ರಾಜಧಾನಿ ಬೆಂಗಳೂರಿನಲ್ಲಿ ಡೆಂಗ್ಯೂ ಹಾವಳಿ ಮಿತಿ ಮೀರುತ್ತಿದ್ದು, ಪ್ರತಿ 2 ಗಂಟೆಗೆ ಇಬ್ಬರಲ್ಲಿ ಡೆಂಗ್ಯೂ ಲಕ್ಷಣಗಳು ಪತ್ತೆಯಾಗುತ್ತಿವೆ. ಕಳೆದ 6 ತಿಂಗಳಲ್ಲಿ 6 ಸಾವಿರದ 900ಕ್ಕೂ ಹೆಚ್ಚು ಜನ ಡೆಂಗ್ಯೂ ಟೆಸ್ಟ್ಗೆ ಒಳಗಾಗಿದ್ದಾರೆ. ಈ ಪೈಕಿ 2457 ಜನರಲ್ಲಿ ಡೆಂಗ್ಯೂ ದೃಢಪಟ್ಟಿದೆ. ಬೆಂಗಳೂರು ಪೂರ್ವ ವಲಯದಲ್ಲಿ ಓರ್ವ ವೃದ್ಧ ಹಾಗೂ ಓರ್ವ ಯುವಕನನ್ನು ಡೆಂಗ್ಯೂ ಬಲಿ ಪಡೆದಿದೆ. ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಶಂಕಿತ ಡೆಂಗ್ಯೂ ಪ್ರಕರಣಗಳ ಹೆಚ್ಚಳ ಆತಂಕ ಮೂಡಿಸಿದೆ.

ರೋಗವನ್ನು ತ್ವರಿತವಾಗಿ ಪತ್ತೆ ಹಚ್ಚಲು ಸಾಧ್ಯವಾಗುತ್ತಿಲ್ಲ. ನಗರದ ಆರೋಗ್ಯ ಕೇಂದ್ರಗಳಲ್ಲಿ ಡೆಂಗ್ಯೂ ಟೆಸ್ಟಿಂಗ್ಗೆ ಬೇಕಾದ ಎನ್ಎಸ್1 ಕಿಟ್ಗಳೇ ಸಾಕಷ್ಟು ಇಲ್ಲವಂತೆ. ಆಸ್ಪತ್ರೆಗಳಲ್ಲಿ ನಿತ್ಯ 200 ರಿಂದ 250 ಟೆಸ್ಟ್ ಮಾತ್ರ ಮಾಡಲಾಗುತ್ತಿದೆ. ಗದಗ, ಚಿತ್ರದುರ್ಗ, ಮೈಸೂರು ಸೇರಿ ಹಲವು ಜಿಲ್ಲೆಗಳಲ್ಲಿ ಡೆಂಗ್ಯೂ ಬಗ್ಗೆ ಕಟ್ಟೆಚ್ಚರ ವಹಿಸಲಾಗಿದೆ. ತುಮಕೂರು ಜಿಲ್ಲೆಯಲ್ಲಿ ಆರೇ ತಿಂಗಳಲ್ಲಿ 170 ಪ್ರಕರಣಗಳು ಪತ್ತೆಯಾಗಿದೆ. ಗದಗದಲ್ಲಿ ಒಂದೇ ತಿಂಗಳಲ್ಲಿ ಒಟ್ಟು 31 ಮಕ್ಕಳಿಗೆ ಡೆಂಗ್ಯೂ ಶಂಕೆ ವ್ಯಕ್ತವಾಗಿದೆ. ಮಂಡ್ಯದಲ್ಲಿ ಎರಡು ತಿಂಗಳಲ್ಲಿ 150ಕ್ಕೂ ಹೆಚ್ಚು ಜನರಿಗೆ ಡೆಂಗ್ಯೂ ಅವರಿಸಿಕೊಂಡಿದೆ.
