್ನು ಕಿಡ್ನ್ಯಾಪ್ ರೀತಿಯಲ್ಲಿ ದೊಡ್ಡ ಸಂಗತಿ ರೀತಿಯಲ್ಲಿ ಬಿಂಬಿಸಲಾಯಿತು. ಆಕೆ ಪ್ರಾಯ ಪ್ರಬುದ್ಧಳು ಹೌದು ಅದು ನಿಜ. ಆದರೆ ಆಕೆಗೆ ತನ್ನ ಸರ್ವಸ್ವವನ್ನೂ ತ್ಯಾಗ ಮಾಡಿದ ಕುಟುಂಬ ವರ್ಗಕ್ಕೂ ಆಕೆಯನ್ನು ಸರಿ ದಾರಿಗೆ ತರುವ ಹಕ್ಕು ಖಂಡಿತ ಇದೆ. ಇದು ಈಕೆಯ ಒಬ್ಬಳ ಪ್ರಶ್ನೆಯಲ್ಲ. ಹೆತ್ತವರು ತಮ್ಮೆಲ್ಲವನ್ನು ತ್ಯಾಗ ಮಾಡಿ ತಮ್ಮ ಮಕ್ಕಳು ಒಳ್ಳೆಯ ಸ್ಥಾನಮಾನ ಹೊಂದಲಿ ಅಂತ ಬಯಸಿ, ಮಕ್ಕಳ ಭವಿಷ್ಯತ್ತಿನ ಬಗ್ಗೆ ಚಿಂತಿಸಿದರೆ ಮಕ್ಕಳು ತಮ್ಮ ಪಾಲಕರ ಕನಸಿಗೆ ಕೊಳ್ಳಿ ಇಡುವಂತಾಗಿದೆ ಇಂದಿನ ಪರಿಸ್ಥಿತಿ.!

ಇಂದು ಲಕ್ಷಗಟ್ಟಲೆ ಪೀಸ್ ಕೊಟ್ಟು ಕಾಲೇಜಿಗೆ ಸೇರಿಸುವ ಪೋಷಕರು ತಮ್ಮ ಮಕ್ಕಳು ದಾರಿ ತಪ್ಪುತ್ತಿರುವ ಸಂಗತಿ ತಿಳಿದರೂ ಏನು ಮಾಡಲು ಸಾಧ್ಯವಾಗದ ಪರಿಸ್ಥಿತಿ ಒಂದು ಕಡೆಯಾದರೆ, ಇವತ್ತಿನ ಜೆನ್ ಝೀ ಮಕ್ಕಳು ತಮ್ಮದೇ ಪ್ರಪಂಚ ಅನ್ನುವ ರೀತಿಯಲ್ಲಿ ಕಾಲೇಜು ಜೀವನವನ್ನೇ ಮೋಜು ಮಸ್ತಿಯ ಜೀವನ ಅಂದುಕೊಂಡುಬಿಟ್ಟಿದ್ದಾರೆ.
ಮಕ್ಕಳನ್ನು ಬೆಳೆಸುವಾಗ ಹೆತ್ತವರು ಅವರ ಭವಿಷ್ಯದ ಬಗ್ಗೆ ಅನೇಕ ಕನಸುಗಳನ್ನು ಕಟ್ಟಿಕೊಳ್ಳುತ್ತಾರೆ. ಶಿಕ್ಷಣ, ಉದ್ಯೋಗ, ಮದುವೆ, ಕುಟುಂಬದ ಗೌರವ ಹೀಗೆ ಪ್ರತಿಯೊಂದು ವಿಚಾರದಲ್ಲೂ ತಮ್ಮ ಅನುಭವದ ಆಧಾರದಲ್ಲಿ ನಿರ್ಧಾರಗಳನ್ನು ರೂಪಿಸಿರುತ್ತಾರೆ. ಆದರೆ ಮಕ್ಕಳು ಪ್ರೌಢಾವಸ್ಥೆಗೆ ಬಂದಾಗ ಅವರದೇ ಆದ ಆಲೋಚನೆಗಳು, ಆಯ್ಕೆಗಳು ಮತ್ತು ಜೀವನದ ಗುರಿಗಳು ರೂಪುಗೊಳ್ಳುತ್ತವೆ. ಕೆಲವೊಮ್ಮೆ ಆ ಆಯ್ಕೆಗಳು ಹೆತ್ತವರ ನಿರೀಕ್ಷೆಗಳಿಗೆ ಸಂಪೂರ್ಣ ವಿರುದ್ಧವಾಗಿರುತ್ತವೆ. ಅದೇ ಆಗಿದೆ ಅನ್ಸುತ್ತದೆ. ವರ್ಣಿಸಲು ಅಸಾಧ್ಯ ನೋವು, ಕಣ್ಣೀರೇ ಗತಿ! ಇದು ಒಂದು ಕುಟುಂಬ ಪರಿಸ್ಥಿತಿಯಲ್ಲ. ಈ ಸಮಾಜದ ದುಸ್ಥಿತಿ. ಈ ಬಗ್ಗೆ ಸಮಾಜಚಿಂತಿಸಬೇಕಿದೆ.
