ಆಹಾರ ಪ್ಯಾಕೆಟ್ ಗಳ ಮೇಲೆ ಎಚ್ಚರಿಕೆಯ ಲೇಬಲ್ ಖಡ್ಡಾಯ. ಉದ್ಯಮ ಹಿತಾಶಕ್ತಿಗಿಂತ ಜನರ ಆರೋಗ್ಯ ಮುಖ್ಯ: ಸುಪ್ರೀಂಕೋರ್ಟ್

ರಾಷ್ಟ್ರೀಯ

ಮಾರುಕಟ್ಟೆಯಲ್ಲಿ ಸಿಗುವ ಬೇಕರಿ ತಿಂಡಿ, ತಂಪು ಪಾನೀಯ ಸೇರಿದಂತೆ ಪ್ಯಾಕ್ ಮಾಡಿದ ಆಹಾರ ಪದಾರ್ಥಗಳನ್ನು ಖರೀದಿಸುವಾಗ ಗ್ರಾಹಕರು ಸಾಮಾನ್ಯವಾಗಿ ಅದರ ಪ್ಯಾಕೆಟ್ ಮೇಲಿರುವ ಪೌಷ್ಟಿಕಾಂಶದ ಮಾಹಿತಿಯನ್ನು ಗಮನಿಸುವುದಿಲ್ಲ. ಒಂದು ವೇಳೆ ಗಮನಿಸಿದರೂ ಕ್ಯಾಲೊರಿ, ಕೊಬ್ಬು ಮತ್ತು ಅಡಿಷನಲ್ ಸಕ್ಕರೆ ಪ್ರಮಾಣಕ್ಕೆ ಮಾತ್ರ ಹೆಚ್ಚಿನ ಆದ್ಯತೆ ನೀಡುತ್ತಾರೆ. ಆದರೆ ಆಹಾರದಲ್ಲಿರುವ ಒಟ್ಟು ಸಕ್ಕರೆಯ ಪ್ರಮಾಣ ತಿಳಿದುಕೊಳ್ಳುವುದೂ ಅಷ್ಟೇ ಮುಖ್ಯವಾಗಿದೆ. ಈ ಹಿನ್ನೆಲೆಯಲ್ಲಿ ಪ್ಯಾಕ್ ಮಾಡಿದ ಆಹಾರ ಉತ್ಪನ್ನಗಳ ಮೇಲಿನ ಸಕ್ಕರೆ ಎಚ್ಚರಿಕೆ ಲೇಬಲ್ ಗಳಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಹತ್ವದ ನಿರ್ದೇಶನ ನೀಡಿದೆ.

ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಆಹಾರ ಉತ್ಪನ್ನಗಳ ಮೇಲಿನ ಎಚ್ಚರಿಕೆ ಲೇಬಲ್ ಗಳನ್ನು ರೂಪಿಸುವಾಗ ಕೇವಲ ಸೇರಿಸಿದ ಸಕ್ಕರೆಯನ್ನಷ್ಟೇ ಪರಿಗಣಿಸದೆ, ಒಟ್ಟು ಸಕ್ಕರೆಯ ಪ್ರಮಾಣವನ್ನೂ ಆಧಾರವಾಗಿಟ್ಟುಕೊಳ್ಳಬೇಕು ಎಂದು ನ್ಯಾಯಾಲಯ ಸೂಚಿಸಿದೆ. ಹೊಸ ನಿಯಮಗಳನ್ನು ಅಂತಿಮಗೊಳಿಸಲು FSSAIಗೆ ನಾಲ್ಕು ತಿಂಗಳ ಕಾಲಾವಕಾಶ ನೀಡಿದೆ.

ಪ್ರಸ್ತುತ ಆಹಾರ ಉತ್ಪನ್ನಗಳ ಮೇಲಿನ ಎಚ್ಚರಿಕೆ ಲೇಬಲ್ ಗಳಿಗೆ ಸಂಬಂಧಿಸಿದ ಮಾನದಂಡಗಳಲ್ಲಿ ಸೇರಿಸಿದ ಸಕ್ಕರೆ ಮತ್ತು ಕೊಬ್ಬಿನ ಪ್ರಮಾಣಕ್ಕೆ ಆದ್ಯತೆ ನೀಡಲಾಗುತ್ತಿತ್ತು. ಆದರೆ ಒಟ್ಟು ಸಕ್ಕರೆ ಹಾಗೂ ಸ್ಯಾಚುರೇಟೆಡ್ ಫ್ಯಾಟ್ ಪ್ರಮಾಣವನ್ನೂ ಪರಿಗಣಿಸಿ ಹೊಸ ಮಾನದಂಡಗಳನ್ನು ರೂಪಿಸುವ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಸೂಚಿಸಿದೆ.

ಸಕ್ಕರೆ, ಕೊಬ್ಬು ಮತ್ತು ಉಪ್ಪಿನ ಪ್ರಮಾಣಕ್ಕೆ ಸಂಬಂಧಿಸಿದ ಎಚ್ಚರಿಕೆ ಲೇಬಲ್ಗಳ ಮಾನದಂಡಗಳನ್ನು ನಿರ್ಧರಿಸುವ ಜವಾಬ್ದಾರಿಯನ್ನು FSSAIಗೆ ವಹಿಸಲಾಗಿದೆ. ಕೆಲವು ಆಹಾರ ಉತ್ಪನ್ನಗಳ ಪ್ಯಾಕೆಟ್ಗಳ ಮೇಲೆ ‘ನೋ ಆ್ಯಡೆಡ್ ಶುಗರ್’ ಎಂದು ನಮೂದಿಸಿದ್ದರೂ, ಅವುಗಳಲ್ಲಿ ನೈಸರ್ಗಿಕವಾಗಿ ಅಥವಾ ಸಂಸ್ಕರಣೆಯ ಪ್ರಕ್ರಿಯೆಯಿಂದ ಒಟ್ಟು ಸಕ್ಕರೆಯ ಪ್ರಮಾಣ ಹೆಚ್ಚಿರಬಹುದು. ಹೀಗಾಗಿ ಗ್ರಾಹಕರಿಗೆ ಸಂಪೂರ್ಣ ಮಾಹಿತಿ ಸಿಗಬೇಕು ಎಂಬುದು ಈ ಸೂಚನೆಯ ಪ್ರಮುಖ ಉದ್ದೇಶವಾಗಿದೆ.
ಹೊಸ ಮಾನದಂಡಗಳು ಜಾರಿಗೆ ಬಂದ ಬಳಿಕ ಒಟ್ಟು ಸಕ್ಕರೆ ಮತ್ತು ಸ್ಯಾಚುರೇಟೆಡ್ ಫ್ಯಾಟ್ ಪ್ರಮಾಣದ ಆಧಾರದ ಮೇಲೆ ಉತ್ಪನ್ನಗಳ ಮುಂಭಾಗದಲ್ಲಿ ಎಚ್ಚರಿಕೆ ಲೇಬಲ್ ಅಳವಡಿಸುವ ಬಗ್ಗೆ ನಿರ್ಧಾರವಾಗಲಿದೆ.

2024ರಲ್ಲಿ ಪ್ರಕಟವಾದ ICMR-NIN ಆಹಾರ ಮಾರ್ಗಸೂಚಿಗಳ ಆಧಾರದಲ್ಲಿ FSSAI ಕೆಲವು ಮಾನದಂಡಗಳನ್ನು ರೂಪಿಸಿತ್ತು. ಅದರ ಪ್ರಕಾರ 100 ಗ್ರಾಂ ಘನ ಆಹಾರ ಪದಾರ್ಥದಲ್ಲಿ 3 ಗ್ರಾಂ ಆ್ಯಡೆಡ್ ಶುಗರ್ ಮತ್ತು 4.2 ಗ್ರಾಂ ಆ್ಯಡೆಡ್ ಫ್ಯಾಟ್ ಪ್ರಮಾಣವನ್ನು ಉಲ್ಲೇಖಿಸಲಾಗಿತ್ತು. ಅದೇ ರೀತಿ 100 ಮಿಲಿಲೀಟರ್ ಪಾನೀಯದಲ್ಲಿ 2 ಗ್ರಾಂ ಆ್ಯಡೆಡ್ ಶುಗರ್ ಮತ್ತು 1.5 ಗ್ರಾಂ ಆ್ಯಡೆಡ್ ಫ್ಯಾಟ್ ಮಾನದಂಡ ನಿಗದಿಪಡಿಸಲಾಗಿತ್ತು. ಆದರೆ ಕೇವಲ ಸೇರಿಸಿದ ಸಕ್ಕರೆಯನ್ನು ಆಧಾರವಾಗಿಟ್ಟುಕೊಂಡರೆ ಆಹಾರದಲ್ಲಿರುವ ನೈಸರ್ಗಿಕ ಸಕ್ಕರೆಯ ಪ್ರಮಾಣ ಗ್ರಾಹಕರ ಗಮನಕ್ಕೆ ಬರುವುದಿಲ್ಲ ಎಂಬ ಆಕ್ಷೇಪ ವ್ಯಕ್ತವಾಗಿತ್ತು.