ಅಧಿಕಾರ ರಾಜಕಾರಣಕ್ಕಿಂತ ತತ್ವ ಸಿದ್ಧಾಂತದ ಬದ್ಧತೆ ಹೊಂದಿರುವ ಡೈನಾಮಿಕ್ ರಾಜಕಾರಣಿ ಬಿ. ಕೆ ಹರಿಪ್ರಸಾದ್

ರಾಜ್ಯ

ಮುಚ್ಚುಮರೆಯಿಲ್ಲದೆ ಹುಳುಕುಗಳನ್ನು ತೆರೆದಿಡುವ ಗಟ್ಟಿ ಧ್ವನಿಯ ಏಕೈಕ ನಾಯಕ

ಕರಾವಳಿಯ ಕೋಮು ರಾಜಕಾರಣ ಕೊನೆಯಾಗಬೇಕಾದರೆ ಬಿ. ಕೆ ಹರಿಪ್ರಸಾದ್ ಉಸ್ತುವಾರಿ ಮಂತ್ರಿಯಾಗಲಿ

ಸಣ್ಣ ಪುಟ್ಟ ಅಧಿಕಾರಕ್ಕಾಗಿ ತತ್ವ ಸಿದ್ಧಾಂತಕ್ಕೆ ಎಳ್ಳು ನೀರು ಬಿಟ್ಟು ಬಕೆಟ್ ಹಿಡಿಯುವ ಅದೆಷ್ಟೋ ರಾಜಕಾರಣಿಗಳನ್ನು ನಾವು ಕಂಡಿದ್ದೇವೆ. ಅಂತಹುದರಲ್ಲಿ ಅಧಿಕಾರ, ರಾಜಕಾರಣಕ್ಕಿಂತ ತತ್ವ ಸಿದ್ಧಾಂತವೇ ಮೇಲು ಅನ್ನುತ್ತಾ ಇದೇ ಕಾರಣದಿಂದ ಮಂತ್ರಿಯಾಗುವ ಭಾಗ್ಯ ಕಳೆದುಕೊಂಡ ಈ ಕಾಲಘಟ್ಟದ ಏಕೈಕ ರಾಜಕಾರಣಿಯಿದ್ದರೆ ಅದು ಬಿ. ಕೆ ಹರಿಪ್ರಸಾದ್ ಮಾತ್ರ ಅನ್ನುವುದು ಸುಳ್ಳಲ್ಲ.

ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತ. ಇಂದಿರಾ ಗಾಂಧಿ ಕಾಲಘಟ್ಟದಿಂದ ಹೈಕಮಾಂಡ್ ಮಟ್ಟದಲ್ಲಿ ತನ್ನದೇ ಆದ ಪ್ರಭಾವ ಹೊಂದಿರುವ ಬಿ.ಕೆ ಹರಿಪ್ರಸಾದ್ ವಿವಿಧ ರಾಜ್ಯಗಳ ಚುನಾವಣೆಗಳಲ್ಲಿ ಕಾಂಗ್ರೆಸ್ ಉಸ್ತುವಾರಿಯಾಗಿ ಕೆಲಸ ಮಾಡಿದವರು. ಹೈಕಮಾಂಡ್ ಮಟ್ಟದಲ್ಲಿ ಅಷ್ಟೂ ಪ್ರಭಾವ ಹೊಂದಿದರೂ ಅಧಿಕಾರಕ್ಕಾಗಿ ಲಾಬಿ ನಡೆಸಿದವರಲ್ಲ, ನಾಯಕರ ಹಿಂದೆ ಮುಂದೆ ಸುತ್ತಾಡಿದವರೂ ಅಲ್ಲ. ಅಂತಹ ರಾಜಕಾರಣ ಮಾಡುತ್ತಿದ್ದರೆ ಇವತ್ತು ಮಂತ್ರಿ ಅಲ್ಲ, ಮುಖ್ಯಮಂತ್ರಿ ಆಗುತ್ತಿದ್ದರು. ಅಧಿಕಾರಕ್ಕಾಗಿ ತತ್ವ ಸಿದ್ಧಾಂತಕ್ಕೆ ರಾಜಿ ಮಾಡಿಕೊಳ್ಳದ ಪರಿಣಾಮ ಸಿದ್ದರಾಮಯ್ಯ ಸಂಪುಟದಲ್ಲಿ ಮಂತ್ರಿಯಾಗುವ ಅವಕಾಶವನ್ನು ಕಳೆದುಕೊಂಡಿದ್ದರು.

ಬಿ. ಕೆ ಹರಿಪ್ರಸಾದ್ ಕಾಂಗ್ರೆಸ್ ಪಕ್ಷದ ನಿಷ್ಠಾವಂತ, ಪ್ರಾಮಾಣಿಕ ಹಿರಿಯ ನಾಯಕ. ಪಕ್ಷದ ಹುಳುಕುಗಳನ್ನು ಮುಚ್ಚು ಮರೆಯಿಲ್ಲದೆ ಹೇಳುವ ಗಟ್ಟಿಗಿತ್ತಿ ನಾಯಕ. ಕಾಂಗ್ರೆಸ್ ಪಕ್ಷದಲ್ಲೂ ಸ್ಲೀಪರ್ ಸೆಲ್ ಆರ್.ಎಸ್.ಎಸ್ ನಾಯಕರಿದ್ದಾರೆ ಅನ್ನುವ ಮೂಲಕ ರಾಹುಲ್ ಗಾಂಧಿ ಕನಸು ಕಂಡ ಕಾಂಗ್ರೆಸ್ ಈಗ ಜೀವಂತ ಇಲ್ಲ ಅನ್ನುವ ಸಂದೇಶವನ್ನು ಹೊರ ಹಾಕಿದ್ದಾರೆ.

ಬಿ. ಕೆ ಹರಿಪ್ರಸಾದ್ ವಿಧಾನಪರಿಷತ್ ವಿರೋಧ ಪಕ್ಷದ ನಾಯಕರಾಗಿ ಕೋಮುವಾದ ರಾಜಕಾರಣವನ್ನು ವಿರೋಧಿಸುತ್ತಾ ಬಂದವರು. ಕರಾವಳಿ ಭಾಗದಲ್ಲಿ ಹಿಂದುತ್ವ ರಾಜಕಾರಣ ವಿಜೃಂಭಿಸುತ್ತಿದ್ದರೂ ಕಾಂಗ್ರೆಸ್ ಅಧಿಕಾರವಿದ್ದಾಗ ಅದನ್ನು ಎದುರಿಸುವ ಪ್ರಯತ್ನ ಮಾಡದೆ ಒಪ್ಪಂದ ರಾಜಕಾರಣಕ್ಕೆ ಇಳಿದ ಪರಿಣಾಮ ಜಿಲ್ಲೆಯಲ್ಲಿ ಕಾಂಗ್ರೆಸ್ ಸೋತು ಸುಣ್ಣವಾಗಿದೆ. ಕರಾವಳಿ ಭಾಗದಲ್ಲಿ ಕಾಂಗ್ರೆಸ್ ಪಕ್ಷದಿಂದ ಘಟಾನುಘಟಿ ನಾಯಕರು ಮಂತ್ರಿಯಾಗಿದ್ದರೂ ಕೋಮು ರಾಜಕಾರಣಕ್ಕೆ ತೀಲಾಂಜಲಿ ಇಡುವ ಕೆಲಸಕ್ಕೆ ಮುಂದಾಗಲಿಲ್ಲ. ಬಿ ಕೆ ಹರಿಪ್ರಸಾದ್ ಏಕಾಂಗಿಯಾಗಿ ಗಟ್ಟಿ ಧ್ವನಿಯಲ್ಲಿ ಬಿಜೆಪಿಯ ಹಿಂದುತ್ವ ರಾಜಕಾರಣವನ್ನು ವಿರೋಧಿಸುತ್ತಾ ಬಂದರೂ ಕಾಂಗ್ರೆಸ್ ನಾಯಕರೇ ಭಿನ್ನರಾಗದಂತೆ ವರ್ತಿಸುವ ಮೂಲಕ ಹರಿಪ್ರಸಾದ್ ಧ್ವನಿಯನ್ನೇ ಸ್ವಪಕ್ಷದವರೇ ಅಮುಕುವ ಪ್ರಯತ್ನ ಮಾಡಿದ್ದರು.

ಈ ಬಾರಿಯ ಸಿದ್ದರಾಮಯ್ಯ ಸಂಪುಟದಲ್ಲಿ ಕರಾವಳಿಗೆ ಯಾವುದೇ ಪ್ರಾತಿನಿಧ್ಯ ಇಲ್ಲ. ಸಚಿವ ಸಂಪುಟ ವಿಸ್ತರಣೆಯ ಮಾತುಗಳು ಕೇಳಿ ಬರತೊಡಗಿದೆ. ಈ ಬಾರಿ ಸಚಿವ ಸಂಪುಟದಲ್ಲಿ ಬಿ.ಕೆ ಹರಿಪ್ರಸಾದ್ ರಿಗೆ ಸಂಪುಟ ದರ್ಜೆಯ ಸ್ಥಾನಮಾನ ನೀಡಿ, ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾಗಿ ನೇಮಕಮಾಡಿದರೆ ಖಂಡಿತವಾಗಿಯೂ ಕರಾವಳಿಯ ಕೋಮು ರಾಜಕಾರಣಕ್ಕೆ ಕೊಡಲಿ ಪೆಟ್ಟು ಬೀಳುವುದಂತೂ ಸತ್ಯ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದರೂ ಕರಾವಳಿಯಲ್ಲಿ ನಡೆಯುತ್ತಿರುವುದು ಬಿಜೆಪಿ, ಸಂಘಪರಿವಾರದ ಆಟಾಟೋಪಗಳು ಮಾತ್ರ. ಇರುವ ಕೆಲವು ಕಾಂಗ್ರೆಸ್ ನಾಯಕರು ಒಪ್ಪಂದ ರಾಜಕಾರಣಕ್ಕೆ ಇಳಿದು ಬಾಯಿ-ಬಾಯಿಗಳಾಗಿ ತಮ್ಮ ವ್ಯವಹಾರವನ್ನು ಸುಗಮವಾಗಿ ನಡೆಸುತ್ತಿದ್ದಾರಷ್ಟೇ. ಆದರೆ ಹರಿಪ್ರಸಾದ್ ತತ್ವ, ಸಿದ್ಧಾಂತಕ್ಕೆ ಹೊರತಾದ ರಾಜಕಾರಣ ಮಾಡಿದವರಲ್ಲ. ಅಧಿಕಾರ ಸಿಕ್ಕರೆ ಕೋಮುವಾದಿಗಳಿಗೆ ಸಿಂಹಸ್ವಪ್ನ ವಾಗುವುದಂತೂ ಖಂಡಿತ. ಜಾತ್ಯತೀತ ಮನಸ್ಸಿನ ಜನಸಮುದಾಯಕ್ಕೆ ಹರಿಪ್ರಸಾದ್ ಒಬ್ಬರೆ ಕೋಲ್ಮಿಂಚು ಆಗಿ ಕಾಣುತ್ತಿದ್ದಾರೆ. ಹರಿಪ್ರಸಾದ್ ಜಿಲ್ಲಾ ಉಸ್ತುವಾರಿ ಮಂತ್ರಿಯಾದರೆ ಕೋಮು, ಮತೀಯ ರಾಜಕಾರಣಕ್ಕೆ ನಲುಗಿದ ಕರಾವಳಿಯಲ್ಲಿ ಹೊಸ ಅಸ್ಮಿತೆ ಮೂಡಿ ಬರುವುದಂತೂ ಸತ್ಯ. ಕಾಂಗ್ರೆಸ್ ಮತ್ತೆ ಫೀನಿಕ್ಸ್ ನಂತೆ ಪುಟಿದೇಳಬಹುದು.

ಸಂವಿಧಾನದ ಬಗ್ಗೆ ಹೇಳಿಕೆ ನೀಡಿದ ಉಡುಪಿಯ ಸ್ವಾಮೀಜಿಯೊಬ್ಬವರಿಗೆ ಸಂವಿಧಾನದ ಪಾಠ ಮಾಡಿದ, ಬೆಲೆಕೇರಿ ಬಂದರಿನಲ್ಲಿ ಅದಿರು ಲೂಟಿ ಯಲ್ಲಿ ಅದಾನಿ ಕೈವಾಡದ ಬಗ್ಗೆ ದಾಖಲೆ ಮೂಲಕ ಉತ್ತರ ನೀಡಿದ, ಅಧಿಕಾರಕ್ಕಾಗಿ ರಾಜಿ ಮಾಡಬಾರದು, ಜಾತಿ ಗಣತಿ ವರದಿಯನ್ನು ಜಾರಿ ಗೊಳಿಸಿ ಎಂದು ಸರಕಾರವನ್ನೇ ಆಗ್ರಹಿಸಿದ.. ಹೀಗೆ ಪ್ರಬಲ ಜಾತ್ಯಾತೀತ ಮನೋಭಾವದ ಡೈನಾಮಿಕ್ ಲೀಡರ್ ಗೆ ಅಧಿಕಾರ ಭಾಗ್ಯ ಸಿಕ್ಕರೆ ಕಾಂಗ್ರೆಸ್ ಗೆ ಲಾಭವೇ ಹೊರತು ನಷ್ಟವಲ್ಲ. ಕಾಂಗ್ರೆಸ್ ನಿಂದ ಮುನಿಸುಕೊಂಡ ಒಂದು ವರ್ಗ ಮತ್ತೆ ಕಾಂಗ್ರೆಸ್ ಪಕ್ಷದ ಕಡೆ ಮರಳಬಹುದು. ಮತೀಯ ರಾಜಕಾರಣಕ್ಕೆ ಪುಲಿಸ್ಟಾಪ್ ಇಡಬಹುದು. ಹಗಲು ಕಾಂಗ್ರೆಸ್, ರಾತ್ರಿ ಚಡ್ಡಿಯಾಗುತ್ತಿರುವ ಕಾಂಗ್ರೆಸ್ಸಿನ ಕೆಲವು ನಾ(ಲಾ)ಯಕರಿಗೂ ತಕ್ಕ ಪಾಠವಾಗಬಹುದು.