ವಿಟ್ಲ: ಪತ್ನಿಯನ್ನು ಕೊಲೆಗೈದು ಹಾರ್ಟ್ ಅಟ್ಯಾಕ್ ಎಂದು ಬಿಂಬಿಸಿದ ಪಾಪಿ ಪತಿಗೆ ಐದು ವರ್ಷ ಜೈಲು ಶಿಕ್ಷೆ

ಕರಾವಳಿ

ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಬಂಟ್ವಾಳದ ಪುಣಚ ನಿವಾಸಿ ಸಂಜೀವ ನಾಯ್ಕ ಎಂಬಾತ ಪತ್ನಿಯನ್ನು ಕೊಲೆಗೈದು ಯಾರಿಗೂ ಸಂದೇಹ ಬಾರದ ರೀತಿಯಲ್ಲಿ ಅಸ್ವಾಭಾವಿಕ ಮರಣ ಎಂದು ಬಿಂಬಿಸಿಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ಐದು ವರ್ಷ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿ ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.

2024 ಡಿಸೆಂಬರ್ 11 ರಂದು ರಾತ್ರಿ ವಿವಾಹಿತ ಮಹಿಳೆಯೋರ್ವರು ಹಾರ್ಟ್ ಅಟ್ಯಾಕ್ ನಿಂದ ಕುಸಿದು ಬಿದ್ದಿದ್ದಾರೆ ಎಂದು ಆಕೆಯ ಗಂಡ ಸಂಜೀವ ನಾಯ್ಕ ನೆರೆಮನೆಯವರಿಗೆ ತಿಳಿಸಿದ್ದು, ಬಳಿಕ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ,ಮಹಿಳೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು .ಮೃತ ಮಹಿಳೆಯ ಮೃತದೇಹದಲ್ಲಿ ಗಾಯಗಳಿರುವ ಹಿನ್ನೆಲೆಯಲ್ಲಿ ಸಂಶಯಾಸ್ಪದ ಮರಣ ಎಂಬುದಾಗಿ ವಿಟ್ಲ ಠಾಣೆಯಲ್ಲಿ ಅಕ್ರ 184/2024 u/s 103(1) BNS ರಂತೆ ಪ್ರಕರಣ ದಾಖಲಾಗಿತ್ತು.

ಪ್ರಕರಣದ ತನಿಖೆ ನಡೆಸಿದ ತನಿಖಾಧಿಕಾರಿಯಾಗಿದ್ದ ಪೊಲೀಸ್ ನಿರೀಕ್ಷಕ ನಾಗರಾಜ್ ಹೆಚ್ .ಇ ರವರು ಅಗತ್ಯ ಸಾಕ್ಷಿಗಳನ್ನು ಕಲೆಹಾಕಿ ಮೃತ ಮಹಿಳೆಯ ಗಂಡ ಸಂಜೀವ ನಾಯ್ಕ ಎಂಬಾತನ ವಿರುದ್ದ ನ್ಯಾಯಾಲಯಕ್ಕೆ ದೊಷಾರೋಪಣಾ ಪಟ್ಟಿ ಸಲ್ಲಿಸಿದ್ದರು .

ಪ್ರಕರಣದ ವಿಚಾರಣೆ ನಡೆಸಿದ ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನ್ಯಾಯಾಧೀಶರಾದ ಜಗದೀಶ್ ವಿ ಎನ್ ರವರು, ಆರೋಪಿತನ ವಿರುದ್ದದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಶಿಕ್ಷೆ ಪ್ರಕಟಿಸಿದ್ದಾರೆ.

ಭಾರತೀಯ ನ್ಯಾಯ ಸಂಹಿತೆ 2023, ಕಲಂ 105 ರ ಭಾಗ 2 ಅಡಿಯಲ್ಲಿ ಅಪರಾಧ ಸಾಬೀತಾಗಿ 5 ವರ್ಷ ಸಾದಾ ಜೈಲು ಶಿಕ್ಷೆ ಹಾಗೂ 5000 ರೂಪಾಯಿ ದಂಡ ವಿಧಿಸಲಾಗಿದೆ. ದಂಡ ಕಟ್ಟಲು ವಿಫಲರಾದರೆ 6 ತಿಂಗಳು ಹೆಚ್ಚುವರಿ ಜೈಲು ಶಿಕ್ಷೆ ವಿಧಿಸುವಂತೆ ಆದೇಶಿಸಲಾಗಿದೆ.

ಪ್ರಕರಣದ ವಿಚಾರಣೆಯಲ್ಲಿ ಸರ್ಕಾರಿ ಅಭಿಯೋಜಕರಾಗಿ ಜ್ಯೋತಿ ನಾಯ್ಕ್ ರವರು ಸಮರ್ಥವಾಗಿ ವಾದ ಮಂಡಿಸಿದ್ದರು.